ಬೆಂಗಳೂರು,ಜನವರಿ 16:ಮಾಜಿ ಪ್ರಧಾನಿ ದೇವೆಗೌಡ ಹಾಗೂ ಅವರ ಕುಟುಂಬದವರು ನೈಸ್ ರಸ್ತೆಯ ಆಸುಪಾಸಿನಲ್ಲಿ ನಾಲ್ಕು ಸಾವಿರ ಎಕರೆಗೂ ಹೆಚ್ಚು ಆಸ್ತಿಯನ್ನು ಬೇನಾಮಿ ಹೆಸರಿನಲ್ಲಿ ಹೊಂದಿದ್ದಾರೆ ಎಂದು ಬಿಜೆಪಿ ಇಂದಿಲ್ಲಿ ಗಂಭೀರ ಆರೋಪ ಮಾಡಿದೆ. ತಮ್ಮ ಭೂಮಿ ಉಳಿಸಿಕೊಳ್ಳುವ ಉದ್ದೇಶದಿಂದ ನೈಸ್ ವಿರುದ್ಧ ಅವರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದೆ.
ಬಿಜೆಪಿ ವಕ್ತಾರ ಧನಂಜಯಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೈಸ್ ರಸ್ತೆಯ ಅಕ್ಕ ಪಕ್ಕದಲ್ಲಿ ಸಾವಿರಾರು ಎಕರೆ ಭೂಮಿಯ ಒಡೆತನ ಹೊಂದಿರುವುದರಿಂದಲೇ ತಮ್ಮ ಬೆಲೆ ಬಾಳುವ ಭೂಮಿ ಭೂಸ್ವಾಧೀನವಾಗುತ್ತದೆ ಎನ್ನುವ ವೇದನೆಯಿಂದ ದೇವೆಗೌಡರು ನೈಸ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ
ಸತ್ಯವೇ ತಮ್ಮ ಬಂದು ಬಳಗ ಎನ್ನುವಂತೆ ಮಾತನಾಡುವ ದೇವೇಗೌಡರು ನೈಸ್ ರಸ್ತೆಯ ಅಕ್ಕ ಪಕ್ಕದಲ್ಲಿ ಬೇನಾಮಿ ಜಮೀನು ಹೊಂದಿಲ್ಲ ಎಂದು ತನ್ನ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿ ಬಹಿರಂಗವಾಗಿ ಆಣೆಮಾಡಲು ಸಿದ್ಧರಿದ್ದಾರೆಯೇ ಎಂದು ಬಹಿರಂಗ ಸವಾಲು ಹಾಕಿದರು.
ನೈಸ್ ರಸ್ತೆಯ ಅಕ್ಕಪಕ್ಕದಲ್ಲಿ ಬೇನಾಮಿ ಆಸ್ತಿ ಹೊಂದಿರುವವರ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ ಅವರು ದೇವೇಗೌಡರ ಉತ್ತರ ಕರ್ನಾಟಕದಲ್ಲಿ ರೈತರು ನೆರೆಯಿಂದ ಸಂಕಷ್ಟದಲ್ಲಿ ಇರುವಾಗ ಅವರ ನೆರವಿಗೆ ಧಾವಿಸದೆ ತಮ್ಮ ಜಮೀನು ಉಳಿಸಿಕೊಳ್ಳಲು ರೈತರ ಪರ ಹೋರಾಟ ಎಂದು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನೈಸ್ ಯೋಜನೆ ತಮ್ಮ ಕೂಸು ಎಂದು ದೇವೇಗೌಡರು ಹೇಳಿದ್ದಾರೆ. ಯಾರೇ ಆಗಲಿ ಕೂಸಿಗೆ ಹಾಲು ನೀಡದೇ ವಿಷ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ ಧನಂಜಯಕುಮಾರ್ ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಿಜೆಪಿ ಸರ್ಕಾರ ನೈಸ್ ಯೋಜನೆಗೆ ಭೂಮಿ ನೀಡಿದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಸ್ಥಾನ ಮಾನವನ್ನು ಮರೆತು ಏಕವಚನದಲ್ಲಿ ಕೆಟ್ಟದ್ದಾಗಿ ಮಾತನಾಡಿದರೆ ಬಿ.ಜಿ.ಪಿ. ಕಾರ್ಯಕರ್ತರ ವಿರೋಧ ಎದುರಿಸಬೇಕಾಗುತ್ತದೆ ಎನ್ನುವದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದ ದೇವೇಗೌಡರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಲು ಇದು ಸಕಾಲ ಎಂದು ಸಲಹೆ ನೀಡಿದರು.