ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಚರ್ಚ್ ಧಾಳಿ ಪ್ರಕರಣ ವಿಚಾರಣೆ - ವಕೀಲರ ಅಭಿಪ್ರಾಯ ಸಂಗ್ರಹ

ಮಂಗಳೂರು: ಚರ್ಚ್ ಧಾಳಿ ಪ್ರಕರಣ ವಿಚಾರಣೆ - ವಕೀಲರ ಅಭಿಪ್ರಾಯ ಸಂಗ್ರಹ

Sat, 26 Sep 2009 03:03:00  Office Staff   S.O. News Service
ಮಂಗಳೂರು, ಸೆ.೨೫: ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿ ಕುರಿತಾದ ಪ್ರಕರಣಗಳಿಗೆ ಸಂಬಂಧಿಸಿ ಕಳೆದ ಒಂದು ವರ್ಷದಿಂದೀಚೆಗೆ ವಿಚಾರಣೆ ನಡೆಸುತ್ತಿರುವ ನ್ಯಾ. ಬಿ.ಕೆ.ಸೋಮಶೇಖರ ಆಯೋಗವು ಶೀಘ್ರದಲ್ಲೇ ಸರಕಾರಕ್ಕೆ ಸಲ್ಲಿಸಲಿರುವ ಮಧ್ಯಾಂತರ ವರದಿಗಾಗಿ ವಕೀಲರ ಅಭಿಪ್ರಾಯಗಳನ್ನು ಇಂದು ಸಂಗ್ರಹಿಸಲಾಯಿತು.  

ಪ್ರತಿಯೊಂದು ಜಿಲ್ಲೆ, ತಾಲೂಕುಗಳಲ್ಲಿ ಅದರಲ್ಲೂ ಮುಖ್ಯವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ  ಕ್ರಿಯಾಶೀಲ ಶಾಂತಿ ಸಮಿತಿ ರಚುಸುವಂತೆ ವಕೀಲರು ಚರ್ಚೆಯ ಸಂದರ್ಭಸಲಹೆ ನೀಡಿದರು.

ಸುಮಾರು ನಾಲ್ಕೂವರೆ ತಾಸುಗಳಿಗೂ ಅಧಿಕ ಕಾಲ ನಡೆದ ವಕೀಲರ ವಾದ, ಪ್ರತಿವಾದ, ಚರ್ಚೆಯನ್ನು ತಾಳ್ಮೆಯಿಂದ ಆಲಿಸುತ್ತಾ, ವಕೀಲರಿಗೆ ಕಾನೂನಿನ ಪರಿಮಿತಿ ಗಳನ್ನು ವಿವರಿಸುತ್ತಾ ನ್ಯಾ.ಸೋಮಶೇಖರ ಅಭಿಪ್ರಾಯ ಸಂಗ್ರಹಿಸಿದರು. 

ಈಗಾಗಲೆ ಬೆಂಗಳೂರು ಹಾಗೂ ಇತರ ಕೆಲ ಜಿಲ್ಲೆಗಳಲ್ಲಿ ವಕೀಲರಿಂದ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಈ ಅಭಿಪ್ರಾಯ ಕ್ರೋಢೀಕರಿಸಿ ಮಧ್ಯಾಂತರ ವರದಿಯನ್ನು ಪಾರದರ್ಶಕವಾಗಿ ತಯಾರಿಸುವುದಾಗಿ ನ್ಯಾ.ಸೋಮಶೇಖರ ತಿಳಿಸಿದರು.

ವರದಿಯನ್ನು ರಾಜ್ಯಪಾಲರು, ಮುಖ್ಯ ಮಂತ್ರಿ, ವಿರೋಧ ಪಕ್ಷದ ನಾಯಕರನ್ನೊಳ ಗೊಂಡಂತೆ ಪಾರದರ್ಶಕವಾಗಿ ಸಲ್ಲಿಸುವ ಬಗ್ಗೆ ಆಲೋಚನೆ ಇರುವುದಾಗಿ ಹೇಳಿದರು.
ಈ ಸಂದರ್ಭ ವಕೀಲರಾದ ಫಾನ್ಸಿಸ್, ಸುಮನಾ ಶರಣ್, ಆಯೋಗದ ವ್ಯವಸ್ಥಾಪಕ ತಿಮ್ಮಾವಗೋಳ್, ರೇಖಾ, ಶಶಿಕಲಾ ಉಪಸ್ಥಿತರಿದ್ದರು.  

ಬಜರಂಗದಳದಿಂದಲೇ ದಾಳಿ: ಬಿ.ಇಬ್ರಾಹೀಂ

ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಇಂದು ನಡೆದ ಕಲಾಪದಲ್ಲಿ ಅಭಿಪ್ರಾಯ ಮಂಡಿಸಿದ ಕ್ರೈಸ್ತ ಫಿರ್ಯಾದುದಾರರ ಪರ ವಕೀಲ ಬಿ. ಇಬ್ರಾಹೀಂ, ದ.ಕ. ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ನಡೆದ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗೆ ಬಜರಂಗದಳ ಸಂಘಟನೆಯೇ ಕಾರಣ. ಸಂಘಟನೆಯ ಸಂಚಾಲಕ ಮಹೇಂದ್ರಕುಮಾರ್ ದಾಳಿಯನ್ನು ಒಪ್ಪಿಕೊಂಡಿದ್ದನ್ನು ಮಾಧ್ಯಮ ಗಳು ವರದಿ ಮಾಡಿವೆ. ಮಾತ್ರವ ಲ್ಲದೆ, ಹೆಸರಾಂತ ‘ಕ್’ ಮ್ಯಾಗಝೀನ್‌ನಲ್ಲಿ ಈ ಕುರಿತು ಮಹೇಂದ್ರಕುಮಾರ್‌ರ ಸುದೀರ್ಘ ಸಂದರ್ಶನದ ವರದಿಯೂ ಪ್ರಕಟವಾಗಿದೆ ಎಂದು ಹೇಳಿದರು. 

ಮತಾಂತರದ ಹಿನ್ನೆಲೆಯಲ್ಲಿ ಕ್ರೈಸ್ತ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ ಎಂಬ ವಾದ ಇದೆಯಾ ದರೂ, ಘಟನೆಗೆ ಸಂಬಂಧಿಸಿ ಮಾಧ್ಯಮ ಗಳಿಗೆ ಹೇಳಿಕೆ ನೀಡಿದ್ದ ಅಂದಿನ ಪಶ್ಚಿಮ ವಲಯ ಐಜಿಪಿ ಎ.ಎಂ.ಪ್ರಸಾದ್, ಜಿಲ್ಲೆಯಲ್ಲಿ ಒಂದೇ ಒಂದು ಮತಾಂತರದ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿ ದ್ದರು. ಹಾಗಾಗಿ ಮತಾಂತರ ವೆಂಬ ಸುಳ್ಳು ಆರೋಪದೊಂದಿಗೆ ಕ್ರೈಸ್ತ ಸಮುದಾಯವನ್ನು ಗುರಿ ಮಾಡಲಾಗಿದೆ ಎಂದು ಇಬ್ರಾಹೀಂ ಅಸಮಾಧಾನ ವ್ಯಕ್ತಪಡಿಸಿದಾಗ, ಪೊಲೀಸ್ ವರ ವಕೀಲ ನಾರಾಯಣ ರೆಡ್ಡಿ ಮತ್ತು ಬಜರಂಗದಳ ಪರ ವಕೀಲ ಜಗದೀಶ ಶೇಣವ,  ಐಜಿಪಿ ಅಂತಹ ಹೇಳಿಕೆ ನೀಡಿಲ್ಲವೆಂದು ವಾದಿಸಿದರು. 

ಆ ಬಗ್ಗೆ ತಾನು ಈಗಾಗಲೆ ಫಿರ್ಯಾದು ದಾರರೊಬ್ಬರ ವಿಚಾರಣೆಯ ಸಂದರ್ಭ ಸಾಕ್ಷಗಳನ್ನು ಆಯೋಗಕ್ಕೆ ಸಲ್ಲಿಸಿದ್ದು, ತನ್ನಲ್ಲಿಯೂ ದಾಖಲೆಗಳಿವೆ ಎಂದು ಇಬ್ರಾಹೀಂ ಪ್ರತಿಪಾದಿಸಿದರು. 

ಗೋಲ್ವಾಲ್ಕರ್‌ರ ವಿಚಾರಧಾರೆಯೊಂದನ್ನು ಆಯೋಗದೆದುರು ಪ್ರಸ್ತುತ ಪಡಿಸಿದ ವಕೀಲ ಇಬ್ರಾಹೀಂ, ಗೋಲ್ವಾಲ್ಕರ್‌ರ ಪ್ರಕಾರ ಹಿಂದೂ ಗಳನ್ನು ಹೊರತುಪಡಿಸಿ ಉಳಿದ ಅಲ್ಪಸಂಖ್ಯಾತರು ಈ ದೇಶದ ‘ಸೆಕೆಂಡ್ ಕ್ಲಾಸ್ ಸಿಟಿಝನ್ಸ್’. ಈ ಮಾತನ್ನು ಸರಕಾರ ಕೂಡಾ ಹೇಳಲು ಸಾಧ್ಯವಿಲ್ಲ. ಗೋಲ್ವಾಲ್ಕರ್‌ರ ಈ ತೆರನಾದ ಪ್ರಚೋದನಾಕಾರಿ ವಿಚಾರಧಾರೆ ಗಳು, ಕ್ರೈಸ್ತರಿಂದ ಮತಾಂತರ ನಡೆಸ ಲಾಗುತ್ತಿದೆ ಎಂಬ ಆರೋಪ ಹಾಗೂ ಸತ್ಯದರ್ಶಿನಿ ಎಂಬ ಪುಸ್ತಕಗಳೇ ಮುಖ್ಯವಾಗಿ ಜಿಲ್ಲೆಯಲ್ಲಿ ಚರ್ಚ್ ದಾಳಿಯಂತಹ ಅಹಿತಕರ ಘಟನೆಗಳಿಗೆ ಕಾರಣ ಎಂದು ಇಬ್ರಾಹೀಂ ಅಭಿಪ್ರಾಯಿಸಿದರು. 

ಮದ್ಯಾಂತರ ವರದಿಯಲ್ಲಿ ಘಟನೆಯಲ್ಲಿ ಪೊಲೀಸರ ಪಾತ್ರವನ್ನು ಉಲ್ಲೇಖಿಸುವಂತೆ ನ್ಯಾ. ಸೋಮಶೇಖರರನ್ನು ಆಗ್ರಹಿಸಿದಾಗ, ಭವಿಷ್ಯ ವನ್ನು ಗಮನದಲ್ಲಿಟ್ಟು ತಾವು ವರದಿ ತಯಾರಿಸು ತ್ತಿದ್ದು, ಪೊಲೀಸರ ಪಾತ್ರದ ಬಗ್ಗೆ ಅಂತಿಮ ವರದಿಯಲ್ಲಿ ಉಲ್ಲೇಖಿಸುವುದಾಗಿ ಹೇಳಿದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿ ಸಿದ ಇಬ್ರಾಹೀಂ, ತಾನೂ ನೊಂದ ಸಮುದಾ ಯವನ್ನು ಪ್ರತಿನಿಧಿಸುತ್ತಿರುವು ದರಿಂದ ನನ್ನ ಪ್ರಕಾರ ಪೊಲೀಸ್ ವೈಫಲ್ಯ, ದೌರ್ಜನ್ಯದ ಬಗ್ಗೆ ಉಲ್ಲೇಖ ಅಗತ್ಯ ಎಂದು ಹೇಳಿದರು. 

ಕಾನೂನು ಕೈಗೆತ್ತಿಕೊಳ್ಳುವ ವ್ಯಕ್ತಿಗಳು ಹಾಗೂ ಸಂಘಟನೆಗಳು ಮತ್ತು ಸೌಹಾರ್ದ ಕೆಡಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ ಬೇಕು, ದಾಳಿಯಿಂದ ಆಗಿರುವ ನಷ್ಟಕ್ಕೆ, ಗಾಯಾಳುಗಳಿಗೆ ತಕ್ಷಣ ಪರಿಹಾರ ಒದಗಿಸ ಬೆಕು. ಬಾಬಾ ಬುಡಾನ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿ ಸರಕಾರ ಎ ಪ್ರಕರಣಗಳನ್ನು ಹಿಂದೆಗೆದುಕೊಂಡಂತೆ ಚರ್ಚ್ ದಾಳಿಗೆ ಸಂಬಂಧಿಸಿ ಕ್ರೈಸ್ತ ಸಮುದಾಯದವರ ಮೇಲೆ ಹಾಕಲಾದ ಎ ಕೇಸುಗಳನ್ನು ಹಿಂದೆಗೆದು ಕೊಳ್ಳಲು ಮಧ್ಯಾಂತರ ವರದಿಯಲ್ಲಿ ಸರಕಾರ ವನ್ನು ಆಗ್ರಹಿಸುವಂತೆ ನ್ಯಾ.ಸೋಮಶೇಖರರನ್ನು ಇಬ್ರಾಹಿಂ ಆಗ್ರಹಿಸಿದರು. ಸರ್ವರಿಗೂ ಸಮಾನತೆ, ಸ್ವಾತಂತ್ರವನ್ನು ಕಲ್ಪಿಸಿರುವ ಸಂವಿಧಾನದಡಿ ಮತಾಂತರ ತಡೆ ಕಾಯ್ದೆಯ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರಲ್ಲದೆ, ಶಾಂತಿ ಸಮಿತಿಯನ್ನು ರಚಿಸುವ ಅಗತ್ಯವನ್ನು ಒತ್ತಿ ಹೇಳಿದರು. 

 ಪೊಲೀಸರಿಗೆ ಮಾರ್ಗದರ್ಶನ ಅಗತ್ಯ: ನಾರಾಯಣ ರೆಡ್ಡಿ

ಅಹಿತಕರ ಘಟನೆಗಳ ಸಂದರ್ಭ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಪೊಲೀಸರಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನದ ಅಗತ್ಯವಿದೆ ಎಂದು ಪೊಲೀಸ್ ಪರ ವಕೀಲ ನಾರಾಯಣ ರೆಡ್ಡಿ ಒಪ್ಪಿಕೊಂಡರು. 

ಪ್ರತಿ ಜಿಲ್ಲೆ, ತಾಲೂಕುಗಳಲ್ಲಿಯೂ ಎಲ್ಲ ಧರ್ಮಗಳ ಮುಖಂಡರನ್ನೊಳಗೊಂಡ ಶಾಂತಿ ಸಮಿತಿಗಳ ಅಗತ್ಯವನ್ನು ಪ್ರತಿಪಾದಿಸಿದ ಅವರು, ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡುವಂತೆ ಆಗ್ರಹಿಸಿದರು. 

ಕೆಲವು ಕಡೆ ಚರ್ಚ್‌ಗಳನ್ನು ಸುಲಭವಾಗಿ ಗುರುತಿಸಬಹುದಾದರೂ, ಮತ್ತೆ ಕೆಲವು ಕಡೆ ಕಾರ್ಯಾಚರಿಸುತ್ತಿರುವ ಪ್ರಾರ್ಥನಾ ಹಾಲ್‌ಗಳು ಗಮನಕ್ಕೆ ಬಾರದಿರುವ ಕಾರಣ ಅವುಗಳಿಗೆ ರಕ್ಷಣೆ ನೀಡುವುದು ಕಷ್ಟವಾಗುತ್ತಿದೆ ಎಂದು  ನಾರಾಯಣ ರೆಡ್ಡಿ ಹೇಳಿದರು.

ಆಗ ಅವರನ್ನು ತಡೆದ ನ್ಯಾ.ಸೋಮಶೇಖರ, ಹಾಗೆಂದು ಪೊಲೀಸರು ಅಂತಹ ಪ್ರಾರ್ಥನಾ ಲಯಗಳಿಗೆ ನುಗ್ಗಿ ಮನಬಂದಂತೆ ವರ್ತಿಸುವುದು ಸರಿಯಲ್ಲ. ಕಾನೂನು ಪ್ರಕಾರ ಶಾಂತಿಯಿಂದ ಕ್ರಮಕೊಳ್ಳುವಂತೆ ಪೊಲೀಸರಿಗೆ ತಿಳಿಸಿ ಎಂದು ಕಿವಿಮಾತು ಹೇಳಿದರು. 

ಪೊಲೀಸರಿಂದ ಸೂಕ್ತ ತನಿಖೆ ಇನ್ನೂ ಆಗಿಲ್ಲ ಎಂಬ ಆರೋಪ ಒಂದು ಕಡೆ ಕೇಳಿ ಬಂದಿರುವಾಗಲೇ, ಇನ್ನೊಂದೆಡೆ ಒಂದು ತಂಡ ರಾಜ್ಯಪಾಲರಿಗೆ ದೂರು ನೀಡುವ ಮೂಲಕ ತಮ್ಮ ಕೆಲಸಕ್ಕೆ ಅಡ್ಡಿಪಡಿಸುತ್ತಿದೆ ಎಂದು ನಾರಾಯಣ ರೆಡ್ಡಿ ವಾದಿಸಲು ಹೊರಟರಾದರೂ, ಅದು ಸಂವಿಧಾನ ಬದ್ಧ ಹಕ್ಕು. ಅದರಂತೆ ಅವರು ನಡೆದುಕೊಂಡಿದ್ದಾರೆ ಎಂದು ನ್ಯಾ.ಸೋಮಶೇಖರ ಪ್ರತ್ಯುತ್ತರಿಸಿದರು.
 
ಪರಿಹಾರಕ್ಕೆ ಕಾನೂನು ಅಡ್ಡಿ: ಎಲ್.ಎನ್. ಹೆಗ್ಡೆ

ನೆರೆ, ಬರ ಹಾಗೂ ಅಗ್ನಿ ದುರಂತ ಮೊದಲಾದ ಪ್ರಾಕೃತಿಕ ವಿಕೋಪಗಳಿಗೆ  ಸರಕಾರ ದಿಂದ ತತ್‌ಕ್ಷಣ ಪರಿಹಾರ ನೀಡಲು ಸಾಧ್ಯವಾಗುತ್ತದೆಯಾದರೂ ಮತೀಯ ಗಲಭೆಗಳ ಸಂದರ್ಭ ಕಾನೂನು ನಿಯಮಾವಳಿಗಳ ಅಡೆತಡೆಗಳಿಂದಾಗಿ ಪರಿಹಾರ ಕ್ರಮ ವಿಳಂಬವಾಗುತ್ತದೆ ಎಂದು ಸರಕಾರಿ ವಕೀಲ ಎಲ್.ಎನ್. ಹೆಗ್ಡೆ ವಾದಿಸಿದರು. 

ನ್ಯಾ.ಸೋಮಶೇಖರ ಮಾತನಾಡಿ, ಧರ್ಮಗಳು ನಮ್ಮ ಸಮಾಜದ ಬೆನ್ನೆಲುಬು. ಹಾಗಾಗಿ ಜನರ ಭಾವನೆ ನಿರ್ಲಕ್ಷ ಮಾಡುವುದು ಸರಿಯಲ್ಲ. ನಿಯಮಾವಳಿ ಕಾನೂನು ಆಗಲ್ಲ. ಸನ್ನಿವೇಶಗಳಿಗೆ ತಕ್ಕಂತೆ ಪರಿಹಾರ ವಿತರಣೆಗೆ ಕಾಲಮಿತಿ ಅಗತ್ಯ ಎಂದು ಸಲಹೆ ನೀಡಿದರು. 

ಬಹುಸಂಖ್ಯಾತರಿಗೂ ಆಯೋಗ ಬೇಕು: ಜಗದೀಶ ಶೇಣವ

ಮಂಗಳೂರಿನ ಮಿಲಾಗ್ರಿಸ್ ಹೊರತುಪಡಿಸಿ ದ.ಕ. ಜಿಲ್ಲೆಯ ಎಲ್ಲೂ ರೋಮನ್ ಕೋಥೊಲಿಕ್ ಚರ್ಚ್ ಮೇಲೆ ದಾಳಿ ನಡೆದಿಲ್ಲ ಎಂದು ವಾದಿಸಿದ ಬಜರಂಗದಳ ಪರ ವಕೀಲ ಜಗದೀಶ ಶೇಣವ, ನ್ಯೂಲೈಫ್ ಎಂಬ ಸಂಸ್ಥೆ ಹಲವಾರು ಆಮಿಷಗಳ ಮೂಲಕ ಹಿಂದೂಗಳನ್ನು ಮತಾಂತರಗೊಳಿಸಿದೆ ಎಂದು ಆರೋಪಿಸಿದರು. 

ಮಿಲಾಗ್ರಿಸ್‌ನಲ್ಲಿ ನಡೆದ ಚಿಕ್ಕ ಘಟನೆಯನ್ನೇ ದೊಡ್ಡದಾಗಿಸಿದ ಕ್ರಿಶ್ಚಿಯನ್ನರು ಸುಮಾರು ೪೮ ಗಂಟೆಗಳ ಕಾಲ ಜಿಲ್ಲೆಯನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದರು ಎಂದು ಆರೋಪಿಸಿದ ಶೇಣವ,  ಸಣ್ಣ ಘಟನೆಗೆ ಇಷ್ಟು ದೊಡ್ಡ ರೀತಿಯ ಪ್ರತಿರೋಧದ ಅಗತ್ಯವಿರಲಿಲ್ಲ ಎಂದರು. 

ಹಿಂದೂ ಬಾಹುಳ್ಯವಿರುವ ದೇಶದಲ್ಲಿ ಸರ್ವಧರ್ಮ ಸಹಿಷ್ಣುತೆಯ ಬಗ್ಗೆ ಹಿಂದೂಗಳಿಗೆ ಪಾಠ ಬೇಕಾಗಿಲ್ಲ ಎಂದು ಅವರು, ಹಿಂದೂಗಳು ಧರ್ಮ ಸಹಿಷ್ಣುಗಳಾಗಿರದಿದ್ದರೆ ಬೇರೆ ಯಾರೂ ಇಲ್ಲಿ ಇರಲು ಸಾಧ್ಯವಿರುತ್ತಿರಲಿಲ್ಲ ಎಂಬ ವಾದವನ್ನು ಮಂಡಿಸಿದರು. 

ಅಲ್ಪಸಂಖ್ಯಾತರ ರಕ್ಷಣೆಗಾಗಿ ಆಯೋಗ ಇರುವುದಾದರೆ ಬಹುಸಂಖ್ಯಾತರಿಗೂ ಆಯೋಗ ಬೇಕು ಎಂದು ವಾದಿಸಿದ ಅವರು, ಮತಾಂತರ ತಡೆ ಕಾಯ್ದೆ ಜಾರಿಯಾಗಬೇಕು ಎಂದರು. 

ಪ್ರಾರ್ಥನಾಲಯಗಳಿಗೆ ಕಲ್ಲೆಸೆಯುವುದು ಸಣ್ಣ ವಿಷಯವಲ್ಲ: ನೊರೊನ್ಹ

ಸಂವಿಧಾನದಲ್ಲಿ ಅವರವರ ಆಯ್ಕೆಯ ಧರ್ಮವನ್ನು ಪಾಲಿಸಲು, ಆಚರಿಸಲು ಅವಕಾಶ ಇರುವುದರಿಂದ ಪ್ರಾರ್ಥನಾ ಸ್ಥಳಗಳಿಗೆ ಕಲ್ಲೆಸೆಯುವುದು, ಹಾನಿ ಮಾಡುವುದು ಸಣ್ಣ ವಿಷಯ ವಾಗಿ ಪರಿಗಣಿಸಬಾರದು. ಅದು ಸಂವಿಧಾನದ ಅಡಿಪಾಯವನ್ನೇ ಅಲುಗಾಡಿಸಿದಂತೆ. ರಾಜ್ಯಾದ್ಯಂತ ಇಂತಹ ಘಟನೆ ನಡೆಯಲು ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎಂದು ಎಂದು ಕ್ರೈಸ್ತ ಫಿರ್ಯಾದುರಾರರ ಪರ ಇನ್ನೋರ್ವ ವಕೀಲ ಎಂ.ಪಿ.ನೊರೊನ್ಹ ಟೀಕಿಸಿದರು. 

ಪ್ರಚೋದನಾಕಾರಿ ಭಾಷಣಗಳಿಗೆ ಕಡಿವಾಣ ಹಾಕಬೇಕು. ಪರಸ್ಪರ ಧರ್ಮಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ವಿದ್ಯಾರ್ಥಿ ದೆಸೆಯಲ್ಲೇ ಕಲ್ಪಿಸಬೇಕು. ಯಾವುದೇ ಧರ್ಮದಲ್ಲಿನ ಸಮಾಜ ಘಾತುಕ ಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂಬ ಸಲಹೆಗಳನ್ನು ಮದ್ಯಾಂತರ ವರದಿಯಲ್ಲಿ ಅಳವಡಿಸುವಂತೆ ಅವರು ಆಗ್ರಹಿಸಿದರು

Share: