ಮಂಗಳೂರು, ಫೆ.೨: ಭಾರತದ ದೇಶದ ಸಂವಿಧಾನದ ಪ್ರಕಾರ ‘ಕಲ್ಯಾಣ ರಾಜ್ಯ’ದಲ್ಲಿ ಪ್ರತಿಯೊಬ್ಬ ನಾಗರಿಕನ ಹಿತಾಸಕ್ತಿಯನ್ನು ರಾಜ್ಯಭಾರ ಮಾಡುವವರು ಕಾಪಾಡಬೇಕು. ಈ ನಿಟ್ಟಿನಲ್ಲಿ ಸಾಧ್ಯತೆ, ಭಾದ್ಯತೆಗಳ ಪ್ರಶ್ನೆ ಸಹಜವಾಗಿದ್ದರೂ, ಸರಕಾರದಲ್ಲಿ ಹಿರಿಯ ಸ್ಥಾನದಲ್ಲಿರುವವರು ಪ್ರತಿಯೊಬ್ಬ ನಾಗರಿಕನ ಹಿತರಕ್ಷಣೆ ಕಾಯ್ದುಕೊಳ್ಳುವುದು ಸಂವಿಧಾನದ ಪ್ರಕಾರ ಮುಖ್ಯವಾಗಿರುತ್ತದೆ ಎಂದು ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ಸರಕಾರಿ ಪರ ವಕೀಲರಿಗೆ ಹಿತವಚನ ನೀಡಿದ ಘಟನೆ ನಡೆಯಿತು.
ಚರ್ಚ್ ಮೇಲಿನ ದಾಳಿ ಕುರಿತಂತೆ ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಇಂದು ಸಾಕ್ಷಿಯೊಬ್ಬರ ವಿಚಾರಣೆಯ ಸಂದರ್ಭ ನ್ಯಾ. ಸೋಮಶೇಖರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚರ್ಚ್ ದಾಳಿಯ ಹಿನ್ನೆಲೆಯಲ್ಲಿ, ಪಾಂಡವರ ಕಲ್ಲು ನಿವಾಸಿ ರಾಜೇಶ್ ಪೂಜಾರಿ ಎಂಬವರು ೨೦೦೮ರ ಸೆಪ್ಟಂಬರ್ ೧೫ರಂದು ಹಲ್ಲೆUಡಾಗಿದ್ದರು. ಈ ಬಗ್ಗೆ ಚಿಕಿತ್ಸೆ ಪಡೆದಿದ್ದ ಜಿಲ್ಲಾಡಳಿತದಿಂದ ೩೦೦೦ ರೂ.ಗಳ ಪರಿಹಾರ ಹಣ ದೊರಕಿತ್ತು ಎಂಬುದನ್ನು ವಿಚಾರಣೆಯ ಸಂದರ್ಭ ರಾಜೇಶ್ ಪೂಜಾರಿ ಆಯೋಗದೆದುರು ಹೇಳಿಕೊಂಡರು. ಆದರೆ, ಹಲ್ಲೆಗೊಳಗಾಗಿದ್ದ ತಮ್ಮ ಕಕ್ಷಿದಾರರ ಬಗ್ಗೆ ಮುಖ್ಯಮಂತ್ರಿಯಾಗಲಿ, ಗೃಹ ಸಚಿವರಾಗಲಿ ಅಥವಾ ಸರಕಾರದ ಉನ್ನತ ಸ್ಥಾನದಲ್ಲಿರುವ ಯಾರೊಬ್ಬರೂ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ ಎಂದು ಬಜರಂಗದಳ ಪರ ವಕೀಲ ಮಧುಸೂಧನ್ ಅಡಿಗ ಆಕ್ಷೇಪಿಸಿದರು.
ವಕೀಲ ಮಧುಸೂದನ್ ಅಡಿಗರ ವಾದವನ್ನು ತಿರಸ್ಕರಿಸಿದ ಸರಕಾರಿ ಪರ ವಕೀಲ ಎಲ್.ಎನ್. ಹೆಗ್ಡೆ, ಸಾವಿರಾರು ಜನ ಗಾಯಗೊಂಡಿರುವಾಗ ಎಲ್ಲರ ಮನೆಗೆ ಮುಖ್ಯಮಂತ್ರಿ, ಗೃಹ ಸಚಿವರು ತೆರಳಲು ಸಾಧ್ಯವಿಲ್ಲ. ಸರಕಾರದ ಪರವಾಗಿ ಅವರಿಗೆ ಜಿಲ್ಲಾಡಳಿತದಿಂದ ಪರಿಹಾರ ಧನ ನೀಡಲಾಗಿದೆ ಎಂಬುದನ್ನು ಸಾಕ್ಷಿಯೇ ಹೇಳಿಕೊಂಡಿದ್ದಾರೆ. ಹಣದ ರೂಪದಲ್ಲಿ ಸಾಂತ್ವಾನ ನೀಡಲಾಗಿದೆ. ಹಾಗಿದ್ದರೂ ಈ ರೀತಿಯ ವಾದ ಸರಿಯಲ್ಲ ಎಂದು ಪ್ರತಿವಾದಿಸಿದರು.
ವಕೀಲರ ವಾದ- ಪ್ರತಿವಾದಗಳ ಮಧ್ಯೆ ಮಾತನಾಡಿದ ನ್ಯಾ.ಸೋಮಶೇಖರ, ಸರಕಾರದ ಉನ್ನತ ಸ್ಥಾನದಲ್ಲಿರುವವರ ಬಳಿ ಓಡಾಡಲು ಹೆಲಿಕಾಪ್ಟರ್ ಸೇರಿದಂತೆ ಎಲ್ಲಾ ಸೌಲಭ್ಯವೂ ಇದೆ. ಪ್ರತಿಯೊಬ್ಬನ ಯೋಗಕ್ಷೇಮ, ಹಿತಾಸಕ್ತಿಯನ್ನು ಕಾಪಾಡುವುದು ರಾಜ್ಯಭಾರ ನಡೆಸುವವರ ಕರ್ತವ್ಯ ಎಂದರು.
ಸಾಕ್ಷಿಗೆ ಘಟನೆಯ ದಿನಾಂಕ ನೆನಪಿಲ್ಲ!
ಮುಂಬೈನಿಂದ ಬಂದಿದ್ದ ಪರಿಚಯಸ್ಥರನ್ನು ಕಾಣಲು ವಾಮಂಜೂರಿಗೆ ಹೋಗಿ ಹಿಂತಿರುಗುತ್ತಿದ್ದ ಸಂದರ್ಭ ಕುಲಶೇಖರ ರಸ್ತೆಯಲ್ಲಿ ಜನ ಸೇರಿದ್ದನ್ನು ಕಂಡು ಕುತೂಹಲದಿಂದ ಕ್ಷಿಸಲು ಹೊರಟಾಗ ಚರ್ಚ್ ಮೇಲಿನಿಂದ ಕಲ್ಲು ಬಾಟಲಿ ಬಿಸಾಡುತ್ತಿದ್ದರು. ಕಲ್ಲೊಂದು ಪೊಲೀಸರೊಬ್ಬ ಹಣೆಗೆ ತಾಗಿ ಹಣೆಯಲ್ಲಿ ರಕ್ತ ಸುರಿಯುತ್ತಿರುವುದನ್ನು ಕಂಡೆ ಎಂದು ಸಾಕ್ಷಿ ರೇಣುಕಾ ಹೇಳಿದಾಗ ಘಟನೆಯ ದಿನಾಂಕ ತಿಳಿದಿದೆಯೇ ಎಂದು ವಕೀಲ ಇಬ್ರಾಹೀಂ ಪಾಟೀ ಸವಾಲೆಸೆದರು. ಅದೆಲ್ಲಾ ತನಗೆ ತಿಳಿದಿಲ್ಲ ಎಂದು ಹೇಳಿದ ರೇಣುಕಾ, ಘಟನೆಯಲ್ಲಿ ಚರ್ಚ್‌ನಲ್ಲಿದ್ದ ಕ್ರೈಸ್ತ ಮಹಿಳೆಯರಿಗೂ ಗಾಯವಾಗಿತ್ತಲ್ಲಾ ಎಂಬ ಪ್ರಶ್ನೆಗೆ, ಒಮ್ಮೆ ಹೌದೆಂದ ರೇಣುಕಾ ಮತ್ತೆ ಇಲ್ಲವೆಂದು ಪ್ರತಿಕ್ರಿಯಿದರು.
ಘಟನೆಯ ದಿನ ಅಲ್ಲಿ ಸೇರಿದ್ದ ಹಿಂದೂಗಳಲ್ಲಿ ಬಜರಂಗದಳದವರಿದ್ದರೇ ಎಂಬ ಪ್ರಶ್ನೆಗೆ, ಅದು ಗೊತ್ತಿಲ್ಲ. ಅವರ‍್ಯಾರೂ ಬೋರ್ಡ್ ಹಾಕಿಕೊಂಡಿರಲಿಲ್ಲ ಎಂದು ಸಾಕ್ಷಿ ಹೇಳಿದಾಗ ಒಂದು ಕ್ಷಣ ಕೋರ್ಟ್ ಸಭಾಂಗಣದಲ್ಲಿ ನಗೆಬುಗ್ಗೆ ಚಿಮ್ಮಿತು.
ಸಾಕ್ಷಿಯು ತನ್ನ ಪ್ರಮಾಣ ಪತ್ರದಲ್ಲಿ ಆರಂಭದಲ್ಲಿ ಘಟನೆ ನಡೆದ ದಿನಾಂಕವನ್ನು ೨೦೦೯ರ ಸೆಪ್ಟಂಬರ್ ೧೪ ಎಂದು ನಮೂದಿಸಿದ್ದನ್ನು ಮತ್ತೆ ೧೫ ಎಂದು ತಿದ್ದಿರುವುದಾಗಿ ವಕೀಲ ಇಬ್ರಾಹೀಂ ಆಯೋಗದ ಗಮನಕ್ಕೆ ತಂದರು.
ವಕೀಲರಿಬ್ಬರ ಮಧ್ಯೆ ವಾಗ್ವಾದಕ್ಕೆ ಕಾರಣವಾದ ‘ಎಥಿಕ್ಸ್’ ಶಬ್ಧ!
ಕ್ರೈಸ್ತ ಸಂತ್ರಸ್ತರ ಪರ ವಕೀಲರಾದ ಇಬ್ರಾಹೀಂ ಸಾಕ್ಷಿಯಾದ ರೇಣುಕಾ ಎಂಬವರನ್ನು ಪಾಟೀಸವಾಲಿಗೆ ಗುರಿಪಡಿಸಿದ ಆರಂಭದ ಸಂದರ್ಭದಲ್ಲಿ, ವಕೀಲ ಇಬ್ರಾಹೀಂ ಅನಗತ್ಯ ಪ್ರಶ್ನೆಗಳ ಮೂಲಕ ಸಮಯವ್ಯರ್ಥ ಮಾಡುತ್ತಿದ್ದಾರೆಂದು ಬಜರಂಗದಳ ಪರ ವಕೀಲ ಮಧುಸೂದನ್ ಅಡಿಗ ಆಕ್ಷೇಪಿಸಲೆತ್ನಿಸಿದರು.
ಇದರಿಂದ ಅಸಮಾಧಾನಗೊಂಡ ವಕೀಲ ಇಬ್ರಾಹೀಂ, ಕಳೆದ ಒಂದು ವರ್ಷದಿಂದ ಕ್ರೈಸ್ತ ಸಂತ್ರಸ್ತರನ್ನು ಪಾಟೀಸವಾಲಿಗೆ ಗುರಿಪಡಿಸಿದಾಗ ನಾವು ಸಹಕಾರ ನೀಡಿದ್ದೇವೆ. ಈಗ ಸಾಕ್ಷಿಯೊಬ್ಬರನ್ನು ಪಾಟೀಸವಾಲಿಗೊಳಪಡಿಸಿದ ೧೦ ನಿಮಿಷದಲ್ಲೇ ಅಡ್ಡಿಪಡಿಸುವುದು ಸಮಂಜಸವಲ್ಲ ಎಂದು ನ್ಯಾ.ಸೋಮಶೇಖರರನ್ನು ವಿನಂತಿಸಿದರು. ಈ ಸಂದರ್ಭ ಮಧ್ಯ ಪ್ರವೇಶಿಸಿದ ನ್ಯಾ. ಸೋಮಶೇಖರ, ಕಲಾಪ ಮುಂದುವರಿಸಲು ಸೂಚಿಸಿದರು.
ಮತ್ತೆ ಇಬ್ರಾಹೀಂ ಪಾಟೀಸವಾಲನ್ನು ಮುಂದುವರಿಸಿದ ಸಂದರ್ಭ ಮತ್ತೆ ಆಕ್ಷೇಪಿಸಿದ ವಕೀಲ ಮಧುಸೂದನ್, ಸಾಕ್ಷಿಯನ್ನು ಅನಗತ್ಯವಾಗಿ ಪಾಟೀಸವಾಲಿಗೆ ಗುರಿಪಡಿಸಲು ಅವಕಾಶವಿಲ್ಲ. ಇಬ್ರಾಹೀಂ ಎಥಿಕ್ಸ್ (ವೃತ್ತಿ ಮೌಲ್ಯ)ಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಡ್ಡಿಪಡಿಸಲೆತ್ನಿಸಿದರು. ಈ ಸಂದರ್ಭ ತೀವ್ರವಾಗಿ ಅಸಮಾಧಾನಗೊಂಡ ಇಬ್ರಾಹೀಂ ‘ಎಥಿಕ್ಸ್’ ಬಗ್ಗೆ ತನಗೆ ಯಾರೂ ಪಾಠ ಹೇಳಿಕೊಡಬೇಕಾಗಿಲ್ಲ. ಈ ಪದವನ್ನು ವಕೀಲರು ಹಿಂತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ತಾನು ಕಲಾಪವನ್ನು ಮುಂದುವರಿಸುವುದಿಲ್ಲ ಎಂದು ಪಟ್ಟುಹಿಡಿದಾಗ ಕೆಲ ನಿಮಿಷಗಳ ಕಾಲ ವಕೀಲರಿಬ್ಬರ ನಡುವೆ ಪರಸ್ಪರ ವಾಗ್ವಾದ ನಡೆಯಿತು.
ನ್ಯಾ. ಸೋಮಶೇಖರ ಮಾತನಾಡಿ, ಪ್ರತಿಯೊಬ್ಬ ವಕೀಲ ತನ್ನದೇ ಶೈಲಿಯಲ್ಲಿ ಪಾಟೀಸವಾಲು ನಡೆಸಬಹುದಾಗಿದೆ ಎಂದು ಹೇಳಿದ ಬಳಿಕ ಕೊನೆಗೆ ಇಬ್ರಾಹೀಂ ತಮ್ಮ ಪಾಟೀಸವಾಲನ್ನು ಮುಂದುವರಿಸಿದರು.
ಉಳಿದಂತೆ ಇಂದು ಮಂಗಳಾ ಆಚಾರ್ಯ, ರಾಜು ಕುಲಾಲ್, ಶೋಭಾ, ಚಂದ್ರಾವತಿ, ಪುಷ್ಪರಾಜ್ ಮೊದಲಾದವರ ಮುಖ್ಯ ವಿಚಾರಣೆ ನಡೆದು ಪಾಟೀ ಸವಾಲನ್ನು ಮುಂದೂಡಲಾಯಿತು.
ಇಂದಿನ ಕಲಾಪದಲ್ಲಿ ವಕೀಲರಾದ ಪ್ರಸನ್ನ ದೇಶಪಾಂಡೆ, ನಾರಾಯಣ ರೆಡ್ಡಿ, ಎಂ.ಪಿ. ನೊರೊನ್ಹಾ, ಫ್ರಾನ್ಸಿಸ್, ಜಗದೀಶ ಶೇಣವ, ಸುಮನಾ ಶರಣ್, ಆಯೋಗದ ತಿಮ್ಮಾವಗೋಳ್ ಮೊದಲಾದವರು ಉಪಸ್ಥಿತರಿದ್ದರು.