ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ರಾಜ್ಯದಲ್ಲಿ ಹೊಸ ಕೆರೆಗಳ ನಿರ್ಮಾಣಕ್ಕಾಗಿ ಸಾವಿರ ಕೋಟಿ ರೂಪಾಯಿ ಮೀಸಲಿಡಲು ಕಾರಜೋಳ ಸಲಹೆ

ಬೆಂಗಳೂರು:ರಾಜ್ಯದಲ್ಲಿ ಹೊಸ ಕೆರೆಗಳ ನಿರ್ಮಾಣಕ್ಕಾಗಿ ಸಾವಿರ ಕೋಟಿ ರೂಪಾಯಿ ಮೀಸಲಿಡಲು ಕಾರಜೋಳ ಸಲಹೆ

Sat, 23 Jan 2010 03:35:00  Office Staff   S.O. News Service
ಬೆಂಗಳೂರು,ಜ,22: ರಾಜ್ಯದಲ್ಲಿ ಹೊಸ ಕೆರೆಗಳ ನಿರ್ಮಾಣಕ್ಕಾಗಿ ೧೦೦೦ ಕೋಟಿ ರೂಗಳನ್ನು ಬಜೆಟ್‌ನಲ್ಲಿ ಮೀಸಲಿಡುವಂತೆ ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೊಳ ಇಂದಿಲ್ಲಿ: ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಕುರಿತು ವಿವರ ನೀಡಿದರಲ್ಲದೇ ಈ ಹಣದಿಂದ ಪ್ರಸಕ್ತ ವರ್ಷ ಕನಿಷ್ಠ ೫೦೦ ಕೆರೆಗಳನ್ನು ಕಟ್ಟಿಸುವುದು ತಮ್ಮ ಉದ್ಧೇಶ ಎಂದರು.

ಪಸಕ್ತ ವರ್ಷ ಇದಕ್ಕಾಗಿ ಐವತ್ತೇಳು ಕೋಟಿ ರೂಗಳನ್ನು ಒದಗಿಸಲಾಗಿತ್ತು. ಆ ಪೈಕಿ ನಲವತ್ತಾರು ಕೋಟಿ ರೂಗಳನ್ನು ಈಗಾಗಲೇ ವೆಚ್ಚ ಮಾಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ರೂಗಳನ್ನು ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಕಾವೇರಿ ನದಿ ಪಾತ್ರದಲ್ಲಿ ನ್ಯಾಯಮಂಡಳಿ ತೀರ್ಪಿನ ಅಡಚಣೆ ಇರುವುದರಿಂದ ಅಲ್ಲಿ ಹೊಸ ಕೆರೆಗಳನ್ನು ನಿರ್ಮಿಸುವುದು ಕಷ್ಟ ಎಂದ ಅವರು ಈ ಹಿನ್ನೆಲೆಯಲ್ಲಿಯೇ ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚಿನ ಕೆರೆಗಳನ್ನು ನಿರ್ಮಿಸುವುದು ನಮ್ಮ ಚಿಂತನೆ ಎಂದರು.

ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅಚ್ಚುಕಟ್ಟು ಪ್ರದೇಶ ಇಲ್ಲದಿರುವ ಕೆರೆಗಳ ನಿರ್ವಹಣೆಯನ್ನು ಆಯಾ ಸ್ಥಳೀಯ ಸಂಸ್ಥೆಗಳಿಗೇ ಬಿಟ್ಟು ಕೊಡಲಾಗುತ್ತಿದೆ ಎಂದೂ ಅವರು ಹೇಳಿದರು.

ರಾಜ್ಯದಲ್ಲಿ ಕೆರೆ ಭೂಮಿಯ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ ಎಂದು ಸ್ಪಷ್ಟ ಪಡಿಸಿದ ಅವರು,ಇದುವರೆಗೆ ನಡೆದಿರುವ ಸರ್ವೇ ಕಾರ್ಯದ ಪ್ರಕಾರ ೪೩೯೭ ಹೆಕ್ಟೇರ್ ಪ್ರದೇಶ ಒತ್ತುವರಿಯಾಗಿದೆ ಎಂದು ವಿವರಿಸಿದರು.

ಈ ಪೈಕಿ ಸರ್ಕಾರ ಈಗಾಗಲೇ ೧೫೫೯ ಹೆಕ್ಟೇರ್ ಪ್ರದೇಶವನ್ನು ತೆರವುಗೊಳಿಸಿದೆ ಎಂದ ಅವರು, ಇನ್ನುಳಿದ ಒತ್ತುವರಿಯನ್ನು ತ್ವರಿತವಾಗಿ ತೆರವುಗೊಳಿಸುವುದಾಗಿ ಹೇಳಿದರು.

Share: