ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಜರಂಗಿಗಳ `ಲವ್ ಜಿಹಾದ್' : ಚಡ್ಡಿಗಳಿಗೆ ಮಣಿದ ಖಾಕಿಪಡೆ

ಭಜರಂಗಿಗಳ `ಲವ್ ಜಿಹಾದ್' : ಚಡ್ಡಿಗಳಿಗೆ ಮಣಿದ ಖಾಕಿಪಡೆ

Wed, 20 Jan 2010 02:27:00  Office Staff   S.O. News Service
 
ತೀರ್ಥ ಹಳ್ಳಿಯಲ್ಲಿ ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗನ ಪ್ರೇಮವನ್ನು ಲವ್ ಜಿಹಾದ್ ಎಂದು ಕಥೆ ಹೆಣೆಯಲಾಗಿದೆ. ಇದಕ್ಕೆ ತೀರ್ಥಹಳ್ಳಿಯ ಪೊಲೀಸರು ಕೂಡ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾಗಿದ್ದಾರೆ.  ತೀರ್ಥಹಳ್ಳಿಯ ಸುಮನಾ, ತೌಫಿಕ್ ಕಳೆದ 6 ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಲವ್ ಜಿಹಾದ್ ಹೆಸರಿನ ಕಪ್ಪು ಮಸಿ ಬಳಿದು ಇದೀಗ ಸುಮನಾಳನ್ನು ಸಹ ನ್ಯಾಯಾಂಗದ ಕಣ್ಣಿಗೂ ಮಣ್ಣೆರಚಿ ಬಜರಂಗದಳ ತಮ್ಮ ವಶದಲ್ಲಿರಿಸಿಕೊಂಡಿದೆ.

ಸುಮನಾ ಮತ್ತು ತೌಫಿಕ್ ಪರಸ್ಪರ ಪ್ರೀತಿಸುತ್ತಿದ್ದ ವಿಷಯ ಆರು ತಿಂಗಳ ಹಿಂದಷ್ಟೆ ಪೋಷಕರಿಗೆ ಗೊತ್ತಾಗಿ ಹುಡುಗ-ಹುಡುಗಿಯ ಇಬ್ಬರು ಪೋಷಕರು ಕೂಡ ಪರಸ್ಪರ `ಬುದ್ದಿವಾದ' ಹೇಳಿಕೊಂಡು ಮಕ್ಕಳಿಬ್ಬರನ್ನು ದೂರ ಮಾಡಿದ್ದರು. ಆದರೆ ಪೋಷಕರ ವಿರೋಧವಿದ್ದರೂ ಸುಮನಾ, ತೌಫಿಕ್ ಮದುವೆಗೆ ಸಿದ್ಧರಾದರು. ಮದುವೆಯಾಗಲು ಸುಮನಾ ಆರು ತಿಂಗಳ ಹಿಂದೆಯೇ ಸುಹಾನ ಎಂದು ಹೆಸರನ್ನು ಬದಲಿಸಿಕೊಂಡಿದ್ದಳು. ಆದರೆ ಯಾವಾಗ ತಂದೆತಾಯಿಗಳು ಮದುವೆಗೆ ಒಪ್ಪಿಗೆ ನೀಡುವುದಿಲ್ಲ ಎಂಬುದು ಖಾತ್ರಿಯಾಯಿತೋ ಇಬ್ಬರು ಸೇರಿ ಬೆಂಗಳೂರಿಗೆ ಹೋಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೆ ತೀರ್ಥ ಹಳ್ಳಿಯಲ್ಲಿ ಬಜರಂಗಿಗಳು ಇಲ್ಲಸಲ್ಲದ ಕಥೆ ಕಟ್ಟಿ ದೊಡ್ಡ ಗಲಾಟೆಯನ್ನೇ ಎಬ್ಬಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಗಲಾಟೆಯಾದ ಸುದ್ದಿ ತಿಳಿದ ಜೋಡಿಗಳು ಮಾಧ್ಯಮಗಳ ಮೂಲಕವಾದರೂ ತಮಗೆ ನ್ಯಾಯ ಸಿಕ್ಕೀತು ಎಂದು ಬಯಸಿ ಟಿ.ವಿ. 9 ಸುದ್ದಿ ವಾಹಿನಿಯಲ್ಲಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಡಿಸೆಂಬರ್ 3ರಂದು ಇಬ್ಬರ ಸಂದರ್ಶನ ಎರಡೆರಡು ಭಾರಿ ಪ್ರಸಾರವಾಗಿದೆ. ಸುಮನಾ ತನ್ನದು ಲವ್ ಮ್ಯಾರೇಜ್. ’ಲವ್ ಜಿಹಾದ” ಅಲ್ಲ ಎಂದು ಪದೇ ಪದೇ ಹೇಳಿಕೆ ನೀಡಿದ್ದಾಳೆ. ಆದರೂ ಇದನ್ನು ಕೇಳಿಸಿಕೊಳ್ಳದ ಬಜರಂಗದಳ ಮಂದಿ ಮತ್ತಷ್ಟು ರಾಡಿ ಎಬ್ಬಿಸಿದ್ದಾರೆ. ಟಿ.ವಿ. ವಾಹಿನಿಯ ಪತ್ರಕರ್ತ ನೀಡಿದ ವಿಳಾಸ ಪಡೆದು ರಾಯಚೂರಿನ ಸಿಂಧನೂರು ಕಡೆ ಜೋಡಿ ಪಯಣ ಬೆಳೆಸಿದೆ.

