ಬೆಂಗಳೂರು,ಜನವರಿ 30: ರಾಜ್ಯದ ಒಟ್ಟು ಕುಟುಂಬಗಳ ಸಂಖ್ಯೆ 1.24 ಕೋಟಿ, ಆದರೆ ವಿತರಿಸಲಾಗಿರುವ ಪಡಿತರ ಕಾರ್ಡ್‌ಗಳ ಸಂಖ್ಯೆ ಮಾತ್ರ 1.80 ಕೋಟಿ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸರಿ ಸುಮಾರು ೫೦ ಲಕ್ಷ ಪಡಿತರ ಚೀಟಿಗಳು ಹೆಚ್ಚಾಗಿವೆ.
ಹೆಚ್ಚಾಗಿರುವ ಪಡಿತರ ಕಾರ್ಡ್‌ಗಳಲ್ಲಿ ಬಹುತೇಕ ಬೋಗಸ್ ಕಾರ್ಡ್‌ಗಳಾಗಿವೆ. ಇದನ್ನು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಎಚ್. ಹಾಲಪ್ಪ ಅವರೇ ಒಪ್ಪಿಕೊಳ್ಳುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ಬಿಪಿಎಲ್ ಪಡಿತರ ವಲಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಕಾರ್ಡ್‌ಗಳಿವೆ.
ಕಳೆದ 2005 ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ರಾಜ್ಯದಲ್ಲಿ 1.24 ಕುಟುಂಬಗಳಿವೆ. ಕಳೆದ ಐದು ವರ್ಷಗಳಲ್ಲಿ ಹೆಚ್ಚಂದರೆ ಹದಿನ್ಶೆದರಿಂದ ಇಪ್ಪತ್ತು ಲಕ್ಷ ಕುಟುಂಬಗಳು ಹೆಚ್ಚಾದರೂ ಕೂಡ ಸುಮಾರು 30 ಲಕ್ಷ ಬೋಗಸ್ ಕಾರ್ಡ್‌ಗಳು ಕಂಡು ಬರುತ್ತವೆ.
ಇದರಲ್ಲಿ ಈಗಾಗಲೇ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸುವ ಪ್ರಕ್ರಿಯೆಯನ್ನು ಕಳೆದ ಮೂರು ತಿಂಗಳಿಂದ ನಿರಂತರವಾಗಿ ನಡೆಸಿದ ಪರಿಣಾಮ ಅನರ್ಹರಿಗೆ ನೀಡಲಾಗಿದ್ದ ೮,೪೫,೬೭೧ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಇಷ್ಟಾದರೂ ಪ್ರಸ್ತುತ ರಾಜ್ಯದಲ್ಲಿ ೧,೬,೬೮,೫೯೪ ಬಿಪಿಎಲ್ ಕಾರ್ಡ್‌ಗಳಿವೆ. ಎಪಿಎಲ್ ಕಾರ್ಡ್‌ಗಳ ಸಂಖ್ಯೆ ೫೨,೯೭,೭೭೨. ಅಂತ್ಯೋದಯ ಕಾರ್ಡ್‌ಗಳನ್ನು ಸೇರಿಸಿದರೆ ಕಾರ್ಡ್‌ಗಳ ಸಂಖ್ಯೆ ಸುಮಾರು 1.80 ಲಕ್ಷ ಆಗುತ್ತದೆ.
ನಕಲಿ ಪಡಿತರ ಚೀಟಿ ರದ್ದುಪಡಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಸರ್ಕಾರದ ಕಾರ್ಯಾಚರಣೆಗೆ ಹಲವೆಡೆ ವಿರೋಧ ಕೂಡ ಕಂಡು ಬಂದಿದೆ. ಆದರೂ ಅರ್ಹರಲ್ಲಿ ಮಾತ್ರ ಪಡಿತರ ಚೀಟಿ ಇರಬೇಕು ಎಂಬುದು ಸರ್ಕಾರದ ನಿಲುವಾಗಿದೆ ಎಂದು ಹಾಲಪ್ಪ ತಿಳಿಸುತ್ತಾರೆ.
ನಕಲಿ ಪಡಿತರ ಚೀಟಿಯನ್ನು ಪತ್ತೆ ಹಚ್ಚುವ ಉದ್ದೇಶದಿಂದ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಪಟ್ಟಿಯನ್ನು ನಾಮಫಲಕದಲ್ಲಿ ಪ್ರಕಟಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ. ಎಲ್ಲಿ ಸರ್ಕಾರದ ನಿರ್ದೇಶನವನ್ನು ಉಲ್ಲಂಘಿಸುತ್ತಾರೆ ಅಂತಹ ಕಡೆಗಳಲ್ಲಿ ಕ್ರಮ ತೆಗೆದುಕೊಳ್ಳುವಂತೆಯೂ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇದಲ್ಲದೇ ಬಿಪಿಎಲ್ ಪಡಿತರ ಚೀಟಿದಾರರಿಗೆ ನೇರವಾಗಿ ಆಹಾರ ಧಾನ್ಯ ವಿತರಿಸುವ ನೂತನ ವ್ಯವಸ್ಧೆಯನ್ನು ಕೂಡ ಸರ್ಕಾರ ಜಾರಿಗೆ ತಂದಿದೆ. ಆನ್ ಲೈನ್ ಮೂಲಕ ಆಹಾರ ಧಾನ್ಯ ಎತ್ತುವಳಿ ಮಾಡುತ್ತಿರುವ ನೂತನ ವ್ಯವಸ್ಧೆ ಉತ್ತಮವಾಗಿ ನಡೆಯುತ್ತಿದೆ.
ಇದಾದ ನಂತರ ನಕಲಿ ಪಡಿತರ ಚೀಟಿಗಳು ಪತ್ತೆಯಾಗುತ್ತಿವೆ. ಇದೇನು ನಮ್ಮ ಸರ್ಕಾರದಲ್ಲಿಯೇ ಉಂಟಾದ ಸಮಸ್ಯೆಯಲ್ಲ. ಕಳೆದ ಹಲವಾರು ವರ್ಷಗಳಿಂದ ಇದು ನಡೆಯುತ್ತಾ ಬಂದಿದೆ. ಆದರೂ ನಮ್ಮ ಸರ್ಕಾರ ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡುತ್ತಿದೆ.
ನಕಲಿ ಪಡಿತರ ಚೀಟಿ ರದ್ದುಪಡಿಸಲು ಸರ್ಕಾರ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ. ಇದು ನಿರಂತರ ಪ್ರಕ್ರಿಯೆ. ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಬಿಪಿಎಲ್ ಪಡಿತರದಾರರು ಕಡ್ಡಾಯವಾಗಿ ಆಹಾರ ಧಾನ್ಯ ಪಡೆಯಬೇಕು. ಆಹಾರ ಧಾನ್ಯ ಕೊಡಲು ನಿರಾಕರಿಸಿದರೆ ರಾಜ್ಯ ಸರ್ಕಾರ ಸ್ಧಾಪಿಸಿರುವ ನಿಯಂತ್ರಣ ಕೊಠಡಿಗೆ [ ದೂ: ೧೮೦೦೪೨೫೯೩೩೯ ] ಕರೆ ಮಾಡಿ ದೂರು ನೀಡಬೇಕೆಂದು ಹಾಲಪ್ಪ ಮನವಿ ಮಾಡಿದ್ದಾರೆ.
ಪಡಿತರ ಅವ್ಯವಸ್ಧೆ ಕುರಿತು ಮಾತನಾಡಲು ಹಿಂಜರಿಯುವ ಹಾಲಪ್ಪ, ಒಲ್ಲದ ಮನಸ್ಸಿನಿಂದಲೇ ಅಲ್ಪ ಸ್ವಲ್ಪ ಮಾಹಿತಿಯನ್ನು ಹಂಚಿಕೊಂಡರಾದರೂ, ಹೆಚ್ಚಿನ ವಿವರಗಳನ್ನು ನೀಡಲು ಸ್ಪಷ್ಟವಾಗಿ ನಿರಾಕರಿಸಿದರು.