| |
ಭಿಂತ್ ಭದ್ರಕ್ ಎಂಬ ಹೆಸರನ್ನಾದರೂ ನೀವು ಕೇಳಿದ್ದೀರಾ ? ಕೇಳಿಲ್ಲ ಎಂದರೆ ಗುಜರಾತ್ನ ಆ ಚಿಕ್ಕ ಹಳ್ಳಿಯಲ್ಲಿ ನಡೆದಿರುವ ಕ್ರಾಂತಿಕಾರಿ ಬದಲಾವಣೆ ಕೂಡ ನಿಮ್ಮ ಗಮನಕ್ಕೆ ಬಂದಿಲ್ಲ ಎಂದರ್ಥ. ಜಾನುವಾರುಗಳ ಸಗಣಿಯನ್ನು ಶೇಖರಿಸಿ ಅದನ್ನೇ ಬಳಸಿಕೊಂಡು ಗ್ರಾಮದಾದ್ಯಂತ ಜೈವಿಕ ಇಂಧನ ಪೂರೈಸುವ ಜೈವಿಕ ಇಂಧನ ಬ್ಯಾಂಕ್ನ ಪರಿಕಲ್ಪನೆಯನ್ನು ಸಮರ್ಪಕವಾಗಿ ಬಳಸಿಕೊಂಡ ಗ್ರಾಮವದು. ಭಿಂತ್ ಭದ್ರಕ್ ಗ್ರಾಮದ ಗ್ರಾಮಸ್ಥರು ತಮ್ಮ ಜಾನುವಾರುಗಳ ಸಗಣಿಯನ್ನು ಬ್ಯಾಂಕ್ಗೆ ನೀಡಿ ಬದಲಿಗೆ ಅತಿ ಅಗ್ಗದ ಬೆಲೆಯಲ್ಲಿ ಜೈವಿಕ ಇಂಧನ ಪಡೆಯುತ್ತಾರೆ. ಉತ್ತರ ಗುಜರಾತ್ನ ಸಿದ್ಧಪುರ್ ತಾಲೂಕಿನ ಮೆಥಾನ್ ಗ್ರಾಮದಲ್ಲಿ 1987ರಲ್ಲಿಯೇ ಸಮುದಾಯ ಜೈವಿಕ ಇಂಧನ ಬ್ಯಾಂಕ್ ಅನ್ನು ಸ್ಥಾಪಿಸಲಾಗಿತ್ತು. ಇಲ್ಲಿನ ಬಹುಪಾಲು ಗ್ರಾಮಸ್ಥರು ತಮ್ಮ ದಿನನಿತ್ಯದ ಬಳಕೆಗೆ ಇದೇ ಘಟಕದಿಂದ ತಯಾರಾಗುವ ಜೈವಿಕ ಇಂಧನವನ್ನು ಉಪಯೋಗಿಸುತ್ತಾರೆ. "ಇಂಥದ್ದೊಂದು ಜೈವಿಕ ಇಂಧನ ಬ್ಯಾಂಕ್ ಹುಟ್ಟು ಹಾಕಿ ಮುನ್ನಡೆಸುವುದು ಕಷ್ಟವಾದರೂ ಅಸಾಧ್ಯವೇನಲ್ಲ. ಆದರೆ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ" ಎನ್ನುತ್ತಾರೆ ಮೆಥಾನ್ನ ಸರಪಂಚ ಸುಲ್ತಾನ್ ಮೊಮೀನ್. ಈ ಯಶಸ್ಸಿನ ಹಿಂದೆ ಮೆಥಾನ್ ಗ್ರಾಮದ ನಾಯಕರ ಪಾಲು ಸಾಕಷ್ಟಿದೆ ಎನ್ನುತ್ತಾರೆ ಮೊಮೀನ್. "ಯೋಜನೆಯನ್ನು ಕಾರ್ಯಗತಗೊಳಿಸಿದ ಪ್ರಾರಂಭದ ದಿನದಿಂದಲೇ ಪ್ರತಿಯೊಬ್ಬರೂ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈ ಯೋಜನೆಗೆ ಕೇಂದ್ರ ಸರ್ಕಾರ 19 ಲಕ್ಷ ಅನುದಾನ ನೀಡಿತ್ತು. ' ಗುಜರಾತ್ ಇಂಧನ ಅಭಿವೃದ್ಧಿ ಏಜನ್ಸಿ ' ( ಜಿಇಡಿಎ) ಯೋಜನೆಗೆ ಅವಶ್ಯಕವಾದ ವಿನ್ಯಾಸ ಹಾಗೂ ತಂತ್ರಜ್ಞಾನವನ್ನು ಒದಗಿಸಿತ್ತು. ಇವೆಲ್ಲಾ ಸಹಕಾರಗಳ ಜೊತೆ ಗ್ರಾಮಸ್ಥರ ಅಹರ್ನಿಶಿ ದುಡಿಮೆ ಈ ಯೋಜನೆಯನ್ನು ಸಾಕಾರಗೊಳಿಸಿತು. ಕೇಂದ್ರ ಸರ್ಕಾರದ ಅನುದಾನದ ಸಹಾಯದಿಂದ ಮೆಥಾನ್ನ ಪ್ರತಿಯೊಂದು ಮನೆಗೂ ಇಂಧನದ ಸೌಕರ್ಯ ಒದಗಿಸಲಾಯಿತು. ಆ ಸಮಯದಲ್ಲಿಯೇ ಈ ಜೈವಿಕ ಇಂಧನ ಘಟಕದ ನಿರ್ವಹಣೆಗೆ ಸಹಕಾರಿ ಸಂಸ್ಥೆಯೊಂದನ್ನು ರಚಿಸಲಾಯಿತು. ಇದು ಈಗಲೂ ಕ್ರಿಯಾಶೀಲವಾಗಿದ್ದು , ಬೇರೆ ಗ್ರಾಮಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ತನ್ನ ಸಾಂಪ್ರದಾಯಿಕತೆಯನ್ನು ಇನ್ನೂ ಬಿಟ್ಟುಕೊಡದ ಮೆಥಾನ್ ಗ್ರಾಮಕ್ಕೆ ಆಧುನಿಕತೆ ಇನ್ನೂ ಕಾಲಿಟ್ಟಿಲ್ಲ. ವಿಪರ್ಯಾಸವೆಂದರೆ , ಅದು ಇ " ಈ ಘಟಕದ ಪರಿಕಲ್ಪನೆ ಕುಡಿಯೊಡೆದಿದ್ದು ಗ್ರಾಮದ ಮುಂದಾಳುಗಳಾದ ಜಾಫರ್ ಮಹಮ್ಮದ್ ಹಾಗೂ ರಹೀಂ ಕರೆದಿಯಾ ಅವರಲ್ಲಿ. ಅದರ ಫಲವಾಗಿಯೇ 1987ರಲ್ಲಿ ಜೈವಿಕ ಇಂಧನ ಘಟಕ ಸ್ಥಾಪನೆಯಾಯಿತು. ಪ್ರಾರಂಭದಲ್ಲಿ ತುಸು ಕಷ್ಟವಾಯಿತಾದರೂ ಗ್ರಾಮದ ಪ್ರತಿಯೊಬ್ಬರೂ ಈ ಘಟಕದ ಸ್ಥಾಪನೆಗಾಗಿ ಬೆವರು ಹರಿಸಿದ್ದಾರೆ" ಎನ್ನುತ್ತಾರೆ ಮೆಥಾನ್ ಜೈವಿಕ ಇಂಧನ ಘಟಕದ ಅಧ್ಯಕ್ಷ ಕಸಂಭಾಯಿ ಇಲಿಮದ್ ಥುಕಾ. ಆದರೆ ಯಶಸ್ವಿಯಾಗಿ ದಾಪುಗಾಲು ಹಾಕುತ್ತಿದ್ದ ಈ ಜೈವಿಕ ಇಂಧನ ಘಟಕದ ಭವಿಷ್ಯ ಇಂದು ತೂಗುಯ್ಯಾಲೆಯಲ್ಲಿದೆ. ದನದ ಸಗಣಿಯ ಕೊರತೆ ಇಡೀ ಘಟಕವನ್ನೇ ಆಪೋಷನಕ್ಕೆ ತೆಗೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. "ಗ್ರಾಮದ ಯುವಕರೆಲ್ಲಾ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಅಂಥ ಕುಟುಂಬಗಳು ಜಾನುವಾರುಗಳ ಸಾಕಾಣಿಕೆಯನ್ನೇ ಕೈ ಬಿಡುತ್ತಿವೆ. ಆದ್ದರಿಂದ ಗ್ರಾಮದಲ್ಲಿ ಶೇಖರವಾಗುವ ದನದ ಸಗಣಿಯ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ. ಗ್ರಾಮದಲ್ಲಿ ಈ ಮೊದಲು ಸುಮಾರು 50 ಕೊಟ್ಟಿಗೆಗಳಿದ್ದವು. ಆದರೆ ಈಗ ಅವುಗಳ ಸಂಖ್ಯೆ 10ಕ್ಕೆ ಇಳಿದಿದೆ. ಆದ್ದರಿಂದ ಸಗಣಿಯ ಕೊರತೆಯನ್ನು ನೀಗಲು ನಾವು ಪಕ್ಕದ ಗ್ರಾಮಗಳಿಂದ ಎರವಲು ಪಡೆಯಬೇಕಾದ ಅನಿವಾರ್ಯತೆ ಉಂಟಾಗಿದೆ. ಆದರೂ , ಸಗಣಿಯ ಪೂರೈಕೆ ಸಮರ್ಪಕವಾಗಿಲ್ಲ" ಎಂದು ತಮ್ಮ ಘಟಕಕ್ಕೆ ಒದಗಿರುವ ದುಸ್ಥಿತಿಯನ್ನು ವಿವರಿಸುತ್ತಾರೆ ಕಸಂಭಾಯಿ. ಒಂದು ಕಾಲದಲ್ಲಿ ಇದೇ ಮೆಥಾನ್ನ ಸುಮಾರು 300 ಕುಟುಂಬಗಳಿಗೆ ಜೈವಿಕ ಇಂಧನ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಅವುಗಳ ಸಂಖ್ಯೆ ಈಗ ಅರ್ಧದಷ್ಟು ಕಡಿಮೆಯಾಗಿದೆ. "ಸಗಣಿಯ ಕೊರತೆಯಿಂದಾಗಿ ಇಂಧನದ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಆದ್ದರಿಂದ ಬಹಳಷ್ಟು ಗ್ರಾಮಸ್ಥರು ಎಲ್ಪಿಜಿ ಗ್ಯಾಸ್ಗೆ ಮೊರೆ ಹೋಗಿದ್ದಾರೆ. ಇದಕ್ಕಿಂತ ಹೆಚ್ಚಾಗಿ , ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳ ಮಂದಿ ಇಂದಿಗೂ ಮರಮಟ್ಟುಗಳನ್ನೇ ಇಂಧನವಾಗಿ ಬಳಸುತ್ತಿದ್ದಾರೆ" ಎನ್ನುತ್ತಾರೆ ಕಸಂಭಾಯಿ. ಜೈವಿಕ ಇಂಧನ ಸಂಘದ ಸದಸ್ಯ ಮನ್ಸೂರ್ ಅಲಿ ಮೊಮೀನ್ ಪ್ರಕಾರ , " ಈ ಘಟಕದಲ್ಲಿ ಕೆಲವೊಂದು ಅನಿವಾರ್ಯ ಬದಲಾವಣೆಗಳಾಗಬೇಕಿವೆ. ಕಾರ್ಮಿಕರ ಅವಶ್ಯಕತೆಯನ್ನು ಕಡಿಮೆ ಮಾಡಿ , ಘಟಕದ ಕಾರ್ಯತತ್ಪರತೆಯನ್ನು ಹೆಚ್ಚಿಸುವಂಥ ತಂತ್ರಜ್ಞಾನದ ಅವಶ್ಯಕತೆ ಇದೆ. 1987ರಲ್ಲಿ ಕೇಂದ್ರದ ಸಹಕಾರದೊಂದಿಗೆ ಮೆಥಾನ್ ಮಾತ್ರವಲ್ಲದೇ ಮೆಲೋಜ್ ಹಾಗೂ ವಾರ್ಶಿಲಾ ಗ್ರಾಮಗಳಲ್ಲೂ ಇಂಧನ ಘಟಕಗಳನ್ನು ಸ್ಥಾಪಿಸಲಾಗಿತ್ತು. ಆದರೆ , ಗ್ರಾಮಸ್ಥರ ಅಸಹಕಾರ ಹಾಗೂ ಅಸಮರ್ಪಕ ನಿರ್ವಹಣೆಯಿಂದಾಗಿ ಒಂದೇ ವರ್ಷದಲ್ಲಿ ಅವೆರಡೂ ಸ್ಥಗಿತಗೊಂಡವು. ಮೆಥಾನ್ನಲ್ಲಿರುವ ಇಂಧನ ಘಟಕಕ್ಕೆ 20 ವರ್ಷಗಳ ಇತಿಹಾಸವಿದೆ". ಮೆಥಾನ್ನ ಯಶೋಗಾಥೆಯನ್ನೇ ಪ್ರೇರಣೆಯಾಗಿಟ್ಟು ಕೊಂಡಿರುವ ಭಿಂತ್ ಭದ್ರಕ್ ಗ್ರಾಮ ಕೂಡ ಇಂಧನ ಉತ್ಪಾದನೆಯಲ್ಲಿ ದಾಪುಗಾಲಿಕ್ಕುತ್ತಿದೆ. 2007ರಲ್ಲಿ ಪ್ರಾರಂಭವಾದ ಭಿಂತ್ ಭದ್ರಕ್ ಜೈವಿಕ ಇಂಧನ ಬ್ಯಾಂಕ್ ಕುರಿತು ಹಲವಾರು ಸಂಸ್ಥೆಗಳು ಈಗಾಗಲೇ ಅಧ್ಯಯನ ನಡೆಸಿವೆ. ಭಿಂತ್ ಭದ್ರಕ್ ಒಂದು ಸಿದ್ಧ ಮಾದರಿ ಎಂಬುದು ಸುಲ್ತಾನ್ ಮೊಮೀನ್ ಅವರ ಅಭಿಪ್ರಾಯ. ಗುಜರಾತ್-ಮಹಾರಾಷ್ಟ್ರ ಗಡಿಯಲ್ಲಿರುವ ಈ ಭಿಂತ್ ಭದ್ರಕ್ ಒಂದು ಬುಡಕಟ್ಟು ಗ್ರಾಮ. ಶಿಕ್ಷಣ ಹಾಗೂ ವೈದ್ಯಕೀಯ ವ್ಯವಸ್ಥೆ ಇಂದಿಗೂ ಇಲ್ಲಿನ ಗ್ರಾಮಸ್ಥರಿಗೆ ಗಗನಕುಸುಮವಾಗಿಯೇ ಉಳಿದಿದೆ. ಆದರೆ , ಜೈವಿಕ ಇಂಧನ ಬ್ಯಾಂಕ್ ಕ್ಷೇತ್ರದಲ್ಲಿ ಈ ಕುಗ್ರಾಮದ ಸಾಧನೆ ಮಾತ್ರ ಊಹೆಗೂ ನಿಲುಕದ್ದು. 2007ರ ಮೊದಲು ಕೇವಲ ನಕಾಶೆ ಮೇಲಿನ ಚುಕ್ಕೆಯಾಗಿದ್ದ ಈ ಗ್ರಾಮ ಮೊದಲು ಕಣ್ಣಿಗೆ ಬಿದ್ದದ್ದು ಜಿಲ್ಲಾ ಅಭಿವೃದ್ಧಿ ಅಧಿಕಾರಿಯಾಗಿದ್ದ ವಿಜಯ್ ಸೋನ್ವಾನೆ ಅವರಿಗೆ. ಗಡಿ ಭಾಗದ ಈ ಕುಗ್ರಾಮವನ್ನೇ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯ ಅನುಷ್ಠಾನಕ್ಕೆ ಬಳಸಿಕೊಂಡ ವಿಜಯ್ ಈ ಗ್ರಾಮದಲ್ಲಿ ಜೈವಿಕ ಇಂಧನ ಘಟಕ ಸ್ಥಾಪನೆಗೆ ಮುಂದಾದರು. ಈ ಯೋಜನೆಗೆ ಪ್ರಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ರೂ. 10 ಲಕ್ಷಗಳನ್ನು ಅನುದಾನದ ರೂಪದಲ್ಲಿ ನೀಡಿತಾದರೂ ಈ ಕುರಿತು ' ಸಮುಲ್ ' ಡೈರಿ ನೀಡಿದ ಬೆಂಬಲವನ್ನು ನಿರ್ಲಕ್ಷಿಸುವಂತಿಲ್ಲ. "ನಮ್ಮ ಗ್ರಾಮದಲ್ಲಿನ ಸಾಮಾಜಿಕ ಸೌಹಾರ್ದತೆಯಿಂದಾಗಿಯೇ ಜಿಲ್ಲಾ ಪಂಚಾಯ್ತಿ ಹಾಗೂ ಸಮುಲ್ ಡೈರಿ ನಮ್ಮಲ್ಲಿ ಇಂಧನ ಬ್ಯಾಂಕ್ ನಿರ್ಮಾಣಕ್ಕೆ ಮುಂದೆ ಬಂದವು. ಇದರ ದೆಸೆಯಿಂದಾಗಿ ಇಂದು ನಮ್ಮ ಗ್ರಾಮದ ಪ್ರತಿಯೊಬ್ಬರೂ ಜೈವಿಕ ಇಂಧನದ ಸೌಕರ್ಯ ಪಡೆದಿದ್ದಾರೆ" ಎನ್ನುತ್ತಾರೆ ಭಿಂತ್ ಭದ್ರಕ್ ಜೈವಿಕ ಇಂಧನ ಬ್ಯಾಂಕ್ನ ಅಧ್ಯಕ್ಷ ರಮೇಶ್ ವಾಸವ. "ನನ್ನ ಬಳಿ 10 ದನಗಳಿವೆ. ಈ ಹಿಂದೆ ಸಗಣಿ ಮಾರಿ 2 ಸಾವಿರದವರೆಗೆ ಸಂಪಾದಿಸುತ್ತಿದ್ದೆ. ಆದರೆ ಈಗ 7 ಸಾವಿರಕ್ಕೂ ಹೆಚ್ಚು ಹಣ ಅದೇ ಸಗಣಿಯಿಂದ ಸಂಪಾದಿಸುತ್ತಿದ್ದೇನೆ. ಇದರ ಜೊತೆಗೆ ದಿನವೊಂದಕ್ಕೆ ನಾಲ್ಕು ತಾಸುಗಳಷ್ಟು ಉಚಿತ ಇಂಧನವನ್ನೂ ಪಡೆಯುತ್ತಿದ್ದೇನೆ" ಎಂದು ಡೈರಿ ಸಂಘ ಹಾಗೂ ಜೈವಿಕ ಇಂಧನ ಬ್ಯಾಂಕ್ನ ಕಾರ್ಯದರ್ಶಿ ಚುನಿಲಾಲ್ ನಾಯ್ಕ್ ಸಂತಸದಿಂದ ಹೇಳುತ್ತಾರೆ. ಕೋಳಿ ಕೂಗುವುದಕ್ಕೆ ಮೊದಲೇ ಗ್ರಾಮದ ದಿನಚರಿ ಪ್ರಾರಂಭವಾಗುತ್ತದೆ. ಸಂಗ್ರಹಿಸಿದ ಸಗಣಿಯನ್ನು ಮುಂಜಾನೆ 8 ಗಂಟೆಯ ಒಳಗೆ ಬ್ಯಾಂಕ್ಗೆ ತಲುಪಿಸಬೇಕು. ಈ ಕುರಿತ ನಿಯಮಗಳಲ್ಲಿ ಕಿಂಚಿತ್ತೂ ಸಡಲಿಕೆ ಇಲ್ಲ. ಜಮೆಯಾದ ದನದ ಸಗಣಿ ಪ್ರಮಾಣವನ್ನು ಅಧಿಕೃತವಾಗಿ ದಾಖಲು ಮಾಡಲಾಗುತ್ತದೆ. ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯೂ ಘಟಕದಲ್ಲಿ ದಿನಕ್ಕೆ ಕನಿಷ್ಠ ಎರಡು ತಾಸುಗಳ ಕೆಲಸವನ್ನಾದರೂ ಮಾಡಬೇಕಾಗುತ್ತದೆ. ಭಿಂತ್ ಭದ್ರಕ್ ಗ್ರಾಮದ ನಿವಾಸಿಯಾಗಿರುವ ಮಹಿಮಾ ವಾಲ್ವಿ , " ಮರಮಟ್ಟುಗಳನ್ನು ಹುಡುಕಿಕೊಂಡು ಕಾಡು ಅಲೆಯುವ ಸ್ಥಿತಿಯಂತೂ ಈಗಿಲ್ಲ. ಹೊಗೆ ಹಾಗೂ ಮಾಲಿನ್ಯವೆಂಬುದು ಹಳೆಯ ಸಂಗತಿ. ಜೈವಿಕ ಇಂಧನಕ್ಕೆಂದು ನಾವು ರೂ. 150 ನೀಡುತ್ತಿದ್ದರೂ ಅದರಿಂದ ನಾವು ಪಡೆದುಕೊಳ್ಳುತ್ತಿರುವ ಉಪಯೋಗ ಮಾತ್ರ ಅಪರಿಮಿತ" ಎನ್ನುತ್ತಾರೆ. ಭಿಂತ್ ಭದ್ರಕ್ ಗ್ರಾಮದ ಜೈವಿಕ ಇಂಧನ ಘಟಕದ ಯಶಸ್ಸಿನ ಹಿಂದಿರುವ 550ಕ್ಕೂ ಹೆಚ್ಚಿನ ಜಾನುವಾರುಗಳ ಕೊಡುಗೆಯನ್ನು ಮರೆಯುವಂತಿಲ್ಲ. ಒಂದು ಜೈವಿಕ ಇಂಧನ ಘಟಕ ದಿನವೊಂದಕ್ಕೆ ಅಂದಾಜು 4,500-5,000 ಕೆಜಿಯಷ್ಟು ದನದ ಸಗಣಿಯನ್ನು ಪಡೆಯುತ್ತದೆ. ಕಳೆದ ವರ್ಷ ಶೇಖರವಾದ 1,33,442 ಕೆಜಿ ಸಗಣಿಯಿಂದ ಘಟಕ 35 ಸಾವಿರದಷ್ಟು ಆದಾಯ ಸಂಪಾದಿಸಿದೆ. ಆ ಆದಾಯದಲ್ಲಿ ಸುಮಾರು 23 ಸಾವಿರ ರೂಪಾಯಿಗಳನ್ನು ಗ್ರಾಮಸ್ಥರಿಗೆ ವಿತರಿಸಲಾಗಿದೆ. ಯಾವುದೇ ಗ್ರಾಮವೊಂದರ ಅಭಿವೃದ್ಧಿಗೆ ಇದಕ್ಕಿಂತ ಉತ್ತಮ ಯೋಜನೆಗಳ ಅಗತ್ಯವಿಲ್ಲ .
ಸೌಜನ್ಯ: ದ ಸಂಡೇ ಇಂಡಿಯನ್ |