ಆಳುವ ಸರ್ಕಾರಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಸ್ಥಗಿತಗೊಂಡಿದ್ದ, ಶತಮಾನಕ್ಕೂ ಮಿಕ್ಕಿದ ಇತಿಹಾಸವುಳ್ಳ ಕೋಲಾರದ ಚಿನ್ನದ ಗಣಿಯನ್ನು ಪುನರಾರಂಭಿಸುವ ಒಂದು ಸುವರ್ಣವಕಾಶವೊಂದು ಒದಗಿಬಂದಿದೆ. ಗಣಿ ಪುನರಾರಂಭದ ಕುರಿತು ಸತತವಾದ ಹೋರಾಟ ನಡೆಸುತ್ತಾ ಬರುತ್ತಿರುವ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಈ ಕುರಿತು ಶೀಘ್ರ ಕ್ರಮಕ್ಕೆ ಒತ್ತಾಯಿಸಿದೆ. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಮತ್ತು ಭಾರತ್ ಗೋಲ್ಡ್ ಮೈನ್ಸ್ ಎಂಪ್ಲಾಯೀಸ್ ಯೂನಿಯನ್ನು ಕೆಜಿಎಫ್ ಚಿನ್ನದ ಗಣಿ ಮುಚ್ಚದಂತೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಇದರ ಪರಿಣಾಮವಾಗಿ ಇದುವರೆಗೂ ಗಣಿಯನ್ನು ಮುಚ್ಚಲು ಸಾಧ್ಯವಾಗಿಲ್ಲ. ಕಳೆದ ವರ್ಷ ಹೈಕೋರ್ಟನ ಏಕಪೀಠ ನೀಡಿದ ತೀರ್ಪಿನ ವಿರುದ್ಧ ಕಾರ್ಮಿಕರ ಸಹಕಾರ ಸಂಘಗಳೆಂದು ಹೇಳಿಕೊಳ್ಳುವ, ಅಧಿಕಾರಶಾಹಿ ಮತ್ತು ರಾಜಕೀಯ ವ್ಯಕ್ತಿಗಳ ಪರ ಕೆಲಸ ಮಾಡುವ ಸ್ವಾರ್ಥಹಿತಾಸಕ್ತಿಗಳು ಸಲ್ಲಿಸಿದ ಮೇಲ್ಮನವಿಯನ್ನು ತಿರಸ್ಕರಿಸಿದ ಹೈಕೋರ್ಟನ ವಿಭಾಗೀಯ ಪೀಠ ಗಣಿಯನ್ನು ಪುನಶ್ಚೇತನಗೊಳಿಸುವಂತೆ ನಿರ್ದೆಶನ ನೀಡಿತು. ನ್ಯಾಯಮೂರ್ತಿ ನಾಗರತ್ನ ಅವರು ನೀಡಿದ ಈ ತೀರ್ಪಿನ ವಿರುದ್ಧ ಸಹಕಾರ ಸಂಘ ಮತ್ತು ಕಾರ್ಮಿಕರ ಪರ ಧೋರಣೆ ಹೊಂದಿರುವುದಾಗಿ ನಾಟಕ ಮಾಡುತ್ತಿದ್ದ, ಅಧಿಕಾರಶಾಹಿ ಮತ್ತು ರಾಜಕೀಯ ವ್ಯಕ್ತಿಗಳ ಪರ ಇದ್ದ ಅಧಿಕಾರಿಯ ಮೇಲ್ಮನವಿಯನ್ನು ಪ್ರಶ್ನಿಸಲಾಯಿತು. ಈ ಮೇಲ್ಮನವಿ 2010ರ ಫೆಬ್ರವರಿ 1ರಂದು ವಿಚಾರಣೆ ನಡೆಸಲಾಯಿತು. ಕೇಂದ್ರ ಸರ್ಕಾರದ ಪರ ವಕೀಲರು ಈ ಹಿಂದಿನ ತೀರ್ಪಿಗೆ ಬದ್ಧವಾಗಿದ್ದು ಚಿನ್ನದ ಗಣಿ ಪುನಶ್ಚೇತನ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಹೇಳಿದರು. ಸರ್ಕಾರದ ಪರ ವಕೀಲರು ಆಗ ಮೇಲ್ಮನವಿಯನ್ನು ಹಿಂಪಡೆದರು. ಮತ್ತು ಕಾರ್ಮಿಕರ ಪರ ಮತ್ತು ಅಧಿಕಾರಿಗಳ ಸಹಕಾರ ಒಕ್ಕೂಟದ ಮೇಲ್ಮನವಿಯನ್ನು ತಿರಸ್ಕರಿಸಲಾಗಿದೆ. ಪ್ರಸ್ತುತ ಪರಿಸ್ಥಿತಿ ಏನೆಂದರೆ ಈ ವಿಷಯವನ್ನು ಮತ್ತೆ ಬಿಐಎಫ್ಆರ್ ಪರಿಶೀಲನೆಗೆ ಒಪ್ಪಿಸಲಾಗಿದೆ. ಈ ಹಿಂದೆಯೇ ಬಿಐಎಫ್ಆರ‍್ ಪ್ರಕ್ರಿಯೆಗಳು ಆಸ್ಟ್ರೇಲಿಯಾದ ಕಂಪನಿ ಮತ್ತು ಬಿಜಿಎಂಎಲ್ ನಡುವೆ ಜಂಟಿ ಉದ್ಯಮ ಸ್ಥಾಪಿಸುವ ಹಂತಕ್ಕೆ ತಲುಪಿದೆ. ಪ್ರತಿ ಒಂದು ಗ್ರಾಂ ಚಿನ್ನ ಆಗಿನ ಮಾರುಕಟ್ಟೆ ದರ 1600 ರೂ.ನಂತೆ 34 ದಶಲಕ್ಷ ಟನ್ ಟೈಲಿಂಗ್ನಿಂದ ಹತ್ತು ವರ್ಷಗಳ ಅವಧಿಯಲ್ಲಿ 3,808 ಕೋಟಿ ರೂ.ನಷ್ಟು ಚಿನ್ನ ತೆಗೆಯುವ ಸಾಧ್ಯತೆಗಳಿರುವ ವರದಿಯನ್ನು ನೀಡಿದೆ. ಇಷ್ಟೊಂದು ಮೌಲ್ಯದ ಚಿನ್ನ ತೆಗೆಯಲು ಕೇವಲ 100 ಕೋಟಿ ರೂ. ಹೂಡಿಕೆ ಸಾಕೆಂತಲೂ ವಿವರಿಸಿದೆ. ಆಗಿನ ಎನ್.ಡಿ. ಸರ್ಕಾರ ಸಮಯಾನುಸಾರವಾಗಿ ಬಿಐಎಫ್ಆರ್ ವರದಿಯಂತೆ ಪುನಶ್ಚೇತನಕ್ಕೆ ಮುಂದಾಗುವುದಾಗಿ ಹೇಳಿತ್ತು. ನಂತರ ಜೆವಿಪಿ ಸ್ಟಾಂಡ್ಅಲೋನ್ ಆಧಾರದಲ್ಲಿ ಪುನಶ್ಚೇತನ ಸಾಧ್ಯವಿಲ್ಲ ಎಂದು ಹೇಳಿದಾಗ ಬಿಐಎಫ್ಆರ್ ಸಂಪೂರ್ಣವಾಗಿ ಕಂಪನಿಯನ್ನೇ ಮುಚ್ಚುವ ಹಂತಕ್ಕೆ ತಲುಪಿತು. ಆಗ ಸಿಐಟಿಯು ಎಎಐಎಫ್ರ‍್ ಮನವಿ ಸಲ್ಲಿಸಿ ವಿಭಾಗೀಯ ಪೀಠ ತನ್ನ ಮನವಿ ಪರಿಗಣಿಸುವಂತೆ ಮನವಿ ಮಾಡಿತು.
ಕಂಪನಿಯನ್ನು ಮುಚ್ಚುವ ಬಿಐಎಫ್ಆರ್ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಕಾರ್ಮಿಕರು ತಮ್ಮ ಪಿಎಫ್ ಹಣವನ್ನು ಹೂಡಿಕೆ ಮಾಡಲು ಸೂಚಿಸಿ ನಂತರ ಎಎಐಎಫ್ ಕಂಪನಿ ಷೇರುಗಳನ್ನು ಕಾರ್ಮಿಕರ ಸಹಕಾರ ಸಂಘಕ್ಕೆ ವರ್ಗಾಯಿಸಲು ಆದೇಶ ನೀಡಲಿದೆ ಎಂದು ಹೇಳಿತು. ಈ ಆದೇಶವನ್ನು ಬಿಐಎಫ್ಆರ್ ಆದೇಶ ಅನುಸರಿಸಲಿಲ್ಲ. ಹಾಗಿದ್ದರೂ ಕಾರ್ಮಿಕರು ಆ ಸಂದರ್ಭದಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಲು ಸಮ್ಮತಿಸಲಿಲ್ಲ. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾದ ಸರ್ಕಾರ ಅಂತಿಮವಾಗಿ ಗಣಿಗಳನ್ನು ಮುಚ್ಚಿತು. ಎನ್.ಡಿ.ಎ ಮತ್ತು ಯುಪಿಎ ಎರಡೂ ಸರ್ಕಾರಗಳು ಕಂಪನಿಯನ್ನು ಪುನಶ್ಚೇತನಗೊಳಿಸುವುದಕ್ಕೆ ಕಾರ್ಮಿಕರಿಗೆ ನೆರವಾಗಲಿಲ್ಲ. ಈಗ ಚಿನ್ನದ ದರ ಗಣಿಯನ್ನು ಮುಚ್ಚಿದ ಸಂದರ್ಭದಲ್ಲಿ ಇದ್ದುದಕ್ಕಿಂತಲೂ ಮೂರು ಪಟ್ಟು ಹೆಚ್ಚಿದೆ. ಗಣಿಯನ್ನು ಮುನ್ನಡೆಸಲು ಸಾಧ್ಯವಿದೆ ಎಂದು ಹೈಕೋರ್ಟ ಸಹ ಗಮನಿಸಿದೆ. ಸದ್ಯದ ದರದಲ್ಲಿ ಟೈಲಿಂಗ್ಸಗಳಲ್ಲಿ ಮಾತ್ರವೇ 12 ಸಾವಿರ ಕೋಟಿ ರೂ. ಮೌಲ್ಯದ ಚಿನ್ನ ಇದೆ. ಇದನ್ನು ಕೇವಲ 400 ಕೋಟಿ ರೂ. ಹೂಡಿಕೆಯೊಂದಿಗೆ ತೆಗೆಯಬಹುದಾಗಿದೆ. ರಾಜಕಾರಣಿ-ಅಧಿಕಾರಶಾಹಿ ಪರ ಕೆಲಸ ಮಾಡುವ ಮತ್ತು ಕಾರ್ಮಿಕರ ಪರ ಎಂದು ಸೋಗು ಹಾಕಿಕೊಂಡಿರುವವರು ಕಂಪನಿಯ ಸ್ವತ್ತನ್ನು ಮಾರಾಟ ಮಾಡಿ ಬೃಹತ್ ಮೊತ್ತದ ಕಮೀಷನ್ ಹೊಡೆಯುವ ಹೊಂಚು ಹಾಕಿದ್ದಾರೆ. ಇದಕ್ಕೆ ಬದಲಾಗಿ ಸರ್ಕಾರ ಕಂಪನಿಯನ್ನು ಮುನ್ನಡೆಸಲು ಸಮ್ಮತಿಸಿದರೆ 10 ಸಾವಿರ ಕೋಟಿ ರೂ. ಮೌಲ್ಯದ ಚಿನ್ನ ಉಳಿತಾಯ ಮಾಡುವುದು ಮಾತ್ರವಲ್ಲದೆ ಕಂಪನಿಗೆ ಸೇರಿರುವ 2000 ಎಕರೆ ಭೂಮಿಯನ್ನೂ ಬಳಕೆ ಮಾಡಿಕೊಳ್ಳಬಹುದು. ಬಳಕೆಗೆ ಸಿದ್ಧವಾಗಿರುವ ಮೂಲಸೌಕರ್ಯವನ್ನೂ ಉಪಯೋಗಿಸಕೊಳ್ಳಬಹುದು. ಬೆಂಗಳೂರಿನಿಂದ 100 ಕಿಲೋ ಮೀಟರ್ ದೂರ ಮತ್ತು ವೈಟ್ ಫೀಲ್ಡ್ ನಿಂದ 50 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಈ ಭೂಮಿ ಮೇಲೆ ಭೂಮಾಫಿಯಾಗಳ ಕಣ್ಣೂ ಬಿದ್ದಿದೆ. ಸಿಐಟಿಯು ಈಗ ತನ್ನ ನಿಲುವು ಎತ್ತಿ ಹಿಡಿದಿದೆ ಎಂದು ಪರಿಗಣಿಸಿದೆ. ಕಾರ್ಮಿಕರು ಸರಿಯಾದ ದಾರಿಯಲ್ಲಿ ಮರು ಸಂಘಟಿತರಾಗಬೇಕೆಂದು ಕರೆ ನೀಡಿದೆ. ಮುಂದಿನ ದಿನಗಳಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ಗಣಿಗಳನ್ನು ಪುನಶ್ಚೇತನಕ್ಕೆ ಮುಂದಾಗಬೇಕೆಂದು ಹೇಳುತ್ತಿದೆ. ಇಡೀ ಕೆಜಿಎಫ್‌ಗೆ ಇದೊಂದು ಸುವರ್ಣ ಅವಕಾಶವಾಗಿದೆ. ಶತಮಾನ ಇತಿಹಾಸ ಹೊಂದಿರುವ ಗಣಿಯನ್ನು ಪುನಶ್ಚೇತನಕ್ಕೆ ಕಾರ್ಮಿಕರು ಒತ್ತಾಯಿಸುತ್ತಿರುವ ಹಾದಿಯಲ್ಲಿ ಮುನ್ನಡೆಯಲು ಎನ್.ಡಿ.ಎ ಮತ್ತು ಯುಪಿಎ ಸರ್ಕಾರಕ್ಕೂ ಇದು ಉತ್ತಮ ಅವಕಾಶವಾಗಿದೆ.
ಸೌಜನ್ಯ: ಜನಶಕ್ತಿ