ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಅದ್ದೂರಿಯಾಗಿ ಜರುಗಿದ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

ಭಟ್ಕಳ: ಅದ್ದೂರಿಯಾಗಿ ಜರುಗಿದ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

Mon, 12 Apr 2010 02:39:00  Office Staff   S.O. News Service

ಭಟ್ಕಳ:ನಗರದ ನ್ಯೂ ಇಂಗ್ಲಿಷ್ ಶಾಲೆಯ ಆವರಣದಲ್ಲಿ ಕಲಾವತಿ ಮತ್ತು ರಾಮನಾಥ ಶಾನಭಾಗ ಸಭಾಭವನದಲ್ಲಿನ ಮಾಳ್ಕೋದ ನಾರಾಯಣ ಹೆಗಡೆ ವೇದಿಕೆಯಲ್ಲಿ ಭಟ್ಕಳ ತಾಲೂಕಾ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಆದ್ದೋರಿಯಾಗಿ ಜರುಗಿತು. ನಾಮಾಂಕಿತ ಸಾಹಿತಿ ಡಾ.ಸೈಯ್ಯದ್ ಝಮಿರುಲ್ಲಾ ಷರೀಫ್ ಸಮ್ಮೇಳನದ ಆಧ್ಯಕ್ಷತೆಯನ್ನು ವಹಿಸಿದ್ದರು. ಸಂಭ್ರಮದಿಂದ ಜರುಗಿದ ಕನ್ನಡ ಸಾಹಿತ್ಯ ಜಾತ್ರೆಯಲ್ಲಿ ಸಮ್ಮೇಳನಾಧ್ಯಕ್ಷರು ಭಟ್ಕಳವು ಧರ್ಮದ ದೃಷ್ಟಿಯಲ್ಲಿ ದ್ವೀಪವಾಗುವುದು ಬೇಡ ಎಲ್ಲವನ್ನೂ ಬೆಳಗುವ ದೀಪವಾಗಲಿ ಎಂದು ಕರೆ ನೀಡುವುದರ ಮೂಲಕ ಧರ್ಮವು ಮನದ ಕೊಳಕನ್ನು ದೂರಿಕರಿಸಿ ಪರಸ್ಪರರನ್ನು ಒಗ್ಗೂಡಿಸುತ್ತದೆ ಎಂಬ ಸಂದೇಶವನ್ನು ನೀಡಿದರು. ಅವರು ತಮ್ಮ ಲಿಖಿತ ಭಾಷಣದುದ್ದಕ್ಕೂ ಭಟ್ಕಳ ತಾಲೂಕಿನ ಇತಿಹಾಸ ಇಲ್ಲಿನ ಭಾಷೆ ಸಂಸ್ಕೃತಿ, ಜನಾಂಗಗಳ ಆಚಾರ ವಿಚಾರ, ಸಾಹಿತ್ಯ ಕಲೆ ಮುಂತಾದ ವಿಷಯಗಳ ಕುರಿತು ಸುದೀರ್ಘವಾಗಿ ಮಾತನಾಡಿ ಭಟ್ಕಳದಲ್ಲಿ ಇನ್ನೂ ಕೂಮುಸೌಹಾರ್ದತೆ ಜೀವಂತವಾಗಿದೆ ಎನ್ನುವುದಕ್ಕೆ ತಾನು ಸಾಹಿತ್ಯ ಸಮ್ಮೇಳನದ ಆಧ್ಯಕ್ಷತೆಯನ್ನು ಅಲಂಕರಿಸಿರುವುದೆ ಸಾಕ್ಷಿ ಎಂದರು.

 

11-bkl-02.jpg 

 

 

ಎಲ್ಲ ಧರ್ಮಗಳು ಅಹಿಂಸೆಯ ಮಾರ್ಗಗಳಲ್ಲಿ ನಡೆಯುವಂತೆ ತಿಳಿಸಿವೆ. ಆದರೆ ನಾವು ಧರ್ಮವನ್ನು ತಪ್ತಾಗಿ ಅರ್ಥೈಸಿಕೊಂಡಿದ್ದೇವೆ. ನನ್ನ ಬಗ್ಗೆ ಬೇರೆಯವರಿಗೆ ಪ್ರೀತಿ,ವಿಶ್ವಾಸಗಳು ಮೂಡಿದರೆ ಇದರಿಂದಾಗಿ ನನ್ನ ಧರ್ಮದ ಕುರಿತು ಅವರಲ್ಲಿ ಒಳ್ಳೆಯ ಭಾವನೆ ಮೂಡಲು ಸಾಧ್ಯವಾಗುತ್ತದೆ. ನನ್ನ ಬಗ್ಗೆ ಕೆಟ್ಟ ಭಾವನೆಗಳು ಪರಧರ್ಮಿಯರಲ್ಲಿ ಮೂಡಿದರೆ ಅದರಿಂದ ನನ್ನ ಧರ್ಮಕ್ಕೆ ಕೆಟ್ಟ ಹೆಸರು ಬರುತ್ತದೆ ತಪ್ಪು ತಿಳುವಳಿಕೆಯಿಂದಾಗಿ ಪರಸ್ಪರ ಧರ್ಮಗಳು ಹಿಂಸೆಯನ್ನು ಬೋಧಸುತ್ತಿವೆ ಎಂಬ ಭಾವನೆ ನಮ್ಮಲ್ಲಿ ಮೂಡುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

 

ಜಾತಿಮತದೊಳಗಿನ ಮೇಲು-ಕೀಳಿನ ಭಾವನೆಗಳು ಸಾಮಾಜಿಕ ಸಂಬಂಧದ ಕೊಂಡಿ ಕಳಚಿಕೊಳ್ಳುವಂತೆ ಮಾಡುತ್ತಿವೆ. ಧರ್ಮಗಳ ನಡುವಿನ ಭಿನ್ನಾಭಿಪ್ರಾಯ ಮತ್ತು ತಪ್ಪುತಿಳಿವಳಿಕೆಗಳು ಭಟ್ಕಳದಲ್ಲಿನ ಶಾಂತಿ ಭಂಗಕ್ಕೆ ಕಾರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಸಮ್ಮೇಳನಾಧ್ಯಕ್ಷರು ಊರಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಕೇವಲ ಪೋಲಿಸ್ ಅಧಿಕಾರಿಗಳದ್ದು ಮಾತ್ರ ಎಂದು ಭಾವಿಸದೆ ಸಮಾಜದ ಎಲ್ಲ ಧರ್ಮದ ಮುಖಂಡರು ಒಂದೆಡೆ ಸೇರಿ ಭಟ್ಕಳದಲ್ಲಿ ಶಾಂತಿಗಾಗಿ ಪ್ರಯತ್ನಿಸಬೇಕು ಇಲ್ಲಿನ ಮತೀಯ ಸಾಮರಸ್ಯ ಕದಡದಂತೆ ಸ್ವಾರ್ಥಸಾಧನೆಗಾಗಿ ಧರ್ಮದ ಮುಖವಾಡ ತೊಟ್ಟವರನ್ನು ಹತೋಟಿಯಲ್ಲಿಡಬೇಕು ಆಚರಣೆ ಮತ್ತು ಸಂಪ್ರದಾಯಗಳಿಗಿಂದ ಮಾನವೀಯತೆ ಮುಖ್ಯ ಎಂಬ ಅರಿವು ಮೂಡಿಸುವ ಪ್ರಯತ್ನ ಆಗಬೇಕು ಎಂದರು.

 

 

ಕೊಂಕಣಿ ಹಾಗೂ ನವಾಯತಿ ಭಾಷೆಯ ಪ್ರಭಾವದಿಂದಾಗಿ ಭಟ್ಕಳದಲ್ಲಿ ಕನ್ನಡ ಕಡೆಗಣಿಸಲ್ಪಡುತ್ತಿದ್ದೆ. ಸರಕಾರಿ ಕಛೇರಿಗಳಲ್ಲಿ ಕನ್ನಡ ಬಳಕೆ ತೀರ ಕಡಿಮೆ ಎಂದ ಅವರು ಇದು ಕನ್ನಡದ ಹಿತದೃಷ್ಟಿಯಿಂದ ಅಪಾಯಕಾರಿ ಎಂದರು. ಕೆಲವರು ಕನ್ನಡ ಹಿಂದುಗಳ ಭಾಷೆ ಎಂದು ನಂಬಿದ್ದಾರೆ. ಇದು ತನ್ನ ಅಧ್ಯಾಪಕ ವೃತ್ತಿಯಲ್ಲಿ ಕಂಡುಕೊಂಡ ಅನುಭವ ಎಂದ ಅವರು ನೀವು ಮುಸ್ಲಿಮರು ಕನ್ನಡ ಕಲಿಸಬೇಕಾದರೆ ರಾಮಾಯಣ ಮಹಾಭಾರತವನ್ನು ಕಲಿಸಬೇಕಾಗುತ್ತದೆ ಇದಕ್ಕೆ ನಿಮ್ಮ ಧರ್ಮ ಅಡ್ಡಬರುತ್ತದೆ ಎಂದು ಕನ್ನಡ ತರಗತಿಗೆ ಅಡ್ಡಪಡಿಸಿದ್ದು ಆಗ ನಾನು ಅವರಿಗೆ ರಾಮಾಯಣ ಮತ್ತು ಮಹಾಭಾರತದ ಶ್ಲೋಕಗಳನ್ನು ಉದ್ದರಿಸಿ ಸಮಧಾನ ಪಡಿಸಬೇಕಾಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

 

 

11-bkl-03.jpg 

 

ಶಾಸಕ ಜೆ.ಡಿ.ನಾಯ್ಕ ದೀಪಬೆಳಗಿಸುವುದರ ಮೂಲಕ ಸಮ್ಮೇಳವನ್ನು ಉದ್ಘಾಟಿಸಿದರು. ಭಟ್ಕಳ ಕ.ಸಾ.ಪ ಅಧ್ಯಕ್ಷ ಡಾ. ಆರ್.ವಿ.ಸರಾಫ್ ಪ್ರಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾ.ಡಿ.ಸೋಜಾ ಕನ್ನಡ ಬಾವುಟವನ್ನು ಹಸ್ತಾಂತರಿಸಿದರು. ಹಿರಿಯ ಸಾಹಿತಿ ಡಾ.ನಾ.ಸೋಮೇಶ್ವರ ಆಶಯಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಉತ್ತರಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ರೋಹಿದಾಸ್ ನಾಯ್ಕ, ಭಟ್ಕಳ ತಾ.ಪಂ.ಅಧ್ಯಕ್ಷೆ ಗೌರಿ ಮೋಗೇರ್, ಜಿ.ಪಂ ಸಧ್ಯಸ್ಯೆ ಸುಭದ್ರ ದೇವಾಡಿಗ, ತಾ.ಪಂ.ಕಾರ್ಯ ನಿರ್ವಹಕ ಆಧಿಕಾರಿ ಉದಯನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉ.ಕ.ಜಿಲ್ಲಾ ಕಸಾಪ ಕೋಶಾಧ್ಯಕ್ಷ ಪಿ.ಆರ್. ನಾಯ್ಕ ಸ್ವಾಗತಿಸಿದರು. ನ್ಯೂ ಇಂಗ್ಲಿಷ್ ಶಾಲೆಯ ಮುಖ್ಯಾಧ್ಯಾಪಕ ವಿ.ಜಿ. ನಾಯ್ಕ ವಂದಿಸಿದರು. ಕಸಾಪ ಕಾರ್ಯದರ್ಶಿ ಶ್ರೀಧರ್ ಶೇಟ್ ನಿರೂಪಿಸಿದರು.

 

ಸಂಜೆ ೫ಗಂಟೆಗೆ ಬಹುಭಾಷ ಕವಿಗೋಷ್ಟಿ ಜರುಗಿತು. ಇದರಲ್ಲಿ ಉರ್ದು, ನವಾಯತಿ,ಕೊಂಕಣಿ ಕನ್ನಡ ಸ್ವರಚಿತ ಕವನಗಳನ್ನು ಕವಿಗಳು ವಾಚಿಸಿ ಪ್ರೇಕ್ಷಕರನ್ನು ಸಭಿಕರನ್ನು ರಂಜಿಸಿದರು. ಸೈಯ್ಯದ್ ಸಮಿಯುಲ್ಲಾ ಬರ್ಮಾವರ್, ಡಾ.ಹನಿಫ್ ಶಬಾಬ್, ಸೈಯ್ಯದ್ ಅಶ್ರಫ್ ಬರ್ಮಾವರ, ಉಮೇಶ ಮುಂಡಳ್ಳಿ, ಶ್ರೀಧರ್ ಶೇಠ್, ನಾರಾಯಣಗೊಂಡ, ನೇತ್ರಾವತಿ ಆಚಾರ್ಯ, ಕುಮಾರಿ ರೇಶ್ಮಾ ನಾಯಕ, ಎಮ್. ಮರಿಸ್ವಾಮಿ, ಡಾ.ಕೆ.ಸಿ. ನಝೀರ್ ಆಹ್ಮದ್, ಮುಂತಾದ ಕವಿಗಳು ಭಾಗವಹಿಸಿದ್ದರು.


Share: