ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಇಂದಿನಿಂದ ಬಿಜೆಪಿ ಸಾರಥ್ಯ ವಹಿಸಲಿರುವ ಕೆ.ಎಸ್. ಈಶ್ವರಪ್ಪ - ಹಲವು ಲೆಕ್ಕಾಚಾರ ಚರ್ಚೆಗೆ ಗ್ರಾಸ

ಬೆಂಗಳೂರು: ಇಂದಿನಿಂದ ಬಿಜೆಪಿ ಸಾರಥ್ಯ ವಹಿಸಲಿರುವ ಕೆ.ಎಸ್. ಈಶ್ವರಪ್ಪ - ಹಲವು ಲೆಕ್ಕಾಚಾರ ಚರ್ಚೆಗೆ ಗ್ರಾಸ

Sat, 30 Jan 2010 03:23:00  Office Staff   S.O. News Service

ಬೆಂಗಳೂರು, ಜನವರಿ 30: ಸರ್ಕಾರ ಹಾಗೂ ಪಕ್ಷಧ ವರ್ಚಸ್ಸು ದಿನೇ ದಿನೇ ಕುಸಿಯುತ್ತಿರುವ ಸಂದರ್ಭದಲ್ಲಿ ರಾಜ್ಯ ಬಿಜೆಪಿಗೆ ಕೆ.ಎಸ್. ಈಶ್ವರಪ್ಪ ನೂತನ ಸಾರಥಿಯಾಗಿರುವುದು ಹಲವು ಲೆಕ್ಕಾಚಾರ, ಚರ್ಚೆಗೆ ಹಾದಿಮಾಡಿಕೊಟ್ಟಿದೆ.

 

 

ಈಶ್ವರಪ್ಪ ಇಂದು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದು, ನೆಮ್ಮದಿ ಇಲ್ಲದೇ ಒಡೆದ ಮನೆಯಂತಾಗಿರುವ ಬಿಜೆಪಿ ಕಾಯಕಲ್ಪ ಕಲ್ಪಿಸುವ ಮಹತ್ತರ ಜವಾಬ್ದಾರಿ, ಸವಾಲುಗಳು ಅವರ ಮೇಲಿದೆ.

 

ಯಡಿಯೂರಪ್ಪ, ಗಣಿ ರೆಡ್ಡಿಗಳು, ಅನಂತ್ ಕುಮಾರ್, ಜಗದೀಶ ಶೆಟ್ಟರ್ ಹೀಗೆ ಬಿಜೆಪಿಯಲ್ಲಿರುವ ಹಲವು ಗುಂಪುಗಳ ನಡುವೆ ಯಡಿಯೂರಪ್ಪ ಅವರ ಸಮಕಾಲೀನರಾದ ಈಶ್ವರಪ್ಪ ಪಕ್ಷದ ಜವಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ತಮ್ಮದೇ ಆದ ಬಳಗ, ಹಿಂಬಾಲಕರನ್ನು ಹೊಂದಿರುವ ಈಶ್ವರಪ್ಪ ಆರ್.ಎಸ್.ಎಸ್ ವಲಯದಲ್ಲಿ ಪ್ರಭಾವಿಗಳು ಹೌದು.

 

ಬಿಜೆಪಿಯಲ್ಲಿ ಹಲವು ಗುಂಪುಗಳಿರುವಾಗ ಈಶ್ವರಪ್ಪ ಯಾವ ಗುಂಪಿಗೆ ಅವರು ಮುಖ್ಯಸ್ಧರು, ಪಕ್ಷ ಸಂಘಟನೆಯೊಂದೇ ಇವರ ಪರಮಧ್ಯೇಯವೆ?. ಸರ್ಕಾರದ ವರ್ಚಸ್ಸಿಗೆ ಉಂಟಾಗಿರುವ ಧಕ್ಕೆಯನ್ನು ಸರಿಪಡಿಸಲು ಇವರು ರಾಜ್ಯಾಧ್ಯಕ್ಷರಾಗಿದ್ದಾರೆಯೇ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪತನಗೊಳಿಸಿ ಆ ಸ್ಧಾನದಲ್ಲಿ ತಾವೇ ವಿರಾಜಮಾನರಾಗಲು ಹೊರಟಿದ್ದಾರೆಯೇ?. ಯಡಿಯೂರಪ್ಪ ಅವರ ಎದುರಾಳಿ ಅನಂತ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಸಂಚು ರೂಪಿಸಿದ್ದಾರೆಯೇ?. ರೆಡ್ಡಿಬಣದ ಆಸೆ ಆಕಾಂಕ್ಷೆಗಳಿಗೆ ನೀರೆರೆಯುವ ಮೂಲಕ ತಮ್ಮ ಹಿತ ಸಾಧನೆ ಮಾಡಿಕೊಳ್ಳುವುದು ಅವರ ಉದ್ದೇಶವೇ?. ಈ ಎಲ್ಲಾ ಬೆಳವಣಿಗೆಗಳ ನಡುವೆ ಸ್ವತ: ಈಶ್ವರಪ್ಪ ಅವರೇ ಬಲಿಪಶುವಾಗಲಿದ್ದಾರೆಯೇ?.

 

ಹೌದು ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಇಂತಹ ಸಂದೇಹಗಳು, ಲೆಕ್ಕಾಚಾರದ ಆಲೋಚನೆಗಳು ಕಂಡು ಬಂದಿದ್ದರೆ ಅದೇನು ಅಸಹಜವಲ್ಲ. ಈ ಎಲ್ಲಾ ಲೆಕ್ಕಾಚಾರಗಳ ಆಳ ಹೊಕ್ಕು ನೋಡಿದಾಗ ಎಲ್ಲೋ ಒಂದಕ್ಕೊಂದು ಸಂಬಂಧ ಇರುವುದು ಕಾಣುತ್ತದೆ.

 

 

ಈಶ್ವರಪ್ಪ ಬಿಜೆಪಿಯಲ್ಲಿ ಅತ್ಯಂತ ಹಿರಿಯರು, ಅನುಭವಿಗಳು, ಏನೇ ಮಾಡಿದರೂ ಅಲ್ಲಿ ಪಕ್ಷದ ಪರವಾದ ಧ್ವನಿ ಇರುವಂತೆ ನೋಡಿಕೊಳ್ಳುತ್ತಾರೆ. ಪಕ್ಷದ ಬಗ್ಗೆ ಅವರು ವ್ಯಕ್ತಮಾಡುವ ಅಭಿಪ್ರಾಯಗಳನ್ನು ತಳ್ಳಿಹಾಕುವುದು ಅಷ್ಟೊಂದು ಸುಲಭವಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಎದ್ದಾಗ ಇರಬಹುದು, ಪಕ್ಷದ ಆಂತರಿಕ ಸಮಸ್ಯೆಗಳು ಬುಗಿಲೆದ್ದ ಸಂದರ್ಭವಾಗಿರಬಹುದು. ಯಾವುದೇ ಕಾಲಘಟ್ಟದಲ್ಲೂ ಅವರು ಪಕ್ಷವನ್ನು ಮುಂದಿಟ್ಟುಕೊಂಡೇ ತಮ್ಮ ಎದುರಾಳಿಗಳನ್ನು ಮಣಿಸುವ ಪ್ರಯತ್ನ ನಡೆಸುತ್ತಾರೆ.

 

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಅವರಿಗೆ ಟಿಕೆಟ್ ನೀಡಿದ್ದನ್ನು ನೆಪಮಾಡಿಕೊಂಡು ತಮ್ಮನ್ನು ಸಚಿವ ಸ್ಧಾನದಿಂದ ಪದಚ್ಯುತಗೊಳಿಸಲು ಯಡಿಯೂರಪ್ಪ ಹಾಕಿದ ಪಟ್ಟಿಗೆ ಪ್ರತಿಪಟ್ಟು ಹಾಕಿದರು. ಮಂತ್ರಿ ಸ್ಧಾನದ ಮೇಲೆ ಗಟ್ಟಿಯಾಗಿ ಬೇರೂರಿದರು. ನೀರಾವರಿ ಇಂಧನದಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದರು.

