ಭಟ್ಕಳ: ಜಗತ್ತಿನಲ್ಲಿ ಕೋಟ್ಯಾಂತರ ಫ್ಯಾಕ್ಟರಿ, ಕಂಪನಿಗಳಿದ್ದರೂ ಅನ್ನದ ಕಾಳನ್ನು ಸೃಷ್ಟಿಸಲಾರವು. ಮನೆಗೊಬ್ಬ ರಾಜಕಾರಣಿ, ಊರಿಗೆ ನೂರರಂತೆ ಸರಕಾರಿ ಅಧಿಕಾರಿಗಳೇ ತುಂಬಿ ಹೋಗಿದ್ದರೂ ಭತ್ತದ ಪೈರು ಚಿಗುರುವುದಿಲ್ಲ. ದಿನಕ್ಕೊಂದರಂತೆ ಸ್ವಾಮಿ, ದೇವರುಗಳು (!) ಹುಟ್ಟಿಕೊಂಡರೂ ನೆಲಕ್ಕೆ ನೀರು ಬಸಿದಿಲ್ಲ. ಹಸಿರು ಕಟ್ಟೆಯೊಡೆದು ಹೊರ ಬಂದಿಲ್ಲ. ೨೧ನೇ ಶತಮಾನದ ದುರಂತವಾಗಿ ಕಾಡಲಿರುವ ಆಹಾರದ ಕೂಗಿಗೆ ಎಂದಿನಂತೆ ಆಡಳಿತ ಶಾಹಿಯ ಗಾಢ ಮೌನ. ರಾಜಕಾರಣಿಗಳ ಅದಿರಿನ ಧೂಳಿನ ಅಬ್ಬರದಲ್ಲಿ ಅನ್ನದಾತ ಕಂಗಾಲಾಗುತ್ತಿದ್ದಾನೆ. ಒಣಗುತ್ತಿರುವ
ನೆಲದೊಂದಿಗೆ ರೈತನ ಗಂಟಲಿನಲ್ಲಿದ್ದ ಅಲ್ಪಸ್ವಲ್ಪ ನೀರಿನ ಪಸೆಯೂ ಆರಿ ಹೋಗುತ್ತಿದೆ. ಜಿಲ್ಲೆಯ ತುಂಡು ಭೂಮಿಯ ರೈತನ ಪಾಲಿಗೆ ಇದು ಕಣ್ಣೀರು ತರಿಸುವ ಸಂಗತಿ.
ಜಿಲ್ಲೆಯ ೮೧೩೬೯೫ ಹೆಕ್ಟೇರ್ ಭೂ ಪ್ರದೇಶದ ೭೯% ಭಾಗ ಅರಣ್ಯ ಪ್ರದೇಶದಿಂದ ಆವೃತವಾಗಿದೆ ಎಂದು ಹೇಳಲಾಗುತ್ತಿದ್ದರೂ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಅಂಕಿ ಅಂಶವನ್ನು ದೃಢಪಡಿಸಿಕೊಳ್ಳಲು ಮತ್ತೊಮ್ಮೆ ಸರ್ವೇ ಕಾರ್ಯದ ಮೊರೆ ಹೋಗಬೇಕಾಗುತ್ತದೆ. ೨೦೦೫-೦೬ರ ಮಾಹಿತಿಯ ಪ್ರಕಾರ ೧,೧೩೨೭೭ಹೆಕ್ಟೇರ್ ಪ್ರದೇಶವನ್ನು ಕೃಷಿ ಭೂಮಿ ಎಂದು ಗುರುತಿಸಲಾಗುತ್ತಿದೆ. ಜನಸಾಂದ್ರತೆ ಎನ್ನುವುದು ಅದನ್ನೂ ಕಿರಿದಾಗಿಸುತ್ತಾ ಸಾಗಿದೆ. ಕಳೆದ ಹತ್ತು ವರ್ಷಗಳ ಮಳೆಯ ಪ್ರಮಾಣವನ್ನು ಅವಲೋಕಿಸಿದರೆ ಮಳೆಯ ಪ್ರಮಾಣವೇನೂ ಕುಸಿದಿಲ್ಲ. ೧೧೬೬.೩-೩೬೭೨.೫ಮಿಮೀ ಸರಾಸರಿ ಮಳೆ ಇಲ್ಲಿ ದಾಖಲಾಗಿದೆ. ನಮ್ಮ ಭತ್ತದ ಬೆಳೆ (ಅಂದಾಜು ೮೦೩೧೧ಹೆಕ್ಟೇರ್) ಬಹುತೇಕ ಮಳೆಯನ್ನೇ ಅವಲಂಬಿಸಿಕೊಂಡಿದೆ. ಆದರೆ ‘ನೆರೆ’ಯ ಹೊರೆ ಎಂಬುದು ರೈತನನ್ನು ಪ್ರತಿ ವರ್ಷ ಗೋಳು ಹೊಯ್ದುಕೊಳ್ಳುತ್ತಲೇ ಇದೆ. ಅದಕ್ಕಾಗಿಯೇ ಆತ ಕೊರೆಯುವ ಚಳಿಯಲ್ಲಿಯೂ ಗದ್ದೆಯಲ್ಲಿ ಓಡಾಡ ಬಯಸುತ್ತಾನೆ. ಆದರೇನು? ವರ್ಷದಿಂದ ವರ್ಷಕ್ಕೆ ನೆಲ ನೀರಿಲ್ಲದೇ ಬಾಯ್ಬಿಡಲಾರಂಭಿಸಿದೆ. ಸುಗ್ಗಿಯ ಸಂಭ್ರಮಕ್ಕೆ ತಿಲಾಂಜಲಿ ಇಡುತ್ತಿರುವ ರೈತ ಮನೆಯೊಳಗೆ ಸೇರಿಕೊಳ್ಳುತ್ತಿದ್ದಾನೆ. ಹೊಟ್ಟೆ ಅನ್ನಕ್ಕಾಗಿ ಕಣ್ಣಿಗೆ ತೋರಿದ ದಿಕ್ಕಿನತ್ತ ಪ್ರಯಾಣ ಬೆಳೆಸಿದ್ದಾನೆ.
ಕಾಳಿ, ಗಂಗಾವಳಿ, ಅಘನಾಶಿನಿಗಳ ಕಲರವಗಳ ನಡುವೆಯೇ ವಿವಿಧ ಸಣ್ಣಪುಟ್ಟ ನದಿಗಳೂ ಅಲ್ಲಲ್ಲಿ ಶಬ್ದ ಮಾಡುತ್ತಿವೆ. ಈ ಎಲ್ಲ ನದಿಗಳನ್ನು ಬಳಸಿಕೊಂಡು ಹಸಿರು ಉಕ್ಕಿಸುವ ಬಯಕೆ ಇಂದು ನಿನ್ನೆಯದಲ್ಲ. ಅದಕ್ಕಾಗಿಯೇ ಚಿಕ್ಕ ನೀರಾವರಿ, ಜಲಾನಯನ ಹೆಸರಿನ ಇಲಾಖೆಗಳನ್ನು ಇಲ್ಲಿ ಕರೆದುಕೊಂಡು ಬಂದು ಕುಳ್ಳಿರಿಸಿದ್ದೂ ಆಗಿದೆ. ನೆಲಕ್ಕೆ ನೀರುಣಿಸುವ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಯನ್ನು ನೆಲಕ್ಕೆ ಸುರಿಯಲಾಗಿದೆ. ಸುಮಾರು ೨೫,೪೩೭ಹೆಕ್ಟೇರ್ ಭೂಮಿ (ಅಂದರೆ ೨೨%) ಇಂದು ನೀರುಂಡು ಹಸಿರು ಬೆಳೆಯುವ ಲೆಕ್ಕದ ಪಟ್ಟಿಯನ್ನು ಸೇರಿಕೊಂಡಿದೆ. ಚಾನಲ್ಗಳು, ಟ್ಯಾಂಕುಗಳು, ಬಾವಿಗಳು, ಬೋರ್ವೆಲ್ ಇತ್ಯಾದಿಗಳು ಒಣಗಿ ಹೋಗುತ್ತಿರುವ ಕೃಷಿ ಭೂಮಿಗೆ ನೀರುಣಿಸಲು ನಮ್ಮ ಇಂಜಿನೀಯರುಗಳು ನಡೆಸಿದ ಕಸರತ್ತುಗಳು! ಈ ಎಲ್ಲ ಮಹನೀಯರ ಪ್ರಯತ್ನದ ಫಲ ಎಂಬಂತೆ ದಿನದಿಂದ ದಿನಕ್ಕೆ ನೆಲ ಒಣಗಿ ಹೋಗುತ್ತಿದೆ. ಭಟ್ಕಳದಂತಹ ಪ್ರದೇಶದಲ್ಲಿಯೇ ಸಾವಿರ ಎಕರೆ ದಾಟುತ್ತಿದ್ದ ‘ಸುಗ್ಗಿ’ ಬೆಳೆ ಇಂದು ೪೫೦ ಎಕರೆ ಆಸುಪಾಸಿಗೆ ಬಂದು ಕುಳಿತಿದೆ. ಜಿಲ್ಲೆಯ ೩೪೫೨ ಹೆಕ್ಟೇರ್ ಶೇಂಗಾ ಬೆಳೆಯೂ ದಿನಗಳೆದಂತೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಕಟ್ಟಿದ ಒಡ್ಡುಗಳು ಕೆಲಸಕ್ಕೆ ಬರುತ್ತಿಲ್ಲ. ನೀರು ತಡೆಯಲು ಹಾಕಿದ ಮರದ ಹಲಗೆಗಳಲ್ಲಿ ಎಲ್ಲರಿಗೆ ಸೇರಬೇಕಾದ ‘ಕಮಿಷನ್’ ಲೆಕ್ಕ ಬರೆದುಕೊಂಡಿದೆ. ಲಕ್ಷಾಂತರ ರೂಪಾಯಿ ಸುರಿದರೂ ನದಿಯ ನೀರು ಹೊಂದಿಕೊಂಡ ನೆಲಕ್ಕೆ ಒಂದು ತಂಬಿಗೆಯಾಗುವಷ್ಟೂ ಹರಿದು ಹೋಗುವುದಿಲ್ಲ ಅಂದರೆ ಇದಕ್ಕೆಲ್ಲ ಯಾರು ಹೊಣೆ?
ಗದ್ದೆಯ ಬದಿಯಲ್ಲಿಯೇ ಹರಿದು ಹೋಗುವ ನದಿಗಳಲ್ಲಿ ಊಳು ತುಂಬಿಕೊಂಡು ಹಲವಾರು ವರ್ಷಗಳೇ ಕಳೆದು ಹೋಗುತ್ತಿವೆ. ದುರಂತವೆಂದರೆ ನಮ್ಮ ಅಧಿಕಾರಿಗಳ ದೃಷ್ಟಿ ಪಕ್ಕದ ತಡೆಗೋಡೆಯ ಮೇಲಷ್ಟೇ ಬೀಳುತ್ತಿದೆ. ಕಾಮಗಾರಿಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಯನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಅದ್ಯಾಕೋ ಜನಪ್ರತಿನಿಧಿಗಳ ಉಸಿರೂ ಕಟ್ಟಲಾರಂಭಿಸಿದ್ದು, ಮಾತನಾಡಲು ಚಡಪಡಿಸಲಾರಂಭಿಸಿದ್ದಾರೆ. ‘ಅಂಗಡಿಯಲ್ಲಿ ಸಾಮಾನಿದೆ. ಗದ್ದೆ ಯಾರದ್ದೋ..’ ಎಂಬ ಅಭಿಪ್ರಾಯವೂ ನಮ್ಮ ಜನರಲ್ಲಿ ಸುಳಿದಾಡುತ್ತಿದೆ! ಅದಕ್ಕಾಗಿಯೇ ‘ಧಿಕ್ಕಾರ’ ಘೋಷಣೆಗಳೆಲ್ಲ ಬೇರೆ ಬೇರೆ ಕಾರಣಕ್ಕೆ ಕಾಣಿಸಿಕೊಂಡು ಯಾವುದೋ ದಿಕ್ಕನ್ನು ಹಿಡಿದು ಮರೆಯಾಗುತ್ತಿವೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಒಣಗಿದ ಗದ್ದೆಯಲ್ಲಿ ನಿಂತ ರೈತ ಏಕಾಂಗಿಯಾಗಿದ್ದಾನೆ. ಮತ್ತೊಮ್ಮೆ ಹೇಳಬೇಕೆಂದರೆ ನಾವೆಲ್ಲ ಕಣ್ಣಿದ್ದೂ ಕುರುಡರಾಗಿದ್ದೇವೆ