ನವದೆಹಲಿ, ನ.೩ :ಸಿಎಂ ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರ ಕದನ ಪ್ರಹಸನ ಸುಲಭವಾಗಿ ಶಮನಗೊಳ್ಳುವ ಸೂಚನೆಗಳಿಲ್ಲ.
ಯಡಿಯೂರಪ್ಪ ನಾಯಕತ್ವದ ಬದಲಾವಣೆ ಇಲ್ಲವೆಂದು ಬಿಜೆಪಿ ವರಿಷ್ಠರು ಸ್ಪಷ್ಟವಾಗಿ ಸಾರಿದ್ದರೂ ತಮ್ಮ ಕಡು ಕಠಿಣ ನಿಲವಿನಿಂದ ಹಿಂದೆ ಸರಿಯಲು ರೆಡ್ಡಿ ಸೋದರರು ತಯಾರಿಲ್ಲ.
ಹೀಗಾಗಿ ಪಕ್ಷದ ವರಿಷ್ಠ ಮಂಡಳಿಯ ಅತ್ಯುನ್ನತ ಮೂಲಗಳ ಪ್ರಕಾರ ಈ ಕದನ ಇನ್ನೂ ಎರಡು ಮೂರು ದಿನಗಳ ಕಾಲ ದೆಹಲಿಯ ತಲೆಯಾಳುಗಳ ಪಡಸಾಲೆಗಳಲ್ಲಿ ಗಿರಕಿ ಹೊಡೆಯಲಿದೆ.
ಯಡಿಯೂರಪ್ಪ ಅವರ ತಲೆದಂಡವೇ ಬೇಕು ಎಂಬ ತಮ್ಮ ನಿಲವಿನಿಂದ ಒಂದು ಅಂಗುಲವೂ ಹಿಂದೆ ಸರಿಯಲು ತಾವು ತಯಾರಿಲ್ಲ ಎನ್ನುತ್ತಾರೆ ರೆಡ್ಡಿ ಸೋದರರು.
ಭಾರೀ ಚೌಕಾಶಿಯ ಪ್ರಯತ್ನವಾಗಿ ಇಂತಹ ಕಠಿಣ ನಿಲವನ್ನು ರೆಡ್ಡಿ ಸೋದರರು ಕೇವಲ ತೋರಿಕೆಗಾಗಿ ತಳೆದಿದ್ದಾರೆಯೇ ಅಥವಾ ನಿಜವಾಗಿಯೂ ಗಂಭೀರವಾಗಿದ್ದಾರೆಯೇ ಎಂಬ ಪ್ರಶ್ನೆಗಳೂ ದೆಹಲಿಯ ರಾಜಕೀಯ ವಲಯಗಳಲ್ಲಿ ಸುಳಿದಿರುವುದು ಉಂಟು.
ಈ ನಿಲವು ತೋರಿಕೆಯದು. ತಮ್ಮ ಬೇಡಿಕೆಗಳ ಚೌಕಾಶಿಯಲ್ಲಿ ತೊಡಗಿರುವ ರೆಡ್ಡಿಗಳು, ತಮಗೆ ಬೇಕಾದದ್ದು ಗಿಟ್ಟುವ ತನಕ ನಾಯಕತ್ವ ಬದಲಾವಣೆಯ ವಿಷಯವನ್ನು ಬಲು ಜಿದ್ದಿನಿಂದ ಜಗ್ಗುತ್ತಾರೆ ಎನ್ನುತ್ತವೆ ವರಿಷ್ಠ ಮಂಡಳಿಯ ಮೂಲಗಳು.
ತೆರೆ ಮೇಲೆ ಕಾಣುವುದಕ್ಕಿಂತ ಹೆಚ್ಚಿನ ಪಾತ್ರಧಾರಿಗಳು ಈ ಪ್ರಹಸನದಲ್ಲಿ ಇದ್ದಾರೆ. ಬಿಕ್ಕಟ್ಟು ಸುಲಭವಾಗಿ ಬಗೆಹರಿಯುವುದು ಈ ಅದೃಶ್ಯ ಪಾತ್ರಧಾರಿಗಳಿಗೆ ಬೇಕಿಲ್ಲ. ನೆನೆಗುದಿಯ ಹಿಂದಿನ ಪ್ರಮುಖ ಕಾರಣವಿದು ಎನ್ನುವ ನಾಯಕರೂ ಉಂಟು. ರಾಜ್ಯ ಬಿಜೆಪಿ ನಾಯಕತ್ವದ ಅಭಿಪ್ರಾಯವೂ ಇದೇ ಆಗಿದೆಯಾದರೂ ಬುಧವಾರ ಸಂಜೆಯ ವೇಳೆಗೆ ಸರ್ಕಾರ ಉಳಿಯಬೇಕೆನ್ನುವ ಪಾಳೆಯದಲ್ಲಿ ಆತಂಕದ ಮುಖಮುದ್ರೆಗಳ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ.
ಬಿಕ್ಕಟ್ಟು ಬಗೆಹರಿದಿದೆ... ನಾಯಕತ್ವ ಬದಲಾವಣೆ ಇಲ್ಲವೆಂದು ಹೇಳಿ ಸುದ್ದಿಗಾರರಲ್ಲಿ ಅಚ್ಚರಿ ಹುಟ್ಟಿಸಿದ ಬಿಜೆಪಿ ವಕ್ತಾರ ಮತ್ತು ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಕೆಲವೇ ನಿಮಿಷಗಳ ನಂತರ ಹೇಳಿದ್ದು:
ನಾನು ಝಾರ್ಖಂಡದ ವಿಚಾರದಲ್ಲಿ ಮುಳುಗಿದ್ದೆ. ಕರ್ನಾಟಕದ ಬಿಕ್ಕಟ್ಟಿನ ವಿಚಾರವಾಗಿ ನನಗೆ ಹೆಚ್ಚು ತಿಳಿದಿಲ್ಲ.
ಸಮಸ್ಯೆ ಬಗೆಹರಿದಿಲ್ಲ....ಇನ್ನೂ ಮೂರು ದಿನಗಳು ಹಿಡಿದರೂ ಆಶ್ಚರ್ಯ ಇಲ್ಲ. ರೆಡ್ಡಿಗಳಿಗೆ ಇನ್ನು ಯಾವ ಪಕ್ಷದಲ್ಲೂ ಎಡೆಯಿಲ್ಲ. ಕಾಂಗ್ರೆಸಿನವರು ಬಳಿಗೆ ಕರೆದುಕೊಂಡರೂ ಬಳಸಿ ಬಿಸಾಡುತ್ತಾರೆ. ಕೇವಲ ಬಿಸಾಡುವುದಿಲ್ಲ...ಅಲ್ಲಿ ಇನ್ನೂ ಹೆಚ್ಚಿನ ಅಪಾಯ ರೆಡ್ಡಿಗಳಿಗೆ ಕಾದಿದೆ. ಈ ವಿಷಯ ರೆಡ್ಡಿಗಳಿಗೆ ಗೊತ್ತು. ಹೀಗಾಗಿ ಅವರು ಕಾಂಗ್ರೆಸಿನತ್ತ ತಲೆ ಹಾಕುವುದಿಲ್ಲ. ಬಿಕ್ಕಟ್ಟು ಇತ್ಯರ್ಥ ಆಗಲಿದೆ...ಆದರೆ ಭವಿಷ್ಯದಲ್ಲಿ ಇಂತಹುದೇ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.... ಅನುಮಾನವೇ ಬೇಡ ಎಂಬ ಅನಿಸಿಕೆಯನ್ನು ಪಕ್ಷದ ಅಗ್ರಪಂಕ್ತಿಯ ನಾಯಕರಲ್ಲೊಬ್ಬರು ಸುದ್ದಿಗಾರರ ಜೊತೆ ಅನೌಪಚಾರಿಕ ಮಾತುಕತೆಯ ಸಂದರ್ಭದಲ್ಲಿ ಹಂಚಿಕೊಂಡರು.
ಹೊಸ ನಾಯಕತ್ವ ನೂರಕ್ಕೆ ನೂರು:ರೆಡ್ಡಿಗಳ ಜೊತೆ ಮಾತುಕತೆ ನಡೆಸುವ ಹೊಣೆ ಹೊತ್ತಿರುವ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಸಚಿವ ಜನಾರ್ದನರೆಡ್ಡಿ ಬುಧವಾರ 2 ಬಾರಿ ಭೇಟಿಯಾಗಿದ್ದರು.
ಬೆಳಗ್ಗೆ ಮತ್ತು ಸಂಜೆಯ 2ನೇ ಸುತ್ತಿನ ನಂತರ ರೆಡ್ಡಿ ಸುದ್ದಿಗಾರರ ಪ್ರಶ್ನೆಗಳಿಗೆ ನೀಡಿದ ಉತ್ತರಗಳು ಹೀಗಿವೆ:
-ನಾಯಕತ್ವ ಬದಲಾವಣೆ ಇಲ್ಲ ಎಂಬ ವರಿಷ್ಠರ ನಿಲವನ್ನು ಈವರೆಗೆ ತಮಗೆ ಯಾರೂ ಹೇಳಿಲ್ಲ... ತಾಯಿ ಸುಷ್ಮಾಸ್ವರಾಜ್ ಕೂಡ.
-ನಮ್ಮ ಮಾತೃಶ್ರೀ ಸುಷ್ಮಾ ಅವರನ್ನು ನೆನ್ನೆ, ಇಂದು ಬೆಳಿಗ್ಗೆ, ಇಂದು ಸಂಜೆ ಭೇಟಿಯಾಗಿದ್ದೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಹೊಸ ಉತ್ತಮ ನಾಯಕತ್ವ ಬೇಕು ಎಂಬುದೇ ನಮ್ಮ ನಿಚ್ಚಳ ನಿಲವು. ಈ ಬಗೆಗೆ ಅತ್ಯಂತ ವಿವರವಾಗಿ ವಿವರಣೆ ನೀಡಿದ್ದೇವೆ.
-ನಿಮ್ಮ ಬೇಡಿಕೆ ಸಂಬಂಧ ನೆನ್ನೆಯಿಂದ ಏನಾದರೂ ಮುಮ್ಮುಖವಾಗಿ ಕದಲಿದೆಯೇ?
-ಹೌದು ಕದಲಿದೆ...ಕದಲಲೇ ಬೇಕು. ಹೇಳಬೇಕಾದ ಎಲ್ಲ ಅಂಶಗಳನ್ನೂ ಹೇಳಿದ್ದೇನೆ. ನಮ್ಮ ವರಿಷ್ಠ ಮಂಡಳಿಯ ಹಿರಿಯ ನಾಯಕರು ಕೂಡ ನಮ್ಮದೇ ಅಭಿಪ್ರಾಯ ಹೊಂದಿದ್ದಾರೆ. ಇನ್ನಷ್ಟು ಶಾಸಕರು, ಸಂಸದರು ಇಂದು ದೆಹಲಿಗೆ ಬರಲಿದ್ದಾರೆ. ಅವರದೂ ಇದೇ ಅಭಿಮತ.
-ನಾಯಕತ್ವ ಬದಲಾವಣೆಯ ಆಗುತ್ತದೆ ಎಂಬ ಭರವಸೆ ನಿಮಗೆ ಎಷ್ಟರಮಟ್ಟಿಗೆ ಉಂಟು?
-ನೂರಕ್ಕೆ ನೂರರಷ್ಟು ವಿಶ್ವಾಸ ಇದೆ. ನಾಳೆ ಮತ್ತೆ ಸುಷ್ಮಾ ಅವರನ್ನು ಭೇಟಿ ಮಾಡ್ತೀನಿ.
-ಮುಖ್ಯಮಂತ್ರಿಯವರು ಕಳೆಗೆ ಇಳಿಯುತ್ತಾರೆ ಎನ್ನುತ್ತೀರಾ?
-ನಮ್ಮ ನಿಲವಿನಿಂದ ನಾವು ಕೆಳಗೆ ಇಳಿಯುವುದಿಲ್ಲ. ನಾವು ಮಾಡುತ್ತಿರುವುದೆಲ್ಲ ಪಕ್ಷ ಮತ್ತು ಕರ್ನಾಟಕ ರಾಜ್ಯದ ಹಿತದೃಷ್ಟಿಯಿಂದ. ನಮ್ಮ ನಿರ್ಧಾರ ಅಚಲ.
-ಕೆಲವು ದಿನ ಅಲ್ಲ...ಕೆಲವೇ ಗಂಟೆಗಳಲ್ಲಿ ಹೋಗ್ತಾರೆ (ಯಡಿಯೂರಪ್ಪ)...ನೋಡ್ತಿರಿ.
-ಬೇರೆ ಯಾವ ಬೇಡಿಕೆಯ ಬಗೆಗೂ ನಾವು ಪ್ರಸ್ತಾಪವೇ ಮಾಡಿಲ್ಲ. ಒಂದು ಪಾಯಿಂಟ್ ಪ್ರೋಗ್ರ್ಯಾಮ್ ನಮ್ಮದು.
೬ರಂದು ಸಂಪುಟ ಸಭೆ
ಬೆಳಗಾವಿ: ಇದೇ ೬ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಂದು ಈಗಿನ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ರಾಮದುರ್ಗ ತಾಲೂಕು ರಂಕಲಕೊಪ್ಪ ಗ್ರಾಮ ಮರು ನಿರ್ಮಾಣಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನ.೬ರಂದು ರಾಜ್ಯ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಅಂದು ಎಲ್ಲ ಸಚಿವರುಗಳು ಪಾಲ್ಗೊಳ್ಳಲಿದ್ದು ಪಕ್ಷದಲ್ಲಿ ನಡೆದಂಥ ಎಲ್ಲ ಗೊಂದಲ, ಅಸಮಾಧಾನಗಳು ಕೊನೆಯಾಗಲಿವೆ ಎಂದರು.
ರೆಡ್ಡಿ ಮುಂದಿರುವ ಅವಕಾಶಗಳು
೧ ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ನಾಯಕತ್ವ ಬದಲಾವಣೆಯ ಪಟ್ಟು ಸಡಿಲಿಸುವುದು
೨ ಯಡಿಯೂರಪ್ಪ ಅವರನ್ನು ನಿಯಂತ್ರಿಸುವಂಥ ಷರತ್ತುಗಳನ್ನು ಈಡೇರಿಸಿ ಜಾಣತನ ಮೆರೆವುದು
೩ ಇದೊಂದು ಬಾರಿ ಯಡಿಯೂರಪ್ಪ ಅವರಿಗೆ ’ಜೀವದಾನ’ ನೀಡಿ ಹೈಕಮಾಂಡ್ ದೃಷ್ಟಿಯಲ್ಲಿ ಪ್ರಾಮುಖ್ಯತೆ ಉಳಿಸಿಕೊಳ್ಳುವುದು
೪ ಹೈಕಮಾಂಡ್ ಆದೇಶ ಧಿಕ್ಕರಿಸಿ ತಮ್ಮ ಬೆಂಬಲಿಗರಿಂದ ರಾಜೀನಾಮೆ ಕೊಡಿಸುವ ಒತ್ತಡ ತಂತ್ರ ಹೇರುವುದು
೫ ಕೊನೆಯ ಹಂತವಾಗಿ ಸರ್ಕಾರ ಉರುಳಿಸುವ ಬೆದರಿಕೆ ಒಡ್ಡುವುದು
೬ ಅದಕ್ಕೂ ಬಗ್ಗದಿದ್ದರೆ ಅಗತ್ಯ ಸಂಖ್ಯೆಯ ಶಾಸಕರೊಂದಿಗೆ ಪಕ್ಷದಿಂದ ಹೊರಬಂದು, ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವುದು
೭ ಅಂತಿಮವಾಗಿ ಸರ್ಕಾರ ಉರುಳಿದರೂ ಪರವಾಗಿಲ್ಲ ಎಂದು ಮುಂದಿನ ಚುನಾವಣೆಗೆ ಸಿದ್ಧರಾಗುವುದು
ಯಡಿಯೂರಪ್ಪ ಅವರಿಗಿರುವ ಆಯ್ಕೆ
೧ ರೆಡ್ಡಿಗಳ ಜತೆ ಸೇರಿ ಬಂಡಾಯ ಎದ್ದಿರುವ ಶಾಸಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಬಹಿರಂಗ ವಾಗ್ದಾನ ನೀಡುವುದು
೨ ವರಿಷ್ಠರ ಸಮ್ಮುಖದಲ್ಲಿ ರೆಡ್ಡಿ ಜತೆ ನೇರ ಮಾತುಕತೆಗೆ ಮುಂದಾಗುವುದು
೩ ಬಂಡಾಯ ಶಾಸಕರ ಬೇಡಿಕೆಗಳ ಪೈಕಿ ಕೆಲವನ್ನು ತಕ್ಷಣವೇ ಈಡೇರಿಸಿ ಭರವಸೆ ಮೂಡಿಸುವುದು
೪ ರಾಜಿಗೆ ಪೂರಕವಾಗಿ ಜನಾರ್ದನ ರೆಡ್ಡಿ ಬಣಕ್ಕೆ ತಾವೇ ಕೆಲವು ಷರತ್ತುಗಳನ್ನು ವಿಧಿಸುವುದು
೫ ರೆಡ್ಡಿ ಬೆಂಬಲಿಗ ಶಾಸಕರನ್ನು ಉಚ್ಚಾಟಿಸುವುದಾಗಿ ಬೆದರಿಕೆ ಒಡ್ಡುವುದು
೬ ಆ ಮೂಲಕ ರೆಡ್ಡಿಗಳ ಕಟ್ಟಾ ಬೆಂಬಲಿಗರನ್ನು ಹೊರತುಪಡಿಸಿ ಇತರ ಶಾಸಕರನ್ನು ತಮ್ಮತ್ತ ಸೆಳೆಯುವುದು
೭ ರೆಡ್ಡಿ ಸೋದರರು ಕೈಕೊಟ್ಟರೆ ದೇವೇಗೌಡರ ಜಾತ್ಯತೀತ ಜನತಾದಳದ ಬೆಂಬಲ ಪಡೆದು ಸರ್ಕಾರ ರಚನೆಗೆ ಪ್ರಯತ್ನಿಸುವುದು
ಸೌಜನ್ಯ: ಕನ್ನಡಪ್ರಭ