ಬೆಂಗಳೂರು,ಏ,೨೩:ಆಡಳಿತ ಯಂತ್ರ ಬಹುತೇಕ ನಿಷ್ಕ್ರೀಯಗೊಂಡಿದ್ದು, ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ, ಕಡತಗಳ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಬಜೆಟ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಹಿನ್ನೆಡೆಯಾಗುತ್ತಿದೆ ಎಂದು ಸ್ವತ: ರಾಜ್ಯದ ಮುಖ್ಯಕಾರ್ಯದರ್ಶಿ ಎಸ್.ವಿ. ರಂಗನಾಥ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೂರು ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.
ರಾಜ್ಯದ ಆಡಳಿತದ ಶಕ್ತಿ ಕೇಂದ್ರವಾದ ವಿಧಾನಸೌಧಕ್ಕೆ ಸಚಿವರು ಬರುತ್ತಿಲ್ಲ. ಬಂದರೂ ಆಡಳಿತದ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಇಲಾಖೆ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾರ್ಯಾಂಗದ ನೇತಾರರೇ ಶಾಸಕಾಂಗದ ಮುಖ್ಯಸ್ಧರಿಗೆ ಈ ರೀತಿ ದೂರು ನೀಡಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ.
ಸಜ್ಜನ ಹಾಗೂ ಸರಳ ವ್ಯಕ್ತಿ ಎಂದೇ ಹೆಸರು ಪಡೆದಿರುವ ಸ್ವತ: ರಂಗನಾಥ್ ಸರ್ಕಾರದ ಕಾರ್ಯವೈಖರಿ ಬಗ್ಗೆ ಸಿಡಿಮಿಡಿಗೊಂಡಿದ್ದಾರೆ. ಆಡಳಿತದ ಬಗ್ಗೆ ಸಚಿವರೇ ನಿಷ್ಕಾಳಜಿ ತೋರಿದರೆ ಕಾರ್ಯಾಂಗಕ್ಕೆ ಯಾವ ರೀತಿಯ ಸಂದೇಶ ರವಾನಿಸಿದಂತಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಬಹಳ ದಿನಗಳಿಂದ ಸರ್ಕಾರದ ಆಡಳಿತ ವೈಖರಿ ಬಗ್ಗೆ ಅಸಮಾಧಾನಗೊಂಡಿದ್ದ ರಂಗನಾಥ್, ತಮ್ಮ ನೋವನ್ನು ತೋಡಿಕೊಳ್ಳಲು ಸಮಯಕ್ಕಾಗಿ ಕಾದು ಕುಳಿತಿದ್ದರು. ಬಿಬಿಎಂಪಿ ಚುನಾವಣೆ ಮುಗಿದ ನಂತರ ಅಂದರೆ ಕಳೆದ ವಾರ ವಿಧಾನಸೌಧದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಮಾಡಿ ವ್ಯವಸ್ಧೆಯ ಕುರಿತು ದೂರುಗಳ ಪಟ್ಟಿಯನ್ನೇ ಮುಂದಿಟ್ಟಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಇದು ಕೇವಲ ಒಬ್ಬಿಬ್ಬರು ಸಚಿವರ ಧೋರಣೆಯಲ್ಲ. ಬಹುತೇಕ ಸಚಿವರು ಇಂತಹ ನಿರ್ಲಕ್ಷ್ಯವಹಿಸುತ್ತಿರುವ ಸಾಲಿನಲ್ಲಿದ್ದಾರೆ. ಸಚಿವರು ವಿಧಾನಸೌಧವನ್ನೇ ಮರೆತಿದ್ದಾರೆ. ಅಷ್ಟೇ ಅಲ್ಲ ಸಚಿವ ಸಂಪುಟ ಸಭೆಗೂ ಕೂಡ ಗೈರು ಹಾಜರಾಗುತ್ತಾರೆ. ಹೀಗಾದರೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಧಿತ್ವಕ್ಕೆ ಬಂದು ಎರಡು ವರ್ಷ ಪೂರ್ಣಗೊಳ್ಳುತ್ತಿದೆ. ನಾವೀಗ ಬಹುತೇಕ ಅರ್ಧದಷ್ಟು ಹಾದಿ ಸವೆಸಿದ್ದೇವೆ. ಈಗ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸದಿದ್ದರೆ ಆಡಳಿತ ವ್ಯವಸ್ಧೆಯ ಮೇಲೆ ನಿಯಂತ್ರಣ ತಪ್ಪಿಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿರುವುದಾಗಿ ಇದೇ ಮೂಲಗಳು ಹೇಳಿವೆ.
ಮಂತ್ರಿಮಂಡಲದ ಒಬ್ಬ ಸಚಿವರಂತೂ ಎರಡು ವರ್ಷಗಳ ಅವಧಿಯಲ್ಲಿ ಕೇವಲ ೧೭ ಬಾರಿ ಮಾತ್ರ ವಿಧಾನಸೌಧಕ್ಕೆ ಬಂದಿದ್ದಾರೆ. ಹಲವಾರು ಬಾರಿ ಸಚಿವ ಸಂಪುಟ ಸಭೆಗಳು ನಡೆಯುತ್ತವೆ. ಸಭೆಗಳಲ್ಲಿ ಅವರು ಭಾಗಿಯೇ ಆಗುವುದಿಲ್ಲ. ತಮ್ಮ ಇಲಾಖೆಯ ವಿಷಯ ಇದ್ದರೆ ವಿಮಾನದ ಮೂಲಕ ಬೆಂಗಳೂರಿಗೆ ಬರುತ್ತಾರೆ. ಸಂಪುಟ ಸಭೆಯ ನಂತರ ಹಾಗೆಯೇ ವಿಮಾನ ಏರಿ ಹೊರಡುತ್ತಾರೆ ಎಂಬ ನಗ್ನ ಸತ್ಯವನ್ನು ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಅನಾವರಣಗೊಳಿಸಿದ್ದಾರೆ.
ಕೆಲವರು ವಿಧಾನಸೌಧಕ್ಕೆ ಬಂದರೂ ಕೂಡ ಕಡತಗಳ ಕಡೆ ಕಣ್ಣೆತ್ತಿ ನೋಡುವುದಿಲ್ಲ. ಆಪ್ತ ಕಾರ್ಯದರ್ಶಿಗಳಿಂದ ತೀರಾ ಒತ್ತಡ ಬಂದರೆ ನೆಪಮಾತ್ರಕ್ಕೆ ಕಡತ ಯಗ್ನ ನಡೆಸುತ್ತಾರೆ. ಇಲ್ಲವಾದಲ್ಲಿ ಸದ್ದಿಲ್ಲದೇ ವಿಧಾನಸೌಧಕ್ಕೆ ಬರುತ್ತಾರೆ. ಸದ್ದು ಮಾಡದೇ ವಿಧಾನಸೌಧದಿಂದ ನಿರ್ಗಮಿಸುತ್ತಾರೆ.
ಇನ್ನೂ ಕೆಲ ಸಚಿವರದ್ದು ಸಣ್ಣ ಇಲಾಖೆಗಳು. ಅವರ ಬಳಿ ಕಡತಗಳು ಕೂಡ ಕಡಿಮೆ. ಕೆಲವರು ಕಡತ ವಿಲೇವಾರಿ ಮಾಡಿದರೆ ಇವರಲ್ಲೂ ಕೆಲವರು ನಿರ್ಲಕ್ಷ್ಯ ವಹಿಸುತ್ತಾರೆ. ಇದೇ ಧೋರಣೆಯಿಂದಾಗಿ ಕಳೆದ ವರ್ಷ ಬಜೆಟ್ ಕಾರ್ಯಕ್ರಮಗಳಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ.
ಪ್ರಸಕ್ತ ಸಾಲಿನ ಬಜೆಟ್ ಕಾರ್ಯಕ್ರಮಗಳನ್ನು ಅನಷ್ಠಾನಗೊಳಿಸಲು ಈ ಧೋರಣೆ ಪ್ರಮುಖ ಅಡ್ಡಿಯಾಗಿದೆ. ಬಜೆಟ್ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಇಲಾಖಾ ಅಧಿಕಾರಿಗಳ ಸಭೆಗಳನ್ನೇ ಸಚಿವರು ಕರೆಯುವುದಿಲ್ಲ. ಫಾಲೋ ಅಪ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ತಂತ್ರಜ್ಞಾನ ಬದಲಾಗಿದೆ. ವಿಧಾನಸೌಧದಲ್ಲೇ ಕುಳಿತು ದೈನಂದಿನ ಆಡಳಿತ ವ್ಯವಸ್ಧೆಯ ಮೇಲೆ ನಿಯಂತ್ರಣ ಸಾಧಿಸಬಹುದು. ಎಲ್ಲಾ ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಸಂವಾದ ನಡೆಸಬಹುದು. ಆದರೆ ಇದ್ಯಾವುದೂ ಆಗುತ್ತಿಲ್ಲ.
ಅಲ್ಲದೇ ನಿರಂತರವಾಗಿ ಎದುರಾದ ಚುನಾವಣೆಗಳು ಆಡಳಿತ ವ್ಯವಸ್ಧೆಯ ಮೇಲೆ ಕರಿನೆರಳು ಬೀಳುವಂತಾಯಿತು. ಇದೀಗ ಗ್ರಾಮ ಪಂಚಾಯತ್ ಚುನಾವಣೆಗಳು ಎದುರಾಗಿವೆ. ಇದೂ ಕೂಡ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ದೂರುಗಳ ಪಟ್ಟಿಯನ್ನೇ ಮುಂದಿಟ್ಟಿದ್ದಾರೆ.
ಮುಖ್ಯಕಾರ್ಯದರ್ಶಿಯವರ ದೂರುಗಳನ್ನು ಗಂಭೀರವಾಗಿ ಆಲಿಸಿದ ಯಡಿಯೂರಪ್ಪ, ಸಚಿವರ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಬೇಕಾಗಿದೆ. ಆದರೆ ಇದೀಗ ಗ್ರಾಮ ಪಂಚಾಯತ್ ಚುನಾವಣೆಗಳು ನಡೆಯುತ್ತಿವೆ. ಸಚಿವರು ಚುನಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸದ್ಯ ಏನೂ ಮಾಡಲು ಆಗದ ಪರಿಸ್ಧಿತಿಯಿದೆ. ಚುನಾವಣೆ ಮುಗಿದ ನಂತರ ಈ ಸಮಸ್ಯೆಗೆ ಮದ್ದುಕಂಡು ಹಿಡಿಯೋಣ ಎಂದು ಹೇಳಿ ಮುಖ್ಯಕಾರ್ಯದರ್ಶಿಯವರನ್ನು ಸಮಾಧಾನಮಾಡಿದ್ದಾರೆ ಎಂದು ಇದೇ ಮೂಲಗಳು ಹೇಳಿವೆ.