ಬೆಂಗಳೂರು: ‘ಉರ್ದು ಒಂದು ಕೋಮಿನ ಭಾಷೆಯಲ್ಲ. ಅದು ಒಂದು ಪ್ರದೇಶದ ಭಾಷೆ. ಆದರೆ ಅದನ್ನು ಕೋಮು ಭಾಷೆಯಾಗಿ ಪರಿಗಣಿಸುವಲ್ಲಿ ವ್ಯವಸ್ಥಿತ ಹುನ್ನಾರವೇ ನಡೆದಿದೆ’ ಎಂದು ಪ್ರಸಿದ್ಧ ಹಿಂದಿ ಕವಿ ಜಾವೇದ್ ಅಖ್ತರ್ ತಿಳಿಸಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ‘ದೇಶಕಾಲ’ ವಿಶೇಷ ಸಂಚಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜಕೀಯ ಪಕ್ಷಗಳು ಮೂಲಭೂತವಾದಿಗಳನ್ನೇ ಬೆಂಬಲಿಸಿದವೇ ಹೊರತು ವಿಚಾರವಾದಿಗಳ ದನಿಯನ್ನು ಕೇಳಿಸಿಕೊಳ್ಳಲಿಲ್ಲ. 1952ರಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಮೂಲ ಭೂತವಾದಿಗಳಿಗೆ ಟಿಕೆಟ್ ನೀಡಿ, ರಾಷ್ಟ್ರೀಯವಾದಿಗಳನ್ನು ಕಡೆಗಣಿಸಲಾಯಿತು. ಮುಂದೆ 1977 ರಲ್ಲಿ ಜನತಾ ಪಕ್ಷ ಹುಟ್ಟಿಕೊಂಡ ಸಂದರ್ಭದಲ್ಲೂ ಕಂಡೂ ಕೇಳರಿಯದ ಶಾಹಿ ಇಮಾಮ್ ಎನ್ನು ವವರು ಪ್ರತ್ಯಕ್ಷರಾದರು’ ಎಂದು ಅವರು ತಿಳಿಸಿದರು.
‘ಉರ್ದು ಯಾವುದೇ ಧರ್ಮದ ಸ್ವತ್ತಲ್ಲ. ಧರ್ಮ ಮೀರಿದ ಈ ಭಾಷೆಯ ಶ್ರೀಮಂತಿಕೆ ಮೂಲ ಭೂತವಾದಿಗಳ, ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಸಿಕ್ಕು ಕ್ರಮೇಣ ಸೊರಗುತ್ತ ಸಾಗಿದೆ. ಇಂತಹ ಬೆಳವಣಿಗೆ ಇತ್ತೀಚೆಗೆ ನಿರ್ಮಾಣವಾಗಿರುವುದು ನಿಜಕ್ಕೂ ವಿಷಾದಕರ’ ಎಂದರು.
‘ಈ ವಿಚಾರವಾಗಿ ಮಾಧ್ಯಮಗಳ ತಕ್ಕಡಿಯೂ ಸರಿಯಾಗಿ ತೂಗುತ್ತಿಲ್ಲ. ಸತ್ವಯುತ ವಿವೇಚನೆ, ತರ್ಕ ಸಾಮರ್ಥ್ಯವನ್ನೇ ಅವು ಕಳೆದುಕೊಂಡಿವೆ. ಯಾವುದೋ ಒಂದು ಚಿಕ್ಕ ಊರಿನ ಧರ್ಮ ಗುರುವಿನ ಅಭಿಪ್ರಾಯ ದೊಡ್ಡ ಸುದ್ದಿಯಾಗುತ್ತಿದೆಯೇ ಹೊರತು ರಾಷ್ಟ್ರಮಟ್ಟದ ಉದಾರವಾದಿ ನಾಯಕನ ಹೇಳಿಕೆ ಮರೆ ಮಾಚಲಾಗುತ್ತಿದೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
‘ಧರ್ಮದೊಂದಿಗೆ ಭಾಷೆಯನ್ನು ಸಮೀಕರಿಸುವ ಈ ಷಡ್ಯಂತ್ರದ ಪರಿಣಾಮವೇ ಉರ್ದು ಭಾಷೆ ಇಂದು ಸಂಕಷ್ಟಕ್ಕೆ ಸಿಲುಕಿರುವುದು. ಸೂಫಿ ಸಂತರ, ಉರ್ದು ಕವಿಗಳ ವಿಚಾರಧಾರೆಯಲ್ಲಿ ಎಲ್ಲಿ ಯೂ ‘ಧರ್ಮ ರಾಜಕಾರಣ’ ಇಣುಕಿ ಹಾಕಿಲ್ಲ. ಎಂದಿಗೂ ಉರ್ದು ಭಾಷೆಯ ಕವಿಗಳು ಮೂಲ ಭೂತವಾದಿ ಸಿದ್ಧಾಂತವನ್ನು ಪ್ರತಿಪಾದಿಸಿಲ್ಲ’ ಎಂದು ಅವರು ಹೇಳಿದರು.
‘ಪರ್ಷಿಯನ್ ಭಾಷೆಯಿಂದ ಉರ್ದು ಭಾಷೆಗೆ ಕುರಾನ್ ಅನುವಾದಗೊಂಡಾಗ ಅನುವಾದಕರ ವಿರುದ್ಧ ಫತ್ವಾ ಹೊರಡಿಸಲಾಯಿತು. ಈ ಭಾಷೆ, ಸ್ವತ್ತಿನ ವಾದ ಕೇವಲ ಮುಸ್ಲಿಂ ಸಮುದಾಯ ಕ್ಕಷ್ಟೇ ಮೀಸಲಾಗಿಲ್ಲ. ‘ತುಳಸಿ ರಾಮಾಯಣ’ ಬರೆದ ತುಳಸಿದಾಸರಿಗೂ ಇದೇ ಗತಿಯಾಯಿತು. ‘ತುಳಸಿ ರಾಮಾಯಣ’ವನ್ನು ‘ಅವಧಿ’ (ಜನಸಾಮಾನ್ಯರ ಭಾಷೆ) ಭಾಷೆಯಲ್ಲಿ ಬರೆದ ಕಾರಣಕ್ಕೆ ಅವರನ್ನು ಸಮಾಜದಿಂದ ಬಹಿಷ್ಕರಿಸಲಾಯಿತು’ ಎಂದರು.
‘ನನ್ನ ಬಗ್ಗೆ ಜನರಲ್ಲಿ ದ್ವಂದ್ವವಿದೆ ಎಂದಾದಲ್ಲಿ ನಾನು ಸರಿಯಾದ ದಾರಿಯಲ್ಲೇ ಸಾಗುತ್ತಿದ್ದೇನೆ ಎಂದರ್ಥ. ನನ್ನ ಈ ನಿಲುವುಗಳ ಬಗ್ಗೆ ಮುಕ್ತ ವಿಮರ್ಶೆಗಳು ನಡೆಯುತ್ತಿರುವುದೇ ನನ್ನ ಸರಿದಾರಿ ಗೆ ಸಾಕ್ಷಿ. ನಾನು ನರೇಂದ್ರ ಮೋದಿಯವರನ್ನು ಟೀಕೆ ಮಾಡುತ್ತೇನೆ ಎನ್ನುವ ಕಾರಣಕ್ಕಾಗಿ ಪದ್ಮ ಭೂಷಣ ಪ್ರಶಸ್ತಿ ದೊರೆತಿದೆ ಎಂದು ಕೆಲವರು ಎಂದುಕೊಂಡಿದ್ದಾರೆ. ಮಹಿಳೆಯರಿಗೆ ಮೀಸಲಾತಿ ಸಿಗಬೇಕು ಎಂದು ಸಂಸತ್ತಿನಲ್ಲಿ ದನಿ ಎತ್ತಿದ್ದಕ್ಕಾಗಿ ಮೌಲ್ವಿಗಳು ಪ್ರತಿರೋಧ ವ್ಯಕ್ತಪಡಿಸಿದರು. ಪ್ರತಿಕೃತಿ ದಹನವನ್ನೂ ಮಾಡಿದರು’.
ಬಹಳ ದಿನಗಳ ಹಿಂದಿನ ಮಾತು. ಯಾವುದೋ ಒಂದು ಸಿನಿಮಾಗೆ ‘ನೀವು ಕೃಷ್ಣ-ರಾಧೆಯ ಬಗ್ಗೆ ಗೀತೆಯೊಂದನ್ನು ಬರೆದುಕೊಡಲು ಸಾಧ್ಯವೆ? ಎಂದು ಸಂಕೋಚದಿಂದಲೇ ಒಬ್ಬರು ಕೇಳಿದರು. ‘ಸಾಧ್ಯವೇ... ಎಂದು ಕೇಳುವುದ್ಯಾಕೆ? ಎಂದವನೇ ರಚಿಸಿದ ಗೀತೆಯನ್ನು ಮರುದಿನ ಓದಿ ಹೇ ಳಿದೆ. ‘ಕೃಷ್ಣನಿಗೆ ಇಷ್ಟೆಲ್ಲ ಹೆಸರುಗಳಿವೆ ಎನ್ನುವುದು ನಿಮ್ಮಿಂದಲೇ ಗೊತ್ತಾಯಿತು’ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.
‘ರಾಮ, ಸೀತೆ, ಕೃಷ್ಣ... ಹೀಗೆ ಹಿಂದೂ ದೇವತೆಗಳ ಹೆಸರುಗಳನ್ನೆಲ್ಲ ತಿಳಿದುಕೊಂಡಿದ್ದು ಉರ್ದು ಸಾಹಿತ್ಯದಿಂದಲೇ. ಹಿಂದೂ ದೇವತೆಗಳ ಬಗ್ಗೆ ಉರ್ದುವಿನಲ್ಲಿ ಧಾರಾಳ ಉಲ್ಲೇಖವಿದೆ’ ಎಂದರು.
‘ಮತ್ತೆ ಉರ್ದು ಮತ್ತು ಮುಸ್ಲಿಂ ಸಮುದಾಯದ ವಿಚಾರಕ್ಕೆ ಬಂದಾಗ ಮುಸ್ಲಿಂ ಮೂಲಭೂತ ವಾದಿಗಳ ದನಿ ದೊಡ್ಡದಾಗಿ ಕೇಳುತ್ತದೆ. ವಿಚಾರವಾದಿಗಳು ಮಾತನಾಡಿದ್ದು ಸಣ್ಣ ಸುದ್ದಿಯಾ ಗುತ್ತದೆ. ಆದರೆ ವಾಸ್ತವವಾಗಿ ಸಾಮಾನ್ಯ ಜನರಿಗೆ ಕೋಮುವಾದ ಬೇಕಾಗಿಯೇ ಇಲ್ಲ. ಅವರಿಗೆ ಏನು ಬೇಕಾಗಿದೆ ಎನ್ನುವ ಆಶಯವೂ ಹೊರಬೀಳಲೂ ಆಸ್ಪದವಿಲ್ಲದಂತಾಗಿದೆ. ಇಂತಹ ಋಣಾತ್ಮಕ ಮನಃಸ್ಥಿತಿ ಈಗ ಎಲ್ಲೆಡೆ ನಿರ್ಮಾಣವಾಗಿರುವುದು ಬೇಸರ ತರಿಸುತ್ತಿದೆ’ ಎಂದು ಹೇಳಿದರು.
‘ಸಾಹಿತ್ಯ ಬದುಕಿನ ಅಂಗ. ಆದರೆ ಬದುಕಿನ ಬಂಡಿಯ ಯಾವುದೋ ಒಂದು ಹಂತದಲ್ಲಿ ಸಾಹಿತ್ಯ ಕಳಚಿಕೊಂಡಿದೆ. ಒಬ್ಬರಿಗೆ ಬೇರಿದೆ. ಇನ್ನೊಬ್ಬರಿಗೆ ರೆಂಬೆಕೊಂಬೆಗಳಿವೆ. ಪರಿಪೂರ್ಣ ಮರ ಎನ್ನು ವುದು ಎಲ್ಲಿಯೂ ನೋಡ ಸಿಗುತ್ತಿಲ್ಲ. ಸ್ಥಳೀಯ ಭಾಷೆಯನ್ನು ಅರಗಿಸಿಕೊಂಡ ಮರದ ಬೇರುಗಳು ಗಟ್ಟಿಯಾಗಿವೆ. ಅಂದರೆ ಮಾತೃಭಾಷೆಯಲ್ಲಿ ಓದಿದ ಮಕ್ಕಳ ಬೌದ್ಧಿಕ ಅಡಿಪಾಯ ಭದ್ರವಾಗಿದೆ. ಆದರೆ ರೆಂಬೆ ಕೊಂಬೆ ಬೆಳೆದುಕೊಳ್ಳಲು ಬೇಕಾಗಿರುವುದು ಸಮಕಾಲೀನ ಹಾಗೂ ಸಾರ್ವತ್ರಿಕ ಭಾಷೆ; ಇಂಗ್ಲಿಷ್.’
‘ಒಂದೆಡೆ ಮಾತೃಭಾಷೆಯಿಂದ ಪೋಷಿತಗೊಂಡವರು ಕೀಳರಿಮೆಗಿಳಿಯುತ್ತಿದ್ದಾರೆ. ಇನ್ನೊಂದೆಡೆ ಇಂಗ್ಲಿಷ್ ಭಾಷೆಯ ತೆಕ್ಕೆಯಲ್ಲೇ ವಿದ್ಯಾಭ್ಯಾಸ ಪೂರೈಸಿದವರ ಬೇರುಗಳೇ ಗಟ್ಟಿಯಾಗಿಲ್ಲ. ಈ ಎಲ್ಲ ವೈರುಧ್ಯಕ್ಕೆ ಉತ್ತರವಾಗಿ ನಿಲ್ಲುವುದೇ ನಮ್ಮ ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ವ್ಯವಸ್ಥೆ’ ಎಂದು ಅವರು ಟೀಕಿಸಿದರು.
ಇಬ್ಬದಿಯ ಹಾದಿಯಲ್ಲೇ ಸರಿದಾರಿ..!
‘ಈ ಹಿಂದೆ ಚಾನೆಲ್‌ವೊಂದರ ಸಂದರ್ಶನದಲ್ಲಿ ಮಹಿಳಾ ಮಸೂದೆಯನ್ನು ಬೆಂಬಲಿಸಿ ಮಾತ ನಾಡಿದ್ದಕ್ಕೆ ಮುಸ್ಲಿಂ ಧರ್ಮಗುರುಗಳು ನನ್ನ ಪ್ರತಿಕೃತಿ ದಹಿಸುವುದಾಗಿ ಘೋಷಿಸಿದರು. ಮರು ದಿನ ಅಂದುಕೊಂಡಂತೆ ಮಾಡೇಬಿಟ್ಟರು.
ಯಾರೋ ಒಬ್ಬರು ಕರೆ ಮಾಡಿ, ಕೇಳಿಸಿಕೊಳ್ಳಿ ಎಂದರು... ‘ಜಾವೇದ್ ಅಖ್ತರ್ ಮುರ್ದಾಬಾದ್... ‘ ಒಂದೇ ಸಮ ಕಿವಿಗಡಚಿಕ್ಕುತ್ತಿತ್ತು. ಅದೇ ಸಮಯಕ್ಕೆ ನನ್ನ ಮೊಬೈಲ್‌ಗೆ ಸಂದೇಶವೊಂದು ಬಂತು,
‘ಅಭಿನಂದನೆ ನೀವು ರಾಜ್ಯಸಭೆಗೆ ಸದಸ್ಯರಾಗಿ ನೇಮಕಗೊಂಡಿದ್ದೀರಿ’ ಎಂದು ಜಾವೇದ್ ಅವರು ಸಂದರ್ಭವೊಂದನ್ನು ಸ್ಮರಿಸಿದರು.