ಬೆಂಗಳೂರು, ಅ.14 : ವಿದೇಶದ ಸ್ವಿಝ್ ಬ್ಯಾಂಕ್‌ನಲ್ಲಿರುವ 1,456 ಬಿಲಿಯನ್ ಡಾಲರ್ ಭಾರತೀಯರ ಹಣವನ್ನು ತಂದರೆ ತೆರಿಗೆ ಮುಕ್ತ ದೇಶವನ್ನಾಗಿ ಮಾಡಬಹುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಭಿಪ್ರಾಯವ್ಯಕ್ತಡಪಸಿದ್ದಾರೆ.
ನಗರದ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ಧ ‘ಇನ್‌ಸ್ಟಿಟ್ಯೂಟಿಂಗ್ ರ‍್ಯಾಂಕ್ ಮತ್ತು ಪ್ರತಿಭಾ ಪುರಸ್ಕಾರ’ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರವನ್ನು ತೊಡೆದು ಹಾಕಬೇಕೆಂದು ಅನೇಕ ಗಣ್ಯರು ಭಾಷಣ ಮಾಡುತ್ತಾರೆ. ಆದರೆ ಅವರೆ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಭ್ರಷ್ಟಾಚಾರದಿಂದ ಸಂಗ್ರಹಿಸಿದ ಹಣವನ್ನು ವಿದೇಶಿ ಬ್ಯಾಂಕಿನಲ್ಲಿಡುತ್ತಾರೆ.ಹೀಗೆ ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳುವವರನ್ನು ಪ್ರಶ್ನಿಸುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ.
ಈ ಅಧಿಕಾರವನ್ನು ಪ್ರತಿಯೊಬ್ಬರೂ ಬಳಸಿಕೊಂಡಾಗ ಮಾತ್ರ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎಂದು ಸಂತೋಷ್ ಹೆಗಡೆ ಅಭಿಪ್ರಾಯಪಟ್ಟರು.
ಭ್ರಷ್ಟಾಚಾರವನ್ನು ತಡೆಯಲು ೧೯೪೭ನೆ ಸಾಲಿನಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಜಾರಿಗೆ ಬಂದಿದ್ದರೂ, ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದು ಪ್ರತಿನಿತ್ಯ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದೆ. ೧೯೪೭ನೆ ಸಾಲಿಗೆ ಹೋಲಿಕೆ ಮಾಡಿದರೆ ಭ್ರಷ್ಟಚಾರ ೧೦೦ಪಟ್ಟು ಹೆಚ್ಚಾಗಿದೆ. ಇದನ್ನು ತಡೆಯಲು ಇಂದಿನ ಯುವ ಜನಾಂಗ ಮುಂದಾಗಬೇಕು ಎಂದು ಸಂತೋಷ್ ಹೆಗಡೆ ಕರೆನೀಡಿದರು.
ಬೆಂಗಳೂರು ನಗರದಲ್ಲಿ ಶೇ.20 ರಷ್ಟು ಅಕ್ರಮ ಕಟ್ಟಡಗಳಿವೆ. ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳ ಕುರಿತು ಮಾಹಿತಿ ಇರುವ ಅಧಿಕಾರಿಗಳು ಕೂಡ ಭ್ರಷ್ಟಾಚಾರದಲ್ಲಿ ತೊಡಗಿ ಯಾವುದೆ ಕ್ರಮ ಕೈಗೊಳ್ಳುವುದಿಲ್ಲ.
ಸಾರ್ವಜನಿಕರ ಆಸ್ತಿಯಾಗಿರುವ ಈ ಸರಕಾರಿ ಜಮೀನನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬ ನಾಗರೀಕನ ಮೇಲಿದೆ. ಆದ್ದರಿಂದ ಸಾರ್ವಜನಿಕರ ಆಸ್ತಿಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣಗೊಳ್ಳುತ್ತಿರುವುದು ಗಮನಕ್ಕೆ ಬಂದಾಕ್ಷಣ, ಅದನ್ನು ತಡೆಯಲು ಯುವ ಜನಾಂಗ ಮುಂದಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ವಾತಂತ್ರ ಬಂದು ಆರು ದಶಕಗಳು ಕಳೆದರೂ, ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳು ಇಂದಿಗೂ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಗ್ರಾಮ ಹಾಗೂ ನಗರಗಳಿಗೆ ಒದಗಿಸುವ ಸೌಲಭ್ಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸರಕಾರಗಳು ರೂಪಿಸುವ ಅನೇಕ ಯೋಜನೆಗಳು ಗ್ರಾಮೀಣ ಪ್ರದೇಶದ ಜನತೆಗೆ ಮುಟ್ಟುತ್ತಿಲ ಎಂದು ಸಂತೋಷ್ ಹೆಗಡೆ ವಿಷಾಧ ವ್ಯಕ್ತಪಡಿಸಿದರು.
ಇಂದಿನ ಯುವ ಜನಾಂಗ ಪದವಿಗಳನ್ನು ಪಡೆದು, ಹೆಚ್ಚಿನ ವೇತನ ಸಿಗುವ ಕೆಲಸಗಳು ಪಡೆಯಬೇಕೆಂಬ ಗುರಿಯನ್ನು ಹೊಂದಿರುತ್ತಾರೆ. ಇದರ ಜೊತೆಗೆ ಸಾಮಾಜಿಕ ಸೇವೆಯನ್ನು ಮಾಡುವಂತಹ ಗುಣ ಬೆಳೆಸಿಕೊಳ್ಳಬೇಕು ಎಂದು ಸಂತೋಷ್ ಹೆಗಡೆ ಕರೆನೀಡಿದರು.
ಇಂದಿನ ರಾಜಕಾರಣಿಗಳು ಯುವ ಜನಾಂಗದ ಆದರ್ಶವ್ಯಕ್ತಿಗಳಲ್ಲ: ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ಧ ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ಮಾತನಾಡಿ, ಇಂದಿನ ರಾಜಕಾರಣಿಗಳು ಯುವ ಪೀಳಿಗೆಗೆ ಆದರ್ಶ ವ್ಯಕ್ತಿಗಳಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ರಾಜಕಾರಣಿಗಳು ಯುವ ಜನಾಂಗಕ್ಕೆ ಆದರ್ಶವಾಗಿದ್ದಂತಹ ಕಾಲ ೧೯೫೦ನೆ ಸಾಲಿಗೆ ಕೊನೆಗೊಂಡಿದೆ ಎಂದು ಅಭಿಪ್ರಾಯಪಟ್ಟರು.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಆ ಭಾಗದ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಪಕ್ಷಗಳು ಒಂದಾಗಿ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯದಲ್ಲಿ ತೊಡಗುದನ್ನು ಬಿಟ್ಟು, ಬೀದಿಯಲ್ಲಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಕಳೆದ ೧೦ ವರ್ಷಗಳಿಂದ ರಾಜಕಾರಣಿಗಳು ಬಳಸುವ ಭಾಷೆಯನ್ನು ಕೇಳಿದರೆ ಯಾವೊಬ್ಬ ನಾಗರೀಕನು ಅವರನ್ನು ಗೌರವದಿಂದ ಕಾಣಬೇಕೆಂಬ ಭಾವನೆ ಇಲ್ಲವಾಗಿದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.
ಅಧಿಕಾರದಲ್ಲಿರುವ ಪಕ್ಷಗಳು ಸಾರ್ವಜನಿಕರೊಂದಿಗೆ ಸಂವಾದ ನಡೆಸದೆ ಏಕಾಏಕಿ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ದೇಶದಲ್ಲಿರುವ ಪ್ರಜಾಪ್ರಭುತ್ವ ಪರಿಕಲ್ಪನೆಗೆ ಅಪಮಾನ ಮಾಡುತ್ತಿವೆ ಎಂದು ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ೨೦೦೮-೨೦೦೯ನೆ ಸಾಲಿನಲ್ಲಿ ಶ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್ ಪಡೆದ 21 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ.ಕೆ.ಪಾಂಡುರಂಗ ಶೆಟ್ಟಿ, ಎನ್‌ಎಂ.ಕೆ.ಆರ್.ವಿ. ಮಹಿಳಾ ಕಾಲೇಜಿನ ಪ್ರಾಂಶುಪಾಲ ವಿ.ಟಿ.ವಿಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು