ಹಾವೇರಿ, ಎ-೨೪: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯದ ಉದಯೋನ್ಮುಖ ಕನ್ನಡ ವಿಜ್ಞಾನ ಬರಹಗಾರರು, ಕಾರ್ಯನಿರತ ವಿಜ್ಞಾನ ಪತ್ರಿಕೋದ್ಯಮಿಗಳು ಹಾಗೂ ವರದಿಗಾರರಿಗೆ ಜನಪ್ರಿಯ ವಿಜ್ಞಾನ ಬರವಣಿಗೆಯ ತರಬೇತಿ ಶಿಬಿರವನ್ನು ಕೊಡಗಿನ ಕಣಿವೆ ಗ್ರಾಮದಲ್ಲಿ ಏರ್ಪಡಿಸಿದ್ದು, ಆಸಕ್ತರಿಂದ ಮೇ ೫ ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ಇರುವ ಗ್ರಾಮೀಣ ವಿಭಾಗದ ವಿಜ್ಞಾನ ಶಿಕ್ಷಕರು, ಯುವ ಪತ್ರಿಕಾ ವರದಿಗಾರರು, ಚಿತ್ರ ನಿರೂಪಕರು, ರೇಡಿಯೋ ಭಾಷಣಕಾರರು ಮತ್ತಿತರ ಆಸಕ್ತರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಈ ಶಿಬಿರವು ೨೬-೦೫-೨೦೧೦ ರಿಂದ ೩೦-೦೫-೨೦೧೦ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಣಿವೆ ಗ್ರಾಮದ ರಾಮಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಜರಗುವದು. ನುರಿತ ವಿಜ್ಞಾನ ಬರಹಗಾರರು, ಸಂಪಾದಕರು ಹಾಗೂ ಸಂವಹನಕಾರರಿಂದ ಶಿಬಿರಾರ್ಥಿಗಳಿಗೆ ವಿಜ್ಞಾನ ಬರವಣಿಗೆ ಕುರಿತ ವಿವಿಧ ಕೌಶಲ್ಯ, ಆಕರಗಳು, ಶಬ್ದ-ಬಳಕೆ, ಅನುವಾದ, ವಿಜ್ಞಾನ ಪತ್ರಿಕೋದ್ಯಮ-ಸಂವಹನ ವಿಧಾನ ಮತ್ತೀತರ ವಿಷಯಗಳ ಕರಿತು ತರಬೇತಿ ನೀಡಲಾಗುವದು. ಶಿಬಿರಾರ್ಥಿಗಳಾಗಿ ಭಾಗವಹಿಸಲಿಚ್ಛಿಸುವವರು ವಿಜ್ಞಾನ ಸಂವಹನದಲ್ಲಿ ವಿಶೇಷ ಆಸಕ್ತಿ ಹೊಂದಿರಬೇಕು. ಶಿಬಿರದಲ್ಲಿ ಭಾಗವಹಿಸಲು ವ್ಯಕ್ತಿಗತ ವಿವರ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಒಂದು ಸ್ವರಚಿತ ಲೇಖನವನ್ನು ಅರ್ಜಿಯ ಜೊತೆಯಲ್ಲಿ ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ರಿಷತ್ತು, ವಿಜ್ಞಾನ ಭವನ, ನಂ.೨೪/೨, ೨೧ನೇ ಮುಖ್ಯರಸ್ತೆ ಬನಶಂಕರಿ ೨ ನೇ ಹಂತ, ಬೇಂಗಳೂರ-೫೬೦ ೦೭೦ ಈ ವಿಳಾಸಕ್ಕೆ ದಿನಾಂಕ ೦೫-೦೫-೨೦೧೦ ರೊಳಗಾಗಿ ತಲಪುವಂತೆ ಸಲ್ಲಿಸಬೇಕು. ಕರಾವಿಪ ಈ ಹಿಂದೆ ಸಂಘಟಿಸಿದ್ದ ಲೇಖಕರ ಶಿಬಿರಗಳಲ್ಲಿ ಈಗಾಗಲೇ ಭಾಗವಹಿಸಿದವರು ಅರ್ಜಿ ಸಲ್ಲಿಸುವಂತಿಲ್ಲ.
ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಜ್ಞಾನ ಪರಿಷತ್ತಿನಿಂದ ಉಚಿತ ಊಟ, ವಾಸ್ತವ್ಯದ ವ್ಯವಸ್ಥೆ ಮಾಡಲಾಗುವದಲ್ಲದೆ ಎರಡನೇ ದರ್ಜೆ ಅಥವಾ ಬಸ್ ಪ್ರಯಾಣ ಭತ್ಯೆ ನೀಡಲಾಗುವದು. ಹೆಚ್ಚಿನ ಮಾಹಿತಿಗೆ ವಿಜ್ಞಾನ ಪರಿಷತ್ತಿನ ಕಚೇರಿ :(೦೮೦-೨೬೭೧೮೯೩೯/೨೬೭೧೮೯೫೯) (ಕರಾವಿಪ ಇ-ಮೈಲ್: ಞಡಿvಠಿ.iಟಿಜಿo@gmಚಿiಟ.ಛಿom ) ಅಥವಾ ಪ್ರೊ|| ಸಿ.ಡಿ. ಪಾಟೀಲ, ಗೌರವ ಕಾರ್ಯದರ್ಶಿ: (೯೪೪೮೪೨೭೫೮೫)/ಪ್ರೊ|| ಕೆ.ಎಸ್.ನಟರಾಜ್, ಗೌರವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (೯೪೪೯೬೫೫೨೯೭), ಶ್ರೀ.ಎಂ.ಜಿ.ಪ್ರಭುದೇವ, ಅಧ್ಯಕ್ಷರು, ಜಿಲ್ಲಾ ಸಮಿತಿ, ಕೊಡಗು ಜಿಲ್ಲೆ :(೯೪೪೮೩೨೫೮೪೬) ಇವರನ್ನು ಸಂಪರ್ಕಿಸಬಹುದೆಂದು ವಿಜ್ಞಾನ ಪರಿಷತ್ತಿನ ಗೌರವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ|| ಕೆ.ಎಸ್.ನಟರಾಜ್ ತಿಳಿಸಿದ್ದಾರೆ.
ಹಾವೇರಿ ೩ ನೇ ನಂ.ಶಾಲೆಯಲ್ಲಿ ವಿಶ್ವ ಪೃಥ್ವಿ ದಿನಾಚರಣೆ
ಹಾವೇರಿ;ಎ:೨೪: ೨೦೧೦ ರ ಸಾಲಿನ ವಿಶ್ವ ಪೃಥ್ವಿ ದಿನಾಚರಣೆಯನ್ನು ಹಾವೇರಿಯ ೩ನೇ ನಂ.ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಚರಿಸಲಾಯಿತು.
ಹಾವೇರಿ ವಲಯದ ಅರಣ್ಯ ಕಚೇರಿಯ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಚಿಣ್ಣರ ಅಂಗಳ ಕಾರ್ಯಕ್ರಮದ ಮಕ್ಕಳಿಂದ ಸಸಿ ನೆಡುವ ಕಾರ್ಯಕ್ರಮ ಯೋಜಿಸಲಾಗಿತ್ತು. ಸಭೆಯನ್ನುದ್ದೇಶಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ. ಎಂ.ಪಾಂಡುರಂಗಪ್ಪ ಅವರು, ’ನಮ್ಮ ಪರಿಸರದಲ್ಲಿ ನೆಟ್ಟ ಸಸಿಗಳನ್ನು ಪೋಷಿಸುವುದು ಆಯಾ ಪ್ರದೇಶದ ನಾಗರಿಕರ ಕರ್ತವ್ಯವಾಗಿದ್ದು, ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಲ್ಲದೆ ಪರಿಸರ ಹಾಗೂ ಶುಚಿತ್ವದ ಬಗ್ಗೆ ಈಗಿನಿಂದಲೇ ಕಾಳಜಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು’. ಸಸಿ ನೆಡುವ ಕಾರ್ಯಕ್ರಮವನ್ನು ವಲಯ ಅರಣ್ಯ ಅಧಿಕಾರಿ ಶ್ರೀ ಎ.ಎಚ್.ಅಶೋಕ, ವನಪಾಲಕರಾದ ಕೆ.ಎಸ್.ಜಮಖಂಡಿ, ಕಚೇರಿ ಸಿಬ್ಬಂದಿ ಎಸ್.ಎಂ.ತಳವಾರ ಹಾಗೂ ಟಿ.ವೈ. ಜೋಗಿನ ವ್ಯವಸ್ಥಿತವಾಗಿ ನಡೆಸಿಕೊಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಎಸ್.ಎಸ್.ಶಿಂಧೆ, ವಹಿಸಿದ್ದರು. ಚಿಣ್ಣರ ಅಂಗಳ ಬೇಸಿಗೆ ಶಿಬಿರದ ಶಿಕ್ಷಕ ಎನ್.ಎಸ್.ಭಗವಂತಗೌಡ್ರ ಮತ್ತು ಶ್ರೀಮತಿ ಎ.ಎಸ್.ಪಾಟೀಲ ಹಾಗೂ ಸಮೂಹ ಸಂಪನ್ಮೂಲ ಕೇಂದ್ರದ ಅಧಿಕಾರಿ ಆರ್.ಎನ್. ಕರಜಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಮಾರಂಭದ ನಿರ್ವಹಣೆಯನ್ನು ಚಿಣ್ಣರ ಅಂಗಳ ಶಿಬಿರದ ಮಕ್ಕಳೇ ನಡೆಸಿಕೊಟ್ಟಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಹಾವೇರಿಯ ೩ನೇ ನಂ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪೃಥ್ವಿ ದಿನಾಚರಣೆ ಅಂಗವಾಗಿ ಚಿಣ್ಣರ ಅಂಗಳ ಶಿಬಿರದ ಮಕ್ಕಳಿಂದ ಸಸಿ ನೆಡುವ ಕಾರ್ಯಕ್ರಮ ಯೋಜಿಸಲಾಗಿತ್ತು.
ಕುಡಿಯುವ ನೀರಿನ ಸಮಸ್ಯೆ : ೨೦೮೩೩೪/೨೦೮೨೩೪ ಹೆಲ್ಪ ಲೈನ್ಗೆ ಉಚಿತ ಕರೆಮಾಡಿ
ವಿಜಾಪುರ, ಏಪ್ರೀಲ್ ೨೪- ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಹಾಯವಾಣಿ ಸ್ಥಾಪಿಸಿದೆ.
ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆ ಉದ್ಭವಿಸದಂತೆ ಕಾಳಜಿ ವಹಿಸಲು ಸಹಾಯವಾಣಿ ತೆರೆದಿರುವ ಜಿಲ್ಲಾಡಳಿತ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಮೂಲಗಳಾದ ಕೊಳವೆ ಭಾವಿ ದುರಸ್ತಿ, ಕುಡಿಯುವ ನೀರಿನ ಸರಬರಾಜು ಘಟPಗಳ ತಾಂತ್ರಿಕದೋಷ ಕಾರಣ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಾದರೆ ಸಾರ್ವಜನಿಕರು, ಸಹಾಯವಾಣಿಗೆ ಕರೆಮಾಡಿ ದೂರು ದಾಖಲಿಸಬಹುದು.
ದೂರು ಸ್ವೀಕರಿಸಿದ ತಕ್ಷಣ ಜಿಲ್ಲಾ ಪಂಚಾಯತ್ ಇಂಜನಿಯರಿಂಗ್ ವಿಭಾಗ ತತಕ್ಷಣ ಶಾಖಾಧಿಕಾರಿಗಳಿಗೆ ಮಾಹಿತಿ ಒದಗಿಸಿ ತುರ್ತು ಕ್ರಮ ಕೈಗೊಂಡು ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು.
ವಿಜಾಪುರ ನಗರದ ಪಂಚಾಯತ್ ರಾಜ್ ಇಂಜನಿಯರ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಸ್ಥಾಪಿಸಲಾದ ಸಹಾಯವಾಣಿ ಸಂಖ್ಯೆ, ೦೮೩೫೨- ೨೦೮೩೩೪ ಅಥವಾ ೨೦೮೨೩೪ ಈ ಸಂಖ್ಯೆಗಳಿಗೆ ಉಚಿತ ಕರೆ ಮಾಡಿ ನೀರಿನ ಸಮಸ್ಯೆ ಕುರಿತಂತೆ ಜನರು ದೂರು ನೀಡಲು ಪಂ.ರಾಜ್ ಕಾರ್ಯ ನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ಜನರ ನೆರವಿಗಾಗಿ ೧೦೮ ಆರೋಗ್ಯ ಕವಚ ಸೇವೆಗೆ ಜಿಲ್ಲಾಡಳಿತದಿಂದ ಬದಲಿ ವ್ಯವಸ್ಥೆ
ವಿಜಾಪುರ, ಏಪ್ರೀಲ್ ೨೪- ತುರ್ತು ಆರೋಗ್ಯ ಸೇವೆಯ ೧೦೮ ಆರೋಗ್ಯ ಕವಚ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಜಿಲ್ಲಾಡಳಿತ ಬದಲಿ ವ್ಯವಸ್ಥೆ ಕೈಗೊಂಡಿದೆ.
೧೦೮ ಆರೋಗ್ಯ ಕವಚ ವಾಹನಗಳಲ್ಲಿ ಸೇವೆ ಸಲ್ಲಿಸುವ ಖಾಸಗಿ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ೧೦೮ ಆರೋಗ್ಯ ಕವಚದ ಸರ್ಕಾರಿ ವಾಹನಗಳಿಗೆ ಬದಲಿ ನೌಕರರನ್ನು ನೇಮಿಸಿ ಸೇವೆಯನ್ನು ಮುಂದುವರೆಸಿದೆ.
ಸಾರ್ವಜನಿಕರು ಎಂದಿನಂತೆ ೧೦೮ ಆರೋಗ್ಯ ಕವಚ ವಾಹನದ ಸೇವೆಯನ್ನು ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಶಾಂತರಾಜ್ ಮನವಿ ಮಾಡಿಕೊಂಡಿದ್ದಾರೆ.
ಕೊಳವೆ ಭಾವಿ ಕೊರೆಯಲು ನೊಂದಣಿ ಕಡ್ಡಾಯ -ಜಿಲ್ಲಾಡಳಿತ ಆದೇಶ
ವಿಜಾಪುರ, ಏಪ್ರೀಲ್ ೨೪- ಭಾರತದ ಸರ್ವೋಚ್ಚ ನ್ಯಾಯಲಯದ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೊಳವೆ ಭಾವಿಗಳನ್ನು ಕೊರೆಯಿಸುವ ಭೂಮಾಲೀಕರು ಅಥವಾ ರೈತರು ಅಥವಾ ಏಜೆನ್ಸಿಗಳು ಕಡ್ಡಾಯವಾಗಿ ಅನುಮತಿ ಪಡೆಯಲು ಜಿಲ್ಲಾಧಿಕಾರಿ ಆರ್.ಶಾಂತರಾಜ್ ಆದೇಶ ಹೊರಡಿಸಿದ್ದಾರೆ.
ತೆರೆದ ಕೊಳವೆ ಭಾವಿಗಳಲ್ಲಿ ಮಕ್ಕಳು ಬಿದ್ದು ಸಂಭವಿಸಿದ ದುರಂತಗಳ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ದುರಂತ ಪ್ರಕರಣ ತಡೆಯುವ ನಿಟ್ಟಿನಲ್ಲಿ ಕೊಳವೆಭಾವಿಗಳನ್ನು ಕೊರೆಯಲು ಉದ್ದೇಶಿಸಿದ ಭೂಮಾಲೀಕರು ೧೫ ದಿನಗಳ ಮುಂಚಿತವಾಗಿ ಜಿಲ್ಲಾಧಿಕಾರಿಗಳಿಗೆ, ಭೂವಿಜ್ಞಾನಿಗೆ, ಸಂಬಂಧಿಸಿದ ಗ್ರಾಮ ಪಂಚಾಯತ್ಗೆ, ಪುರ ಸಭೆ, ನಗರ ಸಭೆಗಳಿಗೆ ಲಿಖಿತವಾಗಿ ಮಾಹಿತಿ ನೀಡುವುದು ಕಡ್ಡಾಯ.
ಕೊಳವೆ ಭಾವಿಗಳನ್ನು ಕೊರೆಯುವ ಸರ್ಕಾರಿ, ಅರೆ ಸರ್ಕಾರಿ,ಖಾಸಗಿ ಇತ್ಯಾದಿ ಡ್ರಿಲ್ಲಿಂಗ್ ಏಜೆನ್ಸಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೊಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಕೊಳವೆ ಭಾವಿ ಕೊರೆಯಲು ಅನುಮತಿ ಪಡೆದ ಮೇಲೆ ಕೊಳವೆ ಭಾವಿ ಕೊರೆಯುವ ಸ್ಥಳದಲ್ಲಿ ನಾಮ ಫಲಕ ಬರೆದು ಪ್ರದರ್ಶಿಸಬೇಕು. ಫಲಕದಲ್ಲಿ ಕೊಳವೆ ಭಾವಿ ಕೊರೆದ ಏಜೆನ್ಸಿಯ ಸಂಪೂರ್ಣ ವಿಳಾಸ, ಮಾಲೀಕನ ಸಂಪೂರ್ಣವಿಳಾಸ, ಭಾವಿ ಸುತ್ತಲೂ ತಂತಿಬೇಲಿ ಅಥವಾ ರಕ್ಷಣಾಗೋಡೆ ನಿರ್ಮಾಣ, ಕೊಳವೆ ಭಾವಿ ಸುತ್ತಲೂ ನೆಲದ ಮಟ್ಟದಿಂದ ಮೇಲೆ ೦.