ಬೆಂಗಳೂರು, ಫೆಬ್ರವರಿ ೨೦:ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ಅವರನ್ನು ತರುವಂತೆ ದಿಲ್ಲಿಯಲ್ಲಿರುವ ರಾಜ್ಯದ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.
ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ರಾಷ್ಟ್ರ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ಒತ್ತು ನೀಡಬೇಕು ಎಂದು ಈ ನಾಯಕರು ವರಿಷ್ಟರಿಗೆ ವಿವರಿಸಿದ್ದಾರೆ.
ಕುತೂಹಲದ ಸಂಗತಿಯೆಂದರೆ ಒಂದು ಕಾಲದಲ್ಲಿ ಹರಿಪ್ರಸಾದ್ ವಿರುದ್ಧ ಕಿಡಿ ಕಾರುತ್ತಿದ್ದ ಎಸ್.ಎಂ.ಕೃಷ್ಣ ಅವರ ಪಡೆಯೂ ಇದೀಗ ಈ ವಿಷಯದಲ್ಲಿ ಸಹಮತ ವ್ಯಕ್ತಪಡಿಸತೊಡಗಿದ್ದು ಕೆಪಿಸಿಸಿಗೆ ಹರಿಪ್ರಸಾದ್ ಅವರನ್ನೇ ನೂತನ ಸಾರಥಿಯನ್ನಾಗಿ ನೇಮಕ ಮಾಡುವುದು ಸೂಕ್ತ ಎಂದು ಹೇಳತೊಡಗಿರುವುದು.
ಈಗಾಗಲೇ ಪಂಜಾಬ್,ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ನ ಉಸ್ತುವಾರಿ ವಹಿಸಿಕೊಂಡು ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿರುವ ಹರಿಪ್ರಸಾದ್ ರಾಷ್ಟ್ರ ಮಟ್ಟದಲ್ಲಿ ಅಪಾರ ಅನುಭವ ಗಳಿಸಿದ್ದಾರೆ.
ಸಧ್ಯದ ಪರಿಸ್ಥಿತಿಯಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗುವ ರೇಸಿನಲ್ಲಿರುವ ಬಹುತೇಕರಿಗೆ ಹರಿಪ್ರಸಾದ್ ಅವರಿಗಿರುವಷ್ಟು ಅನುಭವ ಇಲ್ಲ.ಹೀಗಾಗಿ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತರುವುದು ಒಳ್ಳೆಯದು ಎಂಬ ಅಭಿಪ್ರಾಯ ಕಾಂಗ್ರೆಸ್ನ ಎಲ್ಲ ಬಣಗಳಿಂದಲೂ ವ್ಯಕ್ತವಾಗತೊಡಗಿದೆ.
ಹಾಲೀ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರನ್ನು ಸಧ್ಯದಲ್ಲೇ ಎದುರಾಗಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಗೆಲ್ಲಿಸಿ ದೆಹಲಿಗೆ ಕಳಿಸಿಕೊಡಬೇಕು.ಅವರ ಜಾಗಕ್ಕೆ ಹರಿಪ್ರಸಾದ್ ಅವರನ್ನು ತರಬೇಕು ಎಂಬುದು ಕಾಂಗ್ರೆಸ್ನ ವಿವಿಧ ಬಣಗಳ ಒತ್ತಾಯ.
ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಅಧಿಕಾರದಲ್ಲಿದ್ದು ಇಂತಹ ಸರ್ಕಾರದ ವಿರುದ್ಧ ಹೋರಾಡಲು ದಟ್ಟ ಸೆಕ್ಯುಲರ್ ಹಿನ್ನೆಲೆಯಿರುವ ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಬೇಕು.
ಹೀಗಾಗಿ ಎಐಸಿಸಿ ವರಿಷ್ಟರು ಯಾವ ಕಾರಣದಿಂದಲೂ ಹಿಂದೆ ಮುಂದೆ ನೋಡದೇ ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರಬೇಕು ಎಂಬುದು ಈ ಬಣಗಳ ಒತ್ತಾಯ.
ಉನ್ನತ ಮೂಲಗಳ ಪ್ರಕಾರ ಹರಿಪ್ರಸಾದ್ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತರಬೇಕು ಎಂದು ಇದ್ದಕ್ಕಿದ್ದಂತೆ ಕಾಂಗ್ರೆಸ್ನ ವಿವಿಧ ಬಣಗಳು ಒತ್ತಾಯಿಸುತ್ತಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಒಂದು ಮೂಲದ ಪ್ರಕಾರ,ಕೆಲವು ಬಣಗಳು ಹರಿಪ್ರಸಾದ್ ಅವರನ್ನು ಈ ಜಾಗಕ್ಕೆ ತಂದರೆ ಒಳ್ಳೆಯದು ಎಂಬ ಅಭಿಪ್ರಾಯ ಹೊಂದಿದ್ದರೆ ಇನ್ನೂ ಕೆಲ ಬಣಗಳು ಹರಿಪ್ರಸಾದ್ ಈ ಹುದ್ದೆಗೆ ಬಂದರೆ ದಿಲ್ಲಿಯಿಂದ ರಾಜ್ಯ ರಾಜಕಾರಣಕ್ಕೆ ವಾಪಸಾಗಲಿದ್ದಾರೆ.ಹಾಗವರು ದಿಲ್ಲಿಯಿಂದ ಹೊರಬೀಳಲಿ ಎಂಬ ಲೆಕ್ಕಾಚಾರ ಹೊಂದಿವೆ.
ಏನೇ ಇದ್ದರೂ ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿ ಹರಿಪ್ರಸಾದ್ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತರಬೇಕು ಎಂಬ ವಿಷಯದಲ್ಲಿ ಕಾಂಗ್ರೆಸ್ನ ವಿವಿಧ ಬಣಗಳು ಒಮ್ಮತಾಭಿಪ್ರಾಯ ಹೊಂದಿದ್ದು ಈ ಹಿನ್ನೆಲೆಯಲ್ಲಿ ಹೈಕಮಾಂಡ್ ವರಿಷ್ಟರೂ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗಿದೆ