ಬೆಂಗಳೂರು,ಜನವರಿ 30: ರೇಷ್ಮೆ ಬೆಳೆಗಾರರಿಗೆ ಹವಾಮಾನದ ಪರಿಸ್ಥಿತಿ,ಮಾರುಕಟ್ಟೆಯ ವಿವರ ನೀಡುವುದೂ ಸೇರಿದಂತೆ ಹಲವು ಬಗೆಯ ಮಾಹಿತಿಗಳನ್ನು ಮೊಬೈಲ್ ಮೂಲಕ ಒದಗಿಸುವ ಕಾರ್ಯಕ್ಕೆ ಇಂದಿಲ್ಲಿ ಚಾಲನೆ ನೀಡಲಾಗಿದ್ದು ಮೈಸೂರು ಜಿಲ್ಲೆಯ ರೈತರು ಪ್ರಪ್ರಥಮವಾಗಿ ಈ ಸೇವೆಯ ಪ್ರಯೋಜನ ಪಡೆಯತೊಡಗಿದ್ದಾರೆ.
ಥಾಮ್‌ಸನ್ ರಾಯಟರ್ಸ್ ಸಂಸ್ಥೆ ಈ ಸೇವೆಯನ್ನು ರಾಜ್ಯದಲ್ಲಿ ಆರಂಭಿಸಿದ್ದು ರೇಷ್ಮೆ ಸಚಿವ ವೆಂಕಟರಮಣಪ್ಪ ಇಂದಿಲ್ಲಿ ಇದಕ್ಕೆ ಚಾಲನೆ
ನೀಡಿದರು.
ಥಾಮ್‌ಸನ್ ರಾಯಟರ್ಸ್ ಸಂಸ್ತೆಯ ಅಂಗವಾದ ರಾಯಟರ್ಸ್ ಮಾರ್ಕೆಟ್ ಲೈಟ್ ಭಾರತದಲ್ಲಿ ಕೃಷಿ ಸಂಬಂಧಿತ ಮಾಹಿತಿಯನ್ನು ಒದಗಿಸುತ್ತಿದ್ದು ಆ ಮೂಲಕ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ತಮ್ಮ ಹಿತ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ವಿವರಿಸಿದರು.
ಪ್ರಾರಂಭಿಕವಾಗಿ ಮೈಸೂರು ಜಿಲ್ಲೆಯ ಅರವತ್ತೆಂಟು ರೈತರು ವಾರ್ಷಿಕ ೬೦೦ ರೂಗಳನ್ನು ಪಾವತಿಸಿ ಈ ಸೇವೆಯನ್ನು ಪಡೆಯತೊಡಗಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಈ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.
ಆಯಾ ತಾಲ್ಲೂಕುಗಳಲ್ಲಿ ಇರುವ ಹವಾಮಾನದ ಪರಿಸ್ಥಿತಿ,ಮಾರುಕಟ್ಟೆಯ ಮಾಹಿತಿ,ರೇಷ್ಮೆ ಕೃಷಿಗೆ ಸಂಬಂಧಿಸಿದ ಎಲ್ಲಾ ಸುದ್ಧಿ ಸೇರಿದಂತೆ ಹಲವು ಬಗೆಯ ಮಾಹಿತಿಗಳನ್ನು ರೈತರು ಈ ಸೇವೆಯ ಮೂಲಕ ಪಡೆದುಕೊಳ್ಳಲಿದ್ದಾರೆ.
ಇದರ ಅನುಕೂಲವನ್ನು ಪಡೆದು ರೈತರು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ ಎಂದ ಅವರು,ದೇಶದಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ರೈತರು ಈ ಸೌಲಭ್ಯ ಪಡೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಕೈಗಾರಿಕಾ ನಿವೇಶನ
ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಪ್ರತೀ ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ನಿವೇಶನಗಳನ್ನು ನಿರ್ಮಿಸಲಾಗುತ್ತಿದ್ದು ಇದಕ್ಕಾಗಿ ಪ್ರತೀ ಜಿಲ್ಲೆಯಲ್ಲಿ ಮುನ್ನೂರು ಎಕರೆ ಭೂಮಿಯನ್ನ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಪ್ರಮಾಣದ ಭೂಮಿಯಿಂದ ೨೪೪೫೦ ಕೈಗಾರಿಕಾ ನಿವೇಶನಗಳನ್ನು ನಿರ್ಮಿಸಲಾಗುವುದು ಎಂದ ಅವರು,ಬೃಹತ್ ಕೈಗಾರಿಕೆಗಳಿಗೆ ನೀಡುವ ಆದ್ಯತೆಗಿಂತ ಹೆಚ್ಚಾಗಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ತಮ್ಮ ಅನಿಸಿಕೆ ಎಂದು ವಿವರಿಸಿದರು.