ಬೆಂಗಳೂರು, ನ.23: ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ರಾಜ್ಯದ ಗ್ರಾಮೀಣ ಪ್ರದೇಶವನ್ನು ‘ಕಗ್ಗತ್ತಲೆ ಖಂಡ’ ಮಾಡಿರುವ ರಾಜ್ಯ ಸರಕಾರದ ವೈಫಲ್ಯವನ್ನು ಖಂಡಿಸಿ ಜೆಡಿಎಸ್ ನಗರದಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನವನ್ನು ನಡೆಸಿತು.
ನಗರದ ಆನಂದರಾವ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಮಾತನಾಡಿದ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸರಕಾರ ಕಳೆದ ೧೭ತಿಂಗಳಲ್ಲಿ ಎಲ್ಲ ರಂಗಗಳಲ್ಲೂ ತನ್ನ ಅದಕ್ಷತೆ, ಅಸಾಮರ್ಥ್ಯ, ಅನನುಭವ ಮತ್ತು ಭ್ರಷ್ಟತೆಯಿಂದ ಜನ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಧನ ಸಚಿವ ಈಶ್ವರಪ್ಪ ರಾಜ್ಯದ ಜನತೆಯನ್ನು ಕತ್ತಲೆಯಲ್ಲಿಟ್ಟು ದ್ವಂದ್ವ ಹೇಳಿಕೆಗಳನ್ನು ನೀಡುವ ಮೂಲಕ ಹಾಸ್ಯಾಸ್ಪದಕ್ಕೆ ಗುರಿಯಾಗಿದ್ದಾರೆ. ಲೋಡ್ ಶೆಡ್ಡಿಂಗ್‌ನಿಂದಾಗಿ ಗ್ರಾಮಾಂತರ ಪ್ರದೇಶದ ಜನರಿಗೆ ಕುಡಿಯುವ ನೀರು ದೊರೆಯುತ್ತಿಲ್ಲ. ಕೃಷಿಕರ ಬೆಳೆಗಳು ನಾಶವಾಗುತ್ತಿವೆ. ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳು ಮುಚ್ಚುವ ಸ್ಥಿತಿ ತಲುಪಿವೆ ಎಂದು ಕಿಡಿಕಾರಿದ ಕುಮಾರಸ್ವಾಮಿ, ರಾಜ್ಯದ ರೈತರು ನೆರೆ-ಬರದ ತೊಳಲಾಟದಲ್ಲಿರುವ ಸಂದರ್ಭದಲ್ಲಿ ಸರಕಾರದ ವಿದ್ಯುತ್ ಕಡಿತ ಜನತೆಯ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ರಾಜ್ಯ ಸರಕಾರದ ದೌರ್ಬಲ್ಯವನ್ನು ವಿರೋಧಿಸಿ ಜೆಡಿಎಸ್ ಸಮರ ಸಾರಿದ್ದು, ಸರಕಾರವನ್ನು ಸರಿ ದಾರಿಗೆ ತರುವ ಹೋರಾಟ ಇದಾಗಿದೆ. ಇಂದು ಸಾಂಕೇತಿಕವಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜೆಡಿಎಸ್‌ನಿಂದ ಚಳವಳಿ ಹಮ್ಮಿಕೊಂಡಿದ್ದು, ಅನಿಯಮಿತ ವಿದ್ಯುತ್ ಕಡಿತವನ್ನು ತಕ್ಷಣವೇ ನಿಲ್ಲಿಸಬೇಕು. ವಿದ್ಯುತ್ ಸೋರಿಕೆಯನ್ನು ತಡೆಗಟ್ಟಬೇಕು. ಗ್ರಾಮೀಣ ಪ್ರದೇಶಕ್ಕೆ ೨೪ ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡಬೇಕು ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ರೆಡ್ಡಿ ಸಹೋದರರಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪೂರ್ಣ ಶರಣಾಗಿದ್ದು, ಅವರು ಸಾರ್ವಜನಿಕವಾಗಿ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ಅರಣ್ಯ ಸಂಪತ್ತು ಲೂಟಿಯಾಗು ತ್ತಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಗಣಿಧಣಿಗಳ ವಿರುದ್ಧ ಅವರು ಬಿಗಿ ನಿಲುವು ತಾಳುವುದು ಸಾಧ್ಯವಿಲ್ಲ ಎಂಬುದು ಬಯಲಾಗಿದೆ ಎಂದ ಕುಮಾರಸ್ವಾಮಿ ಟೀಕಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಝೀಂ, ಕೃಷ್ಣಪ್ಪ, ಮಾರಿಮುತ್ತು, ಅಪ್ಪಾಜಿಗೌಡ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.