ಕೃಷಿಯಲ್ಲಿ ಉತ್ತಮ ತಂತ್ರಜ್ಞಾನ, ವಿಜ್ಞಾನದ ಅಳವಡಿಕೆ ಸ್ವಾಗತಾರ್ಹವಾದ ವಿಷಯ. ಆದರೆ ಪ್ರಸ್ತುತ ಜೈವಿಕ ಮಾರ್ಪಾಡು ಮಾಡಲಾದ ಅಂದರೆ ಬಿ.ಟಿ. ಬದನೆಗೆ ಹಲವು ತಜ್ಞ ವಲಯದಿಂದ, ರೈತರಿಂದ ವಿರೋಧ ವ್ಯಕ್ತವಾಗುತ್ತಿದೆ. ಏಕೆ?
ಬಿ.ಟಿ.ಬದನೆಯನ್ನು ಸಿಪಿಐ(ಎಂ) ಪಕ್ಷ ವಿರೋಧ ಮಾಡಲು ಮುಖ್ಯ ಕಾರಣಗಳು ಹೀಗಿವೆ. ಬಿ.ಟಿ. ಬದನೆ ಆಹಾರದ ಬೆಳೆಯಲ್ಲಿ ಭಾರತದಲ್ಲಿ ಸಾಗುವಳಿಗೆ ಬಿಡುಗಡೆ ಮಾಡಲು ಪ್ರಯತ್ನಿಸಲಾಗುತ್ತಿರುವ ಮೊದಲ ಜೈವಿಕ ತಂತ್ರಜ್ಞಾನದ ತಳಿ. ಆಹಾರವೆಂದು ನಾವು ಉಪಯೋಗಿಸುವ ಸಸ್ಯ ಅಥವಾ ಪ್ರಾಣಿಯ ಉತ್ಪನ್ನಗಳು ನೂರಾರು ರಾಸಾಯನಿಕ ವಸ್ತುಗಳನ್ನು ಒಳಗೊಂಡ ಸಂರಚನೆಗಳು (ವಸ್ತುಗಳು) ಸಾವಿರಾರು ವರ್ಷಗಳ ಕೃಷಿಯಲ್ಲಿ ರೈತರು ರೂಪಿಸಿದ ತಳಿಗಳಾಗಲಿ, ತಳಿವಿಜ್ಞಾನದ ಆಧಾರದ ಮೇಲೆ ಕೃಷಿ ವಿಜ್ಞಾನಿಗಳು ರೂಪಿಸಿದ ತಳಿಗಳಾಗಲಿ ಒಂದೇ ಕುಲದ ಒಳಗೆ ಮಾಡುವ ಸಂಕರ ಕ್ರಿಯೆಯಿಂದ ರೂಪಿತವಾಗಿರುವುದರಿಂದ ಹೊಸ ತಳಿಗಳ ರಾಸಾಯನಿಕ ಸಂರಚನೆಯಲ್ಲಿ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಆದರೆ ಜೈವಿಕ ತಂತ್ರಜ್ಞಾನದ ತಳಿಗಳು ಹಾಗಲ್ಲ. ಜೈವಿಕ ತಂತ್ರಜ್ಞಾನದ ತಳಿಗಳು ವಿವಿಧ ವಂಶ, ಕುಲ, ಜಾತಿ, ಕುಟುಂಬ ಮಹಾಕುಟುಂಬಗಳನ್ನು ಮೀರಿದ ಎರಡು ಜೀವಿಗಳ ನಡುವೆ ವಂಶವಾಹಿಗಳ ಸಂಕರದಿಂದ ಮೂಡಿಬರುವುದರಿಂದ ಅವುಗಳ ರಾಸಾಯನಿಕ ಸಂರಚನೆಯಲ್ಲಿ ಗಣನೀಯವಾದ ಬದಲಾವಣೆಗಳು ಉಂಟಾಗಿರುವ ಸಂಭವವಿದೆ. ಆದ್ದರಿಂದ ಜೈವಿಕ ತಂತ್ರಜ್ಞಾನದ ತಳಿಗಳನ್ನು ರಾಸಾಯನಿಕ ಸಂರಚನೆಯನ್ನು ಕೂಲಂಕಶವಾದ ಪರೀಕ್ಷೆಗೆ ಒಳಪಡಿಸಬೇಕು. ಸದ್ಯ ಕೃಷಿಯಲ್ಲಿರುವ ತಳಿಗಳೊಂದಿಗೆ ತೌಲನಿಕ ಅಧ್ಯಯನ ನಡೆಸಬೇಕು. ಆಹಾರವಾಗಿ ಉಪಯೋಗಿಸಿದರೆ ಉಂಟಾಗುವ ಪರಿಣಾಮಗಳನ್ನೂ ಪರೀಕ್ಷೆಗೆ ಒಳಪಡಿಸಬೇಕು. ಈ ಹಿನ್ನೆಲೆಯಲ್ಲಿ ಕೆಳಗಿನ ದೋಷಗಳು ಬಿ.ಟಿ. ಬದನೆಯ ಪರೀಕ್ಷೆಯಲ್ಲಿ ಕಾಣಿಸಿವೆ. ಬಿ.ಟಿ. ಬದನೆಯ ವಿಷಯದಲ್ಲಿ 24 ರೀತಿಯ ಪರೀಕ್ಷೆಗಳು ಅಗತ್ಯವೆಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಅವುಗಳಲ್ಲಿ ಕೇವಲ ಆರು ಪರೀಕ್ಷೆಗಳನ್ನು ಮಾಡಲಾಗಿದೆ.ಕೆಲವು ಪರೀಕ್ಷೆಗಳನ್ನು ದೀರ್ಘಕಾಲ ಮಾಡಬೇಕು. ಆಗ ಮಾತ್ರ ಈ ಆಹಾರವನ್ನು ಸೇವಿಸುವ ಮನುಷ್ಯರೂ ಪ್ರಾಣಿಗಳು ಕ್ಯಾನ್ಸರ್ ಮೊದಲಾದ ಅಪಾಯಕಾರಿ ರೋಗಗಳಿಗೆ ಒಳಗಾಗುತ್ತಾರೆಯೇ ಇಲ್ಲವೇ ಎಂಬ ತೀರ್ಮಾನಕ್ಕೆ ಬರಲು ಸಾಧ್ಯ. ಬಿಟಿ ಬದನೆಯನ್ನು ಇಂತಹ ದೀರ್ಘ ಕಾಲೀನ ಪರೀಕ್ಷೆಗೆ ಒಡ್ಡಲಾಗಿಲ್ಲ. ಆದರೆ ಬಿ.ಟಿ. ಬದನೆಗೆ ಸಂಬಂಧಿಸಿದ ಕೆಲ ಪರೀಕ್ಷೆಗಳು ಬಿ.ಟಿ. ಬದನೆಯ ಜನನಕ್ಕೆ ಕಾರಣವಾದ ಮೊನ್ಸಾಂಟೊ ಮತ್ತು ಅದರ ಅಧೀನದ ಮಹೈಕೋ ಕಂಪನಿಯಲ್ಲಿ ನಡೆಸಲಾಗಿದೆ. ಅಮೇರಿಕ ಸರ್ಕಾರದ ಸಹಾಯದಿಂದ ಸ್ಥಾಪಿಸಲಾದ ಪ್ರಯೋಗಾಲಯಗಳಲ್ಲಿ ನಡೆಸಲಾಗಿದೆ. ಭಾರತದಲ್ಲಿ ತನ್ನದೇ ಆದ ಉತ್ತಮ ಪರೀಕ್ಷಾ ಸಾಮರ್ಥ್ಯವುಳ ವಿಶ್ವಾಸಾರ್ಹ ಪ್ರಯೋಗಾಲಯಗಳನ್ನು ರೂಪಿಸಬೇಕು. ಈ ಪ್ರಯೋಗಗಳು ವಿಜ್ಞಾನಿಗಳ ಸ್ವತಂತ್ರ ಸಮಿತಿಯೊಂದರ ಉಸ್ತುವಾರಿಯಲ್ಲಿ ನಡೆಯಬೇಕು. ನಂತರ ಮಾತ್ರ ಅವುಗಳ ಸಾಗುವಳಿಗೆ ಅನುಮತಿ ನೀಡಬೇಕು.ಇದಕ್ಕೆ ಭಿನ್ನವಾಗಿ ಕೇಂದ್ರ ಸರ್ಕಾರ ನೇಮಿಸಿದ ಉನ್ನತ ಸಮಿತಿಯ
6 ಜನ ಸದಸ್ಯರಲ್ಲಿ ಮಾನ್ಸಾಂಟೋ, ಮಹೈಕೋ ಕಂಪನಿಗಳ ಸಂಪರ್ಕ ಹೊಂದಿದ್ದ ನಾಲ್ಕು ಜನ ಸದಸ್ಯರಿದ್ದರು. ಈ ವರದಿಯನ್ನು ಕೂಡ ಕಂಪನಿಯವರೇ ತಯಾರು ಮಾಡಿಕೊಟ್ಟಿರುವ ಬಗ್ಗೆ ಸಂದೇಹಗಳು ಉಂಟಾಗಿವೆ.ವಿದ್ಯಾರ್ಥಿಗಳು ಅವರೇ ಪರೀಕ್ಷಾ ಕೊಠಡಿಯ ಉಸ್ತುವಾರಿಯೂ ಅವರೇ ಪರೀಕ್ಷಕರಾಗಿ ಅಂಕ ನೀಡಿ ಪಾಸು ಮಾಡುವವರೂ ಅವರೇ ಎನ್ನುವಂತಹ ಹೀನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಉಂಟುಮಾಡಿದೆ
ಬೆಂಗಳೂರುನಲ್ಲಿ ಬಿ.ಟಿ ಬದನೆ ವಿರೋಧಿ ಹೋರಾಟ ಕನಾಟಕ ಪ್ರಾಂತ ರೈತ ಸಂಘದ ಫ್ರತಿಭಟನೆ
-ಜಿ.ಎನ್. ನಾಗರಾಜ್
ಸೌಜನ್ಯ:ಜನಶಕ್ತಿ