ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮೈಸೂರು: ನಾಳೆಯಿಂದ ಐತಿಹಾಸಿಕ ಜಂಬೂ ಸವಾರಿ

ಮೈಸೂರು: ನಾಳೆಯಿಂದ ಐತಿಹಾಸಿಕ ಜಂಬೂ ಸವಾರಿ

Sun, 27 Sep 2009 03:18:00  Office Staff   S.O. News Service
ಮೈಸೂರು, ಸೆ.26: ನಾಡಹಬ್ಬ ದಸರಾ ಮಹೋತ್ಸವದ ಜನಾಕರ್ಷಕ ಕೇಂದ್ರಬಿಂದುವಾಗಿರುವ ಐತಿಹಾಸಿಕ ಜಂಬೂಸವಾರಿ ಮೆರವಣಿಗೆ ಸೋಮವಾರ ಮಧ್ಯಾಹ್ನ 12.45 ಕ್ಕೆ ಗಂಟೆಗೆ ಆರಂಭವಾಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಅನಂತರ ಅವರು ಅರಮನೆ ಆವರಣದಲ್ಲಿ ನಿರ್ಮಿಸಲಾಗಿ ರುವ ವಿಶೇಷ ವೇದಿಕೆಯಿಂದ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವರು. ಬಳಿಕ ಮೆರವಣಿಗೆ ಮುಂದುವರಿಯಲಿದೆ. 

ಸುಮಾರು 40 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ನಾಡಿನ ಸಂಸ್ಕೃತಿ, ವಿವಿಧ ಜಿಲ್ಲೆಗಳ ಜಾನಪದ ಕಲೆ ಸೇರಿದಂತೆ ಕನ್ನಡ ಕವಿಗಳು, ದಾರ್ಶನಿಕರು ಮತ್ತು ಪ್ರಶಸ್ತಿ ಪುರಸ್ಕೃತರು ಈ ಸ್ತಬ್ಧ ಚಿತ್ರಗಳ ರೂಪದಲ್ಲಿ ಬರಲಿದ್ದಾರೆ. ಅವುಗಳಿಗೆ ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಅಂತಿಮ ರೂಪ ನೀಡಲಾಗುತ್ತಿದೆ. 

ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳಿಂದ ಆರಂಭಗೊಳ್ಳುವ ಜಂಬೂಸವಾರಿಯು ನಂದಿಕಂಬ, ಕರ್ನಾಟಕದ ಗ್ರಾಮೀಣ ಸೊಗಡಿನ ವಿವಿಧ ಜಾನಪದ ಕಲಾ ತಂಡ, ಗಾಡಿಗೊಂಬೆ ಇತ್ಯಾದಿಗಳೊಡನೆ ಸಯ್ಯಾಜಿರಾವ್ gಸ್ತೆ, ಬಂಬೂಬಜಾರ್, ಕೇಂದ್ರ ಕಾರಾಗೃಹ ರಸ್ತೆಯ ಮೂಲಕ ಸಾಗಿ ಟಿಪ್ಪು ವೃತ್ತದಲ್ಲಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅಂತ್ಯಗೊಳ್ಳಲಿದೆ. 

ಅಂದು ರಾತ್ರಿ ಅಲ್ಲಿ ಪೊಲೀಸರು, ಭಾರತ ಸೇನಾಪಡೆ ಯೋಧರು ಮೈನವಿರೇಳಿಸವ ವಿವಿಧ ಬಗೆಯ ಕಸರತ್ತುಗಳನ್ನು ಪ್ರದರ್ಶಿಸುವ ಮೂಲಕ ರಂಜಿಸಲಿದ್ದಾರೆ. 

ಇಲ್ಲಿನ ಶಂಕರ ಮಠದ ಕಲ್ಯಾಣ ಮಂಟಪದ ಆವರಣದಲ್ಲಿ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ದಸರಾ ಅಕ್ಷರಶಃ ಸ್ತ್ರೀಯರ ಸಾಮ್ರಾಜ್ಯವೇ ಆಗಿ ಮೆರೆಯಿತು. ಮಹಿಳಾ ಸ್ವಸಹಾಯ ಸಂಘಗಳು ಉತ್ಪಾದಿಸಿದ ಗೃಹ ಅಲಂಕಾರ ವಸ್ತುಗಳು, ರುಚಿಕರು ಸಂಡಿಗೆ, ಹಪ್ಪಳ, ಉಪ್ಪಿನಕಾಯಿ ಇತ್ಯಾದಿಗಳು ಜನತೆಯನ್ನು ಆಕರ್ಷಿಸಿದವು. ಅದಕ್ಕಿಂತ ವಿಶೇಷ ವೆಂದರೆ ಇಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾನಿನಿಯರ ಪ್ರತಿಭೆ, ಮನೋಸ್ಥೈರ್ಯವನ್ನು ಪ್ರತಿಬಿಂಬಿಸಿ ದವು. ಗಂಡು ಕಲೆ ಎಂದೇ ಜನಜನಿತದ ಡೊಳ್ಳು ಕುಣಿತ, ರಗಾಸೆ, ಈರ ಮಕ್ಕಳ ನೃತ್ಯವನ್ನು ಯುವತಿಯರು ಯಾವ ಗಂಡಿಗೂ ಕಡಿಮೆ ಇಲ್ಲದಂತೆ ವೇದಿಕೆಯಲ್ಲಿ ಪ್ರದರ್ಶಿಸಿ ಪ್ರೇಕ್ಷಕರನ್ನು ನಿಬ್ಬೆರಗುಗೊಳಿಸಿದರು.

ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಹಲವು ದಾಖಲೆಗಳಿಗೆ ಕಾರಣವಾದರೆ, ಚೆನ್ನಯ್ಯ ಕುಸ್ತಿ ಅಖಾಡದಲ್ಲಿ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟದ ಕುಸ್ತಿ ಪಟುಗಳು ಭಾಗವಹಿಸಿದ್ದರು. 

ಮಹಿಳೆಯರಿಗೂ ಪ್ರತ್ಯೇಕ ಕುಸ್ತಿ ಪಂದ್ಯ ಆಯೋಜಿಸಲಾಗಿತ್ತು. 

ದಸರಾ ಕವಿಗೋಷ್ಠಿ ಕೂಡ ಅನೇಕ ಹಿರಿ, ಕಿರಿ ಕವಿಗಳ ಕಾವ್ಯ ವಾಚನಕ್ಕೆ ಅನುವು ಮಾಡಿಕೊಡುವ ಮೂಲಕ ಅರಳು, ಚುಟುಕು ಹಾಗೂ ಹಿರಿಯ ಕವಿಗೋಷ್ಠಿಗಳ ಮೂಲಕ ೧೦ ರಿಂದ ೭೦ ವಯೋಮಾದ ಕವಿಗಳ ಕವಿತೆಗಳನ್ನು ಆಸ್ವಾದಿಸುವ ಅದೃಷ್ಟವನ್ನು ಸಾರ್ವಜನಿಕರಿಗೆ ಒದಗಿಸಲಾಯಿತು.

ಈ ಹತ್ತು ದಿನಗಳ ಸಡಗರ, ಉತ್ಸಾಹ, ಸಂಭ್ರಮಗಳನ್ನು ಮತ್ತಷ್ಟು ವಿಸ್ತೃತಗೊಳಿಸುವಂತೆ ಇಡೀ ಮೈಸೂರು ನಗರ ಝಗಮಗಿಸುವ ವಿದ್ಯುತ್ ದೀಪಗಳಿಂದ ಸಾಲಂಕೃಗೊಂಡಿದೆ. ಪಾರಂಪರಿಕ ಕಟ್ಟಡಗಳು, ರಾಜ ವೈಭವ ಸಾರುವ ಸ್ಥಾವರಗಳು, ಸರಕಾರಿ ಕಚೇರಿಗಳು, ಪ್ರಮುಖ ರಸ್ತೆಗಳು ಬಣ್ಣ-ಬಣ್ಣದ ವಿದ್ಯುತ್ ದೀಪದಿಂದ ಜನಮನ ಸೆಳೆದಿದೆ.

ದಸರಾ ಮಹೋತ್ಸವದ ಒಂಬತ್ತನೇ ದಿನವಾದ ರವಿವಾರ ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರಿಂದ ಆಯುಧ ಪೂಜೆ ನಡೆಯಲಿದೆ. ಪಾಂಡವರು ೧೨ ವರ್ಷಗಳ ವನವಾಸದ ನಂತರ ಒಂದು ವರ್ಷದ ಅಜ್ಞಾತ ವಾಸಕ್ಕಾಗಿ ವಿರಾಟರಾಜನ ಆಸ್ಥಾನದಲ್ಲಿ ಮಾರುವೇಷದಲ್ಲಿ ವಿವಿಧ ಕೈಂಕರ್ಯಗಳ ಆಳುಗಳಾಗಿ ಸೇರಿದ್ದರು. ಈ ಸಂದರ್ಭದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರವೊಂದರಲ್ಲಿ ಅಡಗಿಸಿಟ್ಟಿದ್ದರು. ಅಜ್ಞಾತ ವಾಸ ಮುಗಿದ ಬಳಿಕ ಅವುಗಳನ್ನು ವಾಪಸ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು ಎಂದು ಪುರಾಣ ಹೇಳುತ್ತದೆ. ಹಾಗಾಗಿ ಮೈಸೂರು ರಾಜರು ಕೂಡ ಆ ಸಂಪ್ರದಾಯವನ್ನು ತಮ್ಮ ದಸರಾ ವೈಭವದಲ್ಲಿ ಅಳವಡಿಸಿಕೊಂಡು ಬಂದಿದ್ದು, ಈಗಲೂ ಅದಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತಿದೆ.

ಉತ್ಸವದ ಹತ್ತನೇ ಹಾಗೂ ಅಂತಿಮ ದಿನವಾದ ವಿಜಯದಶಮಿ ಅಂದರೆ ಸೆ.೨೮ರಂದು ಜಂಬೂಸವಾರಿ ನಡೆಯಲಿದೆ

Share: