ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮೈಸೂರು: ಪಟ್ಟಣ, ನಗರ ಸ್ಥಳೀಯ ಸಂಸ್ಥೆ, ಪಾಲಿಕೆ ಸದಸ್ಯರಿಗೆ ತರಬೇತಿ

ಮೈಸೂರು: ಪಟ್ಟಣ, ನಗರ ಸ್ಥಳೀಯ ಸಂಸ್ಥೆ, ಪಾಲಿಕೆ ಸದಸ್ಯರಿಗೆ ತರಬೇತಿ

Thu, 29 Oct 2009 02:54:00  Office Staff   S.O. News Service

 

ಮೈಸೂರು, ಅಕ್ಟೋಬರ್ ೨೯: ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿರುವ ರಾಜ್ಯ ನಗರಾಭಿವೃದ್ಧಿ ಸಂಸ್ಥೆಯು (ಎಸ್‌ಐಯುಡಿ) ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರಪಾಲಿಕೆ- ಹೀಗೆ ಪಟ್ಟಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ತರಬೇತಿ ನೀಡುವ ಕಾರ್ಯ ನಿರ್ವಹಿಸುತ್ತಿದೆ.

ಸದ್ಯಕ್ಕೆ ಚುನಾಯಿತ ಪ್ರತಿನಿಧಿಗಳಿಲ್ಲದ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿ‌ಎಂಪಿ) ಹೊರತುಪಡಿಸಿ, ರಾಜ್ಯದ ೨೧೪ ಇತರೆ ಪಟ್ಟಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಮಕರಣ ಸದಸ್ಯರು ಸೇರಿದಂತೆ ೫,೮೦೭ ಮಂದಿ ಸದಸ್ಯರಿದ್ದಾರೆ. ಇವರಿಗೆ ನಗರಾಡಳಿತ ಮತ್ತು ಸುಧಾರಣೆ ಬಗ್ಗೆ ಪುನರ್‌ಮನನ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ, ಹಾಸನ, ಮಂಗಳೂರು, ಮೈಸೂರು, ಧಾರವಾಡ, ಬಿಜಾಪುರ, ಗುಲ್ಬರ್ಗದ ಜಿಲ್ಲಾ ತರಬೇತಿ ಸಂಸ್ಥೆಗಳು, ಬೆಳಗಾವಿಯ ಸ್ಥಳೀಯ ಸರ್ಕಾರಗಳ ರಾಷ್ಟ್ರೀಯ ಸಂಸ್ಥೆಯ ಮೂಲಕ ನಡೆಸಲಾಗುತ್ತಿದೆ. ಜುಲೈನಲ್ಲಿ ಆರಂಭವಾಗಿರುವ ಈ ತರಬೇತಿ ಹಂತ ಹಂತವಾಗಿ ನಡೆಯುತ್ತಿದ್ದು, ನವೆಂಬರ್‌ನಲ್ಲಿ ಮುಕ್ತಾಯವಾಗಲಿದೆ. 

ತರಬೇತಿ ಉದ್ದೇಶ: ೨೦೦೧ರ ಜನಗಣತಿ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯ ಶೇ.೨೮ ರಷ್ಟು ಮಂದಿ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ೨೦೨೧ರ ವೇಳೆಗೆ ಈ ಪ್ರಮಾಣ ಶೇ.೪೦ ರಿಂದ ೪೫ ರಷ್ಟು ತಲುಪಬಹುದು ಎಂದು ಅಂದಾಜಿಸಲಾಗಿದೆ. ನಗರೀಕರಣದಿಂದಾಗಿ ಹಳ್ಳಿಗಾಡಿನ ಜನರು ಪಟ್ಟಣ ಮತ್ತು ನಗರಗಳತ್ತ ವಲಸೆ ಹೋಗುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ. ಇದಕ್ಕೆ ಪೂರಕವಾಗಿ ಪಟ್ಟಣ ಮತ್ತು ನಗರ ಪ್ರದೇಶಗಳನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸಲು, ಮೂಲಭೂತ ಸೌಲಭ್ಯಗಳಾದ ನೀರು, ರಸ್ತೆ, ಒಳಚರಂಡಿ, ಸ್ವಚ್ಥತೆ, ವಿದ್ಯುತ್ ಒದಗಿಸುವುದರ ಜೊತೆಗೆ ಕೊಳಚೆ ಪ್ರದೇಶದ ಅಭಿವೃದ್ಧಿ, ಬಡತನ ನಿರ್ಮೂಲನಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಇದಕ್ಕಾಗಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾಮರ್ಥ್ಯ ಅಭಿವೃದ್ಧಿಪಡಿಸುವ ತರಬೇತಿ ನೀಡಲಾಗುತ್ತಿದೆ. 

