ಬೆಂಗಳೂರು,ಏ,೧೨:ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೈಸೂರಿನ ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ, ಹಿರಿಯ ಪತ್ರಕರ್ತ ದಿವಂಗತ ಬಿ.ವಿ. ವೈಕುಂಠ ರಾಜು ಅವರಿಗೆ ರಾಜ್ಯ ಸರ್ಕಾರದ ಪ್ರತಿಷ್ಠಿತ ಟಿ.ಎಸ್.ಆರ್. ಪ್ರಶಸ್ತಿ ಸಂದಿದೆ.
ರಾಜಶೇಖರ ಕೋಟಿ ಅವರಿಗೆ ೨೦೦೯ ನೇ ಸಾಲಿನ ಪ್ರಶಸ್ತಿ ಲಭಿಸಿದ್ದರೆ ಬಿ.ವಿ. ವೈಕುಂಠ ರಾಜು ಅವರಿಗೆ ೨೦೦೮ ರ ವರ್ಷದ ಪುರಸ್ಕಾರ ದೊರೆತಿದೆ. ೨೦೦೭ ನೇ ಸಾಲಿನ ಪ್ರಶಸ್ತಿಗೆ ಶಿವಾನಂದ ಜೋಷಿ ಅವರು ಪಾತ್ರರಾಗಿದ್ದಾರೆ.
ವಾರ್ತಾ ಇಲಾಖೆ ಕೊಡಮಾಡುವ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮಾಧ್ಯಮ ರಂಗದ ಗಣ್ಯರನ್ನು ಪ್ರತಿವರ್ಷ ಟಿಯೆಸ್ಸಾರ್ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಮಾಡಿ ಸರ್ಕಾರ ಗೌರವಿಸುತ್ತಿದೆ. ರಾಜ್ಯ ಸರ್ಕಾರ ಈಗ ೨೦೦೭, ೨೦೦೮ ಮತ್ತು ೨೦೦೯ ನೇ ಸಾಲಿನ ಪ್ರಶಸ್ತಿಗಳನ್ನು ಇಂದು ಒಟ್ಟಿಗೆ ಪ್ರಕಟಿಸಿದೆ.
ನ್ಯಾಯಮೂರ್ತಿ ಎ.ಬಿ. ಮುರುಗೋಡ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ಆಯ್ಕೆ ಮಾಡಿದ್ದು ಆಯ್ಕೆ ಸಮಿತಿಯ ಶಿಫಾರಸ್ಸಿನ್ನು ಸರ್ಕಾರ ಒಪ್ಪಿಕೊಂಡು ಇಂದು ಅಧಿಕೃತ ಆದೇಶ ಹೊರಡಿಸಿದೆ. ಪ್ರಶಸ್ತಿ ಪುರಸ್ಕೃತರಿಗೆ ೧.೦೦ ಲಕ್ಷ ರೂ.ಗಳ ನಗದು ಮತ್ತು ಗೌರವ ಸಮರ್ಪಣೆ ಮಾಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಶೀಘ್ರದಲ್ಲೇ ನಡೆಯಲಿದೆ.
ಮೈಸೂರಿನಲ್ಲಿ ಆಂದೋಲನ ಪತ್ರಿಕೆಯನ್ನು ಪ್ರಾರಂಭಿಸಿದ ರಾಜಶೇಖರ ಕೋಟಿ, ಶೋಷಿತರ ಹಾಗೂ ನಿರ್ಲಕ್ಷಿತ ಸಮುದಾಯದ ಪರ ಧ್ವನಿ ಎತ್ತುವ ಮೂಲಕ ಸಮಾಜದಲ್ಲಿ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡವರು.
ಅವರ ಸತತ ಪರಿಶ್ರಮ, ಹೋರಾಟದ ಮನೋಭಾವದಿಂದಾಗಿ ಮೈಸೂರಿನ ಆಂದೋಲನ ಪತ್ರಿಕೆ ಏಷ್ಯಾ ಖಂಡದಲ್ಲೇ ಅತ್ಯಂತ ಹೆಚ್ಚು ಪ್ರಸಾರ ಹೊಂದಿರುವ ಪ್ರಾದೇಶಿಕ ಪತ್ರಿಕೆ ಎಂಬ ಖ್ಯಾತಿಗೂ ಒಳಗಾಗಿದೆ. ಪತ್ರಿಕೆಯ ಏಳ್ಗೆಗೆ ಹಾಗೂ ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿಹಿಡಿಯಲು ಅವಿರತವಾಗಿ ಶ್ರಮಿಸಿರುವುದನ್ನು ಗಮನಿಸಿ ಈ ಪುರಸ್ಕಾರ ನೀಡಲಾಗಿದೆ.
ಬಿ.ವಿ. ವೈಕುಂಠ ರಾಜು ಹಿರಿಯ ಪತ್ರಕರ್ತರು. ಪ್ರಜಾವಾಣಿ ಪತ್ರಿಕೆಯಲ್ಲಿ ಹಲವು ವರ್ಷಗಳ ಕಾಲ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದ ಅವರು, ನಂತರ ತಮ್ಮದೇ ಸಂಪಾದಕತ್ವದಲ್ಲಿ ವಾರಪತ್ರಿಕೆ ಎಂಬ ಸಾಪ್ತಾಹಿಕವನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಗೋಧೋಳಿ ಎಂಬ ಸಂಜೆ ದೈನಿಕ ಆರಂಭಿಸಿ ಪತ್ರಿಕೋದ್ಯಮದಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಉತ್ತಮ ಬರಹಗಾರರು, ಉದ್ಬವ ಕಾದಂಬರಿ ಅವರ ಸೃಜನಶೀಲ ಬರವಣಿಗೆಗೆ ಸಾಕ್ಷಿ. ಇದೇ ರೀತಿ ಶಿವಾನಂದ ಜೋಷಿ ಅವರು ವಿಶಿಷ್ಟ ಬರವಣಿಗೆಯ ಮೂಲಕ ಗಮನ ಸೆಳೆದಿದ್ದಾರೆ.