ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳಕ್ಕೆ ಕಬಡ್ಡಿಯಲ್ಲಿ ಉತ್ತಮ ಭವಿಷ್ಯವಿದೆ.......ಜಗದೀಶ ಕುಂಬ್ಳೆ

ಭಟ್ಕಳಕ್ಕೆ ಕಬಡ್ಡಿಯಲ್ಲಿ ಉತ್ತಮ ಭವಿಷ್ಯವಿದೆ.......ಜಗದೀಶ ಕುಂಬ್ಳೆ

Tue, 19 Jan 2010 15:52:00  Office Staff   S.O. News Service
ಭಟ್ಕಳ, ಜನವರಿ 17: ಭಟ್ಕಳದ ಆಟಗಾರರಿಗೆ  ಕಬಡ್ಡಿಯಲ್ಲಿ ಉತ್ತಮ ಭವಿಷ್ಯವಿದೆ ಎಂದು ರಾಷ್ಟ್ರೀಯ ಕಬಡ್ಡಿ ತಂಡದ ಆಟಗಾರ ಜಗದೀಶ ಕುಂಬಳೆ ಹೇಳಿದರು. 
 
ಅವರು ನಿನ್ನೆ ಸಂಜೆ ನಗರದಲ್ಲಿ ತಾಲೂಕು ಕಬಡ್ಡಿ ಫೆಡರೇಶನ್‌ರವರು ಕೋಮುಸೌಹಾರ್ದತೆಯ ಉದ್ದೇಶದಿಂದ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಕ್ರಿಕೆಟ್ ಬಗ್ಗೆ  ಜನರು ಹೆಚ್ಚಿನ ಒಲುವು ತೋರಿಸುತ್ತಿದ್ದರೆ, ಭಟ್ಕಳ ಜನರು ಮಾತ್ರ ಕಬಡ್ಡಿಯ ಕುರಿತು ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ವಿಶೇಷವೆನಿಸಿದೆ.  ಇದು ಉತ್ತಮ ಬೆಳೆವಣಿಗೆಯಾಗಿದೆ.
 
ಗ್ರಾಮೀಣ ಮಟ್ಟದಲ್ಲಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳುವುದರ ಮೂಲಕ ಕಬಡ್ಡಿ ಆಟವನ್ನು ಉಳಿಸಿ ಬೆಳೆಸಬೇಕಾಗಿದೆ. ಆಟಗಾರರಿಗೆ ಪ್ರೋತ್ಸಾಹ ಸಿಕ್ಕರೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂದ ಅವರು ಇಂತಹ ಕಬಡ್ಡಿ ಪಂದ್ಯಾವಳಿ ಏರ್ಪಡಿಸುವುದರಿಂದ ನಗರದಲ್ಲಿ ಸೌಹಾರ್ದತೆ ಮೂಡಿಸಲು ಸಹಕಾರಿಯಾಗುತ್ತದೆ ಎಂದರು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜೆ ಡಿ ನಾಯ್ಕ ಭಟ್ಕಳಕ್ಕಿರುವ ಕಳಂಕವನ್ನು ಮೊದಲು ದೂರ ಮಾಡಬೇಕಿದೆ. ಇಲ್ಲಿನ ಜನರಲ್ಲಿ ಶಾಶ್ವತವಾಗಿ ಪ್ರೀತಿ ವಿಶ್ವಾಸ ಮೂಡಬೇಕಾಗಿದೆ. ಕಬಡ್ಡಿ ಆಟದಂತೆ ಇನ್ನಿತರ ಆಟಕ್ಕೂ ಜನರು ಹೆಚ್ಚಿನ ಆದ್ಯತೆ ನೀಡಬೇಕು. ಇಂತಹ ಕ್ರೀಡಾಕೂಟಗಳು ಪರಸ್ಪರರಲ್ಲಿ ಸೌಹಾರ್ದತೆಯನ್ನು ಹೆಚ್ಚಿಸುವ ಕಾರ್ಯ ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಪಂ ಸದಸ್ಯ ದಾಮೋದರ ಗರ್ಡಿಕರ, ಮುಖ್ಯ ಅತಿಥಿಯಾಗಿದ್ದ ರಬಿತಾ ಸೊಸೈಟಿಯ ಕಾರ್ಯದರ್ಶಿ ಹಾಸೀಮ್, ಸಿಪಿ‌ಐ ಗುರು ಮಾಥೂರು, ಇನಾಯತುಲ್ಲಾ ಶಾಬಂದ್ರಿ ಮಾತನಾಡಿದರು.ವೇದಿಕೆಯಲ್ಲಿ ತಾಲೂಕು ಕಬಡ್ಡಿ ಫೆಡರೇಶನ್‌ನ ಅಧ್ಯಕ್ಷ ಇಮ್ತಿಯಾಜ ಉದ್ಯಾವರ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂಘದ ಕಾರ್ಯದರ್ಶಿ ವೆಂಕಟ್ರಮಣ ಮೊಗೇರ ಸ್ವಾಗತಿಸಿದರು. ಕೊನೆಯಲ್ಲಿ ಈಶ್ವರ ನಾಯ್ಕ ವಂದಿಸಿದರು. ದೈಹಿಕ ಶಿಕ್ಷಕ ಎಂ ಬಿ ನಾಯ್ಕ ನಿರೂಪಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟೂ ೨೮ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.


Share: