ಭಟ್ಕಳ, ಮಾರ್ಚ್ ೨: ಭಟ್ಕಳ ಮತ್ತು ದುಬೈಯಲ್ಲಿನ ವಿವಿಧ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಸಕ್ರಿರಾಗಿದ್ದ ಖಮ್ರಿ ಬಾಷ (೬೪) (ಖ್ವಾಜಾ ಬಹಾವುದ್ದೀನ್ ಬಾಷ) ಇವರು ಇಂದು ಸಂಜೆ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದು ಈ ಲೋಕಕ್ಕೆ ವಿದಾಯ ಹೇಳಿದರು.
ಕಳೆದ ನಾಲ್ಕೈದು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಬೈಕ್ ಹಿಂದುಗಡೆ ಕುಳಿತು ಹೋಗುತ್ತಿದ್ದಾಗ ಕೆಳಗೆ ಬಿದ್ದು ತಲೆಗೆ ಪೆಟ್ಟು ತಗುಲಿದ ಕಾರಣ ಅವರು ಅಂದಿನಿಂದ ಕೋಮಾ ಸ್ಥಿತಿಯಲ್ಲಿದ್ದು ಇತ್ತಿಚೆ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಆದರೆ ಕಳೆದ ಕೆಲವಾರು ದಿನಗಳಿಂದ ಆಸ್ಪತ್ರೆಯಲ್ಲಿಯೆ ಚಿಕಿತ್ಸೆಗಾಗಿ ದಾಖಲಿಸಿದ್ದು ಇಂದು ಅವರು ಕೊನೆಯುಸಿರೆಳೆದರು. ಭಟ್ಕಳದ ಶಮ್ಸ್ ಆಂಗ್ಲ ಮಾದ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾಗಿ, ವೆಲ್ಫೆರ್ ಇಸ್ಲಾಮಿಕ್ ಬ್ಯಾಂಕಿನ ಖಜಾಂಜಿಯಾಗಿ, ಜಮಾತೆ ಇಸ್ಲಾಮಿಯ ಸಕ್ರೀಯ ಕಾರ್ಯಕರ್ತರಾಗಿ ಅವರು ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಉತ್ತಮ ಚಾರಿತ್ರ್ಯವನ್ನು ಹೊಂದಿದ ಅವರ ಮನಸ್ಸು ಸಮಾಜದ ಬಡವರ, ನಿರ್ಗತಿಕರ, ಹಾಗೂ ತುಳಿತಕ್ಕೊಳಗಾದವರ ಪರವಾಗಿ ಸದಾ ಮಿಡಿಯುತ್ತಿತ್ತು.
ಶಿಕ್ಷಣ ಪ್ರೇಮಿಯೂ ಆಗಿದ್ದ ಇವರು ನಗರದ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ನಿಧನದಿಂದಾಗಿ ಓರ್ವ ಶಿಕ್ಷಣ ಪ್ರೇಮಿಯನ್ನು ನಾವು ಕಳೆದುಕೊಂಡಂತಾಗಿದೆ ಎಂದು ಶಮ್ಸ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸೈಯ್ಯದ್ ಅಶ್ರಫ್ ಬರ್ಮಾವರ್ ತಿಳಿಸಿದ್ದು ಅವರ ನಿಧನಕ್ಕಾಗಿ ಸಂತಾಪವನ್ನು ವ್ಯಕ್ತಪಡಿಸಿ ತರಬಿಯತ್ ಎಜ್ಯುಕೇಷನ್ ಸೂಸೈಯಡಿ ನಡೆಸಲ್ಪಡುವ ಶಮ್ಸ ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಹಾಗೂ ಐ.ಸಿ.ಎಸ್.ಸಿ.ಇ ಶಾಲೆಗಳಿಗೆ ರಜೆಯನ್ನು ಘೋಷಿಸಿದ್ದಾರೆ. ಅಲ್ಲದೆ ಇಸ್ಲಾಮಿಕ್ ವೆಲ್ಫೆರ್ ಬ್ಯಾಂಕ್, ಹಾಗೂ ಅಲ್- ಕೌಸರ್ ಗರ್ಲ್ಸ ಇಸ್ಲಾಮಿಕ್ ಕಾಲೇಜಿಗೂ ಕೂಡ ರಜೆಯನ್ನು ಘೋಷಿಸಲಾಗಿದೆ. ಮೃತರು ಓರ್ವ ಪುತ್ರಿ, ನಾಲ್ವರು ಪುತ್ರರು, ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.