ಭತ್ತದ ಬೆಳೆಯಿಂದ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರಿಗೆ ತರಬೇತಿ
ಬೆಳ್ತಂಗಡಿ, ಎ.28: ಭತ್ತದ ಬೆಳೆಯಿಂದ ಜನ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರಿಗೆ ಸೂಕ್ತ ಪ್ರೋತ್ಸಾಹ ಬೆಂಬಲ ನೀಡಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶ್ರೀ ಮಾದರಿಯಲ್ಲಿ ಭತ್ತ ಬೆಳೆಗೆ ಅಗತ್ಯ ತರಬೇತಿಗಳನ್ನು ಹಾಗೂ ಉಪಕರಣಗಳನ್ನು ನೀಡಿ ಬೇಸಾಯ ಕೈಗೊಳ್ಳುವಂತೆ ಮಾಡಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ವತಿಯಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ 20 ಸಾವಿರ ಎಕರೆ ಪ್ರದೇಶದಲ್ಲಿ ಈ ಬೇಸಾಯ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಈಗಾಗಲೇ 7,500 ರೈತರನ್ನು ಗುರುತಿಸಿ ತರಬೇತಿ ನೀಡಲಾಗಿದ್ದು, 10,000 ಎಕ್ರೆ ಪ್ರದೇಶದಲ್ಲಿ ಶ್ರೀ ಪದ್ಧತಿಯನ್ನು ಜಾರಿಗೆ ತರಲು ಸಿದ್ಧತೆಗಳು ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು. ಗ್ರಾಮಾಭಿವದ್ಧಿ ಯೋಜನೆಯು ಇದೀಗ ಒಂಬತ್ತು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 1,15,172 ಸ್ವ-ಸಹಾಯ ಸಂಘಗಳು ರಚನೆಯಾಗಿವೆ. 12,32,422 ಕುಟುಂಬಗಳು ಈ ಯೋಜನೆಯ ಭಾಗವಾಗಿದ್ದಾರೆ ಎಂದು ವಿವರಿಸಿದ ಹೆಗ್ಗಡೆ, ಈ ಗುಂಪುಗಳು ಕಳೆದ ಆರ್ಥಿಕ ವರ್ಷದಲ್ಲಿ 209 ಕೋ.ರೂ. ಉಳಿತಾಯ ಮಾಡಿದ್ದು, 579 ಕೋ.ರೂ. ಪ್ರಗತಿ ನಿಧಿಯನ್ನು ಪಡೆದುಕೊಂಡಿವೆ. ಸಾಲ ಮರುಪಾವತಿಯಲ್ಲಿಯೂ ಸಂಸ್ಥೆ ಶೇ.99 ಕ್ಕಿಂತ ಮೇಲಿನ ಸಾಧನೆಯನ್ನು ಮಾಡಿದೆ ಎಂದು ತಿಳಿಸಿದರು.
ಗ್ರಾಮಾಭಿವದ್ಧಿ ಯೋಜನೆ 52,900 ಮನೆಗಳ ನಿರ್ಮಾಣಕ್ಕೆ, 42,400 ಶೌಚಾಲಯಗಳ ನಿರ್ಮಾಣಕ್ಕೆ ಹಾಗೂ 2400 ಗೋಬರ್ ಗ್ಯಾಸ್ಗಳ ನಿರ್ಮಾಣಕ್ಕೆ ಸಾಲ ಸೌಲಭ್ಯ ಒದಗಿಸಿದೆ. ಕೃಷಿಕರಿಗಾಗಿ ಹಾಗೂ ಮಹಿಳೆಯರಿಗಾಗಿ ವಿವಿಧ ರೀತಿಯ ತರಬೇತಿಗಳನ್ನು ಆಯೋಜಿ ಸಲಾಗಿರುವುದಲ್ಲದೆ ಯೋಜನೆಯ ಸದಸ್ಯರ ಮಕ್ಕಳಿಗೆ ತಾಂತ್ರಿಕ ಶಿಕ್ಷಣಗಳಿ ಗಾಗಿ ರೂ. 2.43 ಕೋ.ರೂ. ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ ಎಂದವರು ವಿವರಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ:
ಜಾಗತಿಕ ಬ್ಯಾಂಕ್ನ ಮಿಕ್ಸ್ ಸಂಸ್ಥೆ ಸ್ವಯಂ ಸೇವಾ ಸಂಸ್ಥೆಗಳ ಸಮೀಕ್ಷೆಗಳನ್ನು ನಡೆಸಿ ನೀಡಿರುವ ವರದಿಯಲ್ಲಿ ಜಗತ್ತಿನ 1724 ಕಿರು ಆರ್ಥಿಕ ಸಂಸ್ಥೆಗಳ ಪೈಕಿ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಗೆ 39ನೆ ಸ್ಥಾನ ಲಭಿಸಿದೆ. ದೇಶದ ಸಂಸ್ಥೆಗಳ ಪೈಕಿ 5ನೆ ಸ್ಥಾನವನ್ನು ಪಡೆದಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯೋಜನೆಯ ಆಡಳಿತ ಮಂಡಳಿ ಸದಸ್ಯ ಆರ್.ವಿ. ಶಾಸ್ತ್ರಿ, ಸಿಂಡಿಕೇಟ್ ಬ್ಯಾಂಕ್ನ ಮಾಜಿ ಮಹಾ ಪ್ರಬಂಧಕ ಕೆ.ಎಂ. ಉಡುಪ, ಡಿ.ಸುರೇಂದ್ರ ಕುಮಾರ್, ಹೇಮಾವತಿ ಹೆಗ್ಗಡೆ, ಉದಯ ಕುಮಾರ್ ಶೆಟ್ಟಿ, ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್.ಮಂಜುನಾಥ್ ಉಪಸ್ಥಿತರಿದ್ದರು.