ಬೆಂಗಳೂರು, ಜನವರಿ 20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಬ್ಬು ಬೆಳೆಗಾರರ ನಡುವೆ ನಡೆದ ಮಾತುಕತೆ ವಿಫಲವಾಗಿದ್ದು, ತಮ್ಮ ಬೇಡಿಕೆ ಈಡೇರಿಸಲು ರೈತರು ಫೆ.೨೦ ರವರೆಗೆ ಗಡುವು ನೀಡಿದ್ದಾರೆ.
ಈ ನಡುವೆ ಕಬ್ಬಿನ ರಾಜ್ಯ ಸಲಹಾ ದರ ನಿಗದಿಪಡಿಸುವುದಾಗಿ ಯಡಿಯೂರಪ್ಪ ರೈತರಿಗೆ ಭರವಸೆ ನೀಡಿರುವುದಲ್ಲದೆ, ಅವರ ಸಮಸ್ಯೆ ಬಗೆಹರಿಸಲು ಉನ್ನತ ಮಟ್ಟದ ತಾಂತ್ರಿಕ ಸಮಿತಿ ರಚಿಸುವುದಾಗಿ ಪ್ರಕಟಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಸಕ್ಕರೆ ನಿರ್ದೇಶಕರ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲಾಗುತ್ತದೆ.
ಬೇರೆ ಬೇರೆ ರಾಜ್ಯಗಳಲ್ಲಿರುವ ಸ್ಥಿತಿಗತಿಗಳ ಅಧ್ಯಯನ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ವರದಿ ಬಂದ ನಂತರ ಮುಂದಿನ ವರ್ಷದಿಂದ ಅದರ ಶಿಫಾರಸ್ಸುಗಳನ್ನು ಜಾರಿಗೊಳಿಸಲಾಗುವುದು.
ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಅನ್ಯಾಯವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಕಬ್ಬು ಬೆಳೆಗಾರರ ಬಾಕಿ ಪಾವತಿಸದ ಸರ್ಕಾರ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಸಕ್ಕರೆ ಕಾರ್ಖಾನೆಗಳಿಂದ ಕಂದಾಯ ಬಾಕಿ ವಸೂಲಿ ಮಾಡಿ ರೈತರಿಗೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಕಬ್ಬಿಗೆ ಬೆಳೆವಿಮೆ ಜಾರಿಗೆ ತರಲು ಸಾಧ್ಯವಿಲ್ಲ ಎಂದ ಅವರು, ಬೆಳೆಗಾರರ ಜ್ವಲಂತ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.
ಉತ್ತರ ಕರ್ನಾಟಕದ ಪ್ರತಿ ಟನ್ ಕಬ್ಬಿಗೆ ೧೮೦೦-೨೦೫೦ ರೂಪಾಯಿ ನಿಗದಿ ಪಡಿಸಿದೆ.
ದಕ್ಷಿಣ ಕರ್ನಾಟಕದಲ್ಲಿ ಸಾಗಾಣಿಕೆ ಹಾಗೂ ಕಟಾವಿನ ವೆಚ್ಚ ಸೇರಿ ೧೫೦೦ರಿಂದ ೧೭೯೮ ರುಪಾಯಿವರೆಗೆ ನಿಗದಿ ಪಡಿಸಲಾಗಿದೆ ಎಂದರು.
ನಂತರ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ, ನಮ್ಮ ಬೇಡಿಕೆಗಳಲ್ಲಿ ಕೆಲವಕ್ಕೆ ಮುಖ್ಯಮಂತ್ರಿ ಸ್ಪಂಧಿಸಿರುವುದರಿಂದ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿದೆ.
ಕಬ್ಬಿನ ದರ ನಿಗದಿ ಸೇರಿದಂತೆ ಬೇಡಿಕೆ ಈಡೇರಿಕೆ ಫೆ. ೨೦ರ ಗಡುವು ನೀಡಲಾಗಿದ್ದು, ಅಷ್ಟರಲ್ಲಿ ಈಡೇರಿಸದಿದ್ದರೆ, ಮತ್ತೆ ಹೋರಾಟ ಮುಂದುವರೆಸಲಾಗುವುದು ಎಂದರು.