ಬೆಂಗಳೂರು, ಏ. ೩೦ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರುವ ಹೊಣೆಗಾರಿಕೆ ಕೇವಲ ಸರ್ಕಾರ ಅಥವಾ ವಿಶ್ವವಿದ್ಯಾನಿಲಯಗಳಷ್ಟೇ ಅಲ್ಲದೆ, ಸಂಶೋಧನಾ ಸಂಶೋಧನಾ ಸಂಸ್ಥೆಗಳ ಮೇಲೂ ಇದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಪಿ. ಬಲರಾಂ ಅವರು ತಿಳಿಸಿದರು.
ಅವರು ಇಂದು ಬೆಂಗಳೂರು ವಿಶ್ವವಿದ್ಯಾನಿಲಯದ ೪೫ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡುತ್ತಿದ್ದರು. ಭಾರತದ ಉನ್ನತ ಶಿಕ್ಷಣ ಕ್ಷೇತ್ರ ಇಂದು ವಿಚಿತ್ರ ಸನ್ನಿವೇಶವನ್ನು ಎದುರಿಸುತ್ತಿದೆ. ದೇಶದಲ್ಲಿ ರಾಷ್ಟ್ರೀಯ ಪ್ರಯೋಗಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಉತ್ತಮ ಆರ್ಥಿಕ ನೆರವು, ಸಿಬ್ಬಂದಿ ಎಲ್ಲವನ್ನೂ ಹೊಂದಿವೆ. ಆದರೆ ಇಲ್ಲಿ ಸಂಶೋಧನೆ ಮಾತ್ರ ನಡೆಯುತ್ತಿದ್ದು, ಬೋಧನೆಗೆ ಅವಕಾಶವೇ ಇಲ್ಲ. ಮತ್ತೊಂದೆಡೆ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಲ್ಲಿ ಬೋಧನೆಗೇ ಪ್ರಾಶಸ್ತ್ಯ ನೀಡಲಾಗುತ್ತಿದೆ. ಸಂಶೋಧನೆಗೆ ಅತಿ ಕಡಿಮೆ ಅವಕಾಶವಿದೆ. ಆದರೆ ಉನ್ನತ ಶಿಕ್ಷಣ ಬೋಧನೆ ಮತ್ತು ಸಂಶೋಧನೆಯ ಸಂಗಮವಾಗಬೇಕು. ಈ ನಿಟ್ಟಿನಲ್ಲಿ ಐಐಟಿಗಳು, ನೂತನವಾಗಿ ಸ್ಥಾಪಿಸಲಾದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು ಉತ್ತಮ ಉದಾಹರಣೆ ಎಂದು ತಿಳಿಸಿದರು.
ಸ್ವಾಗತ ಭಾಷಣ ಮಾಡಿದ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್. ಪ್ರಭುದೇವ್ ಅವರು ಮಾತನಾಡಿ, ವಿಶ್ವವಿದ್ಯಾಲಯವು ಕೇವಲ ತನ್ನ ಜ್ಞಾನದ ಅವಶ್ಯಕತೆಗಾಗಿ ಅಲ್ಲ, ಸಮಾಜದ ಹಿತಕ್ಕಾಗಿಯೇ ಅಸ್ತಿತ್ವವನ್ನು ಪಡೆದಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ವಿವಿಯಲ್ಲಿ ಸಂಶೋಧನೆ ಮತ್ತು ಶೈಕ್ಷಣಿಕ ಬೆಳವಣಿಗೆಗಾಗಿ ಪ್ರತಿ ವಿಭಾಗಕ್ಕೂ ಎಲ್ಲ ರೀತಿಯ ಸೌಲಭ್ಯಗಳನ್ನು ಕೊಟ್ಟು ಸ್ವಾವಲಂಬಿಯಾಗಿ ಮಾಡಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ೧ ಕೋಟಿ ರೂಪಾಯಿ ತೆಗೆದಿಡಲಾಗಿದೆ. ಇದರೊಂದಿಗೆ ಸಂಶೋಧನಾ ಚಟುವಟಿಕೆಯನ್ನು ಉತ್ತೇಜಿಸಲು ರೂ. ೧ ಕೋಟಿ ಮೀಸಲಿಡಲಾಗಿದೆ.
ಪರೀಕ್ಷಾ ವಿಭಾಗದಲ್ಲೂ ಗಣನೀಯ ಸುಧಾರಣೆಗಳನ್ನು ಮಾಡಲಾಗಿದ್ದು, ಕೇವಲ ೨೨ ದಿನಗಳಲ್ಲಿ ಫಲಿತಾಂಶ ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದೆ. ಮರು ಮೌಲ್ಯಮಾಪನ ಬರುವ ಅರ್ಜಿಗಳ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆಯಾಗಿದೆ ಎಂದು ಅವರು ತಿಳಿಸಿದರು.
ಹನ್ನೊಂದನೇ ಪಂಚವಾರ್ಷಿಕ ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್ ಎಂದು ಗುರುತಿಸಲಾಗಿದೆ ಎಂದು ಅವರು ವಿವರಿಸಿದರು.
ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಿದರು. ಸಹ ಕುಲಾಧಿಪತಿಗಳೂ ಆದ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಉಪಸ್ಥಿತರಿದ್ದರು.