ಬೆಂಗಳೂರು, ಜನವರಿ 28: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ನಡೆಸಿದ ಮುಷ್ಕರ ಸಂದರ್ಭದಲ್ಲಿ ಹೂಡಲಾಗಿದ್ದ ಎಲ್ಲ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.
ಕಾನೂನು ಹಾಗೂ ಸಂಸದೀಯ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಬಿಜಾಪುರ, ಮಂಡ್ಯ, ಚಾಮರಾಜನಗರ, ಬೀದರ್, ತುಮಕೂರು, ಗುಲ್ಬರ್ಗಾ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಚುನಾವಣೆ ಸಂದರ್ಭದಲ್ಲಿ ಶಾಸಕ ಸಿ.ಟಿ. ರವಿ ಹಾಗೂ ಅವರ ಬೆಂಬಲಿಗರ ಮೇಲೆ ಹೋಡಲಾಗಿದ್ದ ಮೊಕದ್ದಮೆಗಳನ್ನೂ ಕೂಡ ವಾಪಸ್ಸ್ ಪಡೆಯಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯದ ೬ ನಗರಗಳಲ್ಲಿ ಮೂಲಭೂತ ಸೌಲಭ್ಯ ಹಾಗೂ ಒಳಚರಂಡಿ ಸಂಪರ್ಕಕ್ಕಾಗಿ ಆಡಲಿತಾತ್ಮಕ ಮಂಜೂರಾತಿ ನೀಡಲಾಗಿದೆ. ಕೆ.ಆರ್. ನಗರ ೧೩.೭ ಕೋಟಿ, ಅರಕಲಗೂಡು ೧೦.೪೨ ಕೋಟಿ, ಕುಮಟ ೩೫ ಕೋಟಿ, ಬೈಲಹೊಂಗಲ ೫೭ ಕೋಟಿ ಹಾಗೂ ಟಿ. ನರಸೀಪುರಕ್ಕೆ ೧೦.೫೨ ಕೋಟಿ ರೂಗಳ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದ ಜಲಾಶಯದ ಎಲ್ಲ ಕ್ರಸ್ಟ್ ಗೇಟ್ ಬದಲಾವಣೆ ಮಾಡಲು ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ ೭.೨ ಕೋಟಿ ರೂ ಯೋಜನೆಗೆ ಒಪ್ಪಿಗೆ ಕೊಡಲಾಗಿದೆ.
ಉಪನ್ಯಾಸಕರ ನೇಮಕ:ರಾಜ್ಯದ ೪೩೭ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಷಯಗಳಿಗೆ ಉಪನ್ಯಾಸಕರ ನೇಮಕ, ಪ್ರಯೋಗಾಲಯಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಇದಕ್ಕೆ ವಾರ್ಷಿಕ ೨೨ ಕೋಟಿ ರೂ. ವೆಚ್ಚವಾಗಲಿದೆ ಎಂದರು.
ಐಟಿ ಬಳಕೆ: ರಾಜ್ಯ ಸರ್ಕಾರದ ವಿವಿಧ ಸಾಮಾಜಿಕ ಭದ್ರತೆಯ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನದ ಯೋಜನೆಗಳಡಿ ಫಲಾನುಭವಿಗಳಿಗೆ ಹಣವನ್ನು ಬ್ಯಾಂಕ್‌ಗಳ ಮೂಲಕ ಪಾವತಿ ಮಾಡಲು ನಿರ್ಧರಿಸಲಾಗಿದೆ.
ಯೋಜನೆ ಫಲ ನೇರವಾಗಿ ಫಲಾನುಭವಿಗಳಿಗೆ ದೊರೆಯುವಂತಾಗಲು ಸರ್ಕಾರ ಇಂತಹ ಕ್ರಮ ಕೈಗೊಳ್ಳುತ್ತಿದ್ದು, ಮಂಡ್ಯ,ಚಾಮರಾಜನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬ್ಯಾಂಕ್‌ಗಳ ಮೂಲಕ ಪಲಾನುಭವಿಗಳಿಗೆ ನೇರ ಸೌಲಭ್ಯ ಕಲ್ಪಸುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಪಶುಸಂಗೋಪನಾ ಇಲಾಖೆಯಲ್ಲಿ ೪೮೭ ಪಶುವೈದ್ಯರ ನೇಮಕಕ್ಕೆ ಅನುಮೋದನೆ, ಸ್ವಾತಂತ್ಯ ಯೋಧರ ಮಾಸಿಕ ಪಿಂಚಣಿ ಮೂರು ಸಾವಿರದಿಂದ ನಾಲ್ಕು ಸಾವಿರಕ್ಕೆ ಹೆಚ್ಚಿಸಲು ಅನುಮತಿ ನೀಡಲಾಗಿದೆ ಎಂದರು.
ಅಧಿಕಾರಿಗಳು ಅಡಳಿತ ಚುರುಕುಗೊಳಿಸಲು ನಡೆಸುವ ಸುಧಾರಣಾ ಕ್ರಮಕ್ಕೆ ಪ್ರೋತ್ಸಾಹ ನೀಡಲು ೧೦ ಕೋಟಿ ರೂ. ಆವರ್ತನ ನಿಧಿ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. ಇದರಿಂದ ಆಡಳಿತ ಸುಧಾರಣೆ ಮಾಡಲು ಸರ್ಕಾರ ಬಯಸಿದೆ ಎಂದು ಹೇಳಿದರು.
ನಂದಿಬೆಟ್ಟ: ನಂದಿ ಬೆಟ್ಟದಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಹೊಡಿಕಾ ಪ್ರದೇಶ ಸ್ಥಾಪನೆಗೆ ಆಡಳಿತ್ಮಾಕ ಮಂಜುರಾತಿ ನೀಡಿದ್ದು, ಕೇಂದ್ರ ಸರ್ಕಾರ ಶೇ. ೯೦ ರಷ್ಟು ವೆಚ್ಚಮಾಡಲಿದೆ. ಇದರಿಂದ ೧೨ ಲಕ್ಷ ನೇರ ಉದ್ಯೋಗ ಹಾಗೂ ೨೮ ಲಕ್ಷ ಪರೋಕ್ಷವಾಗಿ ಯುವಕರಿಗೆ ಉದ್ಯೋಗ ದೊರೆಯಲಿದೆ.
ಹಾವೇರಿ ಗೋಲಿಬಾರ್ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಜಗನ್ನಾಥ್ ಶೆಟ್ಟಿ ಆಯೋಗ ಮತ್ತು ಚರ್ಚ್‌ಗಳ ಧಾಳಿಯ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ ಆಯೋಗದ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ.
ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಗಣತಿ ಕಾರ್ಯಮಾಡುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಅವಧಿಯನ್ನು ಡಿಸೆಂಬರ್, ೩೧ ವರೆಗೆ ವಿಸ್ತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದರು.