ಭಟ್ಕಳ, ಡಿಸೆಂಬರ್ ೭ : ಒಂದೆರಡು ಎಕರೆ ಭೂಮಿಯನ್ನು ಹೊಂದಿದವರಿಗೂ ಬಿಪಿಎಲ್ ಕಾರ್ಡ ನೀಡಲಾಗಿದ್ದು, ಬಡವರನ್ನು ವಂಚಿಸಲಾಗಿದೆ ಎಂದು ತಾಲೂಕು ಪಂಚಾಯತ ಉಪಾಧ್ಯಕ್ಷ ಮಾದೇವ ನಾಯ್ಕ ಸೋಮವಾರ ನಡೆದ ತಾಲೂಕು ಪಂಚಾಯತ ಕೆಡಿಪಿ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸಭೆಯ ಮಧ್ಯೆ ವಿಷಯವನ್ನು ಅವರು, ಪಡಿತರ ಚೀಟಿ ವಿತರಣೆಯ ಕುರಿತಂತೆ ಮತ್ತೊಮ್ಮೆ ಸಮೀಕ್ಷೆ ನಡೆಸುವ ಅಗತ್ಯವಿದೆ. ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮೊಗೇರರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಿಕೆಯ ಕುರಿತಂತೆ ಸರಕಾರ ಇನ್ನೂ ಸ್ಪಷ್ಟ ಆದೇಶ ಹೊರಡಿಸಿಲ್ಲ. ಆದರೂ ಅಧಿಕಾರಿಗಳು ಮೊಗೇರ ಜನರಿಗೆ ಪ್ರಮಾಣ ಪತ್ರ ನೀಡದೇ ಅನ್ಯಾಯವೆಸಗುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಸಮಾಜ ಕಲ್ಯಾಣ ಇಲಾಖೆಯ ಮುಂದೆ ಧರಣಿ ನಡೆಸುವುದಾಗಿ ಅಧ್ಯಕ್ಷೆ ಗೌರಿ ಮೊಗೇರ ಎಚ್ಚರಿಕೆ ನೀಡಿದರು. ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಅಧಿಕಾರಿ ತಿಮ್ಮಣ್ಣ, ಪ್ರಮಾಣ ಪತ್ರ ನೀಡದಿರುವಂತೆ ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ತೀರ್ಮಾನದಲ್ಲಿಯೂ ಇದನ್ನೇ ಉಲ್ಲೇಖಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳು ನ್ಯಾಯಾಲಯದ ಮುಂದಿದ್ದು, ಈ ಕುರಿತಂತೆ ಹಿರಿಯ ಅಧಿಕಾರಿಗಳಿಗೆ ಬರೆದುಕೊಳ್ಳಲಾಗಿದೆ. ಅವರಿಂದ ಸ್ಪಷ್ಟ ನಿರ್ದೇಶನ ಬಂದ ನಂತರವಷ್ಟೇ ಮುಂದಿನ ಹೆಜ್ಜೆ ಇಡಲು ಸಾಧ್ಯ ಎಂದು ತಿಳಿಸಿದರು. ಗ್ರಾಮೀಣ ಭಾಗಗಳಿಗೆ ಹಳೆಯ ಬಸ್ ನೀಡದಿರುವಂತೆ ಉಪಾಧ್ಯಕ್ಷರು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕ ಬಾವಿ ನಿರ್ಮಾಣಕ್ಕೆ ಜಾಗ ನೋಂದಣಿ ಕಡ್ಡಾಯಗೊಳಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ವಿದ್ಯಾರ್ಥಿ ನಿಲಯಗಳಲ್ಲಿ ಪಾಲಕರ ಸಭೆ ವ್ಯವಸ್ಥಿತ ರೀತಿಯಲ್ಲಿ ನಡೆಯದಿರುವ ಬಗ್ಗೆ ಕಾರ್ಯನಿರ್ವಾಹಣಾಧಿಕಾರಿ ಉದಯ ನಾಯ್ಕ, ಸಮಾಜ ಕಲ್ಯಾಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಪಾಲಕರನ್ನು ಕಡೆಗಣಿಸುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವಂತೆ ಅವರು ಆದೇಶಿಸಿದರು. ಆರೋಗ್ಯ ಇಲಾಖೆಯ ವತಿಯಿಂದ ಡಿಸೆಂಬರ್ ೧೧, ೧೨, ೧೩ ರಂದು ಆನೆಕಾಲು ರೋಗಕ್ಕೆ ಔಷಧಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿ ಈರಯ್ಯ ದೇವಾಡಿಗ ಕೋರಿದರು. ಸಭೆಯಲ್ಲಿ ತಾಲೂಕು ಪಂಚಾಯತ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸಿಂಧೂ ಭಾಸ್ಕರ ನಾಯ್ಕ ಉಪಸ್ಥಿತರಿದ್ದರು. ಎಮ್.ಎಮ್.ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು. ವಿನೋದ ಗಾಂವಕರ ವಂದಿಸಿದರು.
ವರದಿ: ವಸಂತ ದೇವಾಡಿಗ, ಭಟ್ಕಳ