 

ಇಷ್ಟೆಲ್ಲಾ ಹಿನ್ನೆಲೆಯಿರುವ ಈಶ್ವರಪ್ಪ ಸಚಿವ ಸ್ಧಾನಕ್ಕಷ್ಟೇ ತೃಪ್ತಿಪಟ್ಟುಕೊಳ್ಳುವ ಜಾಯಮಾನದವರಲ್ಲ. ಒಂದಲ್ಲಾ ಒಂದು ದಿನ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುವ ನಾಯಕರಲ್ಲೂ ಅವರು ಅಗ್ರಗಣ್ಯರು. ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಧಾನಕ್ಕೆ ನೇಮಕವಾಗಲು ಇದು ಪ್ರಮುಖ ಕಾರಣ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಆ ಕನಸನ್ನು ಹೊತ್ತೆ ಅವರು ಪಕ್ಷಕ್ಕೆ ಹೆಗಲು ಕೊಟ್ಟಿದ್ದಾರೆ.

 

 

ಇಷ್ಟಕ್ಕೂ ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದರೆ ಬಿಜೆಪಿಗೆ ಆಗುವ ಲಾಭವಾದರೂ ಎನು ಎಂಬ ಪ್ರಶ್ನೆಗೆ ಹಲವಾರು ರೀತಿಯಲ್ಲಿ ಅಭಿಪ್ರಾಯಗಳು ಪಕ್ಷದ ವಲಯದಿಂದಲೇ ಕೇಳಿ ಬರುತ್ತವೆ. ಈಶ್ವರಪ್ಪ ಅಧ್ಯಕ್ಷರಾದರೆ ಪಕ್ಷಕ್ಕೆ ಹೆಚ್ಚಿನ ಲಾಭವಾಗುತ್ತದೆ ಎಂದು ನಂಬಿರುವವರಲ್ಲಿ ಆರ್.ಎಸ್. ಪ್ರಮುಖರು ಮೊದಲಿಗರಾಗಿದ್ದಾರೆ. ಪ್ರತಿಸ್ಪರ್ಧಿಗಳನ್ನು ತಮ್ಮ ಬಾಯಿ ಮಾತಿನ ಮೂಲಕ ಸುಮ್ಮನಾಗಿಸುವ ಛಾತಿ ಅವರಿಗಿದೆ. ಏಟಿಗೆ ಎದಿರೇಟು ಎಂಬುದು ಅವರ ಹುಟ್ಟುಗುಣ. ಒಂದು ರೀತಿಯ ಬಂಢತನವೂ ಅವರಲ್ಲಿದೆ. ಕಾಂಗ್ರೆಸ್ - ಜೆಡಿ‌ಎಸ್ ಪಕ್ಷಕ್ಕೆ ತಕ್ಕ ಉತ್ತರ ನೀಡುವ ಶಕ್ತಿ ಈಶ್ವರಪ್ಪ ಅವರಿಗಿದೆ.

 

 

ಇದೇ ಕಾರಣದಿಂದ ಒಂದು ತಿಂಗಳಿಗೂ ಹೆಚ್ಚು ಕಾಲ ಸಂಘಪರಿವಾರದ ಮುಖಂಡರು ಹಾಕಿದ ಒತ್ತಡಕ್ಕೆ ಮಣಿದು ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಸ್ಧಾನವನ್ನು ಒಪ್ಪಿಕೊಂಡರು. ಇದೇ ಕಾಲಕ್ಕೆ ಅನಂತ್ ಕುಮಾರ್ ಕೂಡ ಈಶ್ವರಪ್ಪ ಅವರಿಗೆ ಸಾಥ್ ನೀಡಿದರು. ಸಹಸ್ರಾರು ಕೋಟಿ ರೂಪಾಯಿ ಬಜೆಟ್ ಹೊಂದಿರುವ, ಸಾವಿರಾರು ಕೋಟಿ ರೂಪಾಯಿ ವಿದ್ಯುತ್ ಖರೀದಿ ಮಾಡುವ ಸಮೃದ್ಧ ಇಲಾಖೆಯನ್ನು ತೊರೆದು ಪರಿಸ್ಧಿತಿಯ ಒತ್ತಡಕ್ಕೆ ಮಣಿದು ಈಶ್ವರಪ್ಪ ಅನಿವಾರ್ಯವಾಗಿ ಪಕ್ಷದ ಜವಾಬ್ದಾರಿಯನ್ನು ಒಪ್ಪಿಕೊಂಡರು.

 

ಇಂತಹ ರಾಜಕೀಯ ಪರಿಸ್ಧಿತಿಯಲ್ಲಿ ಈಶ್ವರಪ್ಪ ನಿಜಕ್ಕೂ ಪಕ್ಷದ ರಾಜ್ಯಾಧ್ಯಕ್ಷರಾಗಿ, ಹಿಂದುಳಿಗ ವರ್ಗಗಳ ನಾಯಕರಾಗಿ ತಮ್ಮ ಜವಬ್ದಾರಿಯನ್ನು ನಿಭಾಯಿಸುವರೇ?.ವಲಸಿಗರಿಂದಲೇ ತುಂಬಿ ತುಳುಕುತ್ತಿರುವ ಪಕ್ಷದಲ್ಲಿ ನಿಷ್ಠಾವಂತರ ಕೈ ಹಿಡಿಯುತ್ತಾರೆಯೇ?. ಪಕ್ಷಕ್ಕಾಗಿ ತ್ಯಾಗ ಮಾಡಿದ ಮೂಲ ಕಾರ್ಯಕರ್ತರಿಗೆ ನ್ಯಾಯ ಒದಗಿಸುತ್ತಾರೆಯೇ?. ಹೀಗೆ ಹಲವಾರು ಆಪೇಕ್ಷೆಗಳು ಪಕ್ಷದ ಒಳವಲಯದಲ್ಲಿದೆ.

 

 

ಮಂತ್ರಿಯಾಗಿದ್ದ ಸಂದರ್ಭದಲ್ಲಿ ಈಶ್ವರಪ್ಪ ಅವರ ಕಾರ್ಯವೈಖರಿಯೂ ಇಲ್ಲಿ ಪ್ರಮುಖವಾಗುತ್ತದೆ. ಮೇಲ್ವರ್ಗದವರಿಂದಲೇ ತುಂಬಿರುವ, ಅವರ ಹಿತರಕ್ಷಣೆಗೆ ಹೆಚ್ಚು ಒತ್ತು ನೀಡುವ ಬಿಜೆಪಿಯಂತಹ ಪಕ್ಷದಲ್ಲಿ ಹಿಂದುಳಿದ ವರ್ಗದ ನಾಯಕರಾಗಿ ಗುರುತಿಸಿಕೊಂಡಿರುವ ಈಶ್ವರಪ್ಪ ಅವರ ರಕ್ಷಣೆಗೆ ಯಾವ ರೀತಿ ಕೆಲಸ ಮಾಡಿದರು ಎಂಬುದು ಮುಖ್ಯವಾಗುತ್ತದೆ.

 

ಹಿಂದುಳಿದ ವರ್ಗಗಳ ರಕ್ಷಣೆಗಾಗಿ ಸಚಿವರಾಗಿದ್ದಾಗ ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದು ಅವರ ಬದ್ಧತೆಗೆ ಸಾಕ್ಷಿಯಾಗುತ್ತದೆ. ಹಲವಾರು ವಿಚಾರಗಳಲ್ಲಿ ಹಿಂದುಳಿದವರ ಪರ ಧ್ವನಿ ಎತ್ತಲಿದ್ದ ಅವಕಾಶಗಳನ್ನು ಈಶ್ವರಪ್ಪ ಕಳೆದುಕೊಂಡರು ಎಂದು ಅನಿವಾರ್ಯವಾಗಿ ಹೇಳಬೇಕಾಗುತ್ತದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೆನಪದರ ಆದಾಯ ಮಿತಿ ಹೆಚ್ಚಳ ಯೋಜನೆಯನ್ನು ಮಂತ್ರಿಯಾಗಿದ್ದಾಗಲೇ ಸಚಿವ ಸಂಪುಟ ತಿರಸ್ಕರಿಸಿತು. ಆಗ ಸಂಪುಟದಲ್ಲಿ ಉಪಸ್ಧಿತರಿದ್ದ ಈಶ್ವರಪ್ಪ ಒತ್ತಾಯಮಾಡಿ ಇದನ್ನು ಜಾರಿಗೆ ತಂದಿದ್ದರೆ ಕೇವಲ ಹಿಂದುಳಿದ ವರ್ಗಗಳಿಗೆ ಮಾತ್ರವಲ್ಲ ಅಲ್ಪ ಸಂಖ್ಯಾತರು, ವೀರಶೈವರು, ವಕ್ಕಲಿಗರಿಗೂ ಅನುಕೂಲವಾಗುತ್ತಿತ್ತು. ಅಂತಹ ಸುವರ್ಣಾವಕಾಶವನ್ನು ಅವರು ಕಳೆದುಕೊಂಡರು.

 

ಹಿಂದುಳಿದ ವರ್ಗಗಗಳ ಸಮೀಕ್ಷೆ ಮಾಡಿಸಲು ಕೂಡ ಈಶ್ವರಪ್ಪ ಯಾವುದೇ ರೀತಿಯಲ್ಲೂ ಪ್ರಯತ್ನ ಪಡೆಲೇ ಇಲ್ಲ. ಮುಖ್ಯಮಂತ್ರಿ ಎದುರು ಧನಿ ಎತ್ತಿ ಮಾತನಾಡಿ ಮಾಡಿಸುವ ಶಕ್ತಿ ಇತ್ತು. ಆಧರೆ ಆ ಧೈರ್ಯ ಮಾಡಲೇ ಇಲ್ಲ. ಅಧಿಕಾರ ಇದ್ದಾಗಲೇ ಹಿಂದುಳಿದ ಸಮುದಾಯದ ಹಿತ ಕಾಯಲು ಸಾಧ್ಯವಾಗದವರು ಪಕ್ಷದ ಅಧ್ಯಕ್ಷರಾಗಿ ಯಾವ ಮಟ್ಟದಲ್ಲಿ ಹಿಂದುಳಿದ ವರ್ಗಗಳ ರಕ್ಷಣೆ ಮಾಡಬಹುದು ಎಂಬುದು ಹಲವಾರು ಶೋಷಿತ ಸಮುದಾಯದವರ ಯಕ್ಷ ಪ್ರಶ್ನೆಯಾಗಿದೆ.

 

 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಶ್ವರಪ್ಪ ಅವರನ್ನು ಬಲಿಪಶು ಮಾಡಲು ಹೊರಟಿದ್ದಾರೆ ಎಂಬುದರಲ್ಲಿ ತಿರುಳಿದೆ. ಪಕ್ಷದ ವರ್ಚಸ್ಸನ್ನು ಎತ್ತಿಹಿಡಿಯಲು ಈಶ್ವರಪ್ಪ ಅವರನ್ನು ಬಳಸಿಕೊಂಡು ನಂತರ ಮೂಲೆ ಗುಂಪು ಮಾಡುವ ಆಲೋಚನೆಯೂ ಕೂಡ ಅವರಲ್ಲಿದೆ ಎಂದರೆ ಅದು ತಪ್ಪಲ್ಲ. ಈಶ್ವರಪ್ಪ ಈಗ ಪಕ್ಷದ ಅಧ್ಯಕ್ಷ ಗಾದಿಗಿಂತ ಬಲಿಪೀಠದ ಮೇಲೆ ಕುಳಿತಿದ್ದಾರೆ. ಅವರೇ ಬಲಿಯಾಗುತ್ತಾರೋ, ತಮ್ಮ ಪ್ರತಿಸ್ಪರ್ಧಿಗಳನ್ನೇ ಬಲಿಕೊಡುತ್ತಾರೋ?. ಇದು ಪರಿಸ್ಧಿತಿಯನ್ನವಲಂಬಿಸಿದೆ.

 

ಮತ್ತೊಂದು ಕಡೆ ಯಡಿಯೂರಪ್ಪ ಅವರನ್ನೇ ಬಲಿಪೀಠಕ್ಕೆ ದೂಡಲು ಅನಂತ್ ಕುಮಾರ್ ಬಣ ಪ್ರಯತ್ನ ನಡೆಸುತ್ತಿದೆ. ಗಣಿ ರೆಡ್ಡಿಗಳು ಬಂಡಾಯ ಎದ್ದಾಗಲೇ ಅನಂತ್ ಕುಮಾರ್ ತಮ್ಮ ಎದುರಾಗಳಿ ಯಡಿಯೂರಪ್ಪ ಅವರನ್ನು ಮಣಿಸಲು ಈಶ್ವರಪ್ಪ ಅವರನ್ನು ಬಳಸಿಕೊಳ್ಳಲು ಆಲೋಚನೆ ನಡೆಸಿದ್ದರು. ಅದೇ ಕಾಲಕ್ಕೆ ಅಂತಹ ಅವಕಾಶವೂ ಕೂಡ ಕೂಡಿ ಬಂದಿದೆ. ಪರಿವಾರದ ಒತ್ತಾಸೆಯಂತೆ ಈಶ್ವರಪ್ಪ ಅಧ್ಯಕ್ಷರಾಗಿರಬಹುದು. ಆದರೆ ಅನಂತ್ ಕುಮಾರ್ ಆಸೆ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವುದಾಗಿದೆ.

 

 

ಬಿಜೆಪಿ ಸರ್ಕಾರದ ಕೊನೆಯ ಎರಡು ವರ್ಷಗಳ ಕಾಲ ರಾಜ್ಯದ ಆಡಳಿತ ಚುಕ್ಕಾಣಿಯನ್ನು ತಾವು ಇಲ್ಲವೆ ತಮಗೆ ಬೇಕಾದವರಿಗೆ ವಹಿಸಲು ಬೇಕಾಗಿರುವ ತಂತ್ರವೂ ಕೂಡ ಸಿದ್ಧವಾಗಿದೆ ಎಂದು ಬಿಜೆಪಿಯ ಮುಖಂಡರೇ ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿ, ಈಶ್ವರಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡುವುದು. ಒಂದು ಕಡೆ ವೀರಶೈವರ ಬೆಂಬಲ ಪಡೆದಂತೆಯೂ ಇರಬೇಕು. ಮತ್ತೊಂದು ಕಡೆ ಹಿಂದುಳಿದ ವರ್ಗದವರಿಗೆ ಅಧಿಕಾರ ಕೊಟ್ಟಂತೆಯೂ ಇರಬೇಕು. ಇದು ಅನಂತ್ ಕುಮಾರ್ ತಂತ್ರ. ಇದಕ್ಕಾಗಿ ಪರಿಸ್ಧಿತಿಗೆ ತಕ್ಕಂತೆ ಈಶ್ವರಪ್ಪ ಅವರನ್ನು ಬಳಸಿಕೊಳ್ಳುವುದು ಅನಂತ್ ಕುಮಾರ್ ಲೆಕ್ಕಾಚಾರವಾಗಿದೆ.

 

 

ಈ ಎಲ್ಲಾ ಬೆಳವಣಿಗೆಗಳ ನಡುವೆ ಮುಂದೊಂದು ತಾವು ಮುಖ್ಯಮಂತ್ರಿ ಏಕಾಗಬಾರದು ಎಂಬ ಉದ್ದೇಶದಿಂದಲೇ ಪಕ್ಷದ ಅಧ್ಯಕ್ಷ ಸ್ಧಾನವನ್ನು ಈಶ್ವರಪ್ಪ ಒಪ್ಪಿಕೊಂಡಿದ್ದಾರೆ. ಸಂಘಪರಿವಾರದ ಮುಖಂಡರು, ಪಕ್ಷದ ವರಿಷ್ಠರು ಗುಟುರು ಹಾಕಿದರೆ ಸುಮ್ಮನಾಗುವ ಈಶ್ವರಪ್ಪ ಪರಿಸ್ಧಿತಿಗೆ ತಕ್ಕಂತೆ ವರ್ತಿಸುತ್ತಾರೆ. ಇವರಿಗೆ ಮುಖ್ಯಮಂತ್ರಿ ಅವಕಾಶ ಒಲಿಯುವುದು ಸಾಧ್ಯವೇ?. ಅವರಿಗೆ ಅಂತಹ ಬೆಂಬಲ ದೊರೆಯುವುದೇ?. ಈಗಲೇ ಅದನ್ನು ಹೇಳಲಾಗದು. ಇದಕ್ಕೂ ಕಾಲ ಕೂಡಿ ಬರಬೇಕಾಗುತ್ತದೆ.

 

 

ಈಶ್ವರಪ್ಪ ಪಕ್ಷದ ಅಧ್ಯಕ್ಷರಾದ ಮಾತ್ರಕ್ಕೆ ಪಕ್ಷದ ವರ್ಚಸ್ಸು ಹೆಚ್ಚಾಗುತ್ತದೆಯೇ?. ಅದನ್ನು ಈಗಲೇ ಹೇಳಲಾಗದು. ಹಿಂದೆ ಇದ್ದ ಸದಾನಂದ ಗೌಡರು ಬೆಂಗಳೂರು - ಮಂಗಳೂರು ನಡುವೆ ಆಗಾಗ ಚಿಕ್ಕಮಗಳೂರು ಬಿಟ್ಟರೆ ಬೇರೆ ಕಡೆ ಪ್ರವಾಸ ಮಾಡಲಿಲ್ಲ. ಪಕ್ಷ ಸಂಘಟನೆಗೆ ಒತ್ತು ನೀಡಲಿಲ್ಲ. ಆದರೆ ಅವರ ಅವಧಿಯಲ್ಲೇ ಪಕ್ಷ ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯಿತು ಎಂಬುದನ್ನೂ ತಳ್ಳಿಹಾಕುವಂತಿಲ್ಲ.

 

 

ಪಕ್ಷ - ಸರ್ಕಾರದ ವರ್ಚಸ್ಸು ಪಾತಾಳಕ್ಕಿಳಿದಿರುವ ಸಂದರ್ಭದಲ್ಲಿ ಈಶ್ವರಪ್ಪ ರಾಜ್ಯಾಧ್ಯಂತ ಪ್ರವಾಸ ಕೈಗೊಂಡು ಪಕ್ಷದ ವರ್ಚಸ್ಸು ಹೆಚ್ಚಿಸಲು ಶ್ರಮಿಸುತ್ತಾರೆಯೇ?. ಹೆಚ್ಚಾಗಿ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುವ ಈಶ್ವರಪ್ಪ ರಾಜ್ಯದ ಮೂಲೆ ಮೂಲೆಗಳಲ್ಲಿರುವ ಕಾರ್ಯಕರ್ತರ ಆರ್ತನಾದ ಕೇಳಲಿದ್ದಾರೆಯೇ?. ಈಶ್ವರಪ್ಪ ಪಕ್ಷ, ಕಾರ್ಯಕರ್ತರಿಗೆ ನಿಜವಾದ ಅಧ್ಯಕ್ಷರಾಗುತ್ತಾರೆಯೇ ಎಂಬುದಕ್ಕೆ ಈಗಲೇ ಉತ್ತರ ಹೇಳಲಾಗದು. ಇದಕ್ಕಾಗಿ ಆರೇಳು ತಿಂಗಳು ಕಳೆದ ಮೇಲೆ ಉತ್ತರ ದೊರೆಯಲಿದೆ.

 

 

ಈಶ್ವರಪ್ಪ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕಾಂಗ್ರೆಸ್, ಜೆಡಿ‌ಎಸ್ ಪಕ್ಷಗಳಿಂದ ಅಂತಹ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಏಕೆಂದರೆ ಈಶ್ವರಪ್ಪ ಚಾಣಕ್ಯ ತಂತ್ರಗಾರರೇನಲ್ಲ. ಹಾಗೆಂದು ಪ್ರತಿಪಕ್ಷಗಳು ಅವರನ್ನು ಕಡೆಗಣಿಸುವಂತೆಯೂ ಇಲ್ಲ. ಏನೇ ಆದರೂ ಈಶ್ವರಪ್ಪ ಬಿಜೆಪಿಯ ಅಂತರಂಗದಲ್ಲಿ ಹೇಗೆ ಸ್ವೀಕಾರಾರ್ಹ ಎಂಬುದು ಈಗ ಮುಖ್ಯ. ಬಿಜೆಪಿ ಎಂಬ ಗುಡಿಯಲ್ಲಿ ಅವರ ಭಾವನೆಗಳಿಗೆ, ಅವರ ಚಿಂತನೆಗಳಿಗೆ ಬೆಲೆ ಸಿಗುತ್ತದೆಯಾ?. ನೋಡಬೇಕು. 

 


Share: