ಬೆಂಗಳೂರು, ಜನವರಿ 20: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸೀಮಿತವಾಗಿದ್ದ ನಲಿ-ಕಲಿ ಕಾರ್ಯಕ್ರಮವನ್ನು ಅನುದಾನ ಹಾಗೂ ಅನುದಾನರಹಿತ ಶಾಲೆಗಳಿಗೂ ವಿಸ್ತರಿಸಲಾಗುವುದು ಎಂದು ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ತಿಳಿಸಿದ್ದಾರೆ.
ನಲಿ-ಕಲಿ ಕಾರ್ಯಕ್ರಮ ಅನುಷ್ಠಾನ ಸಂಬಂದ ವಿವಿಧ ಸಂಘ ಸಂಸ್ಥೆಗಳೊಟ್ಟಿಗೆ ಚರ್ಚೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಮಕ್ಕಳ ಬೌದ್ದಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಬರುವ ಶೈಕ್ಷಣಿಕ ವರ್ಷದಿಂದ ಯೋಜನೆಯನ್ನು ವಿಸ್ತರಿಸಲಾಗುವುದು.
ಅಲ್ಲದೆ ಪ್ರಸ್ತುತ ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಕಾರ್ಯಕ್ರಮ ಲಭ್ಯವಾಗುತ್ತಿದ್ದು, ಇದನ್ನು ಮೂರನೇ ತರಗತಿಗೂ ವಿಸ್ತರಿಸುವ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು.
ಯೋಜನೆ ವಿದ್ಯಾರ್ಥಿಗಳಿಗೆ ಯಾವ ಪ್ರಮಾಣದಲ್ಲಿ ಉಪಯುಕ್ತವಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದು ನಂತರ ಮೂರನೇ ತರಗತಿಗೆ ವಿಸ್ತರಿಸಲಾಗುವುದು ಎಂದರು.
ಪ್ರಸ್ತುತ ರಾಜ್ಯದ ೪೬ ಸರ್ಕಾರಿ ಶಾಲೆಗಳಲ್ಲಿ ಯೋಜನೆ ಜಾರಿ ಇದ್ದು, ಅನುದಾನ ಹಾಗೂ ಅನುದಾನರಹಿತ ಶಾಲೆಗಳಿಗೆ ವಿಸ್ತರಿಸುವುದರಿಂದ ಮತ್ತೆ ಹೊಸದಾಗಿ ೧೪ ಸಾವಿರ ಶಾಲೆಗಳು ಇದರ ವ್ಯಾಪ್ತಿಗೆ ಬರಲಿವೆ.
ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ನೇಮಕಗೊಂಡಿರುವ ೭೫೦೦ ಶಿಕ್ಷಕರ ಅಂತಿಮ ಪಟ್ಟಿ ಫಬ್ರವರಿ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಕಾಗೇರಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಐದು ಸಾವಿರ ಶಿಕ್ಷಕರು ಪ್ರಾಥಮಿಕ ಶಾಲೆಗೂ, ೨೫೦೦ ಶಿಕ್ಷಕರನ್ನು ಪ್ರೌಢ ಶಾಲೆಗೆ ನೇಮಕ ಮಾಡಿಕೊಳ್ಳುತ್ತಿದ್ದು, ನೇಮಕಾತಿ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಕೌನ್ಸಿಲಿಂಗ್ ಮೂಲಕ ಶಾಲೆಗಳಿಗೆ ನಿಯೋಜಿಸಲಾಗುವುದು.
ನಿಯೋಜಿಸಲಾದ ಶಿಕ್ಷಕರಿಗೆ ಏಪ್ರಿಲ್- ಮೇ ತಿಂಗಳಲ್ಲಿ ತರಬೇತಿ ನೀಡಿ ಶೈಕ್ಷಣಿಕ ವರ್ಷದ ಆರಂಭ ವೇಳೆಗೆ ತಮ್ಮ ತಮ್ಮ ಶಾಲೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗುವುದು.
ಈ ನೇಮಕಾತಿಯಿಂದ ಪ್ರಾಥಮಿ ಹಾಗೂ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಎಲ್ಲಾ ಶಿಕ್ಷಕರ ಹುದ್ದೆಗಳು ಇದರಿಂದ ಭರ್ತಿಯಾದಂತಿದೆ ಎಂದರು.