ಭಟ್ಕಳ, ಫೆಬ್ರವರಿ ೨: ಭಟ್ಕಳ ತಾಲೂಕಿನ ಬೇಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಮುದ್ರದ ಅಳಿವೆ ಪ್ರದೇಶದಲ್ಲಿರುವ ನೂರಾರು ಎಕರೆ ಕೃಷಿ ಭೂಮಿಗೆ ಸಮುದ್ರದ ಉಪ್ಪು ನೀರು ನುಗ್ಗಿದ್ದು ರೈತರನ್ನು ಕಂಗಾಲಾಗಿಸಿದೆ.
ರವಿವಾರದಂದು ತಡರಾತ್ರಿ ಇದ್ದಕ್ಕಿದ್ದಂತೆ ಸಮುದ್ರದ ನೀರು ಉಕ್ಕಿ ಹರಿದು ಬೇಂಗ್ರೆಯ ಉಳ್ಮಣ್ಣು, ಸಸಿಹಿತ್ಲು, ಬಸೆಟ್ಟಿ ಹಕ್ಲ,ಬೊಗ್ರಿಜಡ್ಡು ಮುಂತಾದ ಪ್ರದೇಶಗಳಲ್ಲಿನ ನೂರಾರು ಎಕರೆ ಗದ್ದೆಗಳು ಸಮುದ್ರದ ಉಪ್ಪು ನೀರಿನಿಂದ ಜಲಾವೃತ್ತಗೊಂಡಿವೆ. ಇಲ್ಲಿ ಶೇಂಗಾ, ಹೆಸರು, ಕಲ್ಲಂಗಡಿ ಮುಂತಾದ ಬೆಳೆಗ ಬಿತ್ತನೆ ಕಾರ್ಯ ಭರದಿಂದ ಸಾಗಿತ್ತು. ಆದರೆ ದೀಢೀರನೆ ಗದ್ದೆಗಳಿಗೆ ಉಪ್ಪು ನೀರು ನುಗ್ಗಿರುವುದರಿಂದ ರೈತರು ಕಂಗಾಲಾಗುವುಂತೆ ಮಾಡಿದೆ. ಒಂದು ಅಂದಾಜಿನ ಪ್ರಕಾರ ೨೫೦ ಕ್ಕೂ ಅಧಿಕ ಎಕರೆ ಪ್ರದೇಶಗಳಿಗೆ ಉಪ್ಪು ನೀರು ನುಗ್ಗಿ ಹಾನಿಯಾಗಿದೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ರೈತರು ಇದೇ ಗೋಳನ್ನು ಅನುಭವಿಸುತ್ತಾ ಬಂದಿದ್ದು, ಈ ಸಲ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಗದ್ದೆಗೆ ಉಪ್ಪು ನೀರು ನುಗ್ಗಿದೆ. ನೀರಿನ ರಭಸಕ್ಕೆ ತಡೆಗೋಡೆ(ಒಡ್ಡು) ಸಹ ಮುರಿದು ಬಿದ್ದಿದೆ. ಉಳ್ಮಣ್ಣದಲ್ಲಿ ಸೇತುವೆ ದಾಟಿ ಉಪ್ಪು ನೀರು ಗದ್ದೆಗೆ ನುಗ್ಗಿರುವುದು ಇದೇ ಮೊದಲ ಬಾರಿ ಎಂದು ರೈತರು ತಿಳಿಸುತ್ತಾರೆ. ಉಪ್ಪು ನೀರು ನುಗ್ಗಿದ್ದರಿಂದ ಗದ್ದೆಯಲ್ಲಿ ಎರಡು ಮೂರು ವರ್ಷ ಬೆಳೆ ಬೆಳೆಯುವುದು ಕಷ್ಟ ಸಾಧ್ಯ. ಈಗಾಗಲೇ ಗದ್ದೆಯಲ್ಲಿ ಶೇಂಗಾ, ಹೆಸರು ಬೇಳೆ,ಆಲಸಂಧಿ ಮುಂತಾದ ಬೆಳೆಗಳನ್ನು ಬೆಳೆಯಲು ನಾಟಿ ಮಾಡಲಾಗಿತ್ತು. ಕೆಲವರು ಬೀಜಗಳನ್ನು ಬಿತ್ತಿದ್ದರೆ, ಇನ್ನೂ ಕೆಲವರು ಬಿತ್ತನೆ ಕಾರ್ಯ ಆರಂಭಿಸಿದ್ದರು. ಆದರೆ ಇಷ್ಟರಲ್ಲೇ ಉಪ್ಪು ನೀರು ನುಗ್ಗಿದ್ದರಿಂದ ಉತ್ತಮ ಬೆಳೆ ಬೆಳೆಯುತ್ತೇವೆ ಎಂಬ ಆಸೆ ನಿರಾಸೆಯಾದಂತಾಗಿದೆ. ಬೇಂಗ್ರೆ ಭಾಗದಲ್ಲಿ ನೂರಾರು ಎಕರೆ ಕೃಷಿ ಭೂಮಿಗಳು ಉಪ್ಪು ನೀರು ನುಗ್ಗಿದ್ದರಿಂದ ಹಾನಿಯಾಗಿದ್ದು, ಸರಕಾರ ಕೂಡಲೇ ಗಮನಹರಿಸಿ ರೈತರಿಗೆ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಸುದ್ದಿಗಾರರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಗಣಪತಿ ದೇವಾಡಿಗ,ಗಣಪಯ್ಯ ದೇವಾಡಿಗ,ಈಶ್ವರ ದೇವಾಡಿಗ, ಅಣ್ಣಪ್ಪ ದೇವಾಡಿಗ, ನಾಗಪ್ಪ, ರಾಜೇಶ, ನಾರಾಯಣ,ಮಂಜಪ್ಪ ದೇವಾಡಿಗ ಮುಂತಾದ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಧಿಕಾರಿಗಳ ಭೇಟಿ: ಉಪ್ಪು ನೀರು ನುಗ್ಗಿದ ಬೇಂಗ್ರೆ ಪ್ರದೇಶಕ್ಕೆ ಸೋಮುವಾರ ಮಧ್ಯಾಹ್ನ ಮುರ್ಡೇಶ್ವರದ ಉಪತಹಶೀಲ್ದಾರರು ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು ಹಾನಿಯ ಕುರಿತಂತೆ ಸಮರ್ಪಕ ಮಾಹಿತಿಯನ್ನು ಪಡೆದು ಭಟ್ಕಳ ತಹಸಿಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ನೂರಾರು ಎಕರೆ ಗದ್ದೆಗಳು ಉಪ್ಪು ನೀರಿನಿಂದ ಹಾನಿಗೊಳಗಾಗಿದ್ದು ಇದಕ್ಕೆ ಸೂಕ್ತ ಪರಿಹಾರವನ್ನು ಸರಕಾರದಿಂದ ಸಿಗುವಂತಾಗಬೇಕೆಂದು ರೈತರು ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.