
ದಾಂಡೇಲಿ: ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆಯಾಗಲೇ ಬೇಕು ! ಆದರೆ ಆ ಮದುವೆ ಕೂಡಾ ವಿಶಿಷ್ಟವಾಗಿದ್ದರೆ ಕೋಮು- ಸಾಮರಸ್ಯವನ್ನು ಬೆಸೆಯುವ, ಧರ್ಮದ ಕಟ್ಟಳೆಯನ್ನು ಮೀರಿ ಮಾನವ ಧರ್ಮದ ಮೂಲ ತತ್ವಗಳನ್ನು ಸಾರಿ ಭ್ರಾತೃತ್ವವನ್ನು ಬಿಂಬಿಸುವ ಕೊಂಡಿಯಾದರೆ... ಆಗ ಧರ್ಮ ಸಂಘರ್ಷವೆಂಬುದೇ ಇರುವುದಿಲ್ಲ.
ಇಂತಹದ್ದೊಂದು ವಿಶಿಷ್ಟ ಮದುವೆ ದಾಂಡೇಲಿಯಲ್ಲಿ ಬುಧವಾರ ಜರಗಿದೆ. ಇದು `ಲವ್ ಜೆಹಾದ್' ಅಲ್ಲ. ಪ್ರೀತಿ, ವಿಶ್ವಾಸ, ಸಹೋದರತೆ ತುಂಬಿದ ಮನಸ್ಸುಗಳ ಮಿಲನವಿದು. ಇಲ್ಲಿ ಧರ್ಮದ ಕಟ್ಟಳೆಯಿಲ್ಲ. ಮುಸ್ಲಿಂ ಸಮಾಜಕ್ಕೆ ಸೇರಿದ ಮಹ್ಮದ ಇಕ್ಬಾಲ್ ಶೇಖ ಎನ್ನುವವರು ಹಿಂದೂ ವಧುವಿಗೆ ಸಹೋದರನ ಸ್ಥಾನದಲ್ಲಿ ನಿಂತು ಹಿಂದೂ ಸಂಪ್ರದಾಯ ದಂತೆ ಹಿಂದೂ ವರನೊಂದಿಗೆ ಮದುವೆ ಮಾಡಿಸಿಕೊಟ್ಟು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಲ್ಲದೇ ಪ್ರಸಕ್ತ ಸಮಾಜದಲ್ಲಿ ಹಿಂದೂ ಮುಸ್ಲಿಂ `ಭಾಯಿ-ಭಾಯಿ' ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಅಣ್ಣ -ತಂಗಿಯ ಸಂಬಂಧ
ವಧು ಕವಿತಾಳನ್ನು ಸಂತೋಷಗೆ ಧಾರೆ ಎರೆದು ಕೊಟ್ಟ ದಾಂಡೇಲಿಯ ಇಕ್ಬಾಲ್ ಶೇಖ ಹಾಗೂ ಕವಿತಾಳ ಸಂಬಂಧ ಅಣ್ಣ-ತಂಗಿಯರಂತೆ. ಮಹ್ಮದ ಇಕ್ಬಾಲ್ ಮನೆಯಂಗಳ ದಲ್ಲೇ ಬೆಳೆದವಳು ಕವಿತಾ. ೪ ವರ್ಷದ ಹುಡುಗಿಯಾಗಿದ್ದಾಗ ಈಕೆಯ ತಾಯಿ ಗಂಗೂ ಬಾಯಿ ಪತಿಯನ್ನು ಕಳೆದುಕೊಂಡು ಮಹಾರಾಷ್ಟ್ರದ ದಡ್ಡಿ ಗ್ರಾಮದಿಂದ ಜೀವನ ನಿರ್ವ ಹಿಸಲು ದಾಂಡೇಲಿಗೆ ಆಗಮಿಸಿದಾಗ, ಇಕ್ಬಾಲ್ ಶೇಖ ಅವರ ತಂದೆ ಅಬ್ದುಲ ಖಾದರ ಶೇಖ, ತಾಯಿ ಬೀಬಿ ಸಾರಾ ಅವರೇ ಆಸರೆಯಾಗಿ ನಿಂತರು. ಅವರ ನೆರಳಿನಲ್ಲಿ ಪಕ್ಕ ದಲ್ಲೇ ಒಂದು ಕೊಠಡಿಯಲ್ಲಿ ನಿಂತು ಅವರ ಮನೆಯ ಕೆಲಸದೊಟ್ಟಿಗೆ ಬೇರೆ ಒಂದೆರಡು ಮನೆಗಳ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಪದವಿ ವಿದ್ಯಾಭ್ಯಾಸ
ಕವಿತಾ ಇಕ್ಬಾಲ್‌ರ ಮನೆಯಲ್ಲಿ ಮನೆಯ ಮಗಳಂತೆ ಬೆಳೆದಳು. ಅವಳಿಗೆ ವಿದ್ಯಾಭ್ಯಾಸ ಮಾಡಿಸಿ ಪದವಿ ಗಳಿಸುವಲ್ಲಿ ಕೂಡಾ ಸಾಕಷ್ಟು ನೆರವು ನೀಡಿದರು. ಮನೆಯ ಮಗಳಂತೆ ಬೆಳೆದ ಇವಳಿಗೊಂದು ಮದುವೆ ಮಾಡಿ ಸಾಂಸಾರಿಕ ಜೀವನಕ್ಕೆ ಹಚ್ಚಬೇಕೆಂದು ನಿರ್ಧ ರಿಸಿದ ಮಹ್ಮದ ಇಕ್ಬಾಲ್ ಶೇಖ, ಹಿಂದೂ ವರನಿಗಾಗಿ ಶೋಧ ನಡೆಸಿದರು. ಕೊನೆಗೆ ಅವಳ ಸುಖವನ್ನೇ ಬಯಸಿ ಮುಂಬಯಿ ಏರ್‌ಪೋರ್ಟ್‌ನ ನೌಕರನಾಗಿರುವ ಸಂತೋ ಷನನ್ನು ವರನಾಗಿ ನಿಶ್ಚಯಿಸಿದರು.
ಹಿಂದೂ ಸಂಪ್ರದಾಯದ ಮದುವೆ
ಮುಸ್ಲಿಂ ಮನೆಯಂಗಳದಲ್ಲಿ ಹಿಂದೂವಾಗಿ ಬೆಳೆದ ಕವಿತಾಳಿಗೆ ಹಿಂದೂ ಸಂಪ್ರದಾಯ ದಂತೆ ಮದುವೆ ಮಾಡಿಸುವ ಮಹತ್ತರವಾದ ಜವಾಬ್ದಾರಿ ಹೊತ್ತುಕೊಂಡ ಇಕ್ಬಾಲ್ ಶೇಖ ಆಕೆಯ ಮದುವೆಗಾಗಿ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡರು. ಈ ಕುರಿತಂತೆ ಮೊದ ಲು ತಮ್ಮ ಸಮಸ್ತ ಕುಟುಂಬದ ಸದಸ್ಯರೊಟ್ಟಿಗೆ ಚರ್ಚಿಸಿ ಮನೆಯ ಮಗಳ ಅದ್ದೂರಿ ಮದುವೆಗೆ ತಯಾರಿ ನಡೆಸತೊಡಗಿದರು.
ಮದುವೆ ಸಂದರ್ಭದಲ್ಲಿ ವಧುವಿಗೆ ಬೇಕಾದ ತಾಳಿ, ಬಂಗಾರದ ಒಡವೆಗಳನ್ನು ಮಾಡಿಸಿ ಸುಮಾರು ೧ ಲಕ ೫೦ ಸಾವಿರ ರೂಪಾಯಿಯವರೆಗೆ ಮದುವೆ ವೆಚ್ಚವನ್ನು ಭರಿಸುವ ವ್ಯವಸ್ಥೆ ಮಾಡಿಕೊಂಡು ಹಿಂದೂ ಸಂಪ್ರದಾಯದಂತೆ ಮದುವೆ ನಡೆಸಲು ಅನೇಕ ಹಿಂ ದೂ ಸನ್ಮಿತ್ರರ ನೆರವನ್ನು ಪಡೆಯಲು ನಿಶ್ಚಯಿಸಿ, ಸಂಪರ್ಕಿಸಿದಾಗ ಇದೊಂದು ವಿಶಿಷ್ಟ ಮದುವೆ. ಇಂತಹ ಮದುವೆಗೆ ಮುನ್ನುಡಿ ಬರೆಯಲು ಹೊರಟ ಇಕ್ಬಾಲ್ ಶೇಖರನ್ನು ಸಮಸ್ತ ಸನ್ಮಿತ್ರರು ಬೆಂಬಲಿಸಿದರು.
ಪರಿಣಾಮ ನ. ೧೮ರಂದು ಇಕ್ಬಾಲ್ ಶೇಖ ಕವಿತಾಳನ್ನು ಹಳೇ ದಾಂಡೇಲಿಯ ಸಯ್ಯದ್ ಕಮ್ಯುನಿಟಿ ಹಾಲ್‌ನಲ್ಲಿ ಸಂತೋಷನಿಗೆ ಧಾರೆ ಎರೆದುಕೊಡುವ ಮೂಲಕ ಈ ವಿಶಿಷ್ಟ ಮದುವೆಗೆ ಸೊಬಗಿನ ಮೆರುಗನ್ನು ನೀಡಿದರು. ಈ ಮದುವೆಗೆ ಹಿಂದೂ-ಮುಸ್ಲಿಂ ಸಮಾಜ ದ ಹಾಗೂ ಜನಪರ ಸಂಘಟನೆಗಳ ಪ್ರಮುಖರೆಲ್ಲ ಸಾಕ್ಷಿಯಾದರು.
ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಸೇರಿದ ವರ ಸಂತೋಷ ಮತ್ತು ಮರಾಠಾ ಸಮಾಜಕ್ಕೆ ಸೇರಿದ ಕವಿತಾ ಅವರ ಮದುವೆಯನ್ನು ಹಿಂದೂ ಪುರೋಹಿತರು ವಿಧಿವಿಧಾ ನಗಳಂತೆ ನೆರವೇರಿಸಿದರು.
ಕವಿತಾಳ ದೃಷ್ಟಿಯಲ್ಲಿ ಮಹ್ಮದ ಇಕ್ಬಾಲ್ ಶೇಖ ತನ್ನ ಪಾಲಿಗೆ ಅಣ್ಣನಷ್ಟೇ ಅಲ್ಲ, ದೇವ ರಿದ್ದಂತೆ. ಬಾಲ್ಯದಿಂದಲೂ ಅವರೊಟ್ಟಿಗೆ ಒಡನಾಡಿ ಮನೆಯವರಲ್ಲೊಬ್ಬರಾಗಿ ಬೆಳೆದು ವಿದ್ಯಾಭ್ಯಾಸ ನೀಡಿ, ಮದುವೆ ಮಾಡಿ ತನಗೊಂದು ಹೊಸ ಜೀವನ ನೀಡಿದ ಅವರ ಹೃದಯ ವೈಶಾಲ್ಯ ನನ್ನ ಪಾಲಿಗೆ ಎಂದೂ ಮರೆಯಲಾಗದ ಅಮೃತ ಘಳಿಗೆಯೆನ್ನುವುದು ಆಕೆಯ ಅಂತರಾಳದ ಮಾತು.
ಸೌಜನ್ಯ: ಉದಯವಾಣಿ