ಭಟ್ಕಳ, ಅಕ್ಟೋಬರ್ 23: ಕರಾವಳಿ ತೀರದ ರಕ್ಷಣಾ ಕವಚವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕರಾವಳಿ ಕಾವಲು ಪಡೆ, ಕರಾವಳಿ ರಕ್ಷಣಾ ಪಡೆ ಹಾಗೂ ರಾಜ್ಯ ಪೊಲೀಸರು ಕೈಗೊಂಡ ಸಾಗರ ಕವಚ ಕಾರ್ಯಾಚರಣೆಗೆ ಗುರುವಾರ ತೆರೆಬಿದ್ದಿದೆ. ಸಮುದ್ರ ಕಿನಾರೆ, ನೇತ್ರಾಣಿ ದ್ವೀಪ ಹಾಗೂ ಕುಂದ ದ್ವೀಪ, ಮುರುಡೇಶ್ವರ ಮತ್ತು ತಾಲೂಕಿನ ಶಹರ ಭಾಗದ ವಿವಿದೆಡೆ ಗಸ್ತು ತಿರುಗಿದ ರಕ್ಷಣಾ ಸಿಬ್ಬಂದಿಗಳು ಜನಸಾಮಾನ್ಯರಲ್ಲಿ ವಿಶ್ವಾಸವನ್ನು ವೃದ್ಧಿಸಲು ಯಶಸ್ವಿಯಾದರು.
ಮುರುಡೇಶ್ವರದಲ್ಲಿ ಗುರುವಾರ ನಸುಕಿನ ವೇಳೆ 2.20 ಗಂಟೆಯ ಸುಮಾರಿಗೆ ದೇವಸ್ಥಾನದ ಒಳ ಪ್ರವೇಶಿಸಲು ಯತ್ನಿಸಿದ ನಾಲ್ವರು ನಕಲಿ ಉಗ್ರರನ್ನು ಕಾರ್ಯಾಚರಣೆಯ ವೇಳೆ ಬಂಧಿಸಲಾಗಿದೆ. ಬಂಧಿತ ನಾಲ್ವರು ಮಂಗಳೂರು ಜಿಲ್ಲಾ ಪೊಲೀಸ್ ಇಲಾಖೆಗೆ ಸೇರಿದವರಾಗಿದ್ದು, ಉತ್ತರಕನ್ನಡ ಕರಾವಳಿ ರಕ್ಷಣಾ ಕೋಟೆಯ ಸಾಮರ್ಥ್ಯ ಅರಿಯಲು ಹಿರಿಯ ಅಧಿಕಾರಿಗಳು ಇವರನ್ನು ಮುರುಡೇಶ್ವರದತ್ತ ಕಳುಹಿಸಿರುವುದನ್ನು ಭಟ್ಕಳ ಡಿವಾಯ್ಎಸ್ಪಿ ವೇದಮೂರ್ತಿ ದೃಢಪಡಿಸಿದ್ದಾರೆ. ಗುರುವಾರ ಮಧ್ಯಾಹ್ನ ಬಸ್ ನಿಲ್ದಾಣ, ಹೂವಿನ ಪೇಟೆ ಹಾಗೂ ರೇಲ್ವೇ ನಿಲ್ದಾಣಗಳಲ್ಲಿ ಡಿವಾಯ್ಎಸ್ಪಿ ವೇದಮೂರ್ತಿ, ಸಿಪಿಐ ಗುರುಮತ್ತೂರು ಹಾಗೂ ಎಸೈ ಮಂಜುನಾಥ ಗೌಡ ನೇತೃತ್ವದ ಪೊಲೀಸ್ ತಂಡ ಶೋಧ ಕಾರ್ಯವನ್ನು ಕೈಗೊಂಡಿತು. ಸಂಜೆ 4 ಗಂಟೆಯ ಸುಮಾರಿಗೆ ಎಸೈ ಸುಂದರೇಶ ಸಿಬ್ಬಂದಿಗಳೊಡನೆ ಮುರುಡೇಶ್ವರ ರೇಲ್ವೇ ನಿಲ್ದಾಣ, ಮುರುಡೇಶ್ವರ ದೇವಸ್ಥಾನದ ಆಸುಪಾಸಿನಲ್ಲಿ ಪರಿಶೀಲನಾ ಕಾರ್ಯ ನಡೆಸಿದರು.
ಸುಳಿದು ಮಾಯವಾದ ಆತಂಕ: ಒಮ್ಮೆಲೇ ಪೊಲೀಸರು ಕಾರ್ಯಚರಣೆಗೆ ಮುಂದಾಗುತ್ತಿದ್ದಂತೆಯೇ ಆತಂಕಗೊಂಡ ಜನರು ಅಲ್ಲಲ್ಲಿ ವಿಚಾರಿಸುತ್ತಿರುವುದು ಕಂಡುಬಂತು. ಕೆಲವರು ಪೊಲೀಸರ ಹುಡುಕಾಟವನ್ನು ಕಂಡು ಜಾಗ ಖಾಲಿ ಮಾಡಿದರೆ, ಬಾಂಬ್ ಸ್ಪೋಟ, ಕರಾವಳಿಯಲ್ಲಿ ಉಗ್ರರ ಪ್ರವೇಶದ ಬಗ್ಗೆಯೂ ಬಣ್ಣ ಬಣ್ಣದ ಮಾತುಗಳು ಸುಳಿದು ಹೋದವು. ಇನ್ನೂ ಕೆಲವರು ಪತ್ರಿಕಾ ವರದಿಗಾರರಿಗೆ ಸರಣಿ ಪೋನ್ ಕರೆ ಮಾಡಿ ವಿಷಯವನ್ನು ಖಚಿತಪಡಿಸಿಕೊಳ್ಳಲು ಹೆಣಗಾಡುತ್ತಿದ್ದರು. ಅಂತೂ ಗುರುವಾರ ಸಂಜೆಯ ವೇಳೆಗೆ ಕಾರ್ಯಾಚರಣೆ ಮುಗಿದಿದ್ದು, ಅಲ್ಲಿ ಇಲ್ಲಿ ಸುಳಿದ ಆತಂಕವೂ ದೂರವಾದಂತಾಗಿದೆ.