ಜಾಲಿ ಗ್ರಾಮೀಣ ಬ್ಯಾಂಕಿನಿಂದ ಶಿಷ್ಯವೇತನ ವಿತರಣೆ
ಭಟ್ಕಳ: ತಾಲೂಕಿ ಪ್ರತಿಷ್ಟಿತ ಜಾಲಿ ಗ್ರಾಮೀಣ ವ್ಯವಸಾಯ ಸಹಕಾರಿ ಬ್ಯಾಂಕ್ ಮತ್ತು ಭಾರತೀಯ ಜೀವ ವಿಮಾ ನಿಗಮ ಧಾರವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿದ್ಯಾರ್ಥಿಗಳ ಶಿಷ್ಯವೇತನ ವಿತರಣಾ ಕಾರ್ಯಕ್ರಮವನ್ನು ಶಾಸಕ ಜೆ.ಡಿ.ನಾಯ್ಕ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ಇಂದು ಎಲ್ಲಾ ಕಡೆಗಳಲ್ಲಿಯೂ ಶಾಲೆ, ಕಾಲೇಜುಗಳು ಲಭ್ಯವಿದ್ದು ವಿದ್ಯಾರ್ಥಿಗಳು ಕಲಿಕೆಯ ಕಡೆ ಗಮನ ಹರಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮೀಣ ವ್ಯವಸಾಯ ಸಹಕಾರಿ ಬ್ಯಾಂಕ್ ನಿ., ಜಾಲಿ ಇದರ ಅಧ್ಯಕ್ಷ ಡಿ.ಬಿ. ನಾಯ್ಕ, ಮುಖ್ಯ ಅತಿಥಿಯಾಗಿದ್ದ ಭಾರತೀಯ ಜೀವ ವಿಮಾ ನಿಗಮ ಧಾರವಾಡದ ಎಂ.ಜಿ. ಬಂಡವಾಡ ಹಾಗೂ ವೀರಭದ್ರ ಎಂ.ಮೇಟಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ವ್ಯವಸ್ಥಾಪಕ ಶಾಂತಾರಾಮ ಎಸ್.ನಾಯ್ಕ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಷ್ಟಪಟ್ಟು ಜೀವಿಸುವ ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿರುವ ಬಡಜನರಿಗಾಗಿ ಕೇಂದ್ರ ಸರಕಾರ ಈ ಯೋಜನೆಯನ್ನು ತಂದಿದೆ. ಬ್ಯಾಂಕಿನ ವತಿಯಿಂದ ೨೦೦೪ರಿಂದಲೂ ಈ ಯೋಜನೆಯನ್ನು ಅಳವಡಿಸಿಕೊಂಡು ಬಂದಿದ್ದು ೨೩೧೨ ಸದಸ್ಯರು ನೋಂದಣಿ ಮಾಡಿಸಿದ್ದಾರೆ. ೧೮ರಿಂದ ೫೯ ವರ್ಷ ವಯೋಮಿತಿಯವರು ಪಾಲಿಸಿಯನ್ನು ಪಡೆಯಲು ಅರ್ಹರಾಗಿದ್ದು ಪ್ರತಿವರ್ಷ ರೂ. ೨೦೦-೦೦ ಮಾತ್ರ ತುಂಬಬೇಕಾಗಿದ್ದು ಇದರಲ್ಲಿ ರೂ. ೧೦೦-೦೦ನ್ನು ಭಾರತ ಸರಕಾರ ಸಾಮಾಜಿಕ ನಿಧಿಯಿಂದ ಸದಸ್ಯನ ಪರವಾಗಿ ಭಾರತೀಯ ಜೀವ ವಿಮಾ ನಿಗಮ ಸಹಾಯ ಧನವಾಗಿ ನೀಡುತ್ತದೆ. ಯೋಜನೆಯಲ್ಲಿ ನೋಂದಣಿಯಾದ ಸದಸ್ಯರು ಮೃತಪಟ್ಟಲ್ಲಿ ೩೦ ಸಾವಿರ ರೂಪಾಯಿ, ಅಪಘಾತದಲ್ಲಿ ಮೃತಪಟ್ಟರೆ ವಾರಿಸುದಾರರಿಗೆ ೭೫ ಸಾವಿರ ರೂಪಾಯಿ, ಶಾಶ್ವತ ಅಂಗ ಊನವಾದರೆ ರೂ. ೩೭,೫೦೦-೦೦ ದೊರೆಯಲಿದೆ ಎಂದರು. ಬ್ಯಾಂಕಿನ ವತಿಯಿಂದ ಇಲ್ಲಿಯ ತನಕ ಸಹಜವಾಗಿ ಮೃತರಾದ ೨೬ ಜನ ಹಾಗೂ ಅಪಘಾತದಲ್ಲಿ ಮೃತರಾದ ೩ ಜನರ ಕುಟುಂಬಕ್ಕೆ ೯,೧೦.೦೦೦-೦೦ ಪರಿಹಾರ ಧನವನ್ನು ದೊರಕಿಸಿ ಕೊಡುವಲಿಯಶಸ್ವಿಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮೃತಪಟ್ಟ ೭ ಜನರ ಕುಟುಂಬಗಳಿಗೆ ತಲಾ ೩೦ ಸಾವಿರದಂತೆ ಒಟ್ಟೂ ರೂ. ೨,೧೦,೦೦೦-೦೦ವನ್ನು ನೀಡಲಾಗಿದೆ ಎಂದೂ ಹೇಳಿದರು. ಯೋಜನೆಯಡಿಯಲ್ಲಿ ನೋಂದಣಿಯಾದ ಸದಸ್ಯರ ೩ ಮಕ್ಕಳಿಗೆ ೯ನೇ ತರಗತಿಯಿಂದ ಪಿ.ಯು.ಸಿ. ಯ ತನಕ ಪ್ರತಿ ವರ್ಷಕ್ಕೆ ರೂ. ೧,೨೦೦-೦೦ರಂತೆ ಶಿಷ್ಯವೇತನ ಲಭ್ಯವಿದ್ದು ಇಲ್ಲಿನ ತನಕ ೭೨೧ ವಿದ್ಯಾರ್ಥಿಗಳಿಗೆ ಒಟ್ಟೂ ೬,೧೩,೩೦೦-೦೦ ಶಿಷ್ಯವೇತನ ದೊರಕಿಸಿಕೊಡುವಲ್ಲಿ ಯಶಸ್ವೀಯಾಗಿದೆ ಎಂದರು.
ಇದಲ್ಲದೇ ಬ್ಯಾಂಕು ಹಲವಾರು ಯೋಜನೆಯಡಿಯಲ್ಲಿ ಸದಸ್ಯರಿಗೆ ಸಹಾಯ ಮಾಡುತ್ತಾ ಬಂದಿದೆ ಎಂದರು. ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ರತ್ನಾಕರ ನಾಯ್ಕ, ನಿರ್ದೇಶಕ ರಾಮ ಮೊಗೇರ ಮುಂತಾದವರು ಉಪಸ್ಥಿತರಿದ್ದರು. ಸೂರ್ಯಕಾಂತ ಎಸ್.ನಾಯ್ಕ ವಂದಿಸಿದರು.