ಸಹಾಯಹಸ್ತ

ಸುಮನಾ ಮತ್ತು ತೌಫಿಕ್ ಅವರಿಂದ ವಿವರಣೆ ಪಡೆದ ರಾಯಚೂರು ಜಿಲ್ಲಾ ಸಿಐಟಿಯು ಪ್ರಧಾನ ಕಾರ್ಯದರ್ಶಿಗಳು ಆದ ಶೇಕ್ಷಾ ಖಾದ್ರಿ ಅವರು ಇಬ್ಬರಿಗೂ ಮದುವೆ ಮಾಡಿಸಲು ತೀರ್ಮಾನಿಸಿದ್ದಾರೆ. ದೇವಸ್ಥಾನದಲ್ಲಿ ಮದುವೆಯಾಗಲು ಸುಮನಾ ಒಪ್ಪಿಲ್ಲ. ಕೇವಲ ಫೋಟೋ ತೆಗೆಸಿಕೊಂಡ ಮದುವೆಗೆ ಪೋಷಕರು ಸಮ್ಮತಿಸುವುದಿಲ್ಲ. ಕಾನೂನಿನ ಬೆಂಬಲವೂ ಸಿಗುವುದಿಲ್ಲ ಎಂದು ಅರಿತ ಇವರು ಕೊನೆಯಲ್ಲಿ ಮತಾಂತರಗೊಂಡು ಮದುವೆಯಾಗಲು ನಿರ್ಧರಿಸಿದ್ದಾರೆ. ಮೊದಲಿಗೆ ಹಿಂದೂ ವಿವಾಹ ಪದ್ಧತಿಯಲ್ಲಿಯೇ ಮದುವೆ ಯಾಗಲು ಒಪ್ಪಿದ ಇವರಿಗೆ ಕಾನೂನಿನ ಅಡ್ಡಿ ಎದುರಾಗಿದೆ. ಎರಡು ಧರ್ಮಗಳ ವಧೂ-ವರರು ಮದುವೆಯಾಗಲು ಹಿಂದೂ ವಿವಾಹ ವಿಶೇಷ ಕಾಯ್ದೆಯಡಿ ಮದುವೆಯಾಗಬೇಕು. ಆದರೆ ಇದಕ್ಕೆ ಒಂದು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ ಸಂದಿಗ್ಧ ಸ್ಥಿತಿಯಲ್ಲಿದ್ದ ಜೋಡಿ ಕೂಡಲೇ ಮದುವೆಗೆ ಮುಂದಾಗಿದೆ. ಕೊನೆಯಲ್ಲಿ ಡಿಸೆಂಬರ್ ಮೂರರಂದು ರಾತ್ರಿ ಎಂಟು ಗಂಟೆಗೆ ಸಿಂಧನೂರಿನ ದಲಿತ ಸಂಘಟನೆಗಳು ಹಾಗೂ ಇನ್ನಿತರ ಪ್ರಗತಿಪರ ಸಂಘಟನೆಗಳು ಸೇರಿ ಇಸ್ಲಾಂ ಧರ್ಮದ ಪ್ರಕಾರವೇ ಮದುವೆ ಮಾಡಿಸಲು ನಿರ್ಧರಿಸಿದ್ದಾರೆ.

ಅದರಂತೆ ಸಿಂಧನೂರಿನ ಖಾಜಿ ನಾಸಿರುದ್ದೀನ್ ಅವರನ್ನು ಸಂಪರ್ಕಿಸಿದ ಪ್ರಗತಿಪರ ಸಂಘಟನೆಗಳು ಪ್ರೇಮಿಗಳ ವಿಷಯವನ್ನು ಹೇಳಿದ್ದಾರೆ.ಆದರೂ ಮತ್ತೊಮ್ಮೆ ಖಾಜಿ ಅವರು ಇಬ್ಬರನ್ನು ಕೂಡಿಸಿಕೊಂಡು ಪರಸ್ಪರರ ಒಪ್ಪಿಗೆ ಪಡೆದು ಮದುವೆ ಮಾಡಿಸಲು ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಸುಮನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಅದಕ್ಕೆ ಸಿಂಧನೂರು ಮಸೀದಿಯಲ್ಲಿ ಮತಾಂತರದ ದಾಖಲೆ ಪತ್ರಗಳನ್ನು ನೀಡಿದೆ. ಆನಂತರ ಅದನ್ನು ನೋಂದಣಿ ಮಾಡಿಸಲಾಗಿದೆ. ತೌಫಿನ್ ತನ್ನ ಆಸ್ತಿಯಲ್ಲಿ ಅರ್ಧಭಾಗಕ್ಕೆ ತನ್ನ ಪತ್ನಿ ಸುಮನಾ ಬಾಧ್ಯಸ್ಥಳು ಎಂದು ನೋಟರಿಯಲ್ಲಿ ಪ್ರಮಾಣಪತ್ರ ಮಾಡಿಸಿದ್ದಾನೆ. ಆನಂತರ ಇಬ್ಬರ ಮದುವೆಯೂ ಹಂಚಿನಾಳದಲ್ಲಿ ಮುಸ್ಲಿಂ ಸಂಪ್ರದಾಯದಂತೆ ನಡೆದಿದೆ.

ಓಡಿಹೋಗಲಿಲ್ಲ

ಇಷ್ಟು ಕಥೆ. ಇಷ್ಟಾದರೂ ಇವರು ಎಲ್ಲೂ ಓಡಿ ಹೋಗಿಲ್ಲ. ಪ್ರೀತಿಯ ಬದುಕಿನ ಕನಸು ಕಂಡಿದ್ದಾರೆ. ನೇರವಾಗಿ ಶಿವಮೊಗ್ಗ ಪೊಲೀಸರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಅದು ಆಗದೇ ಇದ್ದಾಗ ಸಿಂಧನೂರು ಠಾಣೆಯಲ್ಲಿ ಡಿಸೆಂಬರ್ 4ರಂದು ಹಾಜರಾಗಿದ್ದಾರೆ. ಆದಾದ ನಂತರ ಸಿಂಧನೂರು ಠಾಣೆಯ ಪೋಲೀಸರು ತೀರ್ಥಹಳ್ಳಿ ಪೊಲೀಸರನ್ನು ಸಂಪರ್ಕಿಸಿ ದ್ದಾರೆ.  ಲವ್ ಜಿಹಾದ್ ಹೆಸರಿನಲ್ಲಿ ಸುಮನಾಳನ್ನು ಕಿಡ್ನಾಪ್ ಮಡಲಾಗಿದೆ ಎಂಬ ಬಜರಂಗಿಗಳ ಮಾತು ಕೇಳಿಕೊಂಡು ರಾಜ್ಯವನ್ನೆಲ್ಲ ಸುತ್ತುತ್ತಿದ್ದ ತೀರ್ಥಹಳ್ಳಿ ಪೊಲೀಸರಿಗೆ ಸುಮನಾ ಸಿಕ್ಕಿದ್ದು ಸಂತಸ ತರಬೇಕಿತ್ತು. ತಲೆಯಲ್ಲಿ ಹೊಸ ಯೋಜನೆ ಹಾಕಿಕೊಂಡು ಸಿಂಧನೂರಿಗೆ ಬಂದ ತೀರ್ಥ ಹಳ್ಳಿ ಪೊಲೀಸರು ಸುಮನಾ ಮತ್ತು ತೌಫಿಕ್ ಅನ್ನು ಕರೆದುಕೊಂಡು ಬಂದಿದ್ದಾರೆ. ಬರುವ ದಾರಿಯಲ್ಲೇ ತೌಫಿಕ್ನ್ನು ಬೆದರಿಸಿದ್ದಾರೆ. ಅವರಿಬ್ಬರ ಬಳಿ ಇದ್ದ ಮದುವೆಯಾದ ದಾಖಲೆ, ಮತಾಂತರಗೊಂಡ ದಾಖಲೆಗಳನ್ನು ಕಿತ್ತುಕೊಂಡು ಹರಿದು ಬಿಸಾಡಿದ್ದಾರೆ. ಊರಿಗೆ ಬಂದವರು ಬಜರಂಗಿಗಳನ್ನು ಸಂಪಕರ್ಕಿಸಿ ಅವರ ಅಣತಿಯಂತೆಯೇ ನಡೆದುಕೊಂಡಿ ದ್ದಾರೆ. ಚೆಡ್ಡಿಗಳ ಕೈಗೆ ತಮ್ಮ ಖಾಕಿ ಬಟ್ಟೆಯನ್ನು ಬಿಚ್ಟುಕೊಟ್ಟಿದ್ದಾರೆ. ತದ ನಂತರ ಥೇಟ್ ಹಿಂದೂ ಮೂಲಭೂವಾದಿಗಳಂತೆ ವೇಷ ಧರಿಸಿದ ತೀರ್ಥಹಳ್ಳಿ ಎಸ್ಸೈ ತೌಫಿಕ್ನ ಮೇಲೆ ಡಿಸೆಂಬರ್ ಐದರಂದು ಠಾಣೆಯಲ್ಲೇ ಹಲ್ಲೆ ನಡೆಸಿದ್ದಾರೆ. ಸುಮನಾಳಿಗೆ ಆಕೆಯ ಪೋಷಕರಿಂದಲೇ `ರಿಪೇರಿ' ಮಾಡಿಸಿದ್ದಾರೆ. ಬಲವಂತವಾಗಿ ಇಬ್ಬರಿಂದಲೂ ಬಿಳಿ ಖಾಲಿ ಹಾಳೆಯ ಮೇಲೆ ಸಹಿ ಪಡೆದು ಅವರವರ ಮನೆಗೆ ವಾಪಸ್ ಕಳುಸಿದ್ದಾರೆ. ಹಾಗೆ ಕಳುಹಿಸುವ ಮುನ್ನ ತೌಫಿಕ್ಅನ್ನು ಊರು ಬಿಟ್ಟು ಹೋಗುವಂತೆ ಬೆದರಿಸಿದ್ದಾರೆ. ಸುಮನಾಳನ್ನು ಬಜರಂಗಿಗಳ ಕೈಗೆ ಒಪ್ಪಿಸಿದ್ದಾರೆ. ಅಲ್ಲಿಂದಾಚೆಗೆ ಸುಮನಾ ಎಲ್ಲಿದ್ದಾಳೆ ಎಂಬುದೇ ತಿಳಿದಿಲ್ಲ.

ಈ ನಡುವೆ ತನ್ನ ಹೆಂಡತಿಯನ್ನು ಹುಡುಕಿಕೊಡುವಂತೆ ತೌಫಿಕ್ ಹೈಕೋರ್ಟಿಗೆ ಮೊರೆ ಹೋಗಿದ್ದಾನೆ. ಹೈಕೋರ್ಟ್ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಗೃಹ ಇಲಾಖೆಯ ಕಾರ್ಯದರ್ಶಿಗೆ ನೋಟಿಸ್ ನೀಡಿ ಸುಮನಾಳನ್ನು ಹಾಜರು ಪಡಿಸುವಂತೆ ನಿರ್ದೇಶನ ನೀಡಿದೆ. ಆದರೆ ಕೋರ್ಟಿನ ಆದೇಶಕ್ಕೂ ಇಲಾಖೆ ಬೆಲೆಕೊಟ್ಟಂತೆ ಕಂಡುಬಂದಿಲ್ಲ. ಜನವರಿ 2ರಂದು ಸುಮನಾಳನ್ನು ಹಾಜರು ಪಡಿಸಬೇಕಿತ್ತು. ಆದರೆ ಸುಮನಾ ನಾಪತ್ತೆಯಾಗಿದ್ದಾಳೆ. ಊರಿನಲ್ಲಿ ಇಲ್ಲ ಎಂಬ ಸಬೂಬು ಹೇಳಿ ನ್ಯಾಯಾಲಯವನ್ನು ವಂಚಿಸುವ ಕೆಲಸವನ್ನು ಪೊಲೀಸರು ಸಲೀಸಾಗಿ ಮಾಡಿದ್ದಾರೆ. ಈ ನಡುವೆ ಸುವರ್ಣ ವಾಹಿನಿಗೆ ಸಂದರ್ಶನ ನೀಡಿರುವ ತೀರ್ಥಹಳ್ಳಿಯ ಬಜರಂಗದಳ ದಳದ ಮುಖಂಡನ್ನೊಬ್ಬ ಸುಮನಾಗೆ ಮತ್ತೊಬ್ಬ ಹಿಂದೂ ಹುಡುಗನ ಜತೆ ಮದುವೆ ಮಾಡಿಸುವುದಾಗಿ ಹೇಳಿದ್ದಾನೆ. ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸುಮನಾಳ ಮೇಲೆ ಒತ್ತಡ ಹಾಕುವ ಮೂಲಕ ನ್ಯಾಯಾಲಯದ ಮುಂದೆ ತಮಗೆ ಬೇಕಾದ ರೀತಿ ಬಜರಂಗಿಗಳು ಹೇಳಿಕೆ ಕೊಡಿಸಬಹು ದಾಗಿದೆ. `ಲವ್ ಜಿಹಾದ್' ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಕೆಲಸಕ್ಕೆ ಮುಂದಾಗಿರುವ ಸಂಘಪರಿವಾರ ಹೇಗಾದರೂ ಮಾಡಿ ಇದನ್ನು ಸಾಬೀತು ಪಡಿಸಲು ಹೆಣಗುತ್ತಿದೆ.

ಮಂಗಳೂರಿನಲ್ಲೊಂದು ಇಂಥದ್ದೇ ಘಟನೆ ನಡೆದಿದೆ. ಮುಸ್ಲಿಂ ಟ್ರಸ್ಟ್ಗೆ ಸೇರಿದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಹಿಂದೂ ಹುಡುಗಿಯೊಬ್ಬಳ ಕೈಯಲ್ಲಿ ಮುಸ್ಲಿಂ ಮತಾಂತರಕ್ಕೆ ಒತ್ತಾಯಿಸಿದ್ದಾಗಿ ಹೇಳಿಕೆ ನೀಡಿಸುವ ಕೆಲಸವೂ ಆಗುತ್ತಿದೆ. ಈಕೆಯು ಈಗಾಗಲೇ ಪೊಲೀಸರ ಮುಂದೆಯೂ ಹೇಳಿಕೆ ನೀಡಿದ್ದು, ಪೊಲೀಸರು ಪ್ರಕರಣವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಹಿಸಿದ್ದಾರೆ. ಇಂಥ ಪ್ರಕರಣಗಳು ಬಿಜೆಪಿ ಸಕರ್ಕಾರವು ಬೆಂಬಲ ನೀಡುವುದರಿಂದ ಸಂಘ ಪರಿವಾರ ಸಂಘಟನೆಗಳಿಂದ ಸಮಾಜ ಛಿದ್ರಗೊಳಿಸುವ ಕೆಲಸ ವಿಘ್ನವಿಲ್ಲದೆ ನಡೆಯುತ್ತಿದೆ. ಯುವಜನರು ಪ್ರಗತಿಪರರು ಇದಕ್ಕೆ ಸರಿಯಾದ ಉತ್ತರ ಕೊಡಬೇಕಾಗಿದೆ.

ಇದೇ ಹೊತ್ತಿನಲ್ಲಿ ಬಂಟ್ವಾಳದ ರಮ್ಯಾ ಶೆಟ್ಟಿ - ಮಹಮ್ಮದ್ ಪ್ರೇಮ ಪ್ರಕರಣದಲ್ಲಿ ಮುಸ್ಲಿಂ ಹುಡುಗನನ್ನು ವಿವಾಹವಾಗಿದ್ದ ಯುವತಿಯು ಹೈಕೋರ್ಟಿನಲ್ಲಿ ಸ್ವಇಚ್ಛೆಯಿಂದಲೇ ಮದುವೆಯಾಗಿರುವುದಾಗಿ ಹೇಳಿಕೆ ನೀಡಿರುವುದು ಬಜರಂಗಿಗಳಿಗೆ ಕಪಾಳಮೋಕ್ಷ ಮಾಡಿದೆ.

 ಸೌಜನ್ಯ: ಜನಶಕ್ತಿ 


Share: