ಭಟ್ಕಳ, ಜನವರಿ 5: ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ತಾಲೂಕಿನ ಸೌರಭಿ (ಶರಾಬಿ) ನದಿ ತನ್ನ ಸೌರಭವನ್ನು ಕಳೆದುಕೊಳ್ಳುತ್ತಿದೆ. ಅರಬ್ಬರ ವ್ಯಾಪಾರ, ವಹಿವಾಟಿಗೆ ದಾರಿ ತೋರಿಸಿದ್ದ, ಹರಿದು ಹೋಗುವ ಹಾದಿಯ ಇಕ್ಕೆಲಗಳ ಬಾವಿಗೆ ನೀರನ್ನು ಕರುಣಿಸಿದ, ಆಸುಪಾಸಿನ ಹೊಲಗಳಿಗೆ ತಂಪು ನೀಡುತ್ತಲೇ ಜೀವ ಸವೆಸುತ್ತಿರುವ ಈ ನದಿ ನಿಜಕ್ಕೂ ಅನಾಥವಾಗುತ್ತಿದೆ. ಮೈತುಂಬ ಹೊಲಸನ್ನು ತುಂಬಿಕೊಂಡು, ಒಂದೆರಡು ಆಳಿನೆತ್ತರಕ್ಕೆ ಕೆಸರಿನಲ್ಲಿಯೇ ಹುಗಿದು ಹೋಗಿರುವ ಈ ನದಿಯತ್ತ ದೃಷ್ಟಿ ಹರಿಸುವ ಮನಸ್ಸುಗಳಿಗೆ ನಿಜಕ್ಕೂ ಬರ ಬಂದಿದೆ.
ತಾಲೂಕಿನ ಬಹುತೇಕ ಜನರ ಬಾಯಲ್ಲಿ ಶರಾಬಿ ಎಂದೇ ಕರೆಯಿಸಿಕೊಳ್ಳುತ್ತ ಅಪಹಾಸ್ಯಕ್ಕೀಡಾಗುತ್ತಿರುವ ಈ ನದಿಯ ಹಿನ್ನೆಲೆ ಮಾತ್ರ ಕುತೂಹಲಕಾರಿಯಾಗಿದೆ. ಶರಾಬಿ ನದಿ ಎನ್ನುವುದಕ್ಕೆ ಯಾವುದೇ ಅರ್ಥವಿಲ್ಲ ಎನ್ನುತ್ತಾರೆ ಇತಿಹಾಸಕಾರರು. ಅವರ ಪ್ರಕಾರ ‘ಸುರಭಿ’ ಎನ್ನುವುದು ‘ಸೌರಭಿ’ಯಾಗಿ ನಂತರ ಆಡು ಭಾಷೆಗೆ ಸಿಲುಕಿ ‘ಶರಾಬಿ’ಯಾಗಿ ಪರಿವರ್ತನೆಯಾಗಿದೆ. ಸುರಭಿ ಎಂದರೆ ಗೋವು ತಾನೆ?





ಭಟ್ಕಳ ಅಥವಾ ಚೆನ್ನಪಟ್ಟಣದಲ್ಲಿ ಬ್ರೀಟಿಷರ ಹೆಜ್ಜೆಗಳು ಸ್ಪಷ್ಟವಾಗಿಯೇ ಮೂಡಿ ಮರೆಯಾಗಿವೆ. ಭಟ್ಕಳದಲ್ಲಿ ಕಾರ್ಖಾನೆ ತೆರೆಯಲು ಮುಂದಾಗಿದ್ದ ಅವರಿಗೆ ಗೋವಿನ ಸಾವೊಂದು ಅಪಶಕುನವಾಗಿ ಕಾಡಿದ ಬಗ್ಗೆಯೂ ಮಾಹಿತಿಗಳು ಹರಿದಾಡುತ್ತವೆ. ಬ್ರಿಟೀಷರ ಬಳಿ ಇದ್ದ ನಾಯಿಯೊಂದು ಗೋವನ್ನು ಕಚ್ಚಿ ಕೊಂದಿದ್ದೇ ಗೋವಿನ ಬಗ್ಗೆ ಪೂಜ್ಯ ಭಾವನೆಯನ್ನು ಹೊಂದಿದ್ದ ಇಲ್ಲಿಯ ಜನ ತಿರುಗಿ ಬೀಳಲು ಕಾರಣವಾಯಿತು. ಇಲ್ಲಿಯ ಜನ ಬ್ರಿಟೀಷರತ್ತ ತೆರಳುತ್ತಾರೆ. ‘ನಿಮ್ಮ ನಾಯಿ, ನಮ್ಮ ಆಕಳನ್ನು ಕಚ್ಚಿ ಕೊಂದಿದೆ. ಪರಿಹಾರ ಕೊಡಿ..’ ಎಂಬುದೇ ಜನರ ಬೇಡಿಕೆ. ಆದರೆ ಅಧಿಕಾರಿಶಾಹಿ ಬ್ರೀಟಿಷರು ಗೋವಿಗಿಂತ ತಮ್ಮ ನಾಯಿಯೇ ಶ್ರೇಷ್ಠ ಎಂದೇ ವಾದಿಸುತ್ತ ಜನರ ಬಾಯಿಯನ್ನು ಮುಚ್ಚಿಸಲು ಮುಂದಾಗುತ್ತಾರೆ. ಜನರ ಕೋಪ ಇಮ್ಮಡಿಗೊಳ್ಳುತ್ತದೆ. ಕಾರ್ಖಾನೆ ತೆರೆಯಲು ಬಂದ ಬ್ರೀಟಿಷರೂ ಜಾಗ ಖಾಲಿ ಮಾಡಬೇಕಾಗುತ್ತದೆ. ಆದರೆ ಅಷ್ಟರಲ್ಲಾಗಲೇ ಬರ್ಭರ ಹಿಂಸೆಗೆ ತುತ್ತಾದ ಗೋವಿನ ರಕ್ತ ಹಳ್ಳದಲ್ಲಿ ನದಿ ನೀರಿನಂತೆ ಹರಿದು ಹೋಗುತ್ತದೆ. ನಂತರದಲ್ಲಿ ಅಲ್ಲಿದ್ದ ನದಿ ಸುರಭಿ (ಗೋವು)ಯಾಗುತ್ತದೆ. ಸುರಭಿ ಸೌರಭಿಯಾಗಿ, ನಂತರ ಪದಗಳೇ ಮತಾಂತರ(!?)ಗೊಂಡು ಶರಾಬಿ ಹೆಸರನ್ನು ಪಡೆದುಕೊಂಡು ತೆವಳುತ್ತಿದೆ. ಶರಾಬಿಯ ಕಥೆ ಅಷ್ಟಕ್ಕೇ ನಿಲ್ಲುವುದಿಲ್ಲ. ಈ ನದಿಯ ಕೀರ್ತಿ ಮತ್ತಷ್ಟು ಹೆಚ್ಚಿದ್ದು ವಿಜಯನಗರ ಅರಸರ ಕಾಲದಲ್ಲಿ. ಅರಬ್ಬರ ಕುದುರೆಗಳು ಇದೇ ಶರಾಬಿ ಹೊಳೆಯನ್ನು ದಾಟಿ ರಾಜ, ಸೈನಿಕರ ಜೊತೆ ಓಡಾಡಿವೆ. ಬಟ್ಟೆ-ಬರೆಗಳು, ಚಿನ್ನ-ವಜ್ರಗಳೂ ಇದೇ ನದಿಯ ದಡಕ್ಕೆ ಬಂದು ನಂತರ ರಾಜ್ಯ, ದೇಶಗಳ ಮೂಲೆ ಮೂಲೆಯನ್ನು ಸೇರಿವೆ. ಅಷ್ಟೊಂದು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡ ನದಿ ನಂತರದ ದಿನಗಳಲ್ಲೇನಾಯಿತು ಎಂಬುದು ನಿಜಕ್ಕೂ ನಮ್ಮೆಲ್ಲರ ದುರಂತ.

ಊರು ಬೆಳೆದು ಬದಲಾದರೂ ಸೌರಭಿ ಓಡಾಡಿಕೊಂಡವರನ್ನೆಲ್ಲ ಕರೆದು ಹರಸಿ ಕಳುಹಿಸಿದೆ. ೧೯೯೩ರವರೆಗೂ ಇದೇ ನದಿಯ ಮುಖಾಂತರ ಕಳ್ಳ ಸಾಗಾಣಿಕೆ ನಡೆದಿದೆ. ಅಂತಿಂಥವರಲ್ಲ.. ಎಂತೆಂಥವರ ಹೆಸರನ್ನೂ ಹೇಳಿಕೊಂಡು, ಅವರು ಈ ನದಿಯನ್ನು ಬಳಸಿಕೊಂಡ ಬಗ್ಗೆ ಮಾಹಿತಿಗಳು ಹರಿದಾಡಿ ಮರೆಯಾಗಿವೆ. ಇವೆಲ್ಲ ಒಂದೆಡೆ ಇದ್ದರೆ, ಆಸುಪಾಸಿನ ಜನಸಾಮಾನ್ಯರ ಬಾಳಿಗೆ ಈ ನದಿ ಬಹಳಷ್ಟನ್ನು ನೀಡಿದೆ. ಭಟ್ಕಳ ತಾಲೂಕಿನ (ಸುಮಾರು ೧೫ಕಿಲೋಮೀಟರು ಉದ್ದ ನದಿಯ ನೀರು ಹರಿಯುತ್ತಿದೆ) ನೂಜ್, ಅಡಿಬಾರ, ಯಲ್ವಡಿಕವೂರು, ಬೇಹಳ್ಳಿ, ಮೂಢಭಟ್ಕಳ, ಮುಂಡಳ್ಳಿ, ಚೌಥನಿ ಸೇರಿದಂತೆ ಸಾವಿರಾರು ಬಾವಿಗಳಿಗೆ ಸಿಹಿ ನೀರಿನ ಸುಧೆಯನ್ನು ಹರಿಸಿದೆ. ಸಾವಿರಾರು ಎಕರೆ ಹೊಲ, ಗದ್ದೆಗಳಿಗೆ ಹೊಳಪು ನೀಡಿದೆ. ನದಿಯ ಉದ್ದಕ್ಕೂ ಏಳೆಂಟು ಸ್ಥಳಗಳಲ್ಲಿ ಜನರು ಒಡ್ಡನ್ನು ನಿರ್ಮಿಸಿ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಮೀನುಗಾರರ ಪಾಲಿಗೆ ಮೈದಡವಿ ಪೊರೆಯುವ ಪಾವನೆ ಈ ಸೌರಭಿ! ಆದರೆ ಕಳೆದ ಏಂಟ್ಹತ್ತು ವರ್ಷಗಳಿಂದೀಚೆಗೆ ಶರಾಬಿ ಮತ್ತೇರಿಸಿಕೊಂಡು ಕುಳಿತಿದೆ. ಯಾಕಾಗಿ ನದಿ ಸುರಭಿಯಾಗಿತ್ತೋ, ಅದೇ ರಕ್ತ, ಎಲುಬು, ತ್ಯಾಜ್ಯಗಳು ನದಿಯಲ್ಲಿ ಇಂದಿಗೂ ತೇಲಿ ಹೋಗುತ್ತವೆ. ಜೊತೆಗೆ ನದಿಯಲ್ಲಿ ಊಳು ತುಂಬಿಕೊಂಡು ನದಿಯ ಯಾತನಾಮಯ ಸ್ಥಿತಿಯನ್ನು ಮುಂದುವರೆಸಿದೆ. ಮುಂಡಳ್ಳಿ, ಚೌಥನಿ ಭಾಗಗಳ ಬಾವಿಯ ನೀರೆಲ್ಲ ಬಗೆ ಬಗೆಯ ಬಣ್ಣಕ್ಕೆ ತಿರುಗಿದೆ. ಹೊಲ ಗದ್ದೆಗಳಿಗೆ ನೀರಿನ ಬರ ಬಂದಿದೆ. ಮಳೆಗಾಲದ ನೀರು ಊರಿನ ಮೇಲೆ ಹರಿದು ಹೋಗಲು ದಾರಿಯನ್ನು ಹುಡುಕುತ್ತಿದೆ. ನಮ್ಮೆಲ್ಲರ ದುರ್ದೈವವೆಂದರೆ ಸೌರಭಿಯ ಸಂಕಷ್ಟಕ್ಕೆ ಕಿವಿಗೊಡಬೇಕಾಗಿದ್ದ ಜನನಾಯಕರು ಬೆನ್ನು ಹಾಕಿ ಕುಳಿತು ಕೊಂಡಿದ್ದಾರೆ. ಕಿರು ನಿರಾವರಿ ಇಲಾಖೆಯದ್ದು ಬರೇ ಕೈ ನೆಕ್ಕುವ ಕೆಲಸ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪಿಚ್ಚಿಂಗ್ ಕೆಲಸವನ್ನಷ್ಟೇ ಕೈಗೆತ್ತಿಕೊಂಡು ನಕ್ಕು ಮುಂದೆ ಸಾಗುವ ಹುನ್ನಾರವೂ ತೆರೆಮರೆಯಲ್ಲಿ ನಡೆಯುತ್ತಿದೆ. ಅಂದ ಹಾಗೆ ಭಟ್ಕಳ ಜನರ ಮೈಯಲ್ಲಿ ಹರಿಯುವ ರಕ್ತಕ್ಕೆ ಬೆಲೆ ಇದೆ. ಹೋರಾಟಕ್ಕೆ ಅಣಿಯಾಗಿ ಜೀವ ನದಿಯನ್ನು ಉಳಿಸಿಕೊಳ್ಳುವ ತಾಕತ್ತು ಅವರಿಗೆ ಖಂಡಿತ ಇದೆ. ಕುಡಿಯುವ ನೀರಿಗೂ ಕಣ್ಣೀರು ಹಾಕುವ ದಿನಗಳು ಕಾಲಿಡುವ ಮುಂಚೆ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ. ಮುಂದಿನ ಪೀಳಿಗೆಯ ಹಿಡಿಶಾಪದಿಂದ ತಪ್ಪಿಸಿಕೊಳ್ಳಬೇಕಾಗಿದೆ.
ಚಿತ್ರ, ವರದಿ: ವಸಂತ ದೇವಾಡಿಗ, ಭಟ್ಕಳ