ಭಟ್ಕಳ, ಜನವರಿ 20: ಇತಿಹಾಸ ಪ್ರಸಿದ್ದ ಮ್ಹಾತೋಬಾರ ಶ್ರೀ ಮುರುಡೇಶ್ವರ ದೇವರ ಮಹಾರಥೋತ್ಸವ ನಿನ್ನೆ ಸಂಜೆ ಅದ್ಧೂರಿಯಿಂದ ಶಾಂತಿಯುತವಾಗಿ ನೆರವೇರಿತು.

ಮಕರ ಸಂಕ್ರಮಣದ ದಿನದಿಂದ ರಥೋತ್ಸವದ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಮಹಾರಥೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ನಿನ್ನೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರ,ಹೋಮ ಹವನಗಳು ಜರುಗಿದವು. ಸಂಜೆ ೫.೧೫ಕ್ಕೆ ಗಂಟೆಗೆ ಆರಂಭಗೊಂಡ ಮಹಾರಥೋತ್ಸವದಲ್ಲಿ ಸ್ಥಳೀಯ ಹಾಗೂ ಪ್ರವಾಸಿಗರೂ ಸೇರಿದಂತೆ ಸಾವಿರಾರರು ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಅಡಿಗಳ್ ಹಾಗೂ ಜೈರಾಮ ಅಡಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಾರಥೋತ್ಸವದ ಹಿಂದಿನ ದಿನ ನಡೆ ಸ್ವರ್ಣಾಲಂಕೃತ ರಥ ಪುಷ್ಪ ರಥೋತ್ಸವದಲ್ಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಮಹಾರಥೋತ್ಸವ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಆರ್ ಎನ್ ಶೆಟ್ಟಿ, ಟ್ರಸ್ಟಿ ಶ್ರೀಪಾದ ಕಾಮತ್, ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಆನಂದ ಶೆಟ್ಟಿ, ಗ್ರಾ.ಪಂ ಉಪಾಧ್ಯಕ್ಷ ದೇವಿದಾಸ ಗುಡಿಗಾರ,ಗ್ರಾಪಂ ಪಂಚಾಯತ್ ಸದಸ್ಯರು,ಊರಿನ ಗಣ್ಯರು ಪಾಲ್ಗೊಂಡಿದ್ದರು. ಸಿ ಪಿ ಐ ಗುರುಮಾಥೂರು ನೇತೃತ್ವದಲ್ಲಿ ಮುರ್ಡೇಶ್ವರ ಎಸೈ ಎಚ್ ಸುಂದರೇಶ ಮತ್ತು ಸಿಬ್ಬಂದಿಗಳು ಸೂಕ್ತ ಬಂದೋಬಸ್ತ ಏರ್ಪಡಿಸಿದ್ದರು. ಇಂದೂ ಸಹ ಜಾತ್ರಾ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜಾ ಪುನಸ್ಕಾರಗಳು ಜರುಗಲಿದೆ. ನಾಳೆ ಚೂರ್ಣೊತ್ಸವ, ಅವಭೃಥ ಸ್ನಾನ,ಧ್ವಜಾರೋಹಣ, ಅಂಕುರಾರೋಪಣ ನಡೆಯಲಿದ್ದು, ರಥೋತ್ಸವದ ಧಾರ್ಮಿಕ ವಿಧಾನಗಳು ಸಂಪನ್ನಗೊಳ್ಳಲಿವೆ.