ಸಿಬ್ಬಂದಿ ಕೊರತೆ: ರಾಜ್ಯ ನಗರಾಭಿವೃದ್ಧಿ ಸಂಸ್ಥೆ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಇದರ ನಡುವೆಯೂ ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೇಶಕಿ ಡಾ.ಅಮಿತಾ ಪ್ರಸಾದ್ ಮಾರ್ಗದರ್ಶನದಲ್ಲಿ ಪ್ರಾಣಲಿಂಗ ಶಿವಸಾಲಿ, ಡಾ.ಬಿ.ಎಸ್. ಶಂಕರ, ಸಿ. ಅಶೋಕ, ಡಾ.ವಿ. ಜಗನ್ನಾಥ್, ಬಿ.ಯೋಗನಾಥ ಸಿಂಗ್ ಮೊದಲಾದವರು ತರಬೇತಿಯ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಹುಡ್ಕೋ, ವಿಶ್ವಬ್ಯಾಂಕ್ ಮೊದಲಾದವು ತರಬೇತಿಗೆ ನೆರವು ನೀಡುತ್ತಿವೆ.

 

ಸ್ಥಳೀಯ ಸಂಸ್ಥೆಗಳ ಪಕ್ಷಿನೋಟ 

ಬೃಹತ್ ಬೆಂಗಳೂರು 

ಮಹಾನಗರಪಾಲಿಕೆ...................೧ 

ಮಹಾನಗರಪಾಲಿಕೆಗಳು............೭ 

ನಗರಸಭೆಗಳು.......................೪೪ 

ಪುರಸಭೆಗಳು........................೬೪ 

ಪಟ್ಟಣ ಪಂಚಾಯ್ತಿಗಳು.........೬೮ 

 

ತರಬೇತಿಯ ಪ್ರಮುಖ ಅಂಶಗಳು :

ಪ್ರಮುಖವಾಗಿ ೭೪ನೇ ಸಂವಿಧಾನ ತಿದ್ದುಪಡಿ, ಚುನಾಯಿತ ಪ್ರತಿನಿಧಿಗಳ ಅಧಿಕಾರ ಮತ್ತು ಜವಾಬ್ದಾರಿಗಳು, ಸಭೆಗಳನ್ನು ನಡೆಸುವ ವಿಧಾನ, ಸ್ಥಾಯಿ ಸಮಿತಿ ರಚನೆ, ಜವಾಬ್ದಾರಿ ಮತ್ತು ಕರ್ತವ್ಯಗಳು, ಮಹಿಳಾ ಪ್ರತಿನಿಧಿಗಳ ಜವಾಬ್ದಾರಿಗಳು, ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಚುನಾಯತಿ ಸದಸ್ಯರ ಪಾತ್ರ, ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ ಸುಧಾರಣೆ, ನಗರ ಸ್ಥಳೀಯ ಸಂಸ್ಥೆಗಳ ಹಣಕಾಸು ನಿರ್ವಹಣೆ ಹಾಗೂ ಸಂಪನ್ಮೂಲ ಕ್ರೋಢೀಕರಣ, ವಿವಿಧ ಯೋಜನೆಗಳು, ಸ್ಥಳೀಯ ಸಂಸ್ಥೆಗಳ ನಾಗರಿಕರಿಗೆ ಒದಗಿಸುವ ಉತ್ತಮ ಸೇವೆ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಪಾರದರ್ಶಕತೆ ಮತ್ತು ಮಾಹಿತಿ ಹಕ್ಕು, ಸ್ವಯಂ ಘೋಷಿತ ಆಸ್ತಿ ತೆರಿಗೆ ಮತ್ತು ಅನುಷ್ಠಾನ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

 

ಸೌಜನ್ಯ: ಕನ್ನಡಪ್ರಭ


 


Share: