ಬೆಂಗಳೂರು: ಆಡಳಿತಾರೂಢ ಬಿಜೆಪಿಯ ‘ಪಕ್ಷನಿಷ್ಠರ’ ಬಂಡಾಯ ನಿರ್ಣಾಯಕ ಹಂತ ತಲುಪಿದ್ದು, ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಶಾಸಕರು ಮಂಗಳವಾರ ಬೆಳಿಗ್ಗೆ ವಿಧಾನಸಭೆಯ ಹಂಗಾಮಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ.
ಹಲವು ಭಿನ್ನಮತೀಯ ಶಾಸಕರು ನಗರಕ್ಕೆ ಹಿಂತಿರುಗಿದ್ದು, ರಹಸ್ಯ ಸಭೆ ನಡೆಸಿದ್ದಾರೆ. ಮಂಗಳವಾರ ಬೆಳಿಗ್ಗೆ ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಸ್ಪೀಕರ್ ಅವರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಸ್ಪೀಕರ್ ಅವರ ಭೇಟಿಗೆ ಸಮಯವೂ ನಿಗದಿಯಾಗಿದೆ. ಆದರೆ, ಇದು ಒತ್ತಡದ ತಂತ್ರವೊ ಅಥವಾ ಖಚಿತ ನಿಲುವೊ ಎಂಬುದನ್ನು ಭಿನ್ನರ ಮುಂದಿನ ನಡೆ ತೀರ್ಮಾನಿಸಲಿದೆ.
ಈ ಎಲ್ಲ ಬೆಳವಣಿಗೆಗಳಿಂದ ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಬಿ,ಎಸ್.ಯಡಿಯೂರಪ್ಪ ಮಂಗಳವಾರ ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಭಿನ್ನರ ಬಳಗದ ಆಕ್ರೋಶಕ್ಕೆ ಮಣಿದಿರುವ ಅವರು, ತಾವು ಅಧಿಕಾರ ಉಳಿಸಿಕೊಳ್ಳಲು ಕೆಲವು ತಪ್ಪು ನಿರ್ಧಾರಗಳನ್ನು ಕೈಗೊಂಡಿರುವುದು ನಿಜ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಮೊದಲ ಹೊಡೆತಕ್ಕೆ ಸಜ್ಜು?: ಎಂ.ಪಿ.ರೇಣುಕಾಚಾರ್ಯ ಅವರ ಸಂಪುಟ ಸೇರ್ಪಡೆ ಬಳಿಕ ಬಂಡೆದ್ದಿರುವ ಶಾಸಕರು, ಬುಧವಾರ ನಡೆಯುವ ವಿಧಾನಸಭೆ ಅಧ್ಯಕ್ಷರ ಚುನಾವಣೆಗೆ ಗೈರು ಹಾಜರಾಗುವ ಮೂಲಕ ಮುಖ್ಯಮಂತ್ರಿ ಅವರಿಗೆ ಮೊದಲ ಹೊಡೆತ ನೀಡಲು ಸಿದ್ಧತೆ ನಡೆಸಿ ದ್ದಾರೆ.
ಬಿಜೆಪಿಯ ಭಿನ್ನಮತದ ಲಾಭ ಪಡೆಯಲು ಹೊರಟಿರುವ ಜೆಡಿಎಸ್, ಸಂಖ್ಯಾಬಲದ ಕೊರತೆಯ ನಡುವೆಯೂ ಸ್ಪೀಕರ್ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ. ಆಡಳಿತ ಪಕ್ಷದ ಭಿನ್ನಮತೀಯ ಶಾಸಕರು ಸದನಕ್ಕೆ ಗೈರು ಹಾಜರಾದರೆ ತಮ್ಮ ಅಭ್ಯರ್ಥಿ ಜಯ ಸಾಧಿಸಬಹುದು ಎಂಬ ಲೆಕ್ಕಾಚಾರ ಜೆಡಿಎಸ್ ಮುಖಂಡರಲ್ಲಿ ಗರಿಗೆದರಿದೆ.
ಸ್ಪೀಕರ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಸಾಧ್ಯತೆಯ ಬಗ್ಗೆ ಕಾಂಗ್ರೆಸ್ ವರಿಷ್ಠರು ಸೋಮವಾರ ಸಭೆ ನಡೆಸಿದ್ದು, ಅಂತಿಮ ನಿರ್ಣಯಕ್ಕೆ ಬರಲು ವಿಫಲರಾದರು. ಬಿಜೆಪಿಯ ಭಿನ್ನರು ಸದನಕ್ಕೆ ಗೈರು ಹಾಜರಾದರೆ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆಯೂ ಚರ್ಚೆ ನಡೆಯಿತೆಂದು ಮೂಲಗಳು ತಿಳಿಸಿವೆ.
ರಾಜೀನಾಮೆ ಬಳಿಕ ದೆಹಲಿಗೆ: ತಮ್ಮ ಮುಂದಿನ ನಡೆ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಭಿನ್ನರ ಮುಖಂಡ ಅಪ್ಪಚ್ಚು ರಂಜನ್, ‘ವಿಧಾನಸಭೆಯ ಅಧ್ಯಕ್ಷರ ಭೇಟಿಗೆ ಸಮಯ ನಿಗದಿಯಾಗಿದೆ. ನಮ್ಮ ಅಂತಿಮ ನಿರ್ಣಯದ ಜೊತೆಯಲ್ಲೇ ಅವರನ್ನು ಭೇಟಿಯಾಗುತ್ತೇವೆ. ನನ್ನ ಬೆಂಬಲಕ್ಕೆ 34 ಶಾಸಕರಿದ್ದಾರೆ. ಈ ಪೈಕಿ 10 ಮಂದಿ ಸ್ಪೀಕರ್ ಭೇಟಿಯ ನಿರ್ಧಾರಕ್ಕೆ ಈಗಾಗಲೇ ಸಹಮತ ವ್ಯಕ್ತಪಡಿಸಿದ್ದಾರೆ’ ಎಂದರು.
‘ನಾವು ಬಿಜೆಪಿಯ ವರ್ಚಸ್ಸು ಹೆಚ್ಚಿಸುವ ಹೋರಾಟಕ್ಕೆ ಇಳಿದಿದ್ದೇವೆ. ಮೊದಲು ವಿಧಾನಸಭೆಯ ಅಧ್ಯಕ್ಷರ ಭೇಟಿ. ನಂತರ ಸಂಘ ಪರಿವಾರದ ಬಳಿ ಹೋಗುತ್ತೇವೆ. ಸಮಸ್ಯೆಗೆ ಪರಿಹಾರ ಹುಡುಕುತ್ತೇವೆ.
ಅಂತಿಮವಾಗಿ ನಮ್ಮ ಬಣದಲ್ಲಿರುವ ಎಲ್ಲರೂ ಒಟ್ಟಾಗಿ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ದೂರು ನೀಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.
ವಿಪ್ ಜಾರಿಗೆ ಸಿದ್ಧತೆ: ನಗರದ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ವಿಧಾನಸಭೆಯ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಸದನದಲ್ಲಿ ಹಾಜರಿರುವಂತೆ ವಿಪ್ ಜಾರಿ ಮಾಡಲು ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ಡಿ.ಎನ್.ಜೀವರಾಜ್ ಸಿದ್ಧತೆ ನಡೆಸಿದ್ದಾರೆ.
ರೇಣುಕಾಚಾರ್ಯ ಅವರ ಸಂಪುಟ ಸೇರ್ಪಡೆಯ ಬಳಿಕ ಸಿಟ್ಟಿಗೆದ್ದು ಪಕ್ಷದ ವರಿಷ್ಠರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನವೂ ಸಭೆಯಲ್ಲಿ ನಡೆಯಲಿದೆ. ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಮುಖ್ಯಮಂತ್ರಿಯವರು, ‘ವೈಯಕ್ತಿಕ ಹೇಳಿಕೆಗಳನ್ನು ನೀಡದಂತೆ ಶಾಸಕರಿಗೆ ಎಚ್ಚರಿಕೆ ನೀಡಲಾಗುವುದು’ ಎಂದು ತಿಳಿಸಿದರು.
‘ಸಚಿವ ಸಂಪುಟ ವಿಸ್ತರಣೆ ಕುರಿತು ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರೊಡನೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ತೀರ್ಮಾನ ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ’ ಎಂದರು.
‘ತಪ್ಪು ಮಾಡಿದ್ದೇವೆ’: ‘ಜನರ ಅಪೇಕ್ಷೆಗಳಿಗೆ ಧಕ್ಕೆ ಉಂಟು ಮಾಡುವಂತಹ ಘಟನೆಗಳು ನಡೆದಿವೆ. ಕುರ್ಚಿ ಉಳಿಸಿಕೊಳ್ಳಲು ಹಲವು ತಪ್ಪು ಮಾಡಿದ್ದೇವೆ’ ಎಂದು ಯಡಿಯೂರಪ್ಪ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದರು.
ಡಾ. ಜಚನಿಯವರ ಜನ್ಮಶತಮಾನೋತ್ಸವದ ಅಂಗವಾಗಿ ನಿಡುಮಾಮಿಡಿ ಮಠ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮತ್ತೆ ತಪ್ಪು ಮಾಡುವುದಿಲ್ಲ’ ಎಂದು ವಾಗ್ದಾನ ನೀಡಿದರು.
‘ಇದೇ ಕೊನೆ. ಮುಂದಿನ ಮೂರೂವರೆ ವರ್ಷಗಳ ಕಾಲ ಜನರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ಆಡಳಿತದಲ್ಲಿ ತಲೆದೋರಿರುವ ಕೊರತೆಗಳನ್ನು ಸರಿಪಡಿಸುತ್ತೇನೆ’ ಎಂದು ಅವರು ಹೇಳಿದರು.
ಅಸಮಾಧಾನ ತಣಿಸಲು ಪ್ರಯತ್ನ: ಮಂಗಳೂರಿನಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರ ಚುನಾವಣೆ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡ, ‘ಎಲ್ಲಾ ಶಾಸಕರಿಗೂ ದೂರವಾಣಿ ಕರೆ ಮಾಡಿ ಶಾಸಕಾಂಗ ಪಕ್ಷದ ಸಭೆಗೆ ಆಹ್ವಾನಿಸಿದ್ದೇನೆ. ಇದು ಶಾಸಕರ ಅಸಮಾಧಾನ ತಣಿಸುವ ಒಂದು ಪ್ರಯತ್ನ. ಶಾಸಕರ ಒತ್ತಡಕ್ಕೆ ಮಣಿದಿದ್ದೇವೆ ಎಂಬುದು ಅದರ ಅರ್ಥ ಅಲ್ಲ’ ಎಂದರು.
‘ಹೇಳಿಕೆ ನೀಡಿ ಸರ್ಕಾರದ ಮೇಲೆ ಒತ್ತಡ ಹಾಕುವ ತಂತ್ರಕ್ಕೆ ಪಕ್ಷ ಸೊಪ್ಪು ಹಾಕುವುದಿಲ್ಲ. ಶಾಸಕರು ಏನೇ ಹೇಳುವುದಿದ್ದರೂ ಮುಖ್ಯಮಂತ್ರಿ ಬಳಿ ಅಥವಾ ನನ್ನ ಬಳಿ ಹೇಳಬೇಕು. ಬಹಿರಂಗ ಚರ್ಚೆಗೆ ಅವಕಾಶ ಇಲ್ಲ. ಮನಬಂದಂತೆ ಹೇಳಿಕೆ ನೀಡಿದರೆ ಇನ್ನು ಕಠೋರ ನಿರ್ಧಾರ ಕಟ್ಟಿಟ್ಟ ಬುತ್ತಿ. ಅಂತಹ ಶಾಸಕರ ವಿರುದ್ಧ ಕೇಂದ್ರ ಸಮಿತಿಗೆ ವರದಿ ಸಲ್ಲಿಸುವೆ’ ಎಂದು ಎಚ್ಚರಿಸುವ ಧ್ವನಿಯಲ್ಲೇ ಹೇಳಿದರು.
ಕುತಂತ್ರಕ್ಕೆ ತಿರುಗೇಟು: ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ಶಿವಮೊಗ್ಗದಲ್ಲಿ ಸಮರ್ಥಿಸಿಕೊಂಡ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ, ‘ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡಿ ರೇಣುಕಾಚಾರ್ಯ ಅವರಿಗೆ ಆಮಿಷವೊಡ್ಡುವ ಮೂಲಕ ಸರ್ಕಾರ ಉರುಳಿಸುವ ಕುತಂತ್ರ ನಡೆಸಿದ್ದವು. ಇದಕ್ಕೆ ಪ್ರತಿತಂತ್ರವಾಗಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ’ ಎಂದರು. ರೇಣುಕಾಚಾರ್ಯರ ಬಗ್ಗೆ ಬೇಕಾಬಿಟ್ಟಿ ಹುಯಿಲೆಬ್ಬಿಸುತ್ತಿರುವ ಪ್ರತಿಪಕ್ಷಗಳು, ಈ ಮೊದಲು ಸರ್ಕಾರವನ್ನು ಕೆಳಗಿಳಿಸಲು ಅವರನ್ನು ಮಾತುಕತೆಗೆ ಕರೆದಿರಲಿಲ್ಲವೇ? ಗುಲಾಂ ನಬಿ ಆಜಾದ್ ಮತ್ತು ಆಸ್ಕರ್ ಫರ್ನಾಂಡಿಸ್ ಅವರು ಮಂತ್ರಿ ಮಾಡುತ್ತೇವೆ ಎಂದು ಆಮಿಷವೊಡ್ಡಿದ್ದು ಸರಿಯೇ? ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳ ಮಳೆಗರೆದರು.
ಖಂಡಿಸಬೇಕು: ‘ನರ್ಸ್ ಜಯಲಕ್ಷ್ಮೀ ಅವರಿಗೆ ಅನ್ಯಾಯವಾಗಿದೆ ಎಂದಾದರೆ, ರೇಣುಕಾಚಾರ್ಯ ಅವರ ಪತ್ನಿಗೆ ಆಗಿದ್ದು ಅನ್ಯಾಯ ಅಲ್ಲವೇ? ಈ ಬಗ್ಗೆ ರಾಜ್ಯದ ಎಲ್ಲ ಮಹಿಳಾ ಸಂಘಟನೆಗಳು ಖಂಡಿಸಬೇಕಲ್ಲವೇ’ ಎಂದರು.
‘ನಾಯಕರು ಅಧಿಕಾರ ಸಿಕ್ಕರೆ ಮನುಷ್ಯರಂತೆ ವರ್ತಿಸುತ್ತಾರೋ ಅಥವಾ ರಾಕ್ಷಸರಂತೆ ವರ್ತಿಸುತ್ತಾರೋ ಎಂದು ಪರೀಕ್ಷಿಸಲು ರಾಜ್ಯದ ಜನ ಬಿಜೆಪಿಗೆ ಪೂರ್ಣ ಬಹುಮತ ಕೊಟ್ಟಿಲ್ಲ. ಈಗ ನಾವು ಮಾಡುತ್ತಿರುವುದನ್ನು ದೇವರು ಕೂಡ ಕ್ಷಮಿಸುವುದಿಲ್ಲ’ ಎಂದು ವಿಷಾದಿಸಿದರು.
ಕಸದ ರಾಶಿ: ‘ಪಕ್ಷನಿಷ್ಠರ’ ಬಂಡಾಯಕ್ಕೆ ರಾಜರಾಜೇಶ್ವರಿನಗರ ಶಾಸಕ ಎಂ.ಶ್ರೀನಿವಾಸ್ ದನಿಗೂಡಿಸಿದ್ದಾರೆ. ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಶೇ 75ರಷ್ಟು ಶಾಸಕರಿಗೆ ಪಕ್ಷದ ತತ್ವ- ಸಿದ್ಧಾಂತವೇ ಗೊತ್ತಿಲ್ಲ, ಹೊರಗಡೆಯಿಂದ ತಂದ ಕಸವನ್ನು ಪಕ್ಷದ ಕಚೇರಿಯಲ್ಲಿ ಹಾಕಿ ಕುಲಗೆಡಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.
ಸೌಜನ್ಯ: ಪ್ರಜಾವಾಣಿ