ಬೆಂಗಳೂರು, ನ.೨೨: ರಾಜ್ಯದ ಗಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಹೆಚ್ಚುತ್ತಿರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ.
ಮಹತ್ವದೆಂದು ಹೇಳಲಾದ ಈ ಸಭೆಯಲ್ಲಿ ಬಳ್ಳಾರಿ ಜಿಲ್ಲೆ ಮತ್ತು ರಾಜ್ಯದ ಗಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳ ಕುರಿತು ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ಕಾನೂನು ಚೌಕಟ್ಟಿನಲ್ಲಿ ತೆಗೆದುಕೊಳ್ಳಲೇ ಬೇಕಾದ ಕ್ರಮಗಳ ಕುರಿತು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮಾಲಕತ್ವದ ಓಬಳಾಪರಂ ಕಂಪೆನಿ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಸಿಬಿಐ ತನಿಖೆಗೊಳಪಡಿಸಲು ನೆರೆಯ ಆಂಧ್ರಪ್ರದೇಶ ಸರಕಾರ ನಿರ್ಧರಿಸಿದ್ದು, ಗಣಿಗಾರಿಕೆಗಾಗಿ ಎರಡು ರಾಜ್ಯಗಳ ಗಡಿಯನ್ನು ತಿರುಚಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ ಎನ್ನಲಾಗಿದೆ.
ಆಂಧ್ರ ಪ್ರದೇಶ ಸರಕಾರ ಸಿಬಿಐ ತನಿಖೆ ನಡೆಸುವ ನಿರ್ಧಾರ ಕೈಗೊಂಡಬೆನ್ನಲ್ಲೇ ಅಕ್ರಮ ಗಣಿಗಾರಿಕೆ ಕುರಿತು ಒಂದರ ನಂತರ ಒಂದರಂತೆ ಆಕ್ಷೇಪಗಳು ಕೇಳಿ ಬುರುತ್ತೀವೆ. ಎಲ್ಲ ಆಕ್ಷೇಪಗಳು ಸಚಿವರಾಗಿರುವ ಗಣಿಧಣಿಗಳನ್ನೇ ಕೇಂದ್ರಕರಿಸಿರುವುದು ಮುಖ್ಯಮಂತ್ರಿಯವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಹೇಳಲಾಗಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಬದ್ಧ ವೈರತ್ವ ಸಾರಿದ ಗಣಿಧಣಿಗಳನ್ನು ಮನವೋಲಿಸಲು ಪ್ರತಿದಿನವೂ ಕಸರತ್ತು ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ, ನೆರೆ ರಾಜ್ಯದಲ್ಲಿ ಸಿಬಿಐ ತನಿಖೆ ಆರಂಭವಾದರೆ ರಾಜ್ಯ ಸರಕಾರದ ವತಿಯಿಂದಲೂ ಅಗತ್ಯ ಮಾಹಿತಿ ಮತ್ತು ಸಹಕಾರ ನೀಡಬೇಕಾದ ಅನಿವಾರ್ಯವಾಗುತ್ತದೆ. ಆ ಸಂದರ್ಭದಲ್ಲಿ ಗಣಿಧಣಿಗಳಿಂದ ಉಂಟಾಗುವ ಪ್ರತಿರೋಧವನ್ನು ಎದುರಿಸಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳ ಸಲಹೆ ಕೇಳಿದರು ಎಂದು ಮೂಲಗಳು ತಿಳಿಸಿವೆ.
ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರಕಾರದ ಅಧಿಕಾರಿಗಳಿಂದ ಸಾಧ್ಯವಿಲ್ಲವಾದ್ದರಿಂದ ಸಿಬಿಐ ಮತ್ತು ಸುಪ್ರೀಂ ಕೋರ್ಟ್ ನೀಡುವ ನಿರ್ದೇಶನಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಪಾಲಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಲೋಕಾಯುಕ್ತರ ವರದಿಯ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಚಳಿಗಾಲದ ಅಧಿವೇಶನದಲ್ಲಿ ವರದಿಯನ್ನು ಮಂಡಿಸುವ ಕುರಿತು ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ಹೇಳಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.