ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮುಷ್ಕರ ಕೈಬಿಟ್ಟ ‘೧೦೮’ ವಾಹನ ಚಾಲಕರು

ಮುಷ್ಕರ ಕೈಬಿಟ್ಟ ‘೧೦೮’ ವಾಹನ ಚಾಲಕರು

Sat, 24 Apr 2010 12:47:00  Office Staff   S.O. News Service

ಮೈಸೂರು, ಏ. ೨೪, ಆರೋಗ್ಯ ತುರ್ತು ಸೇವೆಯ ‘೧೦೮’ ವಾಹನಗಳ ಮೈಸೂರು ಜಿಲ್ಲೆಯ ಚಾಲಕರು ಇಂದು ಬೆಳಗಿನ ಜಾವದಿಂದ ಮುಷ್ಕರಕ್ಕೆ ಮುಂದಾದರು. ಇದರಿಂದಾಗಿ ಗ್ರಾಮೀಣ ಭಾಗಗಳಲ್ಲಿನ ಜನರು ತುರ್ತು ಸೇವೆಗಳಿಗೆ ಪರದಾಡುವಂತಾಯಿತು. ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಜಾರಿಗೊಳಿಸಿದ ಮೈಸೂರು ಜಿಲ್ಲಾಡಳಿತವು ಅಗತ್ಯ ಕ್ರಮಗಳಿಗೆ ಮುಂದಾಗುತ್ತಿದ್ದಂತೆ ವಾಹನ ಚಾಲಕರುಗಳು ಮುಷ್ಕರ ಹಿಂತೆಗೆದುಕೊಂಡು ತಮ್ಮ ಕರ್ತವ್ಯಗಳ ನಿಗದಿತ ಪ್ರದೇಶಗಳಿಗೆ ತೆರಳಿದರು.
ಮಧ್ಯಾಹ್ನ ೧೨ ಗಂಟೆಯ ವೇಳೆಗೆ ಅಪರ ಜಿಲ್ಲಾಧಿಕಾರಿಗಳಾದ ಡಾ: ಸಿ.ಜಿ. ಬೆಟ್ಟಸೂರ ಮಠ ಅವರು ಮುಷ್ಕರ ನಿರತ ವಾಹನ ಚಾಲಕರನ್ನು ಕರೆದು ಅವರ ಸಮಸ್ಯೆಗಳನ್ನು ಕುರಿತಂತೆ ವಿವರವಾಗಿ, ಸಾವಧಾನವಾಗಿ ಚರ್ಚಿಸಿದರು. ಅವರ ಸಮಸ್ಯೆಗಳಿಗೆ ತಮ್ಮ ಸಹಾನುಭೂತಿಯನ್ನು ತಿಳಿಸಿದರಾದರೂ ಈಗಾಗಲೇ ಗ್ರಾಮೀಣ ಪ್ರದೇಶಗಳಿಂದ ಆರೋಗ್ಯ ತುರ್ತು ಸೇವೆಗೆ ಬರುತ್ತಿರುವ ದೂರವಾಣಿ ಕರೆಗಳು ಹಾಗೂ ಮುಷ್ಕರದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾದರು.
ಮುಷ್ಕರ ನಿರತರ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ಚರ್ಚಿಸುತ್ತಿದ್ದು ಪರಿಹಾರದ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೂ ಮುಷ್ಕರ ನಿರತರ ಬೇಡಿಕೆಗಳ ಬಗ್ಗೆ ಸಹಾನುಭೂತಿಯಿಂದ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ಅಗತ್ಯ ಶಿಫಾರಸ್ಸು ಮಾಡುವ ಭರವಸೆಯನ್ನು ಅಪರ ಜಿಲ್ಲಾಧಿಕಾರಿ ಡಾ: ಸಿ.ಜಿ. ಬೆಟ್ಟಸೂರ ಮಠ್ ನೀಡಿದರು.
ಮುಷ್ಕರ ಮಾಡುವವರು ಕಾನೂನಿನ್ವಯ ಸರ್ಕಾರಿ ವಾಹನಗಳನ್ನು ತಮ್ಮ ನಿಗಧಿತ ಸ್ಥಳದಿಂದ ಅಕ್ರಮವಾಗಿ ತಂದಿರುವ ಬಗ್ಗೆ, ಸಾರ್ವಜನಿಕರ ನೋವಿಗೆ ಅಗತ್ಯ ಸ್ಪಂದನ ನೀಡದಿರುವ ಬಗ್ಗೆ ವಾಹನ ಚಾಲಕರಿಗೆ ಮನದಟ್ಟು ಮಾಡಿ ವಾಹನ ಚಾಲನೆ ಸಾಧ್ಯವಾಗದಿದ್ದರೆ ಪರ್‍ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಎಚ್ಚರಿಸಿದರು.
 ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ರಾಜು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶ್ರೀ ಸಿದ್ದರಾಮಯ್ಯ, ಮೈಸೂರು ನಗರ ಸಹಾಯಕ ಪೋಲೀಸ್ ಆಯುಕ್ತ ಕೃಷ್ಣವರ್ಧನ್ ಅವರುಗಳು ವಾಹನ ಚಾಲಕರಿಗೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಅರಿವು ಮೂಡಿಸಿದರು.
ವಾಹನ ಚಾಲಕರು ತೀರ್ಮಾನಕ್ಕೆ ಬರಲು ಮದ್ಯಾಹ್ನ ೨.೩೦ರವರೆಗೆ ಕಾಲಾವಕಾಶ ಕೇಳಿದರು.
ಅಪರ ಜಿಲ್ಲಾಧಿಕಾರಿ ಡಾ: ಸಿ.ಜಿ. ಬೆಟ್ಟಸೂರ ಮಠ ಊಟಕ್ಕೂ ತೆರಳದೆ ಮುಷ್ಕರ ನಿರತರ ತೀರ್ಮಾನಕ್ಕೆ ಕಾದು ಕುಳಿತರು. ಮದ್ಯಾಹ್ನ ೩.೩೦ ಗಂಟೆಯಾದರೂ ವಾಹನ ಚಾಲಕರು ಯಾವುದೇ ತೀರ್ಮಾನಕ್ಕೆ ಬರಲಿಲ್ಲ. ಗ್ರಾಮೀಣ ಭಾಗಗಳಿಂದ ಆರೋಗ್ಯ ಸೇವೆ ೧೦೮ ಅಗತ್ಯತೆ ಬಗ್ಗೆ ಬೇಡಿಕೆ ದೂರವಾಣಿ ಬರುವುದು ಹೆಚ್ಚುತ್ತಲೇ ಹೋಯಿತು. ಪರ್‍ಯಾಯ ಅಂಬ್ಯುಲೆಸ್ಸ್ ವ್ಯವಸ್ಥೆ ಹಾಗೂ ಪರ್‍ಯಾಯ ಚಾಲಕರ ವ್ಯವಸ್ಥೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅಪರ ಜಿಲ್ಲಾಧಿಕಾರಿಗಳು ಮುಷ್ಕರ ನಿರತ ವಾಹನ ಚಾಲಕರು ಹಾಗೂ ವಾಹನಗಳ ಬಳಿಗೆ ತೆರಳಿ ಅಂತಿಮ ಎಚ್ಚರಿಕೆ ನೀಡಿದರು ಹಾಗೂ ಅಗತ್ಯ ಕಠಿಣ ಕ್ರಮಕ್ಕೆ ಸಿದ್ಧಗೊಂಡರು.
ಕೂಡಲೇ ‘೧೦೮’ ತುರ್ತು ಸೇವೆಯ ವಾಹನ ಚಾಲಕರು ಮುಷ್ಕರ ಕೈಬಿಟ್ಟು ತಮ್ಮ ವಾಹನಗಳೊಂದಿಗೆ ತiಗೆ ನಿಗದಿಪಡಿಸದ ಕರ್ತವ್ಯದ ಸ್ಥಳಕ್ಕೆ ತೆರಳಿದರು.
ಸ್ಥಳದಲ್ಲಿದ್ದ ನೂರಾರು ಜನರು ಜಿಲ್ಲಾಡಳಿತ ಗ್ರಾಮೀಣ ಜನರ ನೋವಿಗೆ ತ್ವರಿತ ಗತಿಯಲ್ಲಿ ಮಿಡಿದದ್ದು ಕಂಡು ಹರ್ಷಚಿತ್ತರಾದರೆ, ಕೆಲವರು ಅಪರ ಜಿಲ್ಲಾಧಿಕಾರಿಗಳನ್ನು ಅಭಿನಂದಿಸಲು ಮರೆಯಲಿಲ್ಲ.


Share: