ಬೆಂಗಳೂರು, ನ.21: ನೆರೆ ಪರಿಹಾರದಲ್ಲಿ ಆಗಿರುವ ಲೋಪಗಳ ಬಗ್ಗೆ ರಾಜ್ಯಪಾಲರು ಮತ್ತು ಲೋಕಾಯುಕ್ತರ ಆಕ್ರೋಶಕ್ಕೆ ತುತ್ತಾಗಿ ಮುಜುಗರ ಅನುಭವಿಸಿದ್ದ ರಾಜ್ಯ ಸರ್ಕಾರ ಶನಿವಾರ ಈ ಇಬ್ಬರಿಗೂ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿತು.
ಸರ್ಕಾರದಿಂದ ಯಾವ ಲೋಪ ಆಗಿಲ್ಲ. ಟೀಕೆ ಮಾಡುವುದು ಸರಿಯಲ್ಲ ಎಂದು ತನ್ನ ಸಮಜಾಯಿಷಿ ವೇಳೆ ಸ್ಪಷ್ಟಪಡಿಸಿರುವ ರಾಜ್ಯ ಸರ್ಕಾರ, ನೆರೆ ಪೀಡಿತ ಜನರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ರಾಜ್ಯಪಾಲರನ್ನು ಆಹ್ವಾನಿಸಲಾಗುವುದು ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನವನ್ನೂ ಮಾಡಿದೆ.
ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಾಗಿರುವ ಲಕ್ಷಾಂತರ ಜನರಿಗೆ ಸಮರ್ಪಕವಾಗಿ ಪರಿಹಾರ ವಿತರಣೆ ಆಗುತ್ತಿಲ್ಲ. ಸರ್ಕಾರ ಜನರನ್ನು ನಿರ್ಲಕ್ಷಿಸುತ್ತಿದೆ ಎಂಬ ಹತ್ತು ಹಲವಾರು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಲೋಪಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದರು.
ಮತ್ತೊಂದೆಡೆ, ನೆರೆ ಪೀಡಿತ ಪ್ರದೇಶಗಳಲ್ಲಿ ನಡೆ ಯುತ್ತಿರುವ ಪರಿಹಾರ ಕಾಮಗಾರಿಗಳಲ್ಲಿ ಲೋಪಗಳು ಆಗಿವೆ ಎಂದು ತಮಗೆ ದೂರು ಬಂದಿವೆ. ಸರ್ಕಾರ ಪೂರಕ ಕಾಮಗಾರಿ ಕೈಗೊಳ್ಳುತ್ತಿಲ್ಲ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಬಳಸಿಕೊಳ್ಳುತ್ತಿಲ್ಲ. ಅಗತ್ಯ ಬಿದ್ದರೆ ಕೇಂದ್ರ ಸರ್ಕಾರದ ಬಳಿ ಹೋಗಿ ಹೆಚ್ಚಿನ ನೆರವು ತರಲು ತಾವು ಸಿದ್ಧ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸರ್ಕಾರಕ್ಕೇ ಸವಾಲು ಹಾಕಿದ್ದರು.
ಇದರಿಂದ ಇರಿಸು-ಮುರಿಸು ಅನುಭವಿಸಿದ ರಾಜ್ಯ ಸರ್ಕಾರ ಕೇವಲ ಎರಡು ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಬಂದಿರುವ ಪರಿಹಾರ ಹಣ, ಖರ್ಚು ಮಾಡಿರುವ ಹಣ, ಕೈಗೊಂಡಿರುವ ಪರಿಹಾರ ಕಾಮಗಾರಿಗಳ ಸಂಪೂರ್ಣ ವರದಿ ತಯಾರು ಮಾಡಿ ಲೋಕಾಯುಕ್ತ ಮತ್ತು ರಾಜ್ಯಪಾಲರಿಗೆ ಸಲ್ಲಿಸಿತು.
- ಮುಖ್ಯ ಕಾರ್ಯದರ್ಶಿಯಿಂದ ಸಮಜಾಯಿಷಿ: ಶನಿವಾರ ಮಧ್ಯಾಹ್ನ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು ಲೋಕಾಯುಕ್ತ ಕಚೇರಿಗೆ ತೆರಳಿ ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಗಳಲ್ಲಿ ಸರ್ಕಾರ ಕೈಗೊಂಡಿರುವ ಪರಿಹಾರ ಕಾಮಗಾರಿಗಳ ಬಗ್ಗೆ ಅಂಕಿ -ಅಂಶಗಳ ಸಹಿತ ಸಮಗ್ರ ವಿವರಣೆ ನೀಡಿದರು.
-ರಾಜ್ಯಪಾಲರನ್ನು ಭೇಟಿ ಮಾಡಿದ ಸಿಎಂ: ಸಂಜೆ ರಾಜಭವನಕ್ಕೆ ತೆರಳಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ ನೆರೆ ಪರಿಹಾರದ ಬಗ್ಗೆ ಚರ್ಚಿಸಿದರು.
ಈ ಕೆಳಕಂಡ ಅಂಶಗಳನ್ನು ಒಳಗೊಂಡ ವರದಿಯನ್ನು ರಾಜ್ಯಪಾಲರ ಕೈಗಿತ್ತ ಯಡಿಯೂರಪ್ಪ ತಮ್ಮ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡಿದರು.
-ರಾಜ್ಯಪಾಲರಿಗೆ ನೀಡಿದ ವರದಿಯ ಪ್ರಮುಖ ಅಂಶಗಳು: ಪ್ರವಾಹದಿಂದ ಉತ್ತರ ಕರ್ನಾಟಕದಲ್ಲಿ ೬.೫ ಲಕ್ಷ ಮನೆಗಳು ಹಾನಿಗೊಳಗಾಗಿವೆ. ೩೭೩ ಗ್ರಾಮಗಳಿಗೆ ತೀವ್ರ ತೊಂದರೆ ಉಂಟಾಗಿದೆ. ಈ ಪೈಕಿ ೨೦೯ ಗ್ರಾಮಗಳನ್ನು ಪೂರ್ಣ ಸ್ಥಳಾಂತರ ಮಾಡಬೇಕಿದ್ದು, ಉಳಿದ ಗ್ರಾಮಗಳನ್ನು ಭಾಗಶಃ ಸ್ಥಳಾಂತರಿಸಬೇಕಿದೆ. ಇದರಿಂದ ೬೫ ಸಾವಿರ ಕುಟುಂಬಗಳು ನಿರಾಶ್ರಿತವಾಗಿವೆ.ಹಾನಿಗೊಂಡಿರುವ ೬.೫ ಲಕ್ಷ ಮನೆಗಳ ಪೈಕಿ ಮೊದಲ ಹಂತದಲ್ಲಿ ೩ ಲಕ್ಷ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಕಟಿಬದ್ಧವಾಗಿದೆ. ಈ ಪೈಕಿ ಸಿಸ್ಕೋ, ವಿಪ್ರೋ, ಇನ್ಫೋಸಿಸ್ ಸೇರಿದಂತೆ ಮತ್ತಿತರೆ ಕಂಪನಿಗಳು ಮತ್ತು ಸಂಘ ಸಂಸ್ಥೆಗಳು ೬೫ ಸಾವಿರ ಮನೆ ನಿರ್ಮಿಸಿಕೊಡಲಿವೆ. ಸಿಯಾನ್ ಹೋಲ್ಡಿಂಗ್ಸ್ ಎಂಬ ಕಂಪನಿ ೫೦ ಸಾವಿರ ಮನೆಗಳನ್ನು ನಿರ್ಮಿಸಿಕೊಡಲಿದೆ.
-೬ ತಿಂಗಳಲ್ಲಿ ಮನೆ ನಿರ್ಮಾಣ:ಮನೆ ನಿರ್ಮಾಣಕ್ಕೆಂದು ಭೂಮಿ ಖರೀದಿಸಲು ರಾಜ್ಯ ಸರ್ಕಾರ ಇದುವರೆಗೆ ೭೫ ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಮತ್ತೆ ೭೫ ಕೋಟಿ ರುಪಾಯಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನಿರ್ಮಾಣ ಕಾಮಗಾರಿ ಆರಂಭಿಸಲಾಗುತ್ತದೆ. ಮುಂದಿನ ಆರು ತಿಂಗಳಲ್ಲಿ ೩ ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.
-ಟೀಕೆ ಸರಿಯಲ್ಲ: ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ಹಗಲಿರುಳೂ ಶ್ರಮ ವಹಿಸಿ ನೆರೆ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೇ ಸರ್ಕಾರ ತನ್ನ ಶಕ್ತಿ ಮೀರಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಮನೆ ಹಾನಿಗೊಳಗಾದ ಕುಟುಂಬಗಳಿಗೆ ಶೇ. ೯೦ ರಷ್ಟು ಹಾಗೂ ಬೆಳೆ ಹಾನಿಗೆ ಶೇ. ೫೦ ರಿಂದ ೬೦ ರಷ್ಟು ಪರಿಹಾರ ನೀಡಲಾಗಿದೆ. ಹೀಗಿದ್ದಾಗ್ಯೂ ವಿನಾ ಕಾರಣ ಪ್ರತಿಪಕ್ಷಗಳು ಮತ್ತಿತರರು ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳು ಪರೋಕ್ಷವಾಗಿ ರಾಜ್ಯಪಾಲರು ಮತ್ತು ಲೋಕಾಯುಕ್ತರ ಟೀಕೆಗೆ ಮಾರುತ್ತರ ನೀಡಿದರು ಎಂದು ಹೇಳಲಾಗಿದೆ.
-ಕೇಂದ್ರಕ್ಕೆ ಕೇಳಿದ್ದು ಹೆಚ್ಚು, ಕೊಟ್ಟದ್ದು ಕಡಿಮೆ: ನೆರೆ ಪರಿಹಾರಕ್ಕೆ ೧೮,೫೬೮ ಕೋಟಿ ರು. ನೆರವು ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಕೇಂದ್ರದಿಂದ ಇದುವರೆಗೆ ಬಂದಿರುವುದು:- ಸಿಆರ್ಎಫ್ನಿಂದ ೧೩೯.೬೯ ಕೋಟಿ ರುಪಾಯಿ, ಎನ್ಸಿಸಿಎಫ್ನಿಂದ ೮೩.೮೩ ಕೋಟಿ ರುಪಾಯಿ, ಬರ ಪರಿಹಾರ ನಿಧಿಯಿಂದ ೧೧೪ ಕೋಟಿ ರುಪಾಯಿ. ಹೀಗೆ ಕೇಂದ್ರದಿಂದ ಒಟ್ಟು ಕೇವಲ ೮೩೯ ಕೋಟಿ ರುಪಾಯಿ ಬಂದಿದೆ.
ಆದರೆ, ರಾಜ್ಯ ಸರ್ಕಾರ ಕೇಂದ್ರದ ನೆರವಿಗಾಗಿ ಕಾಯ್ದು ಕುಳಿತುಕೊಳ್ಳದೇ ಇದುವರೆಗೆ ೧೫೭೯ ಕೋಟಿ ರುಪಾಯಿ ಬಿಡುಗಡೆ ಮಾಡಿದ್ದು, ಈ ಪೈಕಿ ೧೧೩೯ ಕೋಟಿ ರುಪಾಯಿಯನ್ನು ಖರ್ಚು ಮಾಡಿದೆ. ಉಳಿದಿರುವ ಹಣವನ್ನು ಅಗತ್ಯತೆ ನೋಡಿಕೊಂಡು ಖರ್ಚು ಮಾಡುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಇದಲ್ಲದೇ, ಸಾರ್ವಜನಿಕರಿಂದ ೧೫೨೮ ಕೋಟಿ ರುಪಾಯಿ ದೇಣಿಗೆ ಸಂಗ್ರಹಿಸಲಾಗಿದೆ.
ಮನವರಿಕೆ ಮಾಡಿದ್ದೇನೆ- ಬಿಎಸ್ವೈ: ನೆರೆ ಪೀಡಿತ ಪ್ರದೇಶಗಳಲ್ಲಿ ಸಮರ್ಪಕವಾಗಿ ಪರಿಹಾರ ಕಾಮಗಾರಿಗಳು ನಡೆದಿಲ್ಲ ಎಂದು ರಾಜ್ಯಪಾಲರು ಹೇಳಿದ್ದರು. ಈ ಕಾರಣದಿಂದ ಅವರನ್ನು ಭೇಟಿ ಮಾಡಿ ಸರ್ಕಾರ ಕೈಗೊಂಡಿರುವ ಕಾಮಗಾರಿಗಳ ವಾಸ್ತವತೆಯನ್ನು ಮನವರಿಕೆ ಮಾಡಿಕೊಡುವ ಸಮಗ್ರ ಮಾಹಿತಿಯನ್ನು ನೀಡಿದ್ದೇನೆ ಮತ್ತು ವಿವರಿಸಿದ್ದೇನೆ ಎಂದು ಹೇಳಿದರು.ನಾವು ನೀಡಿದ ವಿವರಣೆಯಿಂದ ರಾಜ್ಯಪಾಲರು ತೃಪ್ತಿ ವ್ಯಕ್ತಪಡಿಸಿದರು ಎಂದು ಹೇಳಿದ ಮುಖ್ಯಮಂತ್ರಿಗಳು, ಈ ಚರ್ಚೆ ಸಂದರ್ಭದಲ್ಲಿ ರಾಜ್ಯಪಾಲರು ಸರ್ಕಾರಕ್ಕೆ ಹಲವು ಸೌಹಾರ್ದಯುತವಾದ ಸಲಹೆಗಳನ್ನು ನೀಡಿದರು ಎಂದರು.
-ರಾಜ್ಯಪಾಲರಿಗೆ ಆಹ್ವಾನ
ಪರಿಹಾರದಲ್ಲಿ ಲೋಪ ಆಗಿದೆ ಎಂದು ಹೇಳಿಕೆ ನೀಡಿದ್ದ ರಾಜ್ಯಪಾಲರಿಗೆ ಮಾಹಿತಿ ಕೊರತೆ ಇದೆ ಎಂದು ಶುಕ್ರವಾರವಷ್ಟೇ ಪ್ರತಿಕ್ರಿಯೆ ನೀಡಿದ್ದ ಯಡಿಯೂರಪ್ಪ, ಮುಂದಿನ ವಾರ ನೆರೆ ಪೀಡಿತ ಪ್ರದೇಶದ ೨ ಸ್ಥಳಗಳಲ್ಲಿ ಮನೆ ನಿರ್ಮಾಣ ಮಾಡುವ ಶಿಲಾನ್ಯಾಸ ಕಾರ್ಯಕ್ರಮಕ್ಕೆ ರಾಜ್ಯಪಾಲರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.ರಾಜ್ಯಪಾಲರ ಭೇಟಿ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಸ್. ಸುರೇಶ್ಕುಮಾರ್ ಇದ್ದರು.
ಸೌಜನ್ಯ: ಕನ್ನಡಪ್ರಭ