ಬೆಂಗಳೂರು, ಏ: ೨೪-ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಶಾಸಕರ ಟೆಲಿಫೋನ್ ಕರೆಗಳನ್ನು ಕದ್ದಾಲಿಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜೀ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸರ್ಕಾರದಲ್ಲಿರುವ ಸಚಿವರು ಮತ್ತು ಶಾಸಕರ ಪೋನ್ ಕದ್ದಾಲಿಕೆ ನಡೆಯುತ್ತಿದ್ದು ಇದು ಫ್ಯಾಸಿಸ್ಟ್ ನಡವಳಿಕೆಯ ಪ್ರತೀಕ ಎಂದು ಅವರು ಟೀಕಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ವಿರುದ್ಧ ಇದೇ ೨೭ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಪೂರ್ವಭಾವಿ ಸಭೆ ನಂತರ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಜತೆಗೂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕದ್ದಾಲಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ನೇರ ಹೊಣೆ ಎಂದು ಹೇಳುವುದಿಲ್ಲವಾದರೂ ಸರ್ಕಾರದ ಮುಖ್ಯಸ್ಥರಾಗಿ ಇದರ ಹೊಣೆಯನ್ನು ಅವರು ಹೊರಲೇಬೇಕಾಗುತ್ತದೆ ಎಂದರು..
ಎಲ್ಲ ಮುಖಂಡರ ಹಾಗೂ ಸಚಿವರ ಪೋನ್ ಕದ್ದಾಲಿಕೆ ಮಾಡಿಸುತ್ತಿದೆ. ಆಡಳಿತ ಪಕ್ಷದ ಸಚಿವರು ಹಾಗೂ ಶಾಸಕರೇ ನನ್ನ ಬಳಿ ಕದ್ದಾಲಿಕೆ ವಿಚಾರ ಪ್ರಸ್ತಾಪಿಸಿದ್ದಾರೆ.
ಹೀಗಾಗಿ ಸಚಿವರು-ಶಾಸಕರು ಐದಾರು ಮೊಬೈಲ್ ಪೋನುಗಳನ್ನು ಇಟ್ಟುಕೊಂಡು ದೈನಂದಿನ ಕಾರ್ಯನಿರ್ವಹಿಸುವ ಸ್ಥಿತಿ ನಿರ್ಮಾಣಗೊಂಡಿದೆ.
ಕೇಂದ್ರ ಸರ್ಕಾರ ಪೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಘಟಕ ಆರೋಪಿಸಿ ತನಿಖೆಗೆ ಒತ್ತಾಯಿಸಿದೆ. ಅವರಿಗೆ ನೈತಿಕತೆ ಇದ್ದರೆ ಮೊದಲು ತಮ್ಮ ಆಡಳಿತವಿರುವ ಕರ್ನಾಟಕದಲ್ಲಿ ಕದ್ದಾಲಿಕೆ ವಿರುದ್ಧ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
ಕೇಂದ್ರದ ಆರ್ಥಿಕ ನೀತಿ, ರಾಜ್ಯ ಸರ್ಕಾರದ ದುರಾಢಳಿತದ ವಿರುದ್ಧ ಎಡ ಪಕ್ಷಗಳ ಜತೆಗೂಡಿ ಅರಮನೆ ಆವರಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸುಮಾರು ೫೦ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ. ಎನ್.ಡಿ.ಎ, ಯುಪಿಎ ಜತೆಗೂಡಿರುವ ಪಕ್ಷಗಳನ್ನು ಹೊರತುಪಡಿಸಿ ಉಳಿದ ಪಕ್ಷಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು.