ಭಟ್ಕಳ, ಜನವರಿ ೧೯: ರಸ್ತೆ ಅಪಘಾತಗಳನ್ನು ಹತೋಟಿಯಲ್ಲಿಡುವಂತಾಗಲು ಮತ್ತು ಜನರನ್ನು ಅಪಘಾತಗಳಿಂದ ಉಳಿಯುವಂತಾಗಲು ಅವರಿಗೆ ಸಮರ್ಪಕ ಮಾಹಿತಿಯನ್ನು ಒದಗಿಸುವ ಕಾರ್ಯಕ್ರಮವು ಸೋಮವಾರ ನಗರ ಠಾಣೆಯ ಪೋಲಿಸರಿಂದ ಜರುಗಿತು.
ರಸ್ತೆ ಸುರಕ್ಷತೆಯನ್ನು ಕಾಪಾಡಿಕೊಂಡು ಬರುವ ಬಗೆ ನಗರದ ಎಲ್ಲಾ ಶಾಲೆಗಳ ಮುಖ್ಯಸ್ಥರ ಹಾಗೂ ಅಟೋ ಮತ್ತು ಟೆಂಪೂ ಚಾಲಕರ ಜಂಟಿ ಸಭೆಯನ್ನು ನಡೆಸಿದ ಭಟ್ಕಳ ಸಿ.ಪಿ.ಐ ಗುರು ಮತ್ತೂರು ಅವರು ಶಾಲೆಗಳಿಗೆ ಮಕ್ಕಳನ್ನು ತೆಗೆದುಕೊಂಡು ಹೋಗುವ ವಾಹನಗಳು ಬಹಳ ಎಚ್ಚರಿಕೆಯನ್ನು ವಹಿಸಬೇಕು ಎಂದರು. ಒಂದು ಆಟೋ ರಿಕ್ಷಾದಲ್ಲಿ ಕೇವಲ ಮೂವರು ವಿದ್ಯಾರ್ಥಿಗಳನ್ನು ಮಾತ್ರ ಹಾಕಬೇಕೆಂಬ ನಿಯಮವಿದೆ ಆದರೆ ಇಲ್ಲಿನ ಆಟೋ ಚಾಲಕರು ನಿಯಮವನ್ನು ಮೀರಿ ಹತ್ತಾರು ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಹೇರಿಕೊಂಡು ಹೋಗುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು ಇದರಿಂದಾ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುವುದರಿಂದ ಒಂದು ಆಟೋದಲ್ಲಿ ಕನಿಷ್ಟ ಆರು ವಿದ್ಯಾರ್ಥಿಗಳನ್ನು ಕೂಡಿಸಬಹುದಾಗಿದ್ದು ಅಷ್ಟನ್ನೆ ಮಾಡಿ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹಾಕು ಪ್ರಯಾಸವನ್ನು ಯಾವದೆ ಆಟೋ ಚಾಲಕನು ಮಾಡಕೂಡದು ಎಂದು ಎಚ್ಚರಿಕೆಯನ್ನು ನೀಡಿದರು. ಶಾಲೆಗಳಿಗೆ ಮಕ್ಕಳನ್ನು ಸಾಗಿಸುವ ಖಾಸಗಿ ಶಾಲೆಗಳು ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ವಾಹನದಲ್ಲಿ ಕೂಡಿಸುತ್ತಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅವರು ಸಹ ಹೆಚ್ಚೆಚ್ಚು ಮಕ್ಕಳನ್ನು ಟೆಂಪೋಗಳಲ್ಲಿ ತುಂಬದೆ ಮಕ್ಕಳಿಗೆ ಉಸಿರಾಡಲು ಗಾಳಿ ಬೆಳಕು ಬರುವ ಹಾಗೆ ಹಾಗೂ ಅವರಿಗೆ ಕುಳಿತುಕೊಳ್ಳುವ ವ್ಯವಸ್ಥೆಯಿರುವಂತೆ ನೋಡಿಕೊಳ್ಳಿ ಎಂದು ಶಾಲೆಯ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.