ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಜಾಗತಿಕ ಸುದ್ದಿ / ಯೆಮೆನ್‌ಗೆ ವಕ್ಕರಿಸಿದ ' ಭಯೋತ್ಪಾದನೆಯ ವಿರುದ್ಧ' ಯುದ್ಧ

ಯೆಮೆನ್‌ಗೆ ವಕ್ಕರಿಸಿದ ' ಭಯೋತ್ಪಾದನೆಯ ವಿರುದ್ಧ' ಯುದ್ಧ

Fri, 12 Feb 2010 07:37:00  Office Staff   S.O. News Service

ಯೆಮೆನ್ ಇದ್ದಕ್ಕಿದ್ದ ಹಾಗೆ ಸುದ್ದಿಯಲ್ಲಿದೆ. ಅದೂ ಹಠಾತ್ತಾಗಿ ಅಮೆರಿಕನ್ ಸರ್ಕಾರದ `ಭಯೋತ್ಪಾದನೆಯ ವಿರುಧ್ಧ ಯುಧ್ಧ'ಕ್ಕೆ ಬಲಿಯಾಗುವ ಮುಂದಿನ ಮುಸ್ಲಿಂ ದೇಶವಾಗಿ ಹೊಮ್ಮಿದೆ. ಇತ್ತೀಚೆಗೆ ಅಮೆರಿಕದ ಡೆಟ್ರಾಯಿಟ್ ಗೆ ಹೋಗುತ್ತಿದ್ದ ಕ್ರಿಸ್ ಮಸ್ ದಿನ ಸ್ಫೋಟಗೊಳಿಸಲು ಪ್ರಯತ್ನಿಸಿದ ಯುವಕನೊಬ್ಬ ತನ್ನನ್ನು ಕಳಿಸಿದ್ದು ಯೆಮೆನ್ ನಲ್ಲಿ ಇರುವ ಅಲ್ ಖೈದಾ ಗುಂಪೊಂದು ಎಂದಿದ್ದೇ ಇದಕ್ಕೆ ಕಾರಣ. ಇರಾಕ್, ಅಫ್ಘಾನಿಸ್ತಾನದಂತಹುದೇ ಚರಿತ್ರೆ ಇರುವ ಯೆಮೆನ್ ಮುಂದಿನ `ಭಯೋತ್ಪಾದನೆಯ ಕೇಂದ್ರ' ಆಗಲಿದೆ. ಅಫ್ಘಾನಿಸ್ತಾನದಲ್ಲಿ ಬಳಸಿದ - ಮಿಲಿಟರಿ ದಾಳಿ, ಭಯೋತ್ಪಾದನೆ ಹತ್ತಿಕ್ಕುವ ಉಗ್ರ - ಕ್ರಮಗಳೇ ಅಲ್ಲೂ ಬೇಕಾಗಬಹುದು. ಎಂದು ಹೇಳುತ್ತಾ ಒಬಾಮಾ ಆಡಳಿತ ಇನ್ನೊಂದು ಅಫ್ಘಾನಿಸ್ತಾನ ಮಾದರಿಯ ಯುದ್ಧ ಅತಿಕ್ರಮಣಕ್ಕೆ ತಯಾರಿ ನಡೆಸಿದೆ. ಈಗಾಗಲೇ ಯೆಮೆನ್ ಮತ್ತು ಸೌದಿ ಅರೇಬಿಯಾ ಸರ್ಕಾರಗಳ ಜತೆ ಸೇರಿ ಅಲ್ಲಿನ ಆಂತರಿಕ ಯುದ್ಧದಲ್ಲಿ ಅಮೆರಿಕ ಮಧ್ಯ ಪ್ರವೇಶ ಮಾಡಿದೆ. ಇದು ಎಷ್ಟರ ಮಟ್ಟಿಗೆ ಸರಿ ? ಪ್ರಮುಖ ನೌಕಾಯಾನ ಹಾದು ಹೋಗುವ ಆಯಕಟ್ಟಿನ ಸ್ಥಾನ (ಕೆಂಪು ಸಮುದ್ರ, ಅರೇಬಿಯನ್ ಸಮುದ್ರ ಸೇರುವ ಏಡನ್ ಕೊಲ್ಲಿ), ಅಪಾರ ತೈಲ ಸಂಪತ್ತು ಇರುವ ಸೌದಿ ಅರೇಬಿಯಾದ ದಕ್ಷಿಣದ ನೆರೆಯ ದೇಶ, ಶೀತ ಸಮರದ ಕಾಲದಲ್ಲಿ ರಾಷ್ಟ್ರೀಯವಾದಿ/ಸಮಾಜವಾದಿ ಸರ್ಕಾರಗಳನ್ನು ಹೊಂದಿ ಅಮೆರಿಕದ ಮತ್ತು ಅದರ ಪ್ರಾದೇಶಿಕ ಮಿತ್ರರ ಕೆಂಗಣ್ಣಿಗೆ ಗುರಿಯಾಗಿದ್ದ, ಸೋವಿಯೆಟ್ ಪತನದ ನಂತರ ಸರ್ವಾಧಿಕಾರಿ ಆಡಳಿತಕ್ಕೆ ತುತ್ತಾಗಿ ತೀವ್ರ ರಾಜಕೀಯ ತಳಮಳಕ್ಕೆ ಒಳಗಾಗಿರುವ ಯೆಮೆನ್ ಚರಿತ್ರೆ ಇರಾಕ್, ಅಫ್ಘಾನಿಸ್ತಾನಗಳಿಗೆ ಹೋಲುತ್ತದೆ ಎಂಬುದು ನಿಜ. ವಿದೇಶೀ ಶಕ್ತಿಗಳ ವಸಾಹತುಶಾಹಿಯ ವಿರುದ್ಧ ಬಂಡೆದ್ದ ಅರಬ್ ದೇಶಗಳಲ್ಲಿ ಯೆಮೆನ್ ಒಂದು. ಉತ್ತರ ಯೆಮೆನ್ ಒಟ್ಟೊಮನ್ ಸಾಮ್ಯಾಜ್ಯದ ಭಾಗವಾಗಿತ್ತು. 1918 ರಲ್ಲಿ ಇಮಾಮರ ಇಸ್ಲಾಮಿಕ್ ಆಡಳಿತಕ್ಕೆ ಗುರಿಯಾಯಿತು. ದಕ್ಷಿಣ ಯೆಮೆನ್ 19 ನೇ ಶತಮಾನದಲ್ಲಿ ಬ್ರಿಟಿಷರ ಪಾಲಾಗಿದ್ದು ಅವರ ವಸಾಹತು ಆಗಿತ್ತು. ಅದರ ವಿರುದ್ಧ ತೀವ್ರ ಅತೃಪ್ತಿ ಬೆಳೆದು ತೀವ್ರ ಚಳುವಳಿಗಳು ಬೆಳೆದು ಬಂದವು. ದಕ್ಷಿಣ ಯೆಮೆನ್‌ನಲ್ಲಿ ಒಂದು ಕಡೆ ಮಿಲಿಟರಿ ಅಧಿಕಾರಿಗಳ ರಾಷ್ಟ್ರೀಯವಾದಿ ನಾಯಕತ್ವದಲ್ಲಿ ಇನ್ನೊಂದು ಕಡೆ ಕ್ಯೂಬಾ-ಚೀನೀ-ಪ್ಯಾಲೆಸ್ಟೈನ್ ಹೋರಾಟಗಳಿಂದ ಸ್ಫೂರ್ತಿ ಪಡೆದ ಕಮ್ಯುನಿಸ್ಟ್ ಗೆರಿಲ್ಲಾಗಳ ನಾಯಕತ್ವದಲ್ಲಿ ಹೋರಾಟ ತೀವ್ರವಾಯಿತು. ಈಜಿಪ್ಟನ್ ಜನರಲ್ ನಾಸೆರ‍್ರಿಂದ ಸ್ಫೂರ್ತಿ ಪಡೆದ ಮಿಲಿಟರಿ ಅಧಿಕಾರಿಗಳ ದಂಗೆ 1962 ರಲ್ಲಿ ಉತ್ತರ ಯೆಮೆನ್ ನಲ್ಲಿ ಇಮಾಮ್ ಆಡಳಿತ ಕೊನೆಗೊಳಿಸಿದರು. ಉತ್ತರ ಯೆಮೆನ್‌ನಲ್ಲಿ ಬಂದ ಮಿಲಿಟರಿ ಆಡಳಿತ ಇತರ ರಾಷ್ಟ್ರೀಯವಾದಿ ಮಿಲಿಟರಿ ಕ್ರಾಂತಿಗಳಂತೆ ಮಿಲಿಟರಿ ಸವಾರ್ಧಿಕಾರಿ ಹಾದಿ ಹಿಡಿದರೆ, ದಕ್ಷಿಣದಲ್ಲಿ ಜನಪ್ರಿಯ ಪ್ರಜಾಸತ್ತಾತ್ಮಕ ಕ್ರಾಂತಿ ಆಯಿತು.

 

ಸರ್ವಾಧಿಕಾರಕ್ಕೆ ಬೆಂಬಲ

ಮೊದಲು ರಾಷ್ಟ್ರೀಯ ವಿಮೋಚನಾ ರಂಗದ, 1978 ರಿಂದ ಯೆಮೆನ್ ಸೋಶಲಿಸ್ಟ್ ಪಾರ್ಟಿಯ ನಾಯಕತ್ವದಲ್ಲಿ ಪಾಳೆಯಗಾರಿ ಅರಬ್ ಮರುಭೂಮಿಯಲ್ಲಿ ದಕ್ಷಿಣ ಯೆಮೆನ್ ಪ್ರಜಾಸತ್ತೆಯ ಒಯಸಿಸ್ ಆಯಿತು. ಉತ್ತರದಲ್ಲಿ ಕಮ್ಯುನಿಸ್ಟ್ ಗೆರಿಲ್ಲಾಗಳು ಮಿಲಿಟರಿ ಸರ್ವಾಧಿಕಾರದ ವಿರುದ್ಧ ಹೋರಾಟ ಮುಂದುವರೆಸಿದರು. ದಕ್ಷಿಣ ಯೆಮೆನ್ (ಅಥವಾ ಇಡೀ ಯೆಮೆನ್) ಅರಬೀ ಕ್ಯೂಬಾ ಆಗಬಹುದೆಂಬ ಭೀತಿಯಿಂದ ಸೌದಿ ದೊರೆಗಳು ಮತ್ತು ಬ್ರಿಟಿಷ್ ಇಸ್ರೇಲಿ ಅಮೆರಿಕನ್ ಕೂಟ, ಯೆಮೆನ್ ವಿರುದ್ಧ ಮಸಲತ್ತು ನಡೆಸಿದರು. ಉತ್ತರ ಯೆಮೆನ್ ಗೆ ಹಣದ ಹೊಳೆ ಹರಿಸಿ ಅಲ್ಲಿನ ಮಿಲಿಟರಿ ಸರ್ವಾಧಿಕಾರವನ್ನು ಗಟ್ಟಿಗೊಳಿಸಿದರೆ, ದಕ್ಷಿಣದಲ್ಲಿ ಸರ್ಕಾರ ಉರುಳಿಸುವ ಎಲ್ಲಾ ಪ್ರಯತ್ನಗಳು ನಡೆದವು. ಆರ್ಥಿಕ - ರಾಜಕೀಯ - ಮಿಲಿಟರಿ ದಿಗ್ಬಂಧನಗಳ ಮೂಲಕ ಅದರ ಕತ್ತು ಹಿಸುಕುವ ಪ್ರಯತ್ನಗಳು ನಡೆದವು. ಆದಾಗ್ಯೂ ದಕ್ಷಿಣ ಯೆಮೆನ್ ಅರಬ್ ಪ್ರದೇಶದಲ್ಲೇ ಅತ್ಯಂತ ತೀವ್ರ ಪ್ರಜಾಸತ್ತಾತ್ಮಕ ಸಾಮಾಜಿಕ-ರಾಜಕೀಯ ಸುಧಾರಣೆಗಳನ್ನು ತಂದಿತು. ಭೂಸುಧಾರಣೆ ತಂದಿತು. ನಿರಕ್ಷರತೆ-ಅನಾರೋಗ್ಯಗಳನ್ನು ಹೋಗಲಾಡಿಸಿತು. ಆದರೆ ಬರ ಬರುತ್ತಾ ಯೆಮೆನ್ ಸೋಶಲಿಸ್ಟ್ ಪಾರ್ಟಿಯೊಳಗಿನ ಭಿನ್ನಮತ/ಅಧಿಕಾರಕ್ಕೆ ಕಲಹ, ಸೋವಿಯೆಟ್ ಪತನ ಈ ಸರ್ಕಾರವನ್ನು ಕ್ಷೀಣಗೊಳಿಸಿತು. ಈ ಅವಕಾಶ ಉಪಯೋಗಿಸಿ ಸೌದಿ ಅರೇಬಿಯಾ ಬಲವಂತವಾಗಿ ದಕ್ಷಿಣದಲ್ಲಿ ತೀವ್ರ ವಿರೋಧ ಇದ್ದರೂ, ಎರಡೂ ಯೆಮೆನ್‌ಗಳನ್ನು ವಿಲೀನಗೊಳಿಸಿ ಉತ್ತರದ ಮಿಲಿಟರಿ ಸರ್ವಾಧಿಕಾರದ ಅಡಿಯಲ್ಲಿ ತಂದರು. ಚಳುವಳಿ

ಅಂದಿನಿಂದ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೆಹ್ ಅವರ ಸರ್ವಾಧಿಕಾರದ ವಿರುದ್ಧ್ಧ ಉತ್ತರ ದಕ್ಷಿಣ ಎರಡೂ ಪ್ರದೇಶಗಳಲ್ಲಿ ತೀವ್ರ ಚಳುವಳಿಗಳು ನಡೆಯುತ್ತಿವೆ. ಆರ್ಥಿಕ ಸಹಾಯಕ್ಕಾಗಿ ಮತ್ತು ರಾಜಕೀಯ ಬೆಂಬಲಕ್ಕಾಗಿ ಅಧ್ಯಕ್ಷ ಸಲೆಹ್ ಸರ್ಕಾರ ಅಮೆರಿಕ, ಸೌದಿ ಅರೇಬಿಯಾ ಮತ್ತು ಐಎಂಎಫ್ ಗಳ ತಾಳಕ್ಕೆ ಕುಣಿಯುತ್ತಾ ಹೋರಾಟಗಳ ದಮನದಲ್ಲಿ ತೊಡಗಿದೆ. ಸಲೆಹ್ ವಿರುದ್ಧ ಹಲವು ಪಂಥಗಳ (ಬಲ-ಎಡ-ಧಾರ್ಮಿಕ ಇತ್ಯಾದಿ) ರಾಜಕೀಯ ಗುಂಪುಗಳು ಚಳುವಳಿಯಲ್ಲಿ ತೊಡಗಿವೆ. ಇವೆಲ್ಲವನ್ನೂ ತಮ್ಮದೇ ಕಾರಣಗಳಿಗಾಗಿ `ಅಲ್-ಖೈದಾ' ಎಂದು ಅಮೆರಿಕ, ಸೌದಿ ಅರೇಬಿಯಾ ಮತ್ತು ಪಾಶ್ಚಿಮಾತ್ಯ ಮಾಧ್ಯಮಗಳು ಹೇಳುತ್ತಿವೆ. ಆದರೆ ಅದು ನಿಜವಲ್ಲ.

`ಅಲ್-ಖೈದಾ'ದ ನೆಲೆ ಯೆಮೆನ್‌ನಲ್ಲಿ ಇಲ್ಲವೆಂದಲ್ಲ. ಆದರೆ ಅದೇನು ದೊಡ್ಡ ಶಕ್ತಿ ಅಲ್ಲ. `ಅಲ್-ಖೈದಾ' ಯೆಮೆನ್ ಗೆ ಕಾಲಿಟ್ಟಿದ್ದು ಅಫ್ಘಾನಿಸ್ತಾನದ ಪ್ರಗತಿಪರ ಸರ್ಕಾರ ಮತ್ತು ಅದರ ಬೆಂಬಕ್ಕೆ ಬಂದ ಸೋವಿಯೆಟ್ ಸೈನ್ಯ ವಿರುದ್ಧ ಜೆಹಾದ್‌ಗೆ ಸಿಐಎ (ಸೌದಿ ಅರೇಬಿಯಾ ಮತ್ತು ಯೆಮೆನ್ ಸರ್ಕಾರಗಳ ಸಕ್ರಿಯ ಬೆಂಬಲದಿಂದ) ತರಬೇತಿ ಮಾಡಿ ಕಳಿಸಿ, ಆಮೇಲೆ ಮರಳಿದ ಯೆಮೆನಿ ಯುವಕರಿಂದ. ಅಂದರೆ ಅವರೇ ಯೆಮೆನ್ ನಲ್ಲಿ `ಅಲ್-ಖೈದಾ' ಹುಟ್ಟು ಹಾಕಿದವರು. ಸಲೆಹ್ ವಿರುದ್ಧ ಗುಂಪುಗಳ ಮೇಲೆ ಕ್ಷಿಪಣಿ ದಾಳಿ, ತೀವ್ರ ದಮನಗಳ ಮೂಲಕ `ಅಲ್-ಖೈದಾ' ವನ್ನು ಅವರೇ ಬೆಳೆಸುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಬಳಸಿದ - ಮಿಲಿಟರಿ ದಾಳಿ, ಭಯೋತ್ಪಾದನೆ ಹತ್ತಿಕ್ಕುವ ಉಗ್ರ - ಕ್ರಮಗಳು ಸಮಸ್ಯೆಗೆ ಪರಿಹಾರ ಅಲ್ಲ. ಆ ಕ್ರಮಗಳು ಅಲ್ಲಿ ಸೃಷ್ಟಿಸಿದ ಭೀಕರ ಪರಿಸ್ಥಿತಿಯನ್ನು ಯೆಮೆನ್‌ನಲ್ಲೂ ಸೃಷ್ಟಿಸಬಲ್ಲವು ಅಷ್ಟೇ.

 

-ಶರತ್ ಚಂದ್ರ

ಸೌಜನ್ಯ: ಜನಶಕ್ತಿ 


Share: