ಭಟ್ಕಳ, ಅಕ್ಟೋಬರ್ 27: ಭಟ್ಕಳದಲ್ಲಿ ಕೆಲವರಿಗೆ ಮಾಡಲು ಕೈಯಲ್ಲಿ ಕೆಲಸವಿಲ್ಲ. ಸುಮ್ಮನೇ ಕುಳಿತು ಕೊಳ್ಳುವುದಕ್ಕೂ ಮನಸ್ಸು ಬರುವುದಿಲ್ಲ. ಊರಿನ ನೂರೆಂಟು ಗದ್ದಲದಲ್ಲಿ ತನ್ನದೊಂದು ಹೆಸರು ಮೂಡಿ ಬರಬೇಕು ಅಷ್ಟೇ. ಕೂಗಾಡಲು ಅವಕಾಶ ಸಿಕ್ಕರೆ ಧರ್ಮದ ಹೆಸರಿನಲ್ಲಿಯೇ ಮೈ ತೊಳೆದುಕೊಳ್ಳುವ ಮಂದಿಗೆ ಅದಿಲ್ಲ ಅಂತಾದರೆ ಜಾತಿ ಎಂಬ ಕೆಸರಿನಲ್ಲಿಯೇ ಸ್ನಾನ ಮಾಡುವ ತಯಾರಿ. ಅಂದ ಹಾಗೆ ಇವರೆಲ್ಲ ಜಾನುವಾರುಗಳು!
ಭಟ್ಕಳಕ್ಕೂ ಒಂದು ಅದ್ಭುತ ಇತಿಹಾಸವಿದೆ. ಜೈನ ಪರಂಪರೆಯ ಹಿನ್ನೆಲೆಯನ್ನು ಅಂಟಿಕೊಂಡೇ ಬೆಳೆದ, ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿರುವ ಭಟ್ಕಳಕ್ಕೆ ಹಿಂಸೆ ಎಂದರೆ ಅಷ್ಟಕ್ಕಷ್ಟೇ. ಮುಟ್ಟಳ್ಳಿ ಮಾಸ್ತಪ್ಪ ನಾಯ್ಕ, ಗೂಕನ ದುರ್ಗಪ್ಪ, ಜುಕಾಕೋ ಸಂಶುದ್ದೀನ್, ಮಂಜಯ್ಯ ದೇವಡಿಗ, ಚಿತ್ತರಂಜನ್... ಯಾರಿಗೂ ಜನರ ಮುಂದೆ ಬಂದು ನಿಲ್ಲಲು ಜಾತಿಯ ಹೆಸರೇನೂ ಬೇಕಾಗಿರಲಿಲ್ಲ ಎಂದರೆ ಇವತ್ತಿನ ಮಂದಿಗೆ ಆಶ್ಚರ್ಯವೇ. ಆದರೆ ಭಟ್ಕಳ ಬದಲಾಗಿದೆ. ಧರ್ಮ ಧರ್ಮದ, ಜಾತಿ ಜಾತಿಯ ಮಧ್ಯೆ ಸಂಶಯಗಳು ಬೆಳೆಯುತ್ತ ಸಾಗಿವೆ. ಯಾವುದೇ ಅಧ್ಯಯನವಿಲ್ಲದೇ ಹೋದರೂ ಧರ್ಮದ, ಜಾತಿಯ ಬಗ್ಗೆ ಅಂಗಡಿ ಬದಿಯಲ್ಲಿ ನಿಂತು ಪುರಾಣ ಬಿಗಿಯುವ, ಒಂದಿಷ್ಟು ಸುಳ್ಳುಗಳನ್ನು ಹರಡಿ ತನ್ನ ಬೇಳೆ ಬೇಯಿಸಿಕೊಳ್ಳುವ, ಬೆಂಕಿ ಹಚ್ಚಿ ನಾಯಕರ ಪೋಸು ಕೊಡಲು ಹೆಣಗಾಡುವ ಜನರಿಗೆ ಸದ್ಯಕ್ಕಂತೂ ಬರ ಬರುವ ಲಕ್ಷಣ ಗೋಚರಿಸುತ್ತಿಲ್ಲ. ಊಟ, ತಿಂಡಿ, ಪಕ್ಷ, ಪಾರ್ಟಿ... ಎಲ್ಲದಕ್ಕೂ ಜಾತಿ. ಕುಳಿತರೆ ಅಲ್ಲೊಂದು ಜಾತಿ. ಮಲಗಿದರೆ ಮತ್ತೊಂದು. ಬರೆಯುವವನಿಗೆ ಇನ್ನೊಂದು ಜಾತಿಯ ಪಟ್ಟ! ಅಲ್ಲೊಂದು ಹಿರಿಯರ ಸಂಘಟನೆ. ಇಲ್ಲೊಂದು ಯುವಕರ ಸಂಘಟನೆ... ದುಡಿದು ತಿನ್ನುವವನ ಆದರ್ಶಗಳು ಮೂಲೆ ಸೇರಿ ಬರೀ ಬೂಟಾಟಿಕೆಗಳ ವಿಜೃಂಭಣೆ ಎಗ್ಗಿಲ್ಲದೇ ಸಾಗಿದೆ. ಜೀವನಕ್ಕೆ ಆಧಾರವಾದ ಕಳ್ಳ ದಂಧೆಗಳಿಗೆ ಕಾನೂನಿನ ತಡೆ ಬಂದಾಗ (ಅನಧೀಕೃತ ಸಾರಾಯಿ ಮಾರಾಟ, ಅಕ್ರಮ ಸಾಗುವಾನಿ ಸಾಗಾಟ, ಓಸಿ ಅಡ್ಡೆಗೆ ದಾಳಿ, ಇಸ್ಪೀಟ್ ಅಡ್ಡೆಗೆ ದಾಳಿ, ಕೋಳಿ ಅಂಕ ಇತ್ಯಾದಿ) ಜಾತಿಯ ಹೆಸರನ್ನು ಎಳೆದು ತಂದು ರಕ್ಷಣೆ ಪಡೆಯುವ ಮತಿ ಭ್ರಷ್ಟ ಚಾಲಾಕಿತನ ಇಲ್ಲಿ ಮೌನಕ್ಕೆ ಶರಣಾಗುವ ಲಕ್ಷಣವಿಲ್ಲ. ಊರಿಗೆ ಬೆಂಕಿ ಹಚ್ಚಿ ಚಳಿ ಕಾಯುವ ಜನರಿಗೆ ಅಧಿಕಾರದ ಮದ ನೆತ್ತಿಗೇರಿ ಹಿಡಿಯುವವರೇ ಇಲ್ಲ ಅಂತಾದರೆ ಊರನ್ನು ರಕ್ಷಿಸುವವರು ಯಾರು? ಹಿಂಸೆಯನ್ನೂ ಸಿಹಿಯಂತೆ ಅನುಭವಿಸುವ ವಿಕೃತ ಮನಸ್ಸುಗಳ ಮಾರಣ ಹೋಮಕ್ಕೆ ಜನ ಮತ್ತೆಷ್ಟು ದಿನ ಕಾಯಬೇಕು? ಇವರಲ್ಲಿ ಎಲ್ಲ ಜಾತಿ, ಜನಾಂಗದವರೂ ಇದ್ದಾರೆ. ಅಷ್ಟೇ ಏಕೆ? ಅಷ್ಟಿಷ್ಟು ಓದಿ ಕೊಂಡು, ಬಿಳಿ ಬಟ್ಟೆ ಧರಿಸಿ, ಬಿಳಿ ಹಲ್ಲು ತೋರಿಸುವ ಸುಶಿಕ್ಷಿತ ಮಹಾನ್(!?) ನಾಯಕರೂ ಇದ್ದಾರೆ. ಶಾಂತಿ ಸಭೆಗೆ ಬರುವವನ ಎದೆಯೇ ಅಶಾಂತಿಯ ಆಗರವಾಗಿದ್ದರೆ, ಕಲ್ಮಷ ದೂರವಾಗುವುದೆಂತು?
ಹೌದು, ಇದನ್ನೆಲ್ಲವನ್ನೂ ಹೇಳಿಕೊಳ್ಳುವಾಗ ಭಟ್ಕಳದ ಜನರಿಗೆ ಮನಸ್ಸು ಭಾರವಾಗುತ್ತದೆ. ಇವೆಲ್ಲದಕ್ಕೂ ಇತ್ತೀಚಿನ ವರ್ಷಗಳಲ್ಲಿ ಅಧಿಕಾರಿ ಶಾಹಿ ಕೃಪಾಕಟಾಕ್ಷವೂ ಕೆಲಸ ಮಾಡುತ್ತ ಬಂದಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಅದರಲ್ಲಿಯೂ ಪೊಲೀಸ್ ಹಾಗೂ ಅಬಕಾರಿ ಇಲಾಖೆಗಳ ಸ್ಥಿತಿಯಂತೂ ಶೋಚನೀಯ. ಸಾಧಾರಣವಾಗಿ ಊರ ಬದಿಯಲ್ಲಿ ಗದ್ದಲ, ಹೊಡೆದಾಟ ನಡೆದು ಪೊಲೀಸರು ಹೋಗಿ ನಿಲ್ಲಿಸುವ ಕಾಲವೂ ಭಟ್ಕಳದಲ್ಲಿ ಮುಗಿದು ಹೋಗಿದೆ. ಈಗೇನಿದ್ದರೂ ಪೊಲೀಸ್ ಠಾಣೆಯ ಒಳಗೇ ಮಾರಾಮಾರಿ ನಡೆದು ಬಿಡುತ್ತದೆ. ಪೊಲೀಸ್ ಚಹರೆಯನ್ನೇ ಕಳೆದುಕೊಂಡಂತೆ ಆಡುತ್ತಿರುವ ಅಧಿಕಾರಿ ವರ್ಗ ನೊಂದವರಿಂದ ಕಂಪ್ಲೇಟು ಬೇಡುತ್ತದೆ. ಹಾಗೆಯೇ ಹೊಡೆದವರಿಂದಲೂ ದೂರು ಪಡೆದುಕೊಂಡು ಅದೇ ತೆರನಾದ ಕೇಸು ಬಿಗಿದು ಕೈ ತೊಳೆದು ಕೊಳ್ಳುತ್ತದೆ. ಇನ್ನು ಅಬಕಾರಿ ಇಲಾಖೆ ಸತ್ತು ಹೋಗಿ ಹಲವಾರು ವರ್ಷಗಳೇ ಕಳೆಯುತ್ತ ಬಂದಿದೆ. ಊರುರೇ ಅನಧಿಕೃತ ಸಾರಾಯಿ ಅಂಗಡಿಯಾಗಿ ಮಾರ್ಪಟ್ಟರೂ ಮಾತನಾಡುವವರೇ ಇಲ್ಲದಾಗಿದೆ. ಸಾವಿರಾರು ಹೆಣ್ಣು ಮಕ್ಕಳ ಹಿಡಿ ಶಾಪವೂ ಈ ಶನಿ ಸಂತಾನವನ್ನು ಎಚ್ಚರಿಸುತ್ತಿಲ್ಲ.
ನಿಜ.. ಆ ಹೊಟೆಲ್ ಮಾಣಿ, ಸೌದೆ ಒಡೆಯುವವ, ಪೇಂಟರ್, ಆಟೋ ಚಾಲಕ, ಬಲೂನು ಮಾರುವವ, ಚಪ್ಪಲಿ ಹೊಲೆಯುವವ, ಕಲ್ಲು ಕೆತ್ತುವವನು, ಗದ್ದೆಯಲ್ಲಿ ನೇಗಿಲು ಹಿಡಿದವ, ನೀರಿನಲ್ಲಿ ಬಲೆ ಹಾಕಿ ಕೊಂಡವ, ವಾಚು ರಿಪೇರಿಯವನು...... ಇವರೆಲ್ಲ ನಮ್ಮ ಆದರ್ಶಗಳು. ಆ ದಿನದ ದುಡಿಮೆಯಲ್ಲಿಯೇ ಅನ್ನ ಹುಡುಕುವ ಈ ಮಂದಿಗೆ ಅದ್ಯಾವ ಜಾತಿ ಇದೆ? ಯಾರದ್ದೋ ಸ್ವಾರ್ಥಕ್ಕೆ, ಬನ್ನಿ... ನಮ್ಮ ಜಾತಿಯವರಿಗೆ ಅನ್ಯಾಯವಾಗಿದೆ... ಬಡಿದಾಡೋಣ ಎಂದು ಕರೆಯುತ್ತ ದಿನ ಕಳೆಯುವವನ ಜಾತಿಯಾದರೂ ಯಾವುದು? ಇನ್ನೊಮ್ಮೆ ಕರೆಯಲು ಬಂದರೆ ಥೂ..! ಎಂದು ಉಗಿಯಲೇ ಬೇಕಲ್ಲವೇ? ಯಾಕೋ.. ಬಾಯಲ್ಲಿಯ ಎಂಜಲೂ ಬತ್ತಿ ಹೋಗುತ್ತದೆ! ಜಾನುವಾರಿಗಳಿಗಂತೂ ಉದ್ಯೋಗ ಲಭಿಸಿ ಬಿಟ್ಟಿದೆ. ಇದು ಇಲ್ಲಿಗೇ ನಿಂತರೆ ಜಾತಿಯ ಬದಲಿಗೆ ಧರ್ಮದ ಹೆಸರು ಬಂದು ಸೇರಿಕೊಳ್ಳುತ್ತದೆ. ಇನ್ನೊಂದೆಡೆ ಕುವೆಂಪುರವರ ‘ವಿಶ್ವ ಮಾನವ’ನಿಗಾಗಿ ಹುಡುಕಾಟ ಮುಂದುವರೆಯುತ್ತಲೇ ಇದೆ.
ವಿಶೇಷ ವರದಿ: ವಸಂತ ದೇವಾಡಿಗ