ಬೆಂಗಳೂರು, ಜ.೨೧: ಮಹತ್ವದ ಬೆಳವಣಿಗೆಯಲ್ಲಿ ವಿಧಾನಪರಿಷತ್ನ ಜೆಡಿಎಸ್ ಸದಸ್ಯರಾದ ಎಲ್.ತಿಪ್ಪಣ್ಣ ಹಾಗೂ ಬಿ.ಆರ್.ಗುರುದೇವ್ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ವಿಧಾನ ಪರಿಷತ್ನ ಪ್ರತಿಪಕ್ಷದ ನಾಯಕತ್ವ ವಹಿಸಿಕೊಳ್ಳುವ ಹವಣಿಕೆಯಲ್ಲಿದ್ದ ಜೆಡಿಎಸ್ಗೆ ಹಿನ್ನೆಡೆಯಾಗಿದೆ.
ಈ ಇಬ್ಬರು ಸದಸ್ಯರು ವಿಧಾನಪರಿಷತ್ ಸಭಾಪತಿ ರಣ್ಣ ಮತ್ತೀಕಟ್ಟಿರನ್ನು ಗುರುವಾರ ಭೇಟಿ ಮಾಡಿ, ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ರಾಜಕೀಯ ಬೆಳವಣಿಯಿಂದ ಕಾಂಗ್ರೆಸ್ಗೆ ಲಾಭವಾಗಿದ್ದು, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕಾಂಗ್ರೆಸ್ ಮೋಟಮ್ಮ ಮುಂದುವರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಧಾನಪರಿಷತ್ ಸದಸ್ಯ ಸ್ಥಾನದಿಂದ ಬುಧವಾರ ಕಾಂಗ್ರೆಸ್ನ ಮಲ್ಲಾಜಮ್ಮ, ಚಂದ್ರಶೇಖರ ಕಂಬಾರ ಹಾಗೂ ಪ್ರಕಾಶ್ ರಾಥೋಡ್ ನಿವೃತ್ತಿ ಹೊಂದಿದ್ದರು. ಇದರಿಂದ ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯಾಬಲ ೧೭ ಆಗಿದ್ದು, ಜೆಡಿಎಸ್ಗಿಂತ ಒಂದು ಕಡಿಮೆಯಾಗುತ್ತಿತ್ತು. ಇದರಿಂದ ವಿರೋಧ ಪಕ್ಷದ ನಾಯಕ ಸ್ಥಾನ ಕಾಂಗ್ರೆಸ್ನಿಂದ ಜೆಡಿಎಸ್ನ ಪಾಲಾಗುತ್ತಿತ್ತು. ದಿಡೀರ್ ಬೆಳವಣಿಗೆಯಲ್ಲಿ ಇಬ್ಬರ ರಾಜೀನಾಮೆಯಿಂದ ಜೆಡಿಎಸ್ ಸಂಖ್ಯಾಬಲ ೧೯ರಿಂದ ೧೭ಕ್ಕೆ ಕುಸಿದಿದೆ. ವಿರೋಧ ಪಕ್ಷದ ನಾಯಕ ಸ್ಥಾನ ಅಲಂಕರಿಸುವ ಕನಸು ಮರೀಚಿಕೆಯಾಗಿದೆ.
ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ. ಇದು ಬಿಜೆಪಿಯ ಮುಂದುವರಿಗೆ ಆಪರೆಷನ್ ಕಮಲದ ನಾಲ್ಕನೆ ಹಂತ ಎಂದು ಹೇಳಲಾಗುತ್ತಿದೆ. ಆದರೆ, ಈ ಆರೋಪವನ್ನು ಬಿಜೆಪಿ ಸರಾಸಗಟ್ಟಾಗಿ ತಳ್ಳಿ ಹಾಕಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಜೆಡಿಎಸ್ನ ವಿಧಾನ ಪರಿಷತ್ ಸದಸ್ಯರ ರಾಜೀನಾಮೆಯಿಂದ ಬಿಜೆಪಿಗೆ ಲಾಭವೂ ಇಲ್ಲ ನಷ್ಟವೂ ಇಲ್ಲ. ಇದರಿಂದಾಗಿ ರಾಜೀನಾಮೆಯ ಹಿಂದೆ ಬಿಜೆಪಿ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೇವೇಗೌಡ ಮತ್ತು ಅವರ ಮಕ್ಕಳ ಸರ್ವಾಧಿಕಾರ ಧೋರಣೆಯಿಂದ ಜೆಡಿಎಸ್ನಲ್ಲಿನ ಬಹಳಷ್ಟು ನಾಯಕರು ಅಸಮಾಧಾನಗೊಂಡಿದ್ದು, ವೈ.ಎಸ್.ವಿ.ದತ್ತ ಯಾವಾಗ ರಾಜೀನಾಮೆ ನೀಡುತ್ತಾರೆ ಎಂದು ಕಾದು ನೋಡಬೇಕಿಗೆ ಎಂದು ಬಿಜೆಪಿ ವಕ್ತಾರ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.
ಬಿಜೆಪಿ-ಕಾಂಗ್ರೆಸ್ ಹುನ್ನಾರ: ಬಿಜೆಪಿ ಹಾಗೂ ಕಾಂಗ್ರೆಸ್ನ ಕುತಂತ್ರದಿಂದ ಪಕ್ಷದ ವಿಧಾನಪರಿಷತ್ ಸದಸ್ಯರಾದ ಗುರುದೇವ್ ಹಾಗೂ ತಿಪ್ಪಣ್ಣರ ರಾಜಿನಾಮೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ. ಇದರಲ್ಲಿ ಕಾಂಗ್ರೆಸ್ ನಾಯಕರು ಕೈಜೋಡಿಸಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ವಿಧಾನಪರಿಷತ್ ವಿರೋಧ ಪಕ್ಷದ ಸ್ಥಾನ ಜೆಡಿಎಸ್ ಪಾಲಾಗಬಾರದು ಎಂಬ ಕಾರಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಮ್ಮ ಪಕ್ಷದ ಇಬ್ಬರು ಸದಸ್ಯರು ರಾಜೀನಾಮೆ ನೀಡುವಂತೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿರು. ಅಲ್ಲದೆ ಇವರಿಬ್ಬರು ಕಳೆದ ಒಂದು ವರ್ಷದಿಂದ ಪಕ್ಷದ ಸಕ್ರಿಯ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಇವರಿಬ್ಬರ ರಾಜೀನಾಮೆಯಿಂದ ಪಕ್ಷದ ಮೇಲೆ ಯಾವುದೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಸದನದಲ್ಲಿ ಸಂಖ್ಯಾಬಲವಿಲ್ಲದಿದ್ದರೂ ಜೆಡಿಎಸ್ ಅಧಿಕೃತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ. ಜನರ ಮನಸ್ಸಿನಲ್ಲಿಯೂ ಜೆಡಿಎಸ್ ಪಕ್ಷವೇ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತೀಚೆಗೆ ಬಿಬಿಎಂಪಿಯಲ್ಲಿ ರಾತ್ರೋ ರಾತ್ರಿ ನಡೆದ ಟೆಂಡರ್ ಪ್ರಕ್ರಿಯೆಗಳನ್ನು ಜೆಡಿಎಸ್ ವಿರೋಧಿಸಿದ ರೀತಿ ಎಂದು ಕುಮಾರ ಸ್ವಾಮಿ ಹೇಳಿದ್ದಾರೆ.
ವಿಧಾನ ಪರಿಷತ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಜೆಡಿಎಸ್ನ ಮಾಜಿ ಅಧ್ಯಕ್ಷ ತಿಪ್ಪಣ್ಣ ದೇವೇಗೌಡರ ವಿರುದ್ಧ ಕಿಡಿಕಾರಿದ್ದಾರೆ.
ದೇವೇಗೌಡ ಮತ್ತು ಅವರ ಮಕ್ಕಳು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ಹೇಳಿಕೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬರನ್ನು ಕೇಂದ್ರಿಕೃತವಾಗಿರುವುದಿಲ್ಲ. ಈಡೀ ಸಮುದಾಯಕ್ಕೆ ನೋವಾಗುವಂತಿರುತ್ತವೆ ಎಂದಿದ್ದಾರೆ.
ದೇವೇಗೌಡ ಮತ್ತು ಅವರ ಮಕ್ಕಳು ಎಲ್ಲ ನಾಯಕರನ್ನು ನಾಯಿಗಳಂತೆ ನೋಡುತ್ತಾರೆ. ಈ ವರ್ತನೆ ಸಹಿಸಲು ಸಾಧ್ಯವಿಲ್ಲ ಅದಕ್ಕಾಗಿ ಜೆಡಿಎಸ್ ತ್ಯಜಿಸುತ್ತಿದ್ದೇನೆ. ತಾವು ರಾಜ್ಯಾದ್ಯಕ್ಷರಾಗಿದ್ದಾಗ ತಮ್ಮನ್ನು ಒಂದು ಮಾತು ಕೇಳದೆ ದೇವೇಗೌಡರು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಜೊತೆಗೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೆ ವಚನ ಭ್ರಷ್ಟರಾಗಿದ್ದು ತಮಗೆ ನೋವು ತಂದಿತ್ತು ಎಂದು ಅವರು ಹೇಳಿದರು.
ಇನ್ನೊಬ್ಬ ಸದಸ್ಯ ಗುರುದೇವ್ ಕೂಡ ದೇವೇಗೌಡ ಮತ್ತು ರೇವಣ್ಣನವರ ವಿರುದ್ಧ ಕಿಡಿಕಾರಿದ್ದಾರೆ. ಸ್ಥಳೀಯ ರಾಜಕೀಯ ಕಿರುಕುಳವನ್ನು ದೇವೇಗೌಡರ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಇದನ್ನು ವಿರೋಧಿಸಿ ಎರಡು ವರ್ಷಗಳ ಹಿಂದೆಯೇ ತಾವು ಜೆಡಿಎಸ್ ತೊರೆದು ಅಧಿಕೃತವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾಗಿ ಹೇಳಿದರು. ತಮ್ಮನ್ನು ಪಕ್ಷದಿಂದ ಉಚ್ಛಾಟಿಸುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ, ಹಾಗೇನು ಆಗಲಿಲ್ಲ ಎಂದು ಅವರು ಹೇಳಿದರು.
ರಾಜೀನಾಮೆ ನೀಡಿದ ಸದಸ್ಯರಿಬ್ಬರು ಜೆಡಿಎಸ್ನಲ್ಲಿದ್ದರೂ, ಪಕ್ಷದದಿಂದ ಮಾನಸಿಕವಾಗಿ ದೂರವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಆದರೆ ಇವರಿಬ್ಬರೂ ಕಾಂಗ್ರೆಸ್ ಅಥವಾ ಬಿಜೆಪಿಯಲ್ಲಿ ಯಾವ ಪಕ್ಷಕ್ಕೆ ಸೇರುವರು ಎಂಬ ಪ್ರಶ್ನೆಗೆ ಅಧಿಕೃತ ಉತ್ತರ ಇನ್ನು ಬಹಿರಂಗಗೊಂಡಿಲ್ಲ.
ಬಿ.ಆರ್.ಗುರುದೇವ್ರ ಸದಸ್ಯತ್ವ ಅವಧಿ ಈ ವರ್ಷದ ಜೂನ್ ೧೪ರಂದು ಮುಗಿಯಲಿದೆ. ಅದಕ್ಕೂ ಮೊದಲೆ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಿಪ್ಪಣ್ಣ ೨೦೧೨ರ ಮೇ ತಿಂಗಳ ೨೦ರಂದು ನಿವೃತ್ತರಾಗಲಿದ್ದರು. ಈ ಮಧ್ಯೆ ಮಗತ್ವದ ಬೆಳವಣಿಗೆಯಲ್ಲಿ ತಿಪ್ಪಣ್ಣ ಇಂದು ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಇವರ ರಾಜೀನಾಮೆ ತಕ್ಷಣದಿಂದಲೆ ಜಾರಿಗೆ ಬರುವಂತೆ ಅಂUಕರಿಸಲಾಗಿದೆ ಎಂದು ಸಭಾಪತಿ ರಣ್ಣ ಮತ್ತೀಕಟ್ಟಿ ಸ್ಪಷ್ಟಪಡಿಸಿದ್ದಾರೆ.
ಕುಸಿದ ಬಲ: ವಿಧಾನ ಪರಿಷತ್ನ 75 ಸ್ಥಾನಗಳ ಪೈಕಿ ಆಡಳಿತಾರೂಢ ಬಿಜೆಪಿ 33 ಸದಸ್ಯರನ್ನು ಹೊಂದಿದೆ. ಜೆಡಿಎಸ್ 17 ಸದಸ್ಯರನ್ನು ಹೊಂದಿತ್ತು. ಕಾಂಗ್ರೆಸ್ನ ಸಂಖ್ಯಾಬಲ 16ಕ್ಕೆ ತಗ್ಗಿದ ಹಿನ್ನೆಲೆಯಲ್ಲಿ ಮೋಟಮ್ಮ ಅವರು ಹತ್ತೇ ದಿನಗಳಲ್ಲಿ ವಿರೋಧ ಪಕ್ಷದ ನಾಯಕಿ ಸ್ಥಾನವನ್ನು ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಕಾಂಗ್ರೆಸ್ಗಿಂತಲೂ ಒಂದು ಹೆಚ್ಚಿನ ಸ್ಥಾನವನ್ನು ಹೊಂದಿದ್ದ ಜೆಡಿಎಸ್, ಪ್ರತಿಪಕ್ಷ ನಾಯಕನ ಸ್ಥಾನ ಪಡೆಯಲು ಗುರುವಾರವೇ ಹಕ್ಕು ಮಂಡಿಸಲು ಸಿದ್ಧತೆ ನಡೆಸಿತ್ತು. ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಿಜೆಪಿ, ಇಬ್ಬರು ಸದಸ್ಯರನ್ನು ರಾಜೀನಾಮೆಗೆ ಒಪ್ಪಿಸುವಲ್ಲಿ ಯಶಸ್ವಿಯಾಗುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರಿಗೆ ತಿರುಗೇಟು ನೀಡಿದೆ.
ಹಿರಿಯ ಸದಸ್ಯ ಎಂ.ಸಿ.ನಾಣಯ್ಯ ವಿರೋಧ ಪಕ್ಷದ ನಾಯಕನ ಹುದ್ದೆ ಪಡೆದರೆ ಪರಿಷತ್ನಲ್ಲಿ ಸರ್ಕಾರ ಪದೇ ಪದೇ ಪೇಚಿಗೆ ಸಿಲುಕಬಹುದು ಎಂಬ ಆತಂಕವೂ ಈ ಕಾರ್ಯಾಚರಣೆ ಹಿಂದೆ ಕೆಲಸ ಮಾಡಿದೆ ಎಂಬ ಮಾತು ಕೇಳಿಬಂದಿದೆ.
ನಾಣಯ್ಯ ಅವರು ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಸಂದರ್ಭದಲ್ಲೇ, ಅವರ ಉಮೇದುವಾರಿಕೆಯನ್ನು ಬಿಜೆಪಿ ಪ್ರಶ್ನಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು.
‘ನಾಯಿಗಳಂತೆ ನೋಡುತ್ತಾರೆ’: ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ತಿಪ್ಪಣ್ಣ ಅವರು, ‘ದೇವೇಗೌಡ ಮತ್ತು ಅವರ ಮಕ್ಕಳ ವರ್ತನೆಯಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದೇನೆ. ಅವರು ಪಕ್ಷದ ಎಲ್ಲ ಮುಖಂಡರನ್ನೂ ಸಾಕಿದ ನಾಯಿಗಳಂತೆ ನೋಡುತ್ತಾರೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ’ ಎಂದು ಹರಿಹಾಯ್ದರು.
‘ನಾನು ಜೆಡಿಎಸ್ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನನ್ನನ್ನು ಕೇಳದೇ ಅವರೇ ಎಲ್ಲ ನಿರ್ಣಯಗಳನ್ನೂ ಕೈಗೊಳ್ಳುತ್ತಿದ್ದರು. ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೇ ವಚನ ಭ್ರಷ್ಟರಾಗಿದ್ದು ಕೂಡ ನೋವು ತಂದಿತ್ತು. ಸದ್ಯಕ್ಕೆ ಬಿಜೆಪಿ ಸೇರುವ ಬಗ್ಗೆ ನಿರ್ಧರಿಸಿಲ್ಲ. ಮುಂದೆ ಏನಾಗುವುದೋ ನೋಡುತ್ತೇನೆ’ ಎಂದು ಉತ್ತರಿಸಿದರು.
ಪೂರ್ವಯೋಜಿತ ಸಂಚು: ತಮ್ಮ ಪಕ್ಷದ ಸದಸ್ಯರ ರಾಜೀನಾಮೆ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ, ‘ಬಿಜೆಪಿಗೆ ಕಾಂಗ್ರೆಸ್ಗಿಂತ ಜೆಡಿಎಸ್ ಬಗ್ಗೆ ಹೆಚ್ಚು ಭಯವಿದೆ. ಆದ್ದರಿಂದ ನಮ್ಮ ಪಕ್ಷ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆಯುವುದನ್ನು ತಪ್ಪಿಸಲು ಇಬ್ಬರು ಶಾಸಕರು ರಾಜೀನಾಮೆ ಸಲ್ಲಿಸುವಂತೆ ಪೂರ್ವಯೋಜಿತ ಸಂಚು ನಡೆಸಿದೆ’ ಎಂದು ಆರೋಪಿಸಿದರು.
ಹಸ್ತಕ್ಷೇಪ ಇಲ್ಲ: ಜೆಡಿಎಸ್ನ ಇಬ್ಬರು ಸದಸ್ಯರು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಗುರುದೇವ್ ಮತ್ತು ತಿಪ್ಪಣ್ಣ ಅವರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ ಇಲ್ಲ ರಾಜೀನಾಮೆ ಅವರ ವೈಯಕ್ತಿಕ ವಿಚಾರ. ಜೆಡಿಎಸ್ನಿಂದ ಬೇಸತ್ತು ಆ ಸದಸ್ಯರು ರಾಜೀನಾಮೆ ನೀಡಿರಬಹುದು’ ಎಂದರು