ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಜಾಗತಿಕ ಸುದ್ದಿ / ವಾಷಿಂಗ್ಟನ್:ವಿಶ್ವದ ಪ್ರಭಾವಿ 500 ಮುಸ್ಲಿಮ್ ನಾಯಕರ ಪಟ್ಟಿಯಲ್ಲಿ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ

ವಾಷಿಂಗ್ಟನ್:ವಿಶ್ವದ ಪ್ರಭಾವಿ 500 ಮುಸ್ಲಿಮ್ ನಾಯಕರ ಪಟ್ಟಿಯಲ್ಲಿ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ

Tue, 15 Dec 2009 02:42:00  Office Staff   S.O. News Service
ವಾಷಿಂಗ್ಟನ್: ವಿಶ್ವ ಮುಸ್ಲಿಮರಲ್ಲಿ ನಿರ್ಣಾಯಕ ಪ್ರಭಾವ ಬೀರಿದ ೫೦೦ ಮುಸ್ಲಿಮ್ ಪ್ರಮುಖರ ಪಟ್ಟಿಯಲ್ಲಿ ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಮರುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಗುರುತಿಸಿಕೊಂಡಿದ್ದಾರೆ. ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯ, ಜೋರ್ಡಾನ್ ರಾಯಲ್ ಇಸ್ಲಾಮಿಕ್ ಸ್ಟಡೀಸ್ ಸೆಂಟರ್ ಜಂಟಿಯಾಗಿ ಸಿದ್ಧಪಡಿಸಿದ ‘ದಿ ೫೦೦ ಮೋಸ್ಟ್ ಇನ್‌ಫ್ಲುವೆನ್ಶಲ್ ಮುಸ್ಲಿಮ್ಸ್-೨೦೦೯’ ಎಂಬ ಪುಸ್ತಕದಲ್ಲಿ ಕಾಂತಪುರಂರನ್ನು ಪರಿಚಯಿಸಲಾಗಿದೆ. ಪ್ರೊ.ಜಾನ್ ಎಸ್.ಪಾಸಿಟೋ ಹಾಗೂ ಪ್ರೊ.ಇಬ್ರಾಹೀಂ ಕಾಲಿನ್ ಸಂಪಾದಿಸಿದ ಈ ಗ್ರಂಥದಲ್ಲಿ ಭಾರತದ ಹತ್ತು ಮಂದಿಯನ್ನು ಹೆಸರಿಸಲಾಗಿದೆ. ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ, ಅಸ್ಗರ್ ಅಲಿ ಎಂಜಿನಿಯರ್, ಮೌಲಾನಾ ವಹೀದುದ್ದೀನ್ ಖಾನ್ ಭಾರತದ ಇತರ ಪ್ರಮುಖರು. ಪುಸ್ತಕದ ೧೧೪ನೆ ಪುಟದಲ್ಲಿ ಕಾಂತಪುರಂ ಹಾಗೂ ಅವರ ನೇತೃತ್ವದ ಮರ್ಕಸುಸ್ಸಖಾಫತಿಸ್ಸುನ್ನಿಯ್ಯ ಸಂಸ್ಥೆಯನ್ನು ಪರಿಚಯಿಸಲಾಗಿದೆ. ದಕ್ಷಿಣ ಭಾರತದಲ್ಲಿ ಇಸ್ಲಾಮಿನ ಮೌಲ್ಯಗಳು ಹಾಗೂ ಶಿಕ್ಷಣದ ಪ್ರಸರಣದಲ್ಲಿ ಕಾಂತಪುರಂರ ಪಾತ್ರ ನಿರ್ಣಾಯಕವಾದುದೆಂದು ಪುಸ್ತಕ ಅಭಿಪ್ರಾಯಪಟ್ಟಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತ ದಿಂದ ವಿಶ್ವವಿದ್ಯಾನಿಲಯದವರೆಗೆ ವಿದ್ಯಾಭ್ಯಾಸ ಒದಗಿಸುವ ಮರ್ಕಝ್, ಅನಾಥರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಿದೆ ಎಂದು ಪುಸ್ತಕದಲ್ಲಿ ಪ್ರಶಂಸಿಸಲಾಗಿದೆ. ಸೌದಿ ಆಡಳಿತಾಧಿಕಾರಿ ಅಬ್ದುಲ್ಲ, ಯು‌ಎ‌ಇ ಉಪಾಧ್ಯಕ್ಷ, ಪ್ರಧಾನ ಮಂತ್ರಿ ಹಾಗೂ ದುಬೈ ಆಡಳಿತಾಧಿಕಾರಿ ಶೇಖ್ ಮುಹಮ್ಮದ್ ಬಿನ್ ರಾಷಿದ್ ಅಲ್‌ಮಕ್ತೂಮ್, ಇರಾನ್‌ನ ಪರಮೋನ್ನತ ನಾಯಕ ಆಯತುಲ್ಲಾ ಖಾಮಿನೈ, ತುರ್ಕಿ ಪ್ರಧಾನಮಂತ್ರಿ ರಜಬ್ ತಯ್ಯಿಬ್ ಉರ್ದುಗಾನ್ ಮತ್ತಿತರರು ಪಟ್ಟಿಯಲ್ಲಿದ್ದಾರೆ. ಪಾಂಡಿತ್ಯ, ಆಡಳಿತ ನೈಪುಣ್ಯ, ಕಲೆ, ಸಾಂಸ್ಕೃತಿಕ ಮತ್ತಿತರ ಕ್ಷೇತ್ರಗಳಲ್ಲಿರುವವರನ್ನು ಗುರುತಿಸಲು ಪುಸ್ತಕವನ್ನು ರಚಿಸಲಾಗಿದೆ ಎಂದು ಸಂಪಾದಕ ಜಾನ್ ಎಸ್ ಪಾಸಿಟೋ ಹೇಳಿದ್ದಾರೆ ಸೌಜನ್ಯ : ಹನೀಷ್ ರಹಮಾನ್, ವಿಶ್ವಕನ್ನಡಿಗರ ಒಕ್ಕೂಟ.

Share: