ಗೋಹತ್ಯೆ ನಿಷೇಧ ಕಾಯ್ದೆ ' ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ' ಗೋವು ' ನಿಮಗೆ ಸಮುದಾಯವೊಂದರ ಧಾರ್ಮಿಕ ನಂಬಿಕೆಯ ಪ್ರತೀಕವಾಗಿ ಮುಖ್ಯವಾಗುತ್ತದೋ ಅಥವಾ ಸಮುದಾಯವೊಂದರ ಆಹಾರವಾಗಿ ಮುಖ್ಯವಾಗುತ್ತದೋ ? ಇಲ್ಲಿ ಅನವಶ್ಯಕ ಭಾವುಕತೆ ಬೇಡ. ವಯಸ್ಸಾದ , ಅಪ್ರಯೋಜಕ ಜಾನುವಾರುಗಳಿಂದ ಯಾರಿಗೆ ಏನು ಲಾಭ ? ಅಷ್ಟಕ್ಕೂ ಗೋಹತ್ಯೆ ನಮ್ಮ ಭಾರತೀಯ ಸಂಸ್ಕೃತಿಗೆ ಹೊರತಾದದ್ದಲ್ಲವಲ್ಲ ? ಗೋಹತ್ಯೆ ಹಾಗೂ ಗೋಭಕ್ಷಣೆಗೆ ನಮ್ಮ ವೇದಕಾಲದಲ್ಲಿಯೇ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಗೋಹತ್ಯೆ ನಿಷೇಧ ಮಾಡುವ ಮೂಲಕ ಏನೋ ದೊಡ್ಡ ಧರ್ಮ ಸಂರಕ್ಷಣೆ ಮಾಡುತ್ತೇವೆ ಎನ್ನುವುದು ಬಿಜೆಪಿ ಸರ್ಕಾರ ಮತ್ತೊಂದು ರಾಜಕೀಯ ತಂತ್ರವೇ ವಿನಾ ಬೇರೇನಲ್ಲ. ರಾಜ್ಯದ ಜನರಿಂದ ಆಯ್ಕೆಯಾಗಿ ವಿಧಾನಸೌಧದ ಮೆಟ್ಟಿಲು ಹತ್ತಿರುವ ಇವರು ಇಲ್ಲಿ ತನಕ ಮಾಡಿದ್ದೂ , ಈಗ ಮಾಡುತ್ತಿರುವುದು ಎಲ್ಲವೂ ಸಂಘ-ಪರಿವಾರದ ರಾಜಕೀಯವೇ. ಒಂದು ದನದ ಜೀವ ಕುರಿಯ ಜೀವಕ್ಕಿಂತ ಹೇಗೆ ಶ್ರೇಷ್ಠ ? ಕುರಿ , ಕೋಳಿ , ಕೋಣ ತಿಂದರೆ ತಪ್ಪಲ್ಲ ಅದೇ ದನದ ಮಾಂಸ ತಿಂದರೆ ಮಾತ್ರ ಧರ್ಮದ್ರೋಹವೇ ? ಜಾತ್ರೆಗಳಲ್ಲಿ ಪೊಲೀಸರ ಎದುರಿಗೇ ಕೋಣಗಳ ಹತ್ಯೆಯಾದರೂ ಯಾರೂ ಅದನ್ನು ಪ್ರಶ್ನಿಸುವುದಿಲ್ಲ. ಯಾವುದೋ ಒಂದು ಸಮುದಾಯ ತನ್ನ ಆಹಾರವಾಗಿ ಗೋವನ್ನು ಬಳಸಿಕೊಂಡರೆ ಅದು ಮಾತ್ರ ಹಿಂದೂ ಧರ್ಮಕ್ಕೆ ಮಾಡಿದ ಅವಮಾನವೇ ? ಉಪಯೋಗವಿಲ್ಲದ , ವಯಸ್ಸಾದ ದನಗಳನ್ನು ಇಟ್ಟುಕೊಂಡು ಬಡರೈತ ಮಾಡುವುದಾದರೂ ಏನನ್ನು ? ಆ ಎಲ್ಲಾ ದನಗಳ ಪಾಲನೆಯ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳುವುದೇ ? ಅವುಗಳನ್ನೆಲ್ಲಾ ವಿಧಾನಸೌಧದ ಪ್ರಾಂಗಣದಲ್ಲಿ ಕಟ್ಟಿಕೊಳ್ಳುತ್ತಾರೆಯೇ ? ಮುಸಲ್ಮಾನರು ಮಾತ್ರ ದನ ತಿನ್ನುವುದಿಲ್ಲ. ಹಿಂದೂಗಳೇ ಆದ ದಲಿತರು , ಪಂಚಮರು ಕೂಡ ದನವನ್ನು ಆಹಾರವಾಗಿ ಬಳಸುತ್ತಾರೆ. ಸಂಘಪರಿವಾರದ ಹೊಸ ಸೂತ್ರದ ಪ್ರಕಾರ ಅವರು ಕೂಡ ಧರ್ಮದ್ರೋಹಿಗಳೇ ಅಲ್ಲವೇ ? ಇಂಥ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಬುದ್ಧಿಜೀವಿಗಳು , ಪ್ರಜ್ಞಾವಂತರು ತಮ್ಮ ಸಾಮಾಜಿಕ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ ಎನಿಸುತ್ತದೆಯೇ ? ನಿಜ. ನಮ್ಮ ಇಂದಿನ ಸಂದರ್ಭದಲ್ಲಿ ಚಿಂತಕರ , ಪ್ರಜ್ಞಾವಂತರ ಜವಾಬ್ದಾರಿ ಕೊಂಚ ಹೆಚ್ಚು. ಆದರೆ , ಸಮಾಜದ ಯಾವುದೋ ಒಂದು ತುರ್ತಿನ ಕುರಿತು ಧ್ವನಿ ಎತ್ತುವುದು ಎಂದರೆ ಜನಸಾಮಾನ್ಯರ ಕಣ್ಣು ತೆರೆಸುವುದಲ್ಲ. ಬದಲಿಗೆ ನಮ್ಮೊಳಗಿನ ಅರಿವನ್ನು ವಿಸ್ತರಿಸಿಕೊಳ್ಳುವುದು ಎಂದರ್ಥ. ಅದೇನೇ ಇರಲಿ , ಇಂದಿನ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಚಿಂತಕರ , ಬುದ್ಧಿಜೀವಿಗಳ ಪ್ರಯತ್ನ ಕಡಿಮೆ ಏನಿಲ್ಲ. ಆದರೆ ಅದು ನಿರೀಕ್ಷಿತ ಮಟ್ಟದಲ್ಲಿಲ್ಲ ಅಷ್ಟೇ. ಸಮಾಜಮುಖಿ ಚಿಂತಕ ಸಮುದಾಯದಲ್ಲಿ ಬೇರು ಬಿಡುತ್ತಿರುವ ಉದಾಸೀನತೆ ಇದಕ್ಕೆ ಕಾರಣವಿರಬಹುದು. ನಮ್ಮ ಕಾಳಜಿಯನ್ನು ಇನ್ನೊಬ್ಬರು ಸರಿಯಾಗಿ ಅರ್ಥೈಸಿಕೊಳ್ಳುತ್ತಿಲ್ಲ , ನಮ್ಮ ಅಭಿಪ್ರಾಯಕ್ಕೆ ಗೌರವ ಸಿಗುತ್ತಿಲ್ಲ ಎಂದಾಗ ಆಗುವ ಸಿನಿಕತನ ಹಾಗೂ ಹತಾಶೆ ಕೂಡ ಇದಕ್ಕೆ ಕಾರಣವಿರಬಹುದು. ಮೂಲಭೂತವಾದಿ ಸಂಘಟನೆಗಳಲ್ಲಿರುವ ಒಗ್ಗಟ್ಟು ಹಾಗೂ ಒಮ್ಮತ ಅವುಗಳಿಗೆ ಪ್ರತಿರೋಧ ಒಡ್ಡಬಲ್ಲ ಚಿಂತಕರು ಹಾಗೂ ಪ್ರಜ್ಞಾವಂತ ಸಮುದಾಯದಲ್ಲಿಲ್ಲ ಏಕೆ ? ಅವರಲ್ಲಿರುವ ಸೈದ್ಧಾಂತಿಕ ಒಡಕು ಕೂಡ ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಮೂಲಭೂತವಾದಿ ಮನೋಧರ್ಮಕ್ಕೆ ನೀರೆರೆಯುತ್ತಿರಬಹುದೇ ? ಕೋಮುವಾದಿ ಚಿಂತನೆಗಳನ್ನು ಸಂಘಟಿಸಿದಷ್ಟು ಸುಲಭದಲ್ಲಿ ವಿಚಾರ ಶಕ್ತಿಯ ಸಂಘಟನೆ ಸಾಧ್ಯವಿಲ್ಲ. ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಿದರೆ ಇದು ತಿಳಿಯುತ್ತದೆ. ಲೋಹಿಯಾ , ಗಾಂಧಿ , ಅಂಬೇಡ್ಕರ್ , ಇನ್ನೂ ಹಿಂದೆ ಹೋದರೆ ಬಸವ , ಅಲ್ಲಮ ಇವರನ್ನೆಲ್ಲಾ ಒಂದು ನಿರ್ದಿಷ್ಟ ಚಿಂತನೆಯೊಂದಕ್ಕೆ ಕಟ್ಟಿ ಹಾಕಲು ಸಾಧ್ಯವೇ ? ಈ ಎಲ್ಲಾ ನಿರಂಕುಶ ಮತಿಗಳು ಹಿಡಿದ ಮಾರ್ಗಗಳಲ್ಲಿ , ತಳೆದ ನಿರ್ಧಾರಗಳಲ್ಲಿ ವೈರುಧ್ಯ ಇದ್ದರೂ ಅವರೆಲ್ಲರ ಪ್ರಮುಖ ಧ್ಯೇಯ ಮಾತ್ರ ಮನುಷ್ಯಕುಲದ ಸರ್ವಾಂಗೀಣ ಉದ್ಧಾರ. ಭಿನ್ನಾಭಿಪ್ರಾಯದ ಆರೋಗ್ಯವಂತ ಅಭಿವ್ಯಕ್ತಿಗೂ ಅವಕಾಶವಿಲ್ಲದ ಕೋಮುವಾದಿ ಸಂಘಟನೆಗಳಲ್ಲಿ ವಾಗ್ವಾದ ಹಾಗೂ ಸಂವಾದಗಳೆಂಬುದು ದೂರದ ಮಾತೇ ಸರಿ. ಆದ್ದರಿಂದ ಅಲ್ಲಿ ಸಂಘಟನೆ ತುಂಬಾ ಸುಲಭ. ಆದರೆ , ಒಂದೇ ಉದ್ದೇಶ ಸಾಧನೆಗೆ ಸಹಸ್ರ ರೀತಿಯಲ್ಲಿ ಚಿಂತನೆ ನಡೆಸುವ ವಿಚಾರವಂತರನ್ನೆಲ್ಲಾ ಒಂದೇ ವೇದಿಕೆಯಲ್ಲಿ ಒಂದುಗೂಡಿಸುವುದು ಕಷ್ಟಸಾಧ್ಯ. ಬುದ್ಧ , ಸಾಕ್ರೆಟೀಸ್ , ರಸ್ಸೆಲ್ ಕಾಲದಿಂದ ಇಲ್ಲಿಯವರೆಗೂ ವಿಚಾರ ಶಕ್ತಿಯನ್ನು ಒಂದು ನಿರ್ದಿಷ್ಟ ಹಣೆಪಟ್ಟಿಗೆ ಸೀಮಿತಗೊಳಿಸಲು ಸಾಧ್ಯವಾಗಿಲ್ಲ. ಹಾಗೆಂದು ನಿರಾಶೆಗೊಳ್ಳುವ ಅವಶ್ಯಕತೆ ಏನಿಲ್ಲ. ಈ ಎಲ್ಲಾ ಚಿಂತನಾ ಪ್ರವಾಹಗಳು ಹೊರನೋಟಕ್ಕೆ ಅಸಂಘಟಿತವೆನಿಸಿದರೂ ಸಾಮಾಜಿಕ ಆರೋಗ್ಯವೇ ಅವುಗಳ ಪ್ರಮುಖ ಕಾಳಜಿ. ' ರೈತ ' ನ ಹೆಸರಲ್ಲಿ ಎಲ್ಲೆಡೆ ರಾಜಕೀಯ ನಡೆಯುತ್ತಿದೆ. ಕಾರ್ಪೊರೇಟ್ ವಲಯದೊಂದಿಗೆ ಕೈಜೋಡಿಸಿರುವ ಮುಖ್ಯಮಂತ್ರಿಗಳು , ಮಾಜಿ ಪ್ರಧಾನಿಗಳು ಎಲ್ಲರೂ ಬಳಸಿಕೊಳ್ಳುತ್ತಿರುವುದು ರೈತನನ್ನೇ. ನಿಮ್ಮ ಅಭಿಪ್ರಾಯ ? ಯಡಿಯೂರಪ್ಪನವರಿಂದ , ದೇವೇಗೌಡರಿಂದ ರೈತರ ಹಿತಾಸಕ್ತಿಯ ರಕ್ಷಣೆ ಅಸಾಧ್ಯ. ತಮ್ಮ ಯಾವುದೋ ಲಾಭಕ್ಕೆ ಅವರು ರೈತರ ಹೆಸರು ಹೇಳಬಹುದು , ಅವರನ್ನು ಪ್ರಚೋದಿಸಬಹುದು ಆದರೆ ರೈತರ ಒಳಿತು ರೈತರ ಕೈಯಲ್ಲಿದೆ. ದುರದೃಷ್ಟವಶಾತ್ , ರೈತರ ಹಿತಾಸಕ್ತಿಗೆ ಬದ್ಧರಾಗಿರಬೇಕಾದ ರೈತ ನಾಯಕರು ಕೂಡ ಇಂದು ಸಲ್ಲದ ಆಮಿಷಗಳಿಗೆ ಬಲಿಯಾಗತೊಡಗಿದ್ದಾರೆ. ಈ ಸಮಸ್ಯೆ ರೈತ ಸಂಘಕ್ಕೆ ಮಾತ್ರ ಸೀಮಿತವಾಗಿಲ್ಲ. ದಲಿತ ಸಂಘಟನೆಗಳು , ಕನ್ನಡ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳದ್ದೂ ಇದೇ ಸಮಸ್ಯೆ. ಸಮುದಾಯವೊಂದರ ಉದ್ದೇಶ ಸಾಧನೆಗೆ ಪಣತೊಟ್ಟು ನಿಲ್ಲಬೇಕಾದ ನಾಯಕವರ್ಗವೇ ಇಂದು ತಮ್ಮದೇ ಸಂಘಟನೆಗಳ ತಲೆ ಮೇಲೆ ಚಪ್ಪಡಿ ಎಳೆಯುತ್ತಿವೆ. ಹಾಗೆಂದು , ತನ್ನೊಂದೇ ಸಮುದಾಯದ ಹಿತಚಿಂತನೆಗೆ ಸೀಮಿತವಾದ ಸ್ವಾರ್ಥಿ ಸಂಘಟನೆಗಳಿಂದ ಸಮಾಜದ ಆರೋಗ್ಯ ಕಾಪಾಡುವುದು ಅಸಾಧ್ಯ. ತನ್ನ ಸಮುದಾಯದ ಹಿತದೊಂದಿಗೆ ಇಡೀ ಸಮಾಜದ ಒಳಿತನ್ನು ಬಯಸುವ ಸಂಘಟನೆಗಳು ಮಾತ್ರ ನಮ್ಮ ಇಂದಿನ ವ್ಯಾಧಿಗ್ರಸ್ತ ವಾಸ್ತವಕ್ಕೆ ಸಂಜೀವಿನಿಯಾಗಬಲ್ಲವು. ರಾಜ್ಯದಲ್ಲಿ ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂಬ ಕೂಗು ಎದ್ದಿರುವಾಗಲೇ , ಸರ್ಕಾರ ಈಗ ರಕ್ಷಿತಾರಣ್ಯದಲ್ಲೂ ಗಣಿಗಾರಿಕೆ ನಡೆಸಲು ಹಸಿರು ನಿಶಾನೆ ತೋರಿಸಿದೆ. ಕರ್ನಾಟಕ ತನ್ನ ಇತಿಹಾಸದಲ್ಲಿಯೇ ಇಷ್ಟೊಂದು ಬೇಜವಾಬ್ದಾರಿ , ಬೆನ್ನುಮೂಳೆ ಇಲ್ಲದ ಮುಖ್ಯಮಂತ್ರಿಯನ್ನು ಕಂಡಿಲ್ಲ. ಗಣಿಧಣಿಗಳಿಗೆ ಡೊಗ್ಗು ಸಲಾಮು ಹೊಡೆಯುತ್ತಾ , ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಶೋಭಾ ಕರಂದ್ಲಾಜೆಯನ್ನು ಬಲಿ ಕೊಡುವ ಇಂಥ ಮುಖ್ಯಮಂತ್ರಿಯನ್ನು ಪಡೆದು ಕರ್ನಾಟಕ ಪಾವನವಾಯಿತು! ಮುಖ್ಯಮಂತ್ರಿಗಳನ್ನೇ ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿರುವ ರೆಡ್ಡಿ ಸಹೋದರರು ಇಂದು ಬಳ್ಳಾರಿಯಲ್ಲಿ ' ನವಾಬ ' ರ ರೀತಿಯಲ್ಲಿ ಬದುಕುತ್ತಿದ್ದಾರೆ. ಇಂದು ಅವರ ದರ್ಬಾರನ್ನು ಪ್ರತಿಭಟಿಸಿದ ಯಾರೊಬ್ಬರೂ ಅಲ್ಲಿ ಸಮಾಧಾನದಿಂದ ಬದುಕುವಂತಿಲ್ಲ. ಅಂಥ ವಾತಾವರಣ ಸೃಷ್ಟಿ ಮಾಡಿದ್ದಾರೆ ಈ ಗಣಿಧಣಿಗಳು. ಅವರೆಲ್ಲರೂ ಆ ರೀತಿಯಲ್ಲಿ ಹೆಚ್ಚಿಕೊಳ್ಳುವುದಕ್ಕೆ ನಮ್ಮ ದುರ್ಬಲ ಮುಖ್ಯಮಂತ್ರಿಗಳೇ ಕಾರಣ. ಇಂಥ ಗಣಿಧಣಿಗಳ ಋಣದಲ್ಲಿರುವ ಸರ್ಕಾರವೊಂದು ರಕ್ಷಿತಾರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದರೆ ಅದು ಅನಿರೀಕ್ಷಿತವೇನೂ ಅಲ್ಲ ಬಿಡಿ. ಅಷ್ಟೇ ಅಲ್ಲ , ವಿರೋಧದ ನಡುವೆಯೂ ' ವಿಜಯನಗರ ಪುನಶ್ಚೇತನ ಪ್ರತಿಷ್ಠಾನ ' ನೆಪದಲ್ಲಿ ಕನ್ನಡ ವಿ.ವಿ ವ್ಯಾಪ್ತಿಯ 80 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ... ಇದು ನಿಜಕ್ಕೂ ನಮ್ಮ ದುರಂತವೇ ಸರಿ. ಅಲ್ಲಿ ಕೃಷ್ಣದೇವರಾಯನ ಹೆಸರಿನಲ್ಲಿ ಯಾವುದೋ ಅಧ್ಯಯನ ಕೇಂದ್ರವನ್ನೂ ಪ್ರಾರಂಭ ಮಾಡುತ್ತಾರಂತೆ. ಆ ಟ್ರಸ್ಟ್ನಲ್ಲಿ ಪ್ರಭಾವಿ ಬಿಜೆಪಿ ಸಂಸದರೊಬ್ಬರ ಪತ್ನಿಯ ಹೆಸರೂ ಇದೆ. ಸಾಹಿತಿಗಳನ್ನು , ಅಕ್ಯಾಡೆಮಿಕ್ ವಲಯದ ಯಾರೊಬ್ಬರನ್ನೂ ಒಳಗೊಳ್ಳದ ಆ ಅಧ್ಯಯನ ಕೇಂದ್ರದಿಂದ ಯಾವ ಪುರುಷಾರ್ಥ ಸಾಧ್ಯ ? ಅಲ್ಲಿ ಇನ್ಯಾವ ಬಗೆಯ ಅಧ್ಯಯನ ನಡೆಯಬಹುದು ? ನಾವೆಲ್ಲರೂ ಅದನ್ನು ವಿರೋಧಿಸಿದ್ದೇವೆ ಮಾತ್ರವಲ್ಲ , ಅಂಥ ಯಾವ ಅನಪೇಕ್ಷಿತ ಕಾರ್ಯಕ್ರಮಗಳಿಗೂ ಅವಕಾಶ ನೀಡದಂತೆ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಮನವಿಯನ್ನೂ ಸಲ್ಲಿಸಿದ್ದೇವೆ. ಸರ್ಕಾರದ ಒತ್ತಡ ತಾಳಲು ಅಸಾಧ್ಯವೆಂದಾದರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೋರಾಟಕ್ಕಿಳಿಯಬೇಕು ಎಂತಲೂ ನಾವು ಮನವಿ ಮಾಡಿಕೊಂಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಕುರಿತು ಜನತೆಯಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಮಾನವೀಯ ಅಂತಃಕರಣದ ಅಭಿವ್ಯಕ್ತಿಯಾಗಬಲ್ಲ ರಂಗಭೂಮಿ ಇಂದು ತನ್ನ ಮಾನವೀಯ ಸಂವೇದನೆಯನ್ನು ಕಳೆದುಕೊಂಡು ಕೇವಲ ಅಬ್ಬರ , ದುಂದುವೆಚ್ಚಗಳಿಗೆ ಬಲಿಯಾಗುತ್ತಿದೆಯಾ ? ಅದ್ದೂರಿತನವೇ ರಂಗಭೂಮಿಗೆ ಮಾರಕ ಎನ್ನುವಂತಿಲ್ಲ. ಕಾರಂತರು ' ಹಯವದನ ' ಹಾಗೂ ' ಗೋಕುಲ ನಿರ್ಗಮನ ' ಮಾಡುವಾಗ ಅವು ಆ ಕಾಲಕ್ಕೆ ತುಸು ಅದ್ದೂರಿ ನಿರ್ಮಾಣಗಳೇ ಆಗಿದ್ದವು. ಆದರೆ ಕನ್ನಡದ ಮನಸ್ಸುಗಳ ಅರಿವು ವಿಸ್ತರಿಸುವುದರಲ್ಲಿ ಆ ನಾಟಕಗಳು ನಿರ್ವಹಿಸಿದ ಪಾತ್ರವಿದೆಯಲ್ಲಾ ಅದು ನಿಜಕ್ಕೂ ಅವರ್ಣನೀಯ. ಆ ಅದ್ದೂರಿತನ ಕಾರಂತರ ಕಲಾಪ್ರಜ್ಞೆಗೆ ಎಂದಿಗೂ ಎರವಾಗಿರಲಿಲ್ಲ. ಆದರೆ ಇಂದು ರಂಗಭೂಮಿ ಕೂಡ ಕಲೆಯನ್ನು ಮಾರುವ ಮಾರುಕಟ್ಟೆಯಂತಾಗಿದೆ. ರಂಗಭೂಮಿ ಮಾತ್ರವಲ್ಲ , ಇನ್ನಿತರ ಕಲಾ ಪ್ರಕಾರಗಳ ಸೃಜನಶೀಲ ಸಾಮರ್ಥ್ಯ ಪೂರ್ತಿ ಇಂದು ಪ್ರೇಕ್ಷಕರ ಭಾವನೆಗಳಿಗೆ ಕಚಗುಳಿ ಇಡುವುದರಲ್ಲಿಯೇ ಕಳೆದು ಹೋಗುತ್ತಿದೆ. ಭಾವನೆಗಳನ್ನು ದಾಟಿ ಆತ್ಮವನ್ನು ಮುಟ್ಟುವ , ಅದನ್ನು ವಿಕಸಿಸುವ ಕಲೆ ಈಗ ತೀರಾ ಅಪರೂಪ ಎಂದರೂ ತಪ್ಪಲ್ಲ. ಕಲಾವಿದನಿಗೂ ಹಾಗೂ ತಂತ್ರಜ್ಞನಿಗೂ ಇರುವ ವ್ಯತ್ಯಾಸವೇ ಅದು. ಪ್ರತಿಯೊಂದು ಕಲೆಯ ಉದ್ದೇಶ ವ್ಯಕ್ತಿಯ ಜೀವನದೃಷ್ಟಿಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು. ಆತನ ವ್ಯಕ್ತಿತ್ವವನ್ನು ಅರಳಿಸುವುದು. ಆದರೆ , ದುರದೃಷ್ಟವಶಾತ್ , ಅದೀಗ ಸಾಧ್ಯವಾಗುತ್ತಿಲ್ಲ. ಇಂದು ಮೂಢನಂಬಿಕೆಗಳನ್ನೇ ಬಿಕರಿಗಿಟ್ಟು ಲಾಭ ಗಳಿಸಿಕೊಳ್ಳುತ್ತಿರುವ ಸದ್ಯದ ಮಾಧ್ಯಮಗಳ ಮನಸ್ಥಿತಿಯನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ ? ಮನುಷ್ಯನ ವ್ಯಕ್ತಿತ್ವದಲ್ಲಿ ಅಂತರ್ಗತವಾಗಿರುವ ಅದಮ್ಯ ಕುತೂಹಲ ಹಾಗೂ ಭಯವನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಮಠ , ಚರ್ಚ್ಗಳ ಲಾಭಕೋರ ಮನಸ್ಥಿತಿಯನ್ನೇ ಇಂದಿನ ಮಾಧ್ಯಮಗಳೂ ಅಳವಡಿಸಿಕೊಳ್ಳುತ್ತಿವೆ. ಮನುಷ್ಯ ಯಾವುದಕ್ಕೆ ಹೆದರುತ್ತಾನೋ , ಯಾವುದರ ಕುರಿತು ಕುತೂಹಲ ತಾಳುತ್ತಾನೋ ಅವುಗಳನ್ನೇ ಪೂರೈಕೆ ಮಾಡಿ ಲಾಭ ಗಿಟ್ಟಿಸಿಕೊಳ್ಳುವುದು ಇಂದಿನ ಮಾಧ್ಯಮಗಳ ಕಾರ್ಯತಂತ್ರ. ಮನುಷ್ಯನ ಮನಸ್ಸನ್ನು ಎಲ್ಲಾ ಭಯಗಳಿಂದ ಮುಕ್ತ ಮಾಡಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆಗೆ ಹದಗೊಳಿಸಬೇಕಾದ ಮಾಧ್ಯಮ ಇಷ್ಟು ಕೀಳು ಮಟ್ಟಿಕ್ಕಿಳಿದಿರುವುದು ಯಾವ ರೀತಿಯಿಂದಲೂ ಮನುಷ್ಯನ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಲ್ಲ.
ಸೌಜನ್ಯ: ದ ಸಂಡೇ ಇಂಡಿಯನ್ |