ಬೆಂಗಳೂರು,ಫೆಬ್ರವರಿ 23: ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಲ್ಲ ಮಹಾನಗರ ಪಾಲಿಕೆಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರಾದ ಸುರೇಶ್ ಕುಮಾರ್ ಅವರು ತಿಳಿಸಿದರು.
ವಿಧಾನಸೌಧದ ಕೊಠಡಿ ಸಂಖ್ಯೆ ೨೨ ರಲ್ಲಿ ಇಂದು ಏರ್ಪಡಿಸಿದ್ದ ರಾಜ್ಯದ ೭ ಮಹಾನಗರ ಪಾಲಿಕೆಗಳ ಜಿಲ್ಲಾ ಆಡಳಿತದೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಸಚಿವರು ಮುಂಬರುವ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳುಗಳ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಂಭವ ಬರಬಹುದು. ಮಹಾನಗಗರ ಪಾಲಿಕೆಗಳು ನೀರು ಸಂಗ್ರಹಣೆ ಜೊತೆಗೆ ಸಮರ್ಪಕವಾಗಿ ನೀರು ವಿತರಣೆ ಮಾಡುವ ಕಡೆಯೂ ಹೆಚ್ಚಿನ ಗಮನಹರಿಸಬೇಕು ಎಂದರು.
ಬೇಸಿಗೆ ಕಾಲದಲ್ಲಿ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ನಗರಗಳನ್ನು ಸ್ವಚ್ಚವಾಗಿಡಬೇಕು. ಅನಗತ್ಯ ನೀರು ನಿಲ್ಲುವುದನ್ನು ತಪ್ಪಿಸಬೇಕು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸೊಳ್ಳೆಗಳನ್ನು ನಿಯಂತ್ರಿಸುವ ಕೆಲಸವನ್ನು ಮಹಾನಗರಪಾಲಿಕೆಗಳು ಮಾಡಬೇಕು ಎಂದ ಸಚಿವರು ಶಾಲಾ ಕಾಲೇಜು ಆವರಣಗಳಲ್ಲಿ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಹಣ್ಣುಗಳನ್ನು ಕತ್ತರಿಸಿ ಮಾರಾಟ ಮಾಡುವುದನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಿ ಕೆಲಸ ಮಾಡಬೇಕು ಎಂದರು.
ಎಲ್ಲಾ ಮಹಾನಗರಪಾಲಿಕೆಗಳು ತಮ್ಮ ಕಚೇರಿಯಲ್ಲಿ ಕಂಟ್ರೋಲ್ ರೂಂಗಳನ್ನು ತೆರೆದು ಸಾರ್ವಜನಿಕರ ಸಮಸ್ಯೆ ಪಡೆದು ತಕ್ಷಣ ಸ್ಪಂದಿಸಬೇಕು. ಅಲ್ಲದೆ ನಗರ ವ್ಯಾಪ್ತಿಯ ಎಲ್ಲ ಇಲಾಖೆಗಳು ಸೇರಿ ವಾರಕ್ಕೊಮ್ಮೆ ಸಮನ್ವಯ ಸಮಿತಿ ಸಭೆ ಮಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದ ಶ್ರೀ ಸುರೇಶ್ ಕುಮಾರ್ ಅವರು ನಗರಪಾಲಿಕೆ ಅಧಿಕಾರಿಗಳು ಕಂದಾಯ ವಸೂಲಾತಿಯನ್ನು ಕ್ರಮಬದ್ಧವಾಗಿ ಮಾಡಬೇಕು ಎಂದರು.
ರಾಜ್ಯದ ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾಂ, ದಾವಣಗೆರೆ, ಬಳ್ಳಾರಿ, ಮಂಗಳೂರು ಹಾಗೂ ದಾವಣಗೆರರೆ ಜಿಲ್ಲಾ ಆಡಳಿತದ ಜೊತೆ ವೀಡಿಯೋ ಸಂವಾದ ನಡೆಸಿದರು.