೩೦ ಮೀಟ್ರ್ ಮತ್ತು ನೆಲದಿಂದ ಕೆಳಗೆ ೦.೩ ಮೀಟರ ಇರುವಂತೆ ಸಿಮೆಂಟ್ ಕಾಂಕ್ರಿಟಿನ ಪ್ಲಾಟ್ ಫಾರ್ಮ ನಿರ್ಮಾಣ,ಕೊಳವೆ ಭಾವಿಯ ಕೇಸಿಂಗ್ ಪೈಪಿಗೆ ಮುಚ್ಚಳ ಹಾಕುವುದು, ಕೊಳವೆ ಭಾವಿ ಕೊರೆಯುವ ಸಮಯದಲ್ಲಿ ಉಂಟಾಗುವ ತಗ್ಗು ಕಾಲುವೆಗಳನ್ನು ಮುಚ್ಚುವುದು, ವಿಫಲವಾದ ಕೊಳವೆ ಭಾವಿಗಳನ್ನು ಸಂಪೂರ್ಣವಾಗಿ ಕಲ್ಲು,ಉಸುಕು,ಮಣ್ಣು ಇತ್ಯಾದಿಗಳಿಂದ ತಳದಿಂದ ಮೇಲಿನವರೆಗ ಭರ್ತಿ ಮಾಡುವುದು, ಹಾಗು ಕೊಳವೆ ಭಾವಿಯ ಪಂಪನ್ನು ದುರಸ್ತಿಗೆ ತೆಗೆದಾಗಲೂ ಸಹ ಕೇಸಿಂಗ್ ಪೈಪಿಗೆ ಮುಚ್ಚಳ ಹಾಕುವ ಕುರಿತಂತೆ ಹಲವು ಸುರಕ್ಷತಾ ಮಾರ್ಗ ಸೂಚಿಗಳನ್ನು ನೀಡಲಾಗಿದೆ.
ಇದಲ್ಲದೆ ಜಿಲ್ಲಾಡಳಿತ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿನ ಕೊಳವೆ ಭಾವಿಗಳ ಮಾಹಿತಿ, ಈ ಪೈಕಿ ಬಳಕೆಯಲ್ಲಿರುವ ಕೊಳವೆ ಭಾವಿಗಳು, ವಿಫಲವಾದ ಕೊಳವೆ ಭಾವಿಗಳು, ವಿಫಲವಾದ ಭಾವಿಗಳ ಪೈಕಿ ತೆರೆದಿಟ್ಟ ಹಾಗೂ ಮುಚ್ಚಿದ ಕೊಳವೆ ಭಾವಿಗಳ ಕುರಿತಂತೆ ಮಾಹಿತಿಯನ್ನು ನಿರ್ವಹಿಸುತ್ತದೆ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕೊಳವೆ ಭಾವಿಗಳ ಮೇಲ್ವಿಚಾರಣೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಮತ್ತು ಕೃಷಿ ಇಲಾಖಾ ಅಧಿಕಾರಿಗಳಿಗೆ ನಗರ ಮತ್ತು ಪಟ್ಟಣ ಪ್ರದೇಶದ ಕೊಳವೆ ಭಾವಿಗಳ ಉಸ್ತುವಾರಿಯನ್ನು ಕಿರಿಯ ಅಭಿಯಂತರರು,ಭೂ ವಿಜ್ಙಾನಿಗಳ ನಿರ್ವಹಣೆಗೆ ವಹಿಸಲಾಗಿದೆ.
ಯಾವುದೇ ಕೊಳವೆ ಭಾವಿಗಳನ್ನು ಯಾವುದೇ ಹಂತದಲ್ಲಿ ಕೈಬಿಟ್ಟಲ್ಲಿ, ವಿಫಲವಾದಲ್ಲಿ ಮಾಲೀಕರು ಸಂಭಂದಿಸಿದ ಭೂವಿಜ್ಞಾನಿಗಳು ಪಂಚಾಯತ ಇಂಜಿನಿಯರುಗಳು ನಗರ ಪುರಸಭೆಅಧಿಕಾರಿಗಳಿಂದ ಭಾವಿ ಮುಚ್ಚಿದ ಕುರಿತಂತೆ ಅಧಿಕೃತ ಪ್ರಮಾಣ ಪತ್ರ ಪಡೆಯಬೇಕು. ಈ ನಿಯಮಗಳನ್ನು ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.