ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ನಿರ್ಲಕ್ಷಿತ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸರ್ಕಾರ ಗಮನ ನೀಡುವುದೇ?

ಬೆಂಗಳೂರು: ನಿರ್ಲಕ್ಷಿತ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸರ್ಕಾರ ಗಮನ ನೀಡುವುದೇ?

Thu, 10 Dec 2009 03:07:00  Office Staff   S.O. News Service
ಬೆಂಗಳೂರು, ಡಿಸೆಂಬರ್ 9: ಮತ್ತೊಂದು ಹೊಸ ರಾಜ್ಯದ ಬೇಡಿಕೆ ಹೋರಾಟ ಅಂತಿಮ ಹಂತ ತಲುಪಿದೆ. ನಿರ್ಲಕ್ಷಿತ ಪ್ರದೇಶಗಳ ಕಡೆ ಸರ್ಕಾರಗಳು ಹೆಚ್ಚಿನ ಗಮನ ನೀಡದಿದ್ದರೆ ’ತೆಲಂಗಾಣ ಹೋರಾಟದ ಹಾದಿ’ಯನ್ನೇ ಉಳಿದೆಲ್ಲ ನಿರ್ಲಕ್ಷಿತ ಪ್ರದೇಶಗಳಲ್ಲೂ ಕಾಣುವ ಕಾಲ ದೂರವಿಲ್ಲ ಎಂದರೆ ತಪ್ಪಾಗಲಾರದು. 
 
ದೇಶ ೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಗಳಿಸಿ ಸಂತೋಷದಿಂದ ಕುಣಿದಾಡುತ್ತಿದ್ದಾಗ ರಾಜ್ಯದ ಹೈದರಾಬಾದ್ ಕರ್ನಾಟಕ ಪ್ರದೇಶದ ಜನರಿಗೆ ಆ ಸಂತಸ ಇರಲಿಲ್ಲ. ಹೈದರಾಬಾದ್ ನಿಜಾಮರು ಮತ್ತು ಕ್ರೂರ ರಜಾಕರ ಅಧೀನದಲ್ಲಿ ತೀವ್ರ ಹಿಂಸೆ, ದಬ್ಬಾಳಿಕೆಗೆ ಒಳಗಾದ ಈ ಭಾಗದ ಜನತೆಗೆ ಒಂದು ವರ್ಷದ ನಂತರ ಅಂದರೆ, ೧೯೪೮ರ ಸೆಪ್ಟೆಂಬರ್ ೧೭ರಂದು ವಿಮೋಚನೆ ದೊರಕಿತು. ಆದರೆ, ಹೈದರಾಬಾದ್ ಕರ್ನಾಟಕದ ಜನತೆಗೆ ದೊರೆತಿದ್ದು ನಿಜಾಮ ಆಡಳಿತದಿಂದ ಮುಕ್ತಿ ಮಾತ್ರವೇ ಹೊರತು  ನಿಜವಾದ ಸ್ವಾತಂತ್ರ್ಯವೇನೂ ಅಲ್ಲ. 

ಇಂದಿಗೂ ಇಲ್ಲಿನ ಜನತೆ ಅತ್ಯಂತ ನಿಕೃಷ್ಟ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಈ ಭಾಗದ ಹಿಂದುಳಿದಿರುವಿಕೆಗೂ ಒಂದು ಇತಿಹಾಸವೇ ಇದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಚಿಸಲಾಗಿದ್ದ ಡಾ|ಡಿ.ಎಂ. ನಂಜುಂಡಪ್ಪ ನೇತೃತ್ವದ ವರದಿ ಪ್ರಕಾರ ಈ ಪ್ರದೇಶದ ಎಲ್ಲ ತಾಲೂಕುಗಳೂ ಅತಿ ಹಿಂದುಳಿದ ತಾಲೂಕುಗಳೇ. 
ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದು ಹೋದರೂ, ಈ ಭಾಗದ ಇಬ್ಬರು ಮುಖ್ಯಮಂತ್ರಿಗಳಾಗಿ ಹೋದರೂ ಹೈ-ಕ ಈಗಲೂ ಅತ್ಯಂತ ಹಿಂದುಳಿದ ಪ್ರದೇಶವೇ. ಬಹುತೇಕ ಗ್ರಾಮಗಳಲ್ಲಿ ಇಂದಿಗೂ ಮೂಲಸೌಕರ್ಯಗಳ ಕೊರತೆ ಇದ್ದೇ ಇದೆ. 

ಈ ಭಾಗಕ್ಕೆ ಸಂವಿಧಾನದ ೩೭೧ನೇ ವಿಧಿಯನ್ವಯ ವಿಶೇಷ ಸ್ಥಾನಮಾನ ನೀಡಿ ಅಭಿವೃದ್ಧಿ ಪಡಿಸಬೇಕು ಎಂಬ ದಶಕಗಳ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ಈಗ ಈ ಭಾಗದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದಾರೆ. 

ಪ್ರಧಾನಿಗೆ ಹೊಸ ಮನವಿ 
 
ರಾಜ್ಯದ ಎಲ್ಲ ಸಂಸದರು ಇತ್ತೀಚೆಗೆ ದೆಹಲಿಯಲ್ಲಿ ಸಭೆ ಸೇರಿ ರಾಜ್ಯದ ಎಲ್ಲ ಬೇಡಿಕೆಗಳ ಕುರಿತು ಚರ್ಚಿಸಿ ಪ್ರಧಾನಿಯವರಿಗೆ ಮನವಿ ಸಲ್ಲಿಸಿದ್ದಾರೆ. ಸಭೆಯಲ್ಲಿ ಕೇಂದ್ರದ ಸಚಿವರಾದ ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಅವರೂ ಹಾಜರಾಗಿದ್ದರು. ಈ ಸಭೆಯಲ್ಲಿ ಸಂವಿಧಾನದ ೩೭೧ನೇ ವಿಧಿಯ ಡಿ ಕಲಂಗೆ ತಿದ್ದುಪಡಿ ತಂದು ಹೈ-ಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬುದಾಗಿ ಆಗ್ರಹಿಸಲಾಗಿದೆ. 
 
ಕಳೆದ ಜೂನ್‌ನಲ್ಲಿ ಪ್ರಧಾನಿಯವರು ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದು ರಾಜ್ಯಕ್ಕೆ ವಿದರ್ಭ ಮಾದರಿಯ ವಿಶೇಷ ಪ್ಯಾಕೇಜ್ ನೀಡುವುದಾಗಿ ತಿಳಿಸಿದ್ದರು. ವಿದರ್ಭ ಪ್ಯಾಕೇಜ್ ನೀಡಿದರೆ ಶಿಕ್ಷಣಕ್ಕೆ ಮಾತ್ರ ನೆರವಾಗಬಹುದೇ ಹೊರತು ಉದ್ಯೋಗಾವಕಾಶಗಳಿಗೆ ನೆರವಾಗುವುದಿಲ್ಲ. ತೆಲಂಗಾಣ, ಒರಿಸ್ಸಾ, ಈಶಾನ್ಯ ರಾಜ್ಯಗಳಿಗೆ ನೀಡಿರುವಂತೆಯೇ ೩೭೧ನೇ ವಿಧಿಗೆ ತಿದ್ದುಪಡಿ ತಂದು ವಿಶೇಷ ಸ್ಥಾನ ಮಾನ ನೀಡಿದರೆ ಮಾತ್ರ ಈ ಭಾಗದ ಪ್ರಗತಿ ಸಾಧ್ಯ ಎಂಬುದನ್ನು ಎಲ್ಲ ಸಂಸದರೂ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. 
 
ಹಿಂದೆ ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಿದಾಗ ರಾಜ್ಯದ ಉಳಿದೆಲ್ಲ ಭಾಗಗಳ ಜನಪ್ರತಿನಿಧಿಗಳು ತಮ್ಮ ಪ್ರದೇಶಗಳಲ್ಲೂ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿದ್ದರಿಂದ ಈ ಮಂಡಳಿಗೆ ದೊರಕಬೇಕಾಗಿದ್ದ ಮಹತ್ವವೂ ತಪ್ಪಿದೆ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ಎಲ್ಲ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿತ್ತು. ಆದರೆ, ನಂತರ ಬಂದ ಎನ್‌ಡಿ‌ಎ ಸರ್ಕಾರ ತಿರಸ್ಕರಿಸಿತು.ಒಟ್ಟಾರೆಯಾಗಿ ಈ ಪ್ರದೇಶಕ್ಕೆ ಶೀಘ್ರದಲ್ಲೇ ವಿಶೇಷ ಸ್ಥಾನಮಾನ ದೊರೆತು ಜನರ ಪುರೋಭಿವೃದ್ಧಿಗೆ ಕಾರಣವಾದರೆ ಅದೇ ದೊಡ್ಡ ಸಾಧನೆ. ಇಲ್ಲದಿದ್ದರೆ ಹೋರಾಟಗಳು ಯಾವ ಹಂತ ತಲುಪುತ್ತವೆ ಎಂಬುದನ್ನು ತೆಲಂಗಾಣ ತೋರಿಸಿಕೊಟ್ಟಿದೆ. 


ಪ್ರತ್ಯೇಕ ತೆಲಂಗಾಣ ಬೇಡಿಕೆ ಈಡೇರಿಸುವಲ್ಲಿ ಕಾಂಗ್ರೆಸ್ ಹೋರಾಟಗಾರರಿಗೆ ಕೈ ಕೊಟ್ಟಿದೆ. ಅದರಿಂದ ಕೋಪದಲ್ಲಿರುವ ಅವರು ಉಗ್ರ ರೂಪದ ಹೋರಾಟಕ್ಕಿಳಿದಿದ್ದಾರೆ. ಜನರ ಭಾವನೆ ಅರಿತು ಅವುಗಳ ಈಡೇರಿಕೆ ಬಗ್ಗೆ ಕೂಲಂಕುಷ ಚಿಂತನೆ ಮಾಡಬೇಕೆ ಹೊರತು ನುಣುಚಿಕೊಳ್ಳುವ ಕೆಲಸವನ್ನು ಯಾವ ಸರ್ಕಾರ ಮಾಡಬಾರದು. ಇವೆಲ್ಲ ಸೂಕ್ಷ್ಮ ಸಂಗತಿಗಳು. 
-ವೈಜನಾಥ ಪಾಟೀಲ್ 
 
ಹೈ- ಕ ಹೋರಾಟ ಸಮಿತಿ ಮುಖಂಡರು, ಗುಲ್ಬರ್ಗ


ಸೌಜನ್ಯ: -ಕ.ಮ.ರವಿಶಂಕರ್ 
ಕನ್ನಡಪ್ರಭ